2 ಕೊರಿಂಥದವರಿಗೆ 9 - ಕನ್ನಡ ಸತ್ಯವೇದವು C.L. Bible (BSI)ನಗುನಗುತ್ತಾ ನೀಡುವವನು ದೇವರಿಗೆ ಪ್ರಿಯನು 1 ದೇವಜನರಿಗೆ ಸಲ್ಲಿಸಬೇಕಾದ ಈ ಸೇವಾಕಾರ್ಯವನ್ನು ಕುರಿತು ನಾನು ನಿಮಗೆ ಬರೆಯುವ ಅವಶ್ಯಕತೆಯಿಲ್ಲ. 2 ನೆರವು ನೀಡಲು ಸಿದ್ಧರಿದ್ದೀರೆಂದು ನನಗೆ ಚೆನ್ನಾಗಿ ಗೊತ್ತಿದೆ. “ಅಖಾಯದ ಸಹೋದರರು ಕಳೆದ ವರ್ಷದಿಂದಲೂ ನೆರವು ನೀಡಲು ಏರ್ಪಾಡುಮಾಡುತ್ತಿರುವರು,” ಎಂದು ಮಕೆದೋನಿಯರ ಮುಂದೆ ನಾನು ನಿಮ್ಮನ್ನು ಹೊಗಳಿದ್ದೇನೆ. ನಿಮ್ಮ ಉತ್ಸಾಹ ಅವರಲ್ಲಿ ಅನೇಕರನ್ನು ಹುರಿದುಂಬಿಸಿದೆ. 3 ಆದರೂ ನಮ್ಮ ಹೊಗಳಿಕೆ ಸುಳ್ಳಾಗಬಾರದೆಂದು ನಾನು ಈ ಸಹೋದರರನ್ನು ಮುಂಚಿತವಾಗಿ ಕಳುಹಿಸುತ್ತಿದ್ದೇನೆ. 4 ನಾನು ನಿಮಗೆ ಹೇಳಿರುವಂತೆ ನಿಮ್ಮ ಏರ್ಪಾಡೆಲ್ಲಾ ಮುಗಿದಿರಬೇಕು. ಇಲ್ಲದಿದ್ದರೆ ನಾನು ಬರುವಾಗ, ನನ್ನ ಜೊತೆಯಲ್ಲಿಯೇ ಮಕೆದೋನಿಯದ ಸಹೋದರರೂ ಬಂದು, ನೀವು ಸಿದ್ಧರಿಲ್ಲದೆ ಇರುವುದನ್ನು ಕಂಡರೆ ನೀವು ತಲೆತಗ್ಗಿಸಬೇಕಾಗುತ್ತದೆ. ನಿಮ್ಮಲ್ಲಿ ನಂಬಿಕೆ ಇಟ್ಟದ್ದಕ್ಕಾಗಿ ನಾನೂ ತಲೆ ತಗ್ಗಿಸಬೇಕಾಗುತ್ತದೆ. 5 ಆದ್ದರಿಂದಲೇ, ನೀವು ವಾಗ್ದಾನಮಾಡಿದ ಕೊಡುಗೆಯನ್ನು ಸಂಗ್ರಹಿಸುವ ಏರ್ಪಾಡನ್ನು ಮಾಡುವಂತೆ ಈ ಸಹೋದರರನ್ನು ನಮಗೆ ಮುಂಚಿತವಾಗಿಯೇ ನಿಮ್ಮ ಬಳಿಗೆ ಕಳುಹಿಸುವುದು ಉಚಿತವೆಂದು ನನಗೆ ತೋಚಿತು. ಹೀಗೆ ಈ ಕೊಡುಗೆ ಬಲಾತ್ಕಾರವಾದ ವಸೂಲಿ ಆಗಿರದೆ ಮನಃಪೂರ್ವಕವಾಗಿ ಕೊಟ್ಟ ನಿಧಿ ಆಗಿರುತ್ತದೆ. 6 ವಿರಳವಾಗಿ ಬಿತ್ತುವವನು ವಿರಳವಾಗಿ ಕೊಯ್ಯುತ್ತಾನೆ ಹೇರಳವಾಗಿ ಬಿತ್ತುವವನು ಹೇರಳವಾಗಿ ಕೊಯ್ಯುತ್ತಾನೆ. ಇದು ನಿಮಗೆ ತಿಳಿದಿರಲಿ 7 ಪ್ರತಿಯೊಬ್ಬನೂ ತನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಷ್ಟು ನೀಡಲಿ. ಒಲ್ಲದ ಮನಸ್ಸಿನಿಂದಾಗಲಿ ಬಲಾತ್ಕಾರದಿಂದಾಗಲಿ ಕೊಡುವುದು ಬೇಡ. ನಗುನಗುತ್ತಾ ನೀಡುವಾತನನ್ನು ದೇವರು ಪ್ರೀತಿಸುತ್ತಾರೆ. 