Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಕೊರಿಂಥದವರಿಗೆ 6 - ಕನ್ನಡ ಸತ್ಯವೇದವು C.L. Bible (BSI)


ದೇವರ ದಾಸನ ಸೋಲು ಗೆಲುವು

1 ದೇವರೊಡನೆ ದುಡಿಯುತ್ತಿರುವ ನಾವು ನಿಮ್ಮಲ್ಲಿ ವಿಜ್ಞಾಪಿಸುವುದೇನೆಂದರೆ: ದೇವರಿಂದ ನೀವು ಪಡೆದ ವರಪ್ರಸಾದಗಳನ್ನು ವ್ಯರ್ಥಮಾಡಬೇಡಿ.

2 :ಸುಪ್ರಸನ್ನತೆಯ ಕಾಲದಲ್ಲಿ ನಿನ್ನನ್ನಾಲಿಸಿದೆನು; ಉದ್ಧಾರ ದಿನದಂದು ನಿನಗೆ ನೆರವಾದೆನು,” ಎಂದಿದ್ದಾರೆ ದೇವರು. ಇದೇ ಆ ಸುಪ್ರಸನ್ನತೆಯ ಕಾಲ. ಇದೇ ಆ ಉದ್ಧಾರದ ಸುದಿನ.

3 ನಮ್ಮ ಸೇವಾಕಾರ್ಯವು ಅವಹೇಳನಕ್ಕೆ ಗುರಿಯಾಗದಂತೆ, ನಾವು ಯಾರಿಗೂ ಯಾವ ತೆರನಾದ ಅಡ್ಡಿಯನ್ನೂ ಒಡ್ಡಲಿಲ್ಲ.

4 ಬದಲಿಗೆ, ಎಲ್ಲ ವಿಷಯಗಳಲ್ಲೂ ದೇವರ ದಾಸರೆಂದು ತೋರಿಸಿಕೊಳ್ಳುತ್ತೇವೆ. ಕಷ್ಟಸಂಕಟಗಳಲ್ಲೂ ದುಃಖದುರಿತಗಳಲ್ಲೂ ತಾಳ್ಮೆಯಿಂದ ವರ್ತಿಸಿದ್ದೇವೆ.

5 ಏಟುಪೆಟ್ಟುಗಳನ್ನು ತಿಂದಿದ್ದೇವೆ, ಸೆರೆಮನೆವಾಸ ಅನುಭವಿಸಿದ್ದೇವೆ, ಕೋಪಕ್ರಾಂತಿಗಳಿಗೆ ಗುರಿಯಾಗಿದ್ದೇವೆ, ಮೈಮುರಿಯೆ ದುಡಿದಿದ್ದೇವೆ, ನಿದ್ದೆಗೆಟ್ಟು ಬಳಲಿದ್ದೇವೆ, ಊಟವಿಲ್ಲದೆ ಸೊರಗಿದ್ದೇವೆ.

6 ನಿರ್ಮಲ ಮನಸ್ಸು, ಸನ್ಮತಿ, ಸಹನೆ, ಸದಯತೆಯಿಂದಲೂ, ಪವಿತ್ರಾತ್ಮ, ನಿಷ್ಕಪಟ ಪ್ರೇಮ,

7 ಸತ್ಯೋಕ್ತಿ, ದೈವಶಕ್ತಿ, ಇವುಗಳಿಂದಲೂ ನಾವು ದೇವರ ದಾಸರೆಂದು ತೋರ್ಪಡಿಸುತ್ತೇವೆ. ರಕ್ಷಿಸಲೂ ಎದುರಿಸಲೂ ಧರ್ಮವೆಂಬ ಆಯುಧವನ್ನು ಕೈಯಲ್ಲಿ ಹಿಡಿದಿದ್ದೇವೆ.

8 ಮಾನ-ಅವಮಾನ, ಕೀರ್ತಿ-ಅಪಕೀರ್ತಿ ಎರಡನ್ನೂ ಅನುಭವಿಸುತ್ತಿದ್ದೇವೆ. ಸತ್ಯವಾದಿಗಳು ನಾವಾದರೂ ಮಿಥ್ಯವಾದಿಗಳು ಎಂದೆನಿಸಿಕೊಂಡಿದ್ದೇವೆ.

9 ಪ್ರಖ್ಯಾತರಾಗಿದ್ದರೂ ಖ್ಯಾತರಹಿತರಾಗಿದ್ದೇವೆ. ಬದುಕಿದ್ದರೂ ಸತ್ತವರೆನಿಸಿಕೊಂಡಿದ್ದೇವೆ. ಶಿಕ್ಷೆಗೆ ಗುರಿಯಾಗಿದ್ದರೂ ಇನ್ನೂ ಕೊಲೆಗೆ ಈಡಾಗದೆ ಇದ್ದೇವೆ.

