2 ಕೊರಿಂಥದವರಿಗೆ 5 - ಕನ್ನಡ ಸತ್ಯವೇದವು C.L. Bible (BSI)1 ಭೂಮಿಯ ಮೇಲಿನ ನಮ್ಮ ಈ ದೇಹ ಎಂಬ ಗುಡಾರವು ನಾಶವಾಗಿಹೋದರೂ ಸ್ವರ್ಗದಲ್ಲಿ ಶಾಶ್ವತವಾದ ಗೃಹವೊಂದು ನಮಗೆ ದೊರಕುವುದು. ಅದು ಮಾನವರಿಂದ ನಿರ್ಮಿತ ಆದುದಲ್ಲ, ದೇವರಿಂದಲೇ ನಿರ್ಮಿತವಾದುದು. ಇದು ನಮಗೆ ತಿಳಿದ ವಿಷಯ. 2 ಈ ಗುಡಾರದಲ್ಲಿರುವವರೆಗೆ ನಾವು ನರಳುತ್ತೇವೆ; ಸ್ವರ್ಗೀಯ ನಿವಾಸವನ್ನು ನಮ್ಮ ದೇಹದ ಮೇಲೆ ಎಂದಿಗೆ ನಾವು ಧರಿಸಿಕೊಳ್ಳುತ್ತೇವೋ ಎಂದು ಹಾತೊರೆಯುತ್ತೇವೆ. 3 ಅದನ್ನು ಧರಿಸಿಕೊಂಡಾಗ ನಾವು ಬೆತ್ತಲೆಯಾಗಿ ಇರಲಾರೆವು. 4 ನಾವು ಈ ದೇಹವೆಂಬ ಗುಡಾರದಲ್ಲಿರುವ ತನಕ ನರಳುತ್ತೇವೆ, ಭಾರದಿಂದ ಬಳಲುತ್ತೇವೆ. ಈ ದೇಹವು ಕಳಚಿಹೋಗಬೇಕೆಂಬುದು ನಮ್ಮ ಬಯಕೆ ಅಲ್ಲ. ನಶ್ವರವಾದುದು ನುಂಗಿಹೋಗಿ ಅಮರವಾದುದು ಉಳಿಯಬೇಕೆಂದೇ ಈ ಗು಼ಡಾರದ ಮೇಲೆ ಆ ನಿವಾಸವನ್ನು ಧರಿಸಿಕೊಳ್ಳಲು ಅಪೇಕ್ಷಿಸುತ್ತೇವೆ. 5 ಈ ಸುಸ್ಥಿತಿಗಾಗಿಯೇ ದೇವರು ನಮ್ಮನ್ನು ಸಿದ್ಧಗೊಳಿಸಿದ್ದಾರೆ. ಇದಕ್ಕೆಲ್ಲಾ ಖಾತರಿಯಾಗಿ ಪವಿತ್ರಾತ್ಮರನ್ನೇ ನಮಗೆ ದಯಪಾಲಿಸಿದ್ದಾರೆ. 6 ಈ ಕಾರಣದಿಂದಲೇ ನಾವು ಸದಾ ಸ್ಥಿರಚಿತ್ತರಾಗಿದ್ದೇವೆ. ಈ ದೇಹವನ್ನೇ ನೆಚ್ಚಿ ಇದರಲ್ಲೇ ನೆಲೆಯಾಗಿರುವವರೆಗೂ ನಾವು ಪ್ರಭುವಿನಿಂದ ದೂರವಿರುವ ಪ್ರವಾಸಿಗಳಂತೆ ಇದ್ದೇವೆ. 7 ನಾವು ನೋಡಿ ನಡೆಯುವವರಲ್ಲ, ನಂಬಿ ನಡೆಯುವವರು. 8 ಆದ್ದರಿಂದ ಈ ದೇಹವನ್ನು ತ್ಯಜಿಸಿ, ಪ್ರಭುವನ್ನೇ ನೆಚ್ಚಿ ನೆಲಸುವುದು ಲೇಸೆಂದು ಧೈರ್ಯದಿಂದ ಹೇಳುತ್ತೇವೆ. 