2 ತಿಮೊಥೆಯನಿಗೆ 1 - ಕನ್ನಡ ಸತ್ಯವೇದವು C.L. Bible (BSI)ಪೀಠಿಕೆ 1-2 ನನ್ನ ಪ್ರೀತಿಯ ಪುತ್ರ ತಿಮೊಥೇಯನಿಗೆ ಪೌಲನು ಬರೆಯುವ ಪತ್ರ. ಕ್ರಿಸ್ತಯೇಸುವಿನಲ್ಲಿರುವವರಿಗೆ ಲಭಿಸುವ ಅಮರ ಜೀವದ ವಾಗ್ದಾನವನ್ನು ಸಾರಲು ದೈವಚಿತ್ತಾನುಸಾರ ಪ್ರೇಷಿತನಾದ ನಾನು ತಿಳಿಸುವುದೇನೆಂದರೆ: ಪಿತನಾಗಿರುವ ದೇವರೂ ಒಡೆಯರಾದ ಕ್ರಿಸ್ತಯೇಸುವೂ ನಿಮಗೆ ಕೃಪೆಯನ್ನೂ ಕರುಣೆಯನ್ನೂ ಶಾಂತಿಯನ್ನು ಅನುಗ್ರಹಿಸಲಿ! ಪ್ರಶಂಸೆ-ಪ್ರೋತ್ಸಾಹ 3-4 ನಾನು ಹಗಲಿರುಳೂ ನನ್ನ ಪ್ರಾರ್ಥನೆಯಲ್ಲಿ ತಪ್ಪದೆ ನಿನ್ನನ್ನು ಸ್ಮರಿಸಿಕೊಳ್ಳುತ್ತೇನೆ. ನನ್ನ ಪೂರ್ವಿಕರ ಹಾಗೆ ಶುದ್ಧಮನಸ್ಸಾಕ್ಷಿಯಿಂದ ನನ್ನ ಆರಾಧ್ಯ ದೇವರಿಗೆ ನಿನ್ನ ವಿಷಯವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅಂದು ನೀನು ಸುರಿಸಿದ ಕಣ್ಣೀರನ್ನು ನಾನು ಇನ್ನೂ ಮರೆತಿಲ್ಲ. ನಿನ್ನನ್ನು ಪುನಃ ನೋಡಿ ಆನಂದಪಡಬೇಕೆಂದು ಹಂಬಲಿಸುತ್ತಿದ್ದೇನೆ. 5 ನಿನ್ನ ದೃಢವಿಶ್ವಾಸವು ನನ್ನ ನೆನಪಿನಲ್ಲಿದೆ. ನಿನ್ನ ಅಜ್ಜಿ ಲೋವಿಯಳಲ್ಲೂ ತಾಯಿ ಯೂನಿಸಳಲ್ಲೂ ನೆಲೆಗೊಂಡಿದ್ದ ವಿಶ್ವಾಸ ಈಗ ನಿನ್ನಲ್ಲೂ ಪೂರ್ಣವಾಗಿ ನೆಲೆಗೊಂಡಿದೆಯೆಂದು ನಾನು ನಂಬಿದ್ದೇನೆ. 6 ನಾನು ನಿನ್ನ ಮೇಲೆ ಹಸ್ತ ನಿಕ್ಷೇಪಮಾಡಿ ಪ್ರಾರ್ಥಿಸಿದಾಗ ನೀನು ಪಡೆದಂಥ ವರದಾನವನ್ನು ಪುನಃ ಪ್ರಜ್ವಲಿಸುವಂತೆ ಮಾಡಬೇಕೆಂದು ನಿನಗೆ ಜ್ಞಾಪಿಸುತ್ತೇನೆ. 7 ದೇವರು ನಮಗೆ ಪ್ರದಾನಮಾಡಿರುವ ಪವಿತ್ರಾತ್ಮ ನಮ್ಮನ್ನು ಹೇಡಿಗಳನ್ನಾಗಿ ಮಾಡುವುದಿಲ್ಲ; ನಮ್ಮಲ್ಲಿ ದೈವೀಶಕ್ತಿ, ಪ್ರೀತಿ ಹಾಗೂ ಸಂಯಮಗಳು ಪ್ರವರ್ಧಿಸುವಂತೆ ಮಾಡುತ್ತಾರೆ. 8 ಆದ್ದರಿಂದ ಕ್ರಿಸ್ತಯೇಸುವಿಗೆ ಸಾಕ್ಷಿ ಆಗಿರಲು ನಾಚಬೇಡ. ಅವರಿಗಾಗಿ ಬಂಧಿಯಾಗಿರುವ ನನ್ನ ವಿಷಯದಲ್ಲೂ ನಾಚಬೇಡ. ದೇವರ ಶಕ್ತಿಯನ್ನು ಆಶ್ರಯಿಸಿ ನನ್ನೊಡನೆ ಶುಭಸಂದೇಶಕ್ಕೋಸ್ಕರ ನಿನ್ನ ಪಾಲಿನ ಶ್ರಮವನ್ನು ಅನುಭವಿಸು. 