10 ದುಃಖಪಡುತ್ತಿದ್ದರೂ ಸದಾ ಸಂತೋಷದಿಂದ ಇದ್ದೇವೆ. ದರಿದ್ರರಾಗಿದ್ದರೂ ಅನೇಕರನ್ನು ಧನವಂತರನ್ನಾಗಿಸುತ್ತಿದ್ದೇವೆ; ನಾವು ಏನೂ ಇಲ್ಲದವರಾಗಿದ್ದರೂ ಎಲ್ಲವನ್ನೂ ಪಡೆದವರಂತೆ ಇದ್ದೇವೆ.

11 ಕೊರಿಂಥದ ನಿವಾಸಿಗಳೇ, ಬಿಚ್ಚುಮನದಿಂದಲೂ ತೆರೆದ ಹೃದಯದಿಂದಲೂ ನಾವು ನಿಮ್ಮೊಡ಼ನೆ ಮಾತನಾಡಿದ್ದೇವೆ.

12 ನಮ್ಮಲ್ಲಿ ಸಂಕುಚಿತ ಭಾವನೆಯೇನೂ ಇಲ್ಲ. ಇದು ಇರುವುದಾದರೆ ನಿಮ್ಮಲ್ಲೇ.

13 ಆದ್ದರಿಂದ ಮಕ್ಕಳಿಗೆ ಹೇಳುವಂತೆ ಹೇಳುತ್ತಿದ್ದೇವೆ: ನಾವು ನಿಮ್ಮನ್ನು ಪೂರ್ಣ ಹೃದಯದಿಂದ ಪ್ರೀತಿಸಿದಂತೆ, ನೀವೂ ನಮ್ಮನ್ನು ಪೂರ್ಣ ಹೃದಯದಿಂದ ಪ್ರೀತಿಸಿರಿ.


ಧರ್ಮಕ್ಕೂ ಅಧರ್ಮಕ್ಕೂ ಅಂಟುನಂಟೆ?

14 ಅವಿಶ್ವಾಸಿಗಳೊಡನೆ ಒಂದಾಗಬೇಡಿ. ಧರ್ಮಕ್ಕೂ ಅಧರ್ಮಕ್ಕೂ ಸಾಟಿಯೆಲ್ಲಿ? ಬೆಳಕಿಗೂ ಕತ್ತಲೆಗೂ ಎಲ್ಲಿಯ ಸಂಬಂಧ?

15 ಕ್ರಿಸ್ತಯೇಸುವಿಗೂ ಸೈತಾನನಿಗೂ ಎಲ್ಲಿಯ ನಂಟು? ವಿಶ್ವಾಸಿಗೂ ಅವಿಶ್ವಾಸಿಗೂ ಎಲ್ಲಿಯ ಸಹವಾಸ?

16 ದೇವರ ಆಲಯಕ್ಕೂ ಕಲ್ಲಿನ ವಿಗ್ರಹಕ್ಕೂ ಎಲ್ಲಿಯ ಸಾಮ್ಯ? ನಾವಾದರೋ ಜೀವಂತ ದೇವರ ಮಂದಿರವಾಗಿದ್ದೇವೆ. ಇದನ್ನು ದೇವರೇ ಹೇಳಿದ್ದಾರೆ: “ನನ್ನ ಜನರಲ್ಲೇ ನಾ ಮನೆಮಾಡುವೆನು ಅವರ ನಡುವೆಯೇ ನಾ ತಿರುಗಾಡುವೆನು ಅವರಿಗೆ ನಾನೇ ದೇವರಾಗಿರುವೆನು ಅವರೆನಗೆ ಪ್ರಜೆಯಾಗಿರುವರು.”

17 ಇದಲ್ಲದೆ: ಅನ್ಯಜನರನ್ನು ಬಿಟ್ಟು ಹೊರಬನ್ನಿ ಅವರಿಂದ ಬೇರ್ಪಟ್ಟು ಬಾಳಿರಿ ಮಲಿನವಾದುದನ್ನು ಮುಟ್ಟದಿರಿ.

18 ಅಕ್ಕರೆಯಿಂದ ನಾನಾಗ ನಿಮ್ಮನ್ನು ಸ್ವಾಗತಿಸುವೆನು ತಂದೆಯಾಗಿರುವೆನು ನಾನು ನಿಮಗೆ ಪುತ್ರಪುತ್ರಿಯರಾಗಿರುವಿರಿ ನೀವು ನನಗೆ.” - ಎಂದು ನುಡಿದಿಹರು ಸರ್ವಶಕ್ತ ಪ್ರಭು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು