2 ಕೊರಿಂಥದವರಿಗೆ 7 - ಕನ್ನಡ ಸತ್ಯವೇದವು C.L. Bible (BSI)1 ಪ್ರಿಯ ಸಹೋದರರೇ, ಇಂಥ ವಾಗ್ದಾನಗಳನ್ನು ಪಡೆದಿರುವ ನಾವು ಎಲ್ಲಾ ವಿಧವಾದ ಮಲಿನತೆಯಿಂದ ದೂರವಿದ್ದು ದೇಹಾತ್ಮಗಳಲ್ಲಿ ಶುದ್ಧರಾಗಿರೋಣ. ದೇವರಲ್ಲಿ ಭಯಭಕ್ತಿಯುಳ್ಳವರಾಗಿ ಪರಿಶುದ್ಧತೆಯಲ್ಲಿ ಪರಿಣತಿಯನ್ನು ಪಡೆಯೋಣ. ಪೌಲನ ಪ್ರಮೋದ 2 ನಿಮ್ಮ ಹೃದಯಗಳಲ್ಲಿ ನಮಗೆ ಸ್ಥಳವಿರಲಿ. ನಾವು ಯಾರಿಗೂ ಅನ್ಯಾಯಮಾಡಿಲ್ಲ, ಯಾರಿಗೂ ಕೇಡನ್ನು ಬಗೆದಿಲ್ಲ, ಯಾರನ್ನೂ ವಂಚಿಸಲಿಲ್ಲ. 3 ನಿಮ್ಮನ್ನು ನಿಂದಿಸುವುದಕ್ಕಾಗಿ ಇದನ್ನು ನಾನು ಹೇಳುತ್ತಿಲ್ಲ; ಈ ಮೊದಲೇ ನಿಮಗೆ ತಿಳಿಸಿರುವಂತೆ, ‘ಸತ್ತರೂ ಒಂದಾಗಿ ಸಾಯುತ್ತೇವೆ, ಬದುಕಿದರೂ ಒಂದಾಗಿ ಬದುಕುತ್ತೇವೆ,” ಎನ್ನುವಷ್ಟರ ಮಟ್ಟಿಗೆ ನೀವು ನನ್ನ ಹೃದಯದಲ್ಲಿದ್ದೀರಿ. 4 ನಿಮ್ಮಲ್ಲಿ ನನಗೆ ದೃಢವಾದ ಭರವಸೆಯುಂಟು. ಗಾಢವಾದ ಅಭಿಮಾನವುಂಟು. ನಮ್ಮೆಲ್ಲಾ ಸಂಕಟಗಳಲ್ಲೂ ನಾನು ಎದೆಗುಂದದೆ ಆನಂದಭರಿತನಾಗಿದ್ದೇನೆ. 5 ನಾವು ಮಕೆದೋನಿಯವನ್ನು ತಲುಪಿದ ಮೇಲೂ ದೇಹಕ್ಕೆ ಕಿಂಚಿತ್ತಾದರೂ ವಿಶ್ರಾಂತಿ ಸಿಗಲಿಲ್ಲ. ಎಲ್ಲಾ ಕಡೆಗಳಿಂದಲೂ ನಮಗೆ ತೊಂದರೆ ತಾಪತ್ರಯಗಳು ಬಂದುವು. ಹೊರಗೆ ಕಲಹ, ಒಳಗೆ ತಳಮಳ; 6 ಆದರೂ ಎದೆಗುಂದಿದವರನ್ನು ಸಂತೈಸುವ ದೇವರು ತೀತನನ್ನು ಕಳುಹಿಸಿ ನಮ್ಮನ್ನು ಸಂತೈಸಿದರು. 7 ತೀತನ ಆಗಮನದಿಂದ ಮಾತ್ರವಲ್ಲ, ನೀವು ಆತನಿಗೆ ತೋರಿದ ಪ್ರೀತ್ಯಾದರದ ವರದಿಯಿಂದಲೂ ನಾವು ಪುನಃ ಚೇತನಗೊಂಡೆವು. ನನ್ನನ್ನು ನೋಡಲು ನಿಮಗಿರುವ ಹಂಬಲ, ನನ್ನ ಮೇಲೆ ನಿಮಗಿರುವ ಅನುಕಂಪ, ನನ್ನ ಬಗ್ಗೆ ನಿಮಗಿರುವ ಹಿತಚಿಂತನೆ, ಇವುಗಳನ್ನು ಕೇಳಿ ನಮಗೆ ಮತ್ತಷ್ಟು ಆನಂದವಾಯಿತು. 8 ನಾನು ಬರೆದ ಪತ್ರದಿಂದ ನಿಮ್ಮ ಮನಸ್ಸಿಗೆ ನೋವಾಗಿರಬಹುದು. ಆದರೂ ಚಿಂತೆಯಿಲ್ಲ. ಆ ಪತ್ರವು ನಿಮ್ಮನ್ನು ಸ್ವಲ್ಪಕಾಲ ದುಃಖಕ್ಕೀಡುಮಾಡಿತೆಂದು ನಾನು ಮೊದಮೊದಲು ನೊಂದುಕೊಂಡೆನಾದರೂ ಈಗ ಸಂತೋಷಪಡುತ್ತೇನೆ. 