9 ನಾವು ಸ್ವಂತ ಸತ್ಕಾರ್ಯಗಳಿಂದಲ್ಲ, ದೇವರ ಯೋಜನೆ ಹಾಗೂ ಅನುಗ್ರಹಗಳಿಂದಲೇ ಜೀವೋದ್ಧಾರ ವರವನ್ನು ಪಡೆದಿದ್ದೇವೆ; ದೇವರ ಪ್ರಜೆಗಳೆನಿಸಿಕೊಂಡಿದ್ದೇವೆ. ಈ ಅನುಗ್ರಹವನ್ನು ಕ್ರಿಸ್ತಯೇಸುವಿನಲ್ಲಿ ಅನಾದಿಯಿಂದಲೇ ನಮಗೆ ಕೊಡಲಾಯಿತು. 10 ಈ ಕಾಲದಲ್ಲೂ ನಮ್ಮ ಉದ್ಧಾರಕ ಕ್ರಿಸ್ತಯೇಸುವಿನ ಪ್ರತ್ಯಕ್ಷದ ಮೂಲಕ ಅದನ್ನು ಬಹಿರಂಗಪಡಿಸಲಾಗಿದೆ. ಮೃತ್ಯುಶಕ್ತಿಯನ್ನು ವಿನಾಶಗೊಳಿಸಿ ಅಮರ ಜೀವವನ್ನು ಶುಭಸಂದೇಶದ ಮೂಲಕ ಬೆಳಕಿಗೆ ತಂದವರು ಯೇಸುವೇ. 11 ಈ ಶುಭಸಂದೇಶವನ್ನು ಸಾರುವುದಕ್ಕೇ ಎಂದು ದೇವರು ನನ್ನನ್ನು ಪ್ರೇಷಿತನನ್ನಾಗಿಯೂ ಬೋಧಕನನ್ನಾಗಿಯೂ ನೇಮಿಸಿದ್ದಾರೆ. 12 ಇದಕ್ಕಾಗಿಯೇ ಇಷ್ಟೆಲ್ಲಾ ಕಷ್ಟಕಾರ್ಪಣ್ಯಗಳನ್ನು ನಾಚಿಕೆಪಡದೆ ಅನುಭವಿಸುತ್ತಿದ್ದೇನೆ. ನಾನು ಯಾರಲ್ಲಿ ವಿಶ್ವಾಸವನ್ನಿಟ್ಟಿದ್ದೇನೆ ಎಂದು ಚೆನ್ನಾಗಿ ಬಲ್ಲೆ. ನನ್ನ ವಶಕ್ಕೆ ಒಪ್ಪಿಸಿರುವುದನ್ನು ಆ ದಿನದವರೆಗೂ ಕಾಪಾಡುವುದಕ್ಕೆ ಅವರು ಶಕ್ತರು. ಆದ್ದರಿಂದ ನಾನು ಪೂರ್ಣ ಭರವಸೆಯಿಂದ ಇದ್ದೇನೆ. 13 ಕ್ರಿಸ್ತಯೇಸುವಿನಲ್ಲಿ ನಮ್ಮದಾಗಿರುವ ವಿಶ್ವಾಸ ಹಾಗೂ ಪ್ರೀತಿಯಲ್ಲಿ ನೀನು ನೆಲೆಗೊಂಡಿರು. ನಾನು ಬೋಧಿಸಿದ್ದನ್ನು ಆದರ್ಶವಾಗಿಟ್ಟುಕೊಂಡು ಅನುಸರಿಸು. 14 ನಿನ್ನ ವಶಕ್ಕೆ ಕೊಡಲಾಗಿರುವ ಸದ್ಬೋಧನೆಯನ್ನು ನಮ್ಮಲ್ಲಿ ವಾಸಿಸುವ ಪವಿತ್ರಾತ್ಮರ ಸಹಾಯದಿಂದ ಸುರಕ್ಷಿತವಾಗಿಡು. 15 ಏಷ್ಯಾ ಪ್ರಾಂತ್ಯದವರೆಲ್ಲ ನನ್ನನ್ನು ಕೈಬಿಟ್ಟುಹೋದರೆಂದು ನೀನು ಬಲ್ಲೆ. ಅವರೊಡನೆ ಫುಗೇಲನೂ ಹೆರ್ಮೊಗೇನನೂ ಸಹ ಹೊರಟುಹೋದರು. 16 ಒನೇಸಿಫೊರನ ಕುಟುಂಬವನ್ನು ಪ್ರಭು ಆಶೀರ್ವದಿಸಲಿ. ಆತನು ಅನೇಕ ಸಾರಿ ನನ್ನನ್ನು ಆದರಿಸಿದನು. 17 ನಾನು ಸೆರೆಯಾಳಾಗಿದ್ದರೂ ನಾಚಿಕೆಪಡದೆ ತಾನು ರೋಮ್ ನಗರಕ್ಕೆ ಬಂದ ಕೂಡಲೇ ನನ್ನನ್ನು ಎಲ್ಲೆಡೆಗಳಲ್ಲೂ ಹುಡುಕಿ ಕಂಡುಹಿಡಿದನು. 18 ಅಂತಿಮ ದಿನದಂದು ಪ್ರಭು ಯೇಸು ಆತನಿಗೆ ಕರುಣೆತೋರಲಿ. ನಾನು ಏಷ್ಯಾದಲ್ಲಿದ್ದಾಗ ಆತನು ನನಗೆ ಎಷ್ಟೊಂದು ನೆರವು ನೀಡಿದನೆಂದು ನಿನಗೆ ಚೆನ್ನಾಗಿ ತಿಳಿದಿದೆ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India