2 ಕೊರಿಂಥದವರಿಗೆ 8 - ಕನ್ನಡ ಸತ್ಯವೇದವು C.L. Bible (BSI)ಸಮಾನತೆಗೊಂದು ಸೂತ್ರ 1 ಸಹೋದರರೇ, ಮಕೆದೋನಿಯ ಸಭೆಗಳಿಗೆ ದೇವರು ದಯಪಾಲಿಸಿದ ಕೃಪಾತಿಶಯಗಳನ್ನು ನಾನು ನಿಮಗೆ ತಿಳಿಸ ಬಯಸುತ್ತೇನೆ. 2 ಈ ಸಭೆಗಳವರು ಕಷ್ಟಸಂಕಟಗಳ ಕುಲುಮೆಯಲ್ಲಿ ಬೆಂದಿದ್ದರೂ ಹರ್ಷಭರಿತರಾಗಿದ್ದಾರೆ. ಕಡುಬಡತನದಲ್ಲಿ ನರಳುತ್ತಿದ್ದರೂ ಅಪಾರ ಔದಾರ್ಯದಿಂದ ನಡೆದುಕೊಳ್ಳುತ್ತಿದ್ದಾರೆ. 3 ತಮ್ಮ ಶಕ್ತಿಗನುಸಾರವಾಗಿ ಮಾತ್ರವಲ್ಲ, ಕೆಲವೊಮ್ಮೆ ಶಕ್ತಿಮೀರಿಯೂ ನೀಡಿದ್ದಾರೆಂದು ನಾನು ಖಂಡಿತವಾಗಿ ಹೇಳುತ್ತೇನೆ. 4 ದೇವಜನರಿಗೆ ನೆರವಾಗುವ ಸೌಭಾಗ್ಯದಲ್ಲಿ ತಾವೂ ಭಾಗಿಗಳಾಗಬೇಕಂದು, ಸ್ವಂತ ಇಷ್ಟದಿಂದ ನಮ್ಮನ್ನು ಅವರು ಬಹುವಾಗಿ ಬೇಡಿಕೊಂಡರು. 5 ಇದನ್ನು, ನಾವು ನಿರೀಕ್ಷಿಸಲೇ ಇಲ್ಲ! ಮೊಟ್ಟಮೊದಲು ಅವರು ತಮ್ಮನ್ನೇ ಪ್ರಭುವಿಗೆ ಸಮರ್ಪಿಸಿದರು. ಅನಂತರ ದೈವಚಿತ್ತಕ್ಕೆ ಅನುಗುಣವಾಗಿ ನಮಗೂ ತಮ್ಮನ್ನು ಒಪ್ಪಿಸಿಕೊಟ್ಟರು. 6 ಇಂಥ ಪ್ರೀತಿಮಯ ಸೇವಾಕಾರ್ಯವನ್ನು ನಿಮ್ಮಲ್ಲಿ ಪ್ರಾರಂಭಿಸಿದ ತೀತನು ಅದನ್ನು ಮುಂದುವರಿಸಿ, ಪೂರ್ಣಗೊಳಿಸಬೇಕೆಂದು ನಾವು ಆತನನ್ನು ಕೇಳಿಕೊಂಡಿದ್ದೇವೆ. 7 ವಿಶ್ವಾಸ, ವಾಕ್ಚಾತುರ್ಯ, ಜ್ಞಾನ, ಶ್ರದ್ಧೆ, ನಮ್ಮ ಬಗ್ಗೆ ನಿಮಗಿರುವ ಪ್ರೀತಿ - ಈ ಎಲ್ಲಾ ವಿಷಯಗಳಲ್ಲೂ ನೀವು ಸಮೃದ್ಧರಾಗಿದ್ದೀರಿ. ಹಾಗೆಯೇ ಈ ಸೇವಾಕಾರ್ಯದಲ್ಲೂ ಸಮೃದ್ಧರಾಗಿರಿ. 8 ಇದನ್ನು ನಾನು ಆಜ್ಞಾರೂಪವಾಗಿ ಹೇಳುತ್ತಿಲ್ಲ. ಬೇರೆಯವರಿಗೆ ಈ ಸೇವಾಕಾರ್ಯದಲ್ಲಿ ಇರುವ ಶ್ರದ್ಧೆಯನ್ನು ಆದರ್ಶವಾಗಿ ಹಿಡಿದು ನಿಮ್ಮ ಪ್ರೀತಿ ಎಷ್ಟು ಯಥಾರ್ಥವಾದುದೆಂದು ಕಂಡುಕೊಳ್ಳುವುದಕ್ಕಾಗಿ ಇದನ್ನು ಹೇಳುತ್ತಿದ್ದೇನೆ. 