9 ನಿಮಗೆ ದುಃಖ ಉಂಟಾಯಿತೆಂಬ ಕಾರಣದಿಂದ ಅಲ್ಲ, ಆ ದುಃಖದಿಂದ ನಿಮಗೆ ಮನಪರಿವರ್ತನೆ ಆಯಿತೆಂಬ ಕಾರಣದಿಂದ ಸಂತೋಷಪಡುತ್ತೇನೆ. ನಿಮಗೆ ದುಃಖ ಉಂಟಾದುದು ದೇವರ ಚಿತ್ತವೇ ಸರಿ. ಆದರೆ ನನ್ನಿಂದ ನಿಮಗೆ ಅನ್ಯಾಯವೇನೂ ಆಗಲಿಲ್ಲ. 10 ದೇವರ ಚಿತ್ತಾನುಸಾರ ಬಂದೊದಗುವ ದುಃಖವು ಹೃದಯ ಪರಿವರ್ತನೆಗೆ ಕಾರಣವಾಗುತ್ತದೆ; ಜೀವೋದ್ಧಾರಕ್ಕೆ ಎಡೆಮಾಡುತ್ತದೆ. ಕೇವಲ ಪ್ರಾಪಂಚಿಕವಾದ ದುಃಖವು ಸಾವಿಗೆ ಒಯ್ಯುತ್ತದೆ; 11 ದೇವರ ಚಿತ್ತಾನುಸಾರವಾದ ನಿಮ್ಮ ದುಃಖದಿಂದ ಎಂಥಾ ಶ್ರದ್ಧೆ ಉಂಟಾಗಿದೆ ಎಂಬುದನ್ನು ಗಮನಿಸಿನೋಡಿರಿ; ನಿಮ್ಮಲ್ಲಿ ಎಂಥ ಉತ್ಸಾಹ, ದೋಷವಿಮುಕ್ತರಾಗಲು ಎಂಥ ಪ್ರಯಾಸ, ಎಷ್ಟು ರೋಷ, ಎಷ್ಟು ಆವೇಶ, ಎಷ್ಟು ಎಚ್ಚರಿಕೆ, ಎಷ್ಟು ಹಂಬಲ, ತಪ್ಪಿತಸ್ಥರನ್ನು ಶಿಕ್ಷಿಸಲು ಎಷ್ಟು ಕಟ್ಟುನಿಟ್ಟು! ನೀವು ನಿರ್ದೋಷಿಗಳೆಂಬುದಕ್ಕೆ ಇವೆಲ್ಲವೂ ಸಾದೃಶ್ಯಗಳಾಗಿವೆ. 12 ನಾನು ನಿಮಗೆ ಆ ಪತ್ರವನ್ನು ಬರೆದದ್ದು ತಪ್ಪುಮಾಡಿದವನಿಗೆ ದಂಡನೆಯಾಗಲಿ ಎಂದಲ್ಲ, ಆ ತಪ್ಪಿನಿಂದ ನೊಂದವನಿಗೆ ನ್ಯಾಯ ದೊರಕಲೆಂದೂ ಅಲ್ಲ; ನಮ್ಮ ಬಗ್ಗೆ ನಿಮಗಿರುವ ಅಕ್ಕರೆ-ಆಸಕ್ತಿಗಳು ದೇವರ ಸನ್ನಿಧಿಯಲ್ಲಿ ನಿಮಗೆ ವ್ಯಕ್ತವಾಗಲೆಂದೇ ಬರೆದೆನು. ಆದ್ದರಿಂದಲೇ ನಮ್ಮ ಮನಸ್ಸಿಗೆ ನೆಮ್ಮದಿ ಉಂಟಾಗಿದೆ. 13 ಅಷ್ಟೇ ಅಲ್ಲ, ನೀವೆಲ್ಲರೂ ತೀತನ ಮನಸ್ಸನ್ನು ತಣಿಸಿದ್ದರಿಂದ ಆತನ ಸಂತೋಷವನ್ನು ಕಂಡು ನಾವು ಮತ್ತಷ್ಟು ತೃಪ್ತರಾಗಿದ್ದೇವೆ. 14 ತೀತನ ಮುಂದೆ ನಾನು ನಿಮ್ಮನ್ನು ಹೊಗಳಿದ್ದು ನಿಜ; ಹಾಗೆ ಹೊಗಳಿದ್ದಕ್ಕಾಗಿ ನಾನು ನಾಚಿಕೆಪಡಬೇಕಾಗಿಲ್ಲ. ನಾವು ನಿಮಗೆ ಹೇಳಿದ್ದೆಲ್ಲವೂ ಹೇಗೆ ಸತ್ಯವಾಗಿತ್ತೋ, ಹಾಗೆಯೇ ತೀತನ ಮುಂದೆ ನಾವು ಆಡಿದ ಹೊಗಳಿಕೆಯ ಮಾತುಗಳೆಲ್ಲವೂ ಸತ್ಯವಾಗಿವೆ. 15 ನಿಮ್ಮೆಲ್ಲರ ವಿನಯ-ವಿಧೇಯತೆಯನ್ನು, ಭಯಭಕ್ತಿಯಿಂದ ನೀವು ನೀಡಿದ ಸ್ವಾಗತವನ್ನು ಸ್ಮರಿಸಿಕೊಳ್ಳುವಾಗಲೆಲ್ಲ ನಿಮ್ಮ ಮೇಲೆ ಆತನಿಗಿರುವ ಪ್ರೀತಿ ಉಕ್ಕಿ ಹರಿಯುತ್ತದೆ. 16 ನಿಮ್ಮ ಮೇಲೆ ನನಗೆ ಪೂರ್ಣಭರವಸೆ ಇದೆ. ಇದೇ ನನ್ನ ಸಂತೋಷ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India