9 ಈ ಕಾರಣ, ಇಲ್ಲಾದರೂ ಸರಿ, ಅಲ್ಲಾದರೂ ಸರಿ, ಪ್ರಭು ಮೆಚ್ಚುವಂತೆ ಬಾಳುವುದೊಂದೇ ನಮ್ಮ ಗುರಿ. 10 ನಾವು ಎಲ್ಲರೂ ನ್ಯಾಯವಿಚಾರಣೆಗಾಗಿ ಕ್ರಿಸ್ತಯೇಸುವಿನ ಮುಂದೆ ನಿಲ್ಲಲೇಬೇಕು. ಪ್ರತಿಯೊಬ್ಬನೂ ತನ್ನ ದೈಹಿಕ ಜೀವನದಲ್ಲಿ ಮಾಡಿದ ಪಾಪ ಪುಣ್ಯಕಾರ್ಯಗಳಿಗೆ ತಕ್ಕ ಪ್ರತಿಫಲವನ್ನು ಪಡೆಯಲೇಬೇಕು. ಸಂಧಾನದ ಸಂದೇಶ 11 ಪ್ರಭುವಿನ ಭಯಭಕ್ತಿ ನಮಗಿರುವುದರಿಂದ ನಾವು ಮಾನವರ ಮನವೊಲಿಸಲು ಪ್ರಯತ್ನಿಸುತ್ತೇವೆ. ನಾವು ಎಂಥವರೆಂದು ದೇವರು ಚೆನ್ನಾಗಿ ಬಲ್ಲರು. ಅದು ನಿಮ್ಮ ಮನಸ್ಸಾಕ್ಷಿಗೂ ಅರಿವಾಗಿದೆಯೆಂದು ನಂಬುತ್ತೇವೆ. 12 ಮತ್ತೊಮ್ಮೆ ನಮ್ಮನ್ನು ನಾವೇ ಹೊಗಳಿಕೊಳ್ಳುತ್ತೇವೆಂದು ನೀವು ಭಾವಿಸಬಾರದು. ನಮ್ಮನ್ನು ಕುರಿತು ನೀವೇ ಹೆಚ್ಚಳಪಡುವಂತೆ ಒಂದು ಅವಕಾಶವನ್ನು ಒದಗಿಸುತ್ತಿದ್ದೇವೆ, ಅಷ್ಟೆ. ಹೀಗೆ, ಮನುಷ್ಯನ ಅಂತರಂಗವನ್ನು ಅರಿಯದೆ ಅವನ ಹೊರ ತೋರಿಕೆಗಳನ್ನೇ ನೆಚ್ಚಿ ನಲಿಯುವವರಿಗೆ ಸೂಕ್ತ ಪ್ರತ್ಯುತ್ತರವನ್ನು ಕೊಡಲು ನೀವು ಶಕ್ತರಾಗುತ್ತೀರಿ. 13 ನಮಗೆ ಬುದ್ಧಿಭ್ರಮಣೆಯಾಗಿದೆಯೆಂದು ಭಾವಿಸುತ್ತೀರೋ? ಹಾಗಿದ್ದರೆ ಅದು ದೇವರ ಮಹಿಮೆಗಾಗಿ ನಾವು ಸ್ವಸ್ಥಬುದ್ಧಿಯುಳ್ಳವರೆಂದು ನೆನೆಸುತ್ತೀರೋ? ಹಾಗಿದ್ದರೆ ಅದು ನಿಮ್ಮ ಹಿತಕ್ಕಾಗಿ. 14 ಯೇಸುಕ್ರಿಸ್ತರ ಪ್ರೀತಿಯ ಪಾಲನೆಗೆ ನಾವು ಒಳಗಾಗಿದ್ದೇವೆ. ಎಲ್ಲಾ ಮಾನವರಿಗೋಸ್ಕರ ಒಬ್ಬನು ಮರಣಹೊಂದಿದನು. ಆದ್ದರಿಂದ ನಾವೆಲ್ಲರೂ ಆ ಮರಣದಲ್ಲಿ ಪಾಲುಗಾರರು. 15 ಸರ್ವರಿಗಾಗಿ ಯೇಸು ಪ್ರಾಣತ್ಯಾಗ ಮಾಡಿದರು. ಪರಿಣಾಮವಾಗಿ, ಇನ್ನು ಮುಂದೆ ಜೀವಿಸುವವರು ತಮಗಾಗಿ ಜೀವಿಸದೆ, ಸತ್ತು ಪುನರುತ್ಥಾನರಾದ ಯೇಸುವಿಗಾಗಿ ಜೀವಿಸಬೇಕು. 