9 ಪ್ರಭು ಯೇಸುಕ್ರಿಸ್ತರ ಕೃಪಾಶಕ್ತಿಯನ್ನು ನೀವು ಬಲ್ಲಿರಿ. ಅವರು ತಮ್ಮ ಬಡತನದಿಂದ ನಿಮ್ಮನ್ನು ಶ್ರೀಮಂತವಾಗಿಸಲೆಂದು, ತಾವು ಶ್ರೀಮಂತರಾಗಿದ್ದರೂ ನಿಮಗೋಸ್ಕರ ಬಡವರಾದರು. 10 ಈ ವಿಷಯದಲ್ಲಿ ನನ್ನ ಸಲಹೆ ಏನೆಂದರೆ : ಒಂದು ವರ್ಷಕ್ಕೆ ಹಿಂದೆ ನೀವು ಪ್ರಾರಂಭಿಸಿದ ಈ ಸೇವಾಕಾರ್ಯವನ್ನು ಪೂರೈಸುವುದು ಲೇಸು. ಈ ಕಾರ್ಯವನ್ನು ಮೊದಲು ಆರಂಭಿಸಿದವರು ನೀವೇ. ಆರಂಭಿಸಬೇಕೆಂದು ಸೂಚಿಸಿದವರೂ ನೀವೇ. 11 ಆದ್ದರಿಂದ ಆರಂಭಿಸುವುದರಲ್ಲಿ ಎಷ್ಟು ಆಸಕ್ತರಾಗಿದ್ದಿರೋ, ಅಷ್ಟೇ ಆಸಕ್ತಿಯಿಂದ ನಿಮ್ಮ ನಿಮ್ಮ ಶಕ್ತಿಗನುಸಾರವಾಗಿ ನೀಡಿ ಈ ಯೋಜನೆಯನ್ನು ಪೂರೈಸಿರಿ. 12 ಒಬ್ಬನು ಕೊಡುವುದಕ್ಕೆ ಮನಸ್ಸುಳ್ಳವನಾಗಿದ್ದರೆ, ಅವನು ತನ್ನಲ್ಲಿ ಇರುವುದಕ್ಕೆ ತಕ್ಕಂತೆ ಕೊಟ್ಟರೆ ಸಾಕು. ನಿಮ್ಮಲ್ಲಿ ಇಲ್ಲದ್ದನ್ನು ದೇವರು ಬಯಸುವುದಿಲ್ಲ. 13 ನಿಮ್ಮ ಕೊಡುಗೆಯಿಂದ ಇತರರ ಕಷ್ಟ ಪರಿಹಾರವಾಗಬೇಕು; ಅದರಿಂದ ನಿಮಗೆ ನಷ್ಟವುಂಟಾಗಬೇಕು ಎಂದು ಸಮಾನತೆ ಇರಬೇಕು. 14 ಈ ಕಾಲದಲ್ಲಿ ನಿಮಗೆ ಸಮೃದ್ಧಿಯಾಗಿರುವುದರಿಂದ ಅವರ ಕೊರತೆಯನ್ನು ನೀವು ನೀಗಿಸಬೇಕು. ಮುಂದಕ್ಕೆ ಅವರು ಸಮೃದ್ಧಿಯಿಂದಿರುವಾಗ, ನಿಮ್ಮ ಕೊರತೆಯನ್ನು ಅವರು ನೀಗಿಸುವರು. ಹೀಗೆ ನಿಮ್ಮಲ್ಲಿ ಸಮಾನತೆ ಉಂಟಾಗುವುದು. 15 :ಅತಿಯಾಗಿ ಶೇಖರಿಸಿದವನಿಗೆ ಅಧಿಕವಾಗಲಿಲ್ಲ ಮಿತಿಯಾಗಿ ಶೇಖರಿಸಿದವನಿಗೆ ಕೊರತೆಯಾಗಲಿಲ್ಲ.” ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ. ತೀತನು ಮತ್ತು ಸಂಗಡಿಗರು 16 ನಿಮ್ಮ ಮೇಲೆ ನನಗಿರುವ ಅದೇ ಅಕ್ಕರೆಯನ್ನು ತೀತನಲ್ಲೂ ಮೂಡಿಸಿದ ದೇವರಿಗೆ ಕೃತಜ್ಞತೆ ಸಲ್ಲಬೇಕು. 