8 ಸಕಲ ವಿಧವಾದ ವರದಾನಗಳನ್ನು ನಿಮಗೆ ಯಥೇಚ್ಛವಾಗಿ ನೀಡಬಲ್ಲ ಶಕ್ತಿ ದೇವರಿಗಿದೆ. ನೀವು ಸದಾ ಸಮೃದ್ಧಿಯಿಂದಿರುವಿರಿ. ಹೀಗೆ ಸಕಲ ಸತ್ಕಾರ್ಯಗಳಿಗೆ ಹೃತ್ಪೂರ್ವಕವಾಗಿ ನೆರವಾಗುವಿರಿ. 9 “ದೀನದಲಿತರಿಗೆ ಧಾರಾಳವಾಗಿ ನೀಡುವನು; ಅನವರತ ಇರುವುದು ಅವನ ದಾನಧರ್ಮದ ಫಲವು,” ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ. 10 ಬಿತ್ತುವವನಿಗೆ ಬೀಜವನ್ನೂ ಉಣ್ಣುವವನಿಗೆ ಊಟವನ್ನೂ ಒದಗಿಸುವ ದೇವರು, ಬಿತ್ತನೆಗೆ ಬೇಕಾದ ಬೀಜವನ್ನು ನಿಮಗೂ ಕೊಟ್ಟು ಅದನ್ನು ಬೆಳೆಸುವರು. ನಿಮ್ಮ ದಾನಧರ್ಮದ ಫಲಗಳು ಸಮೃದ್ಧಿಗೊಳ್ಳುವಂತೆ ಮಾಡುವರು. 11 ನೀವು ಸದಾ ಉದಾರಿಗಳಾಗಿರುವಂತೆ ನಿಮ್ಮನ್ನು ಎಲ್ಲಾ ವಿಧದಲ್ಲೂ ಸಿರಿವಂತರನ್ನಾಗಿ ಮಾಡುವರು. ನಿಮ್ಮ ಕೊಡುಗೆ ನಮ್ಮ ಸೇವೆಯ ಮೂಲಕ ಬೇರೆಯವರಿಗೆ ತಲುಪಿ, ಅವರು ದೇವರನ್ನು ಕೃತಜ್ಞತೆಯಿಂದ ಸ್ಮರಿಸುವಂತೆ ಮಾಡುವುದು. 12 ಹೀಗೆ ನಿಮ್ಮ ಕೊಡುಗೆ ದೇವಜನರ ಕೊರತೆಗಳನ್ನು ನೀಗಿಸುವುದಲ್ಲದೆ ಅನೇಕರು ದೇವರಿಗೆ ಸ್ತೋತ್ರ ಸಲ್ಲಿಸುವಂತೆ ಮಾಡುವುದು. 13 ಕ್ರಿಸ್ತಯೇಸುವಿನ ಶುಭಸಂದೇಶದ ಅಂಗೀಕಾರದಿಂದ ನೀವು ಎಷ್ಟು ನಿಷ್ಠಾವಂತ ಸೇವಾಸಕ್ತರಾಗಿದ್ದೀರಿ, ತಮಗೂ ಇತರರಿಗೂ ಎಷ್ಟು ಉದಾರಿಗಳಾಗಿದ್ದೀರಿ ಎಂದು ತಿಳಿದು ಅನೇಕರು ದೇವರನ್ನು ಕೊಂಡಾಡುವರು. 14 ದೇವರು ನಿಮಗೆ ಅನುಗ್ರಹಿಸಿರುವ ಅತಿಶಯವಾದ ವರಕ್ಕಾಗಿ ಅವರು ಪ್ರೀತಿವಾತ್ಸಲ್ಯದಿಂದ ನಿಮಗೋಸ್ಕರ ಪ್ರಾರ್ಥಿಸುವರು. 15 ವರ್ಣಿಸಲು ಅಸಾಧ್ಯವಾದ ದೇವರ ಕೃಪಾವರಕ್ಕಾಗಿ ಅವರಿಗೆ ಸ್ತುತಿಸ್ತೋತ್ರ ಸಲ್ಲಲಿ! |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India