16 ಇನ್ನು ಮುಂದೆ ನಾವು ಯಾರನ್ನೂ ಕೇವಲ ಮಾನವ ದೃಷ್ಟಿಯಿಂದ ಪರಿಗಣಿಸುವುದಿಲ್ಲ. ಒಂದು ಕಾಲದಲ್ಲಿ, ಕ್ರಿಸ್ತಯೇಸುವನ್ನು ನಾವು ಹಾಗೆ ಪರಿಗಣಿಸಿದ್ದುಂಟು. ಆದರೆ ಇನ್ನು ಮುಂದೆ ಹಾಗೆ ಮಾಡುವುದಿಲ್ಲ. 17 ಯಾರಾದರೂ ಯೇಸುಕ್ರಿಸ್ತರೊಡನೆ ಒಂದಾದರೆ ಅವನು ನೂತನ ಸೃಷ್ಟಿಯಾಗುತ್ತಾನೆ. ಹಳೆಯದೆಲ್ಲಾ ಅಳಿದುಹೋಗುತ್ತದೆ. ಹೊಸದಿದೋ, ಜನ್ಮತಳೆದಿದೆ. 18 ಇದೆಲ್ಲಾ ಆಗುವುದು ದೇವರಿಂದ. ದೇವರು ಕ್ರಿಸ್ತಯೇಸುವಿನ ಮುಖಾಂತರ ನಮ್ಮನ್ನು ತಮ್ಮೊಡನೆ ಸಂಧಾನಪಡಿಸಿಕೊಂಡಿದ್ದಾರೆ.ಇದಲ್ಲದೆ, ಇತರರನ್ನು ಸಂಧಾನಕ್ಕೆ ತರುವ ಕಾರ್ಯವನ್ನು ನಮಗೆ ವಹಿಸಿದ್ದಾರೆ. 19 ಹೌದು, ದೇವರು ಮಾನವರ ಅಪರಾಧಗಳನ್ನು ಲೆಕ್ಕಿಸದೆ, ಕ್ರಿಸ್ತಯೇಸುವಿನಲ್ಲಿ ಇಡೀ ಜಗತ್ತನ್ನೇ ತಮ್ಮೊಡನೆ ಸಂಧಾನಗೊಳಿಸುತ್ತಿದ್ದಾರೆ. ಈ ಸಂಧಾನದ ಸಂದೇಶವನ್ನು ಸಾರುವ ಸೌಭಾಗ್ಯವನ್ನು ಅವರೇ ನಮಗೆ ಕೊಟ್ಟಿದ್ದಾರೆ. 20 ಆದ್ದರಿಂದಲೇ ನಾವು ಕ್ರಿಸ್ತಯೇಸುವಿನ ರಾಯಭಾರಿಗಳು. ದೇವರೇ ನಮ್ಮ ಮುಖಾಂತರ ಕರೆ ನೀಡುತ್ತಿದ್ದಾರೆ. ಅವರೊಡನೆ ಸಂಧಾನಮಾಡಿಕೊಳ್ಳಿರೆಂದು ಕ್ರಿಸ್ತಯೇಸುವಿನ ಹೆಸರಿನಲ್ಲಿ ನಾವು ನಿಮ್ಮನ್ನು ವಿನಂತಿಸುತ್ತೇವೆ. 21 ಪಾಪವನ್ನೇ ಅರಿಯದ ಕ್ರಿಸ್ತಯೇಸುವನ್ನು ದೇವರು ನಮಗೋಸ್ಕರ ಪಾಪಸ್ವರೂಪಿಯನ್ನಾಗಿಸಿದರು. ಕ್ರಿಸ್ತಯೇಸುವಿನಲ್ಲಿ ನಾವು ದೇವರೊಡನೆ ಸತ್ಸಂಬಂಧವನ್ನು ಪಡೆಯಲೆಂದೇ ಹೀಗೆ ಮಾಡಿದರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India