17 ನಿಮ್ಮ ಬಳಿಗೆ ಹೋಗಬೇಕೆಂದು ಕೇಳಿಕೊಂಡಾಗ ಆತನು ಕೂಡಲೇ ಸಮ್ಮತಿಸಿದನು. ಅಷ್ಟೇ ಅಲ್ಲ, ನಿಮಗೆ ನೆರವಾಗಲು, ನಿಮ್ಮ ಬಳಿಗೆ ಬರಲು ಆತನೇ ಸ್ವಂತ ಇಷ್ಟದಿಂದ ಹೊರಟಿದ್ದಾನೆ. 18 ಆತನ ಸಂಗಡ ಇನ್ನೊಬ್ಬ ಸಹೋದರನನ್ನು ಕಳುಹಿಸುತ್ತಿದ್ದೇವೆ. ಈತನು ಶುಭಸಂದೇಶವನ್ನು ಸಾರುವುದರಲ್ಲಿ ಎಲ್ಲ ಸಭೆಗಳಿಂದ ಪ್ರಶಂಸೆ ಪಡೆದಿದ್ದಾನೆ. 19 ಇದಷ್ಟೇ ಅಲ್ಲದೆ, ಪ್ರಭುವಿನ ಮಹಿಮೆ ಬೆಳಗುವಂತೆಯೂ ಇತರರಿಗೆ ನೆರವಾಗಬೇಕೆಂಬ ಸದುದ್ದೇಶದಿಂದಲೂ ನಾವು ಕೈಗೊಂಡಿರುವ ಸೇವಾಕಾರ್ಯದಲ್ಲಿ ನಮ್ಮ ಸಂಗಡ ಪ್ರಯಾಣಮಾಡಲೆಂದು ಸಭೆಯವರು ಈತನನ್ನು ನೇಮಕಮಾಡಿದ್ದಾರೆ. 20 ನಮ್ಮ ವಶಕ್ಕೆ ಒಪ್ಪಿಸಲಾಗಿರುವ ಈ ಉದಾರ ಕೊಡುಗೆಯ ವಿತರಣೆಯಲ್ಲಿ ಯಾರೂ ನಮ್ಮ ಮೇಲೆ ತಪ್ಪುಹೊರಿಸಲು ಆಸ್ಪದವಿರಕೂಡದು. 21 ಪ್ರಭುವಿನ ದೃಷ್ಟಿಯಲ್ಲಿ ಮಾತ್ರವಲ್ಲ.ಮಾನವರ ದೃಷ್ಟಿಯಲ್ಲೂ ಯೋಗ್ಯವಾದುದನ್ನು ಮಾಡುವುದೇ ನಮ್ಮ ಉದ್ದೇಶ. 22 ಇವರಿಬ್ಬರ ಸಂಗಡ ಮತ್ತೊಬ್ಬ ಸಹೋದರನನ್ನೂ ಕಳುಹಿಸುತ್ತಿದ್ದೇವೆ. ಈತನು ಆಸಕ್ತಿ ಉಳ್ಳವನೆಂದು ಅನುಭವದಿಂದ ಕಂಡುಕೊಂಡಿದ್ದೇವೆ. ನಿಮ್ಮಲ್ಲಿ ಪೂರ್ಣ ಭರವಸೆಯಿಟ್ಟು ನಿಮಗೆ ನೆರವಾಗಲು ಆತನು ಹೆಚ್ಚು ಉತ್ಸುಕನಾಗಿದ್ದಾನೆ. 23 ತೀತನ ವಿಷಯವಾಗಿ ಹೇಳುವುದಾದರೆ, ಆತನು ನನ್ನ ಸಹೋದ್ಯೋಗಿ; ನಿಮ್ಮ ಸೇವೆಯಲ್ಲಿ ನನ್ನ ಸಹಕಾರಿ, ಆತನ ಸಂಗಡ ಬರುತ್ತಿರುವ ಇತರ ಸಹೋದರರು ಸಭೆಗಳ ಪ್ರತಿನಿಧಿಗಳು. ಕ್ರಿಸ್ತಯೇಸುವಿನ ಮಹಿಮೆಯನ್ನು ಬೆಳಗುವಂಥವರು ಅವರು. 24 ಆದ್ದರಿಂದ ಇವರನ್ನು ಪ್ರೀತಿಯಿಂದ ನೋಡಿಕೊಳ್ಳಿ. ನಾವು ನಿಮ್ಮನ್ನು ಹೊಗಳಿದ್ದಕ್ಕೆ ತಕ್ಕಂತೆ ನಡೆದುಕೊಂಡು ಸಭೆಗಳಿಗೆ ನಿಮ್ಮ ಯೋಗ್ಯತೆಯನ್ನು ಮನದಟ್ಟುಮಾಡಿಕೊಡಿರಿ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India