2 ಕೊರಿಂಥದವರಿಗೆ 4 - ಕನ್ನಡ ಸತ್ಯವೇದವು C.L. Bible (BSI)ಮಾಣಿಕ್ಯ ತುಂಬಿದ ಮಡಕೆ 1 ದೇವರ ಕರುಣೆಯಿಂದ ಈ ಸೇವೆಯನ್ನು ಕೈಗೊಂಡಿರುವ ನಾವು ಧೈರ್ಯಗೆಟ್ಟು ಹಿಂಜರಿಯುವುದಿಲ್ಲ. 2 ಲಜ್ಜೆಗೆಟ್ಟ ಗುಪ್ತಕಾರ್ಯಗಳಿಂದ ನಾವು ದೂರವಿದ್ದೇವೆ. ನಮ್ಮ ನಡತೆಯಲ್ಲಿ ಮೋಸ, ವಂಚನೆ ಎಂಬುದಿಲ್ಲ. ದೇವರ ವಾಕ್ಯವನ್ನು ನಾವು ಅಪಾರ್ಥಗೊಳಿಸುವುದಿಲ್ಲ. ಬದಲಿಗೆ ಸತ್ಯವನ್ನು ಪ್ರಾಮಾಣಿಕವಾಗಿ ಸಾರುತ್ತೇವೆ. ಹೀಗೆ ದೇವರ ಸಮ್ಮುಖದಲ್ಲಿ ಸಜ್ಜನರಾದವರಿಗೆ ಸಾಕ್ಷಿಗಳಾಗಿದ್ದೇವೆ. 3 ನಾವು ಪ್ರಚಾರಮಾಡುವ ಶುಭಸಂದೇಶ ಕೆಲವರಿಗೆ ಇನ್ನೂ ಮುಸುಕಿನ ಮರೆಯಾಗಿದ್ದರೆ, ಹಾಗಿರುವುದು ವಿನಾಶ ಮಾರ್ಗದಲ್ಲಿರುವವರಿಗೆ ಮಾತ್ರ. 4 ಇವರು ವಿಶ್ವಾಸಿಸುವುದಿಲ್ಲ. ಏಕೆಂದರೆ, ಪೃಥ್ವಿಯ ಮಿಥ್ಯ ದೈವವು ಇವರ ಮನಸ್ಸನ್ನು ಮಂಕಾಗಿಸಿದೆ; ದೇವರ ಪ್ರತಿರೂಪವಾಗಿರುವ ಕ್ರಿಸ್ತಯೇಸುವಿನ ಮಹಿಮೆಯನ್ನು ಸಾರುವ ಶುಭಸಂದೇಶದ ಬೆಳಕನ್ನು ಕಾಣದಂತೆ ಇವರನ್ನು ಕುರುಡಾಗಿಸಿದೆ. 5 ನಾವು ನಮ್ಮನ್ನೇ ಕುರಿತು ಪ್ರಚಾರಮಾಡುತ್ತಿಲ್ಲ. ಆದರೆ ಕ್ರಿಸ್ತಯೇಸುವೇ ಪ್ರಭುವೆಂದೂ ಅವರಿಗೋಸ್ಕರ ನಾವು ನಿಮ್ಮ ದಾಸರೆಂದೂ ಪ್ರಚುರಪಡಿಸುತ್ತಿದ್ದೇವೆ. 6 “ಕತ್ತಲೆಯಿಂದ ಬೆಳಕು ಹೊಳೆಯಲಿ,” ಎಂದ ದೇವರೇ, ತಮ್ಮ ಜ್ಯೋತಿಯಿಂದ ನಮ್ಮ ಅಂತರಂಗವನ್ನು ಬೆಳಗಿಸಿದ್ದಾರೆ. ಇದರ ಪರಿಣಾಮವಾಗಿ ಕ್ರಿಸ್ತಯೇಸುವಿನ ಮುಖಮಂಡಲದಲ್ಲಿ ಪ್ರಜ್ವಲಿಸುತ್ತಿರುವ ದೇವರ ಮಹಿಮೆಯ ದಿವ್ಯಜ್ಞಾನವು ನಮ್ಮಲ್ಲಿ ಉದಯಿಸುವಂತಾಗಿದೆ. 7 ನಾವು ಇಂಥ ಆಧ್ಯಾತ್ಮಿಕ ಮಾಣಿಕ್ಯವನ್ನು ಪಡೆದಿದ್ದರೂ ಮಣ್ಣಿನ ಮಡಕೆಗಳಂತೆ ಇದ್ದೇವೆ. ಹೀಗೆ, ಈ ಪರಮೋನ್ನತ ಶಕ್ತಿ ನಮಗೆ ಸೇರಿದ್ದಲ್ಲ. ದೇವರಿಗೆ ಸೇರಿದ್ದೆಂದು ವ್ಯಕ್ತವಾಗುತ್ತದೆ. 8 ನಾವು ಇಕ್ಕಟ್ಟುಬಿಕ್ಕಟ್ಟುಗಳಿಗೆ ಒಳಗಾಗಿದ್ದರೂ ನಜ್ಜುಗುಜ್ಜಾಗಲಿಲ್ಲ; ಸಂಶಯ ಸಂದೇಹಗಳಿಗೊಳಗಾದರೂ ನಿರಾಶೆಗೊಳ್ಳಲಿಲ್ಲ. 9 ಶತ್ರುಗಳು ಅನೇಕರಿದ್ದರೂ ಮಿತ್ರನೊಬ್ಬನು ಇಲ್ಲದಿರಲಿಲ್ಲ. ಪ್ರಾಣ ಹಿಂಸೆಗಳಿಗೀಡಾಗಿದ್ದರೂ ಪ್ರಾಣನಷ್ಟವನ್ನು ಅನುಭವಿಸಲಿಲ್ಲ. 10 ಯೇಸುವಿನ ದಿವ್ಯಜೀವವು ನಮ್ಮ ದೇಹದಲ್ಲಿ ಗೋಚರವಾಗುವಂತೆ ಅವರ ಮರಣಯಾತನೆಯನ್ನು ನಿರಂತರವಾಗಿ ಅನುಭವಿಸುತ್ತಾ ಬಾಳುತ್ತಿದ್ದೇವೆ. 11 ಯೇಸುವಿನ ಅಮರ ಜೀವವು ನಮ್ಮ ನಶ್ವರ ಶರೀರದಲ್ಲಿ ಗೋಚರವಾಗುವಂತೆ ಬದುಕಿರುವಾಗಲೇ ನಾವು ಯೇಸುವಿಗೋಸ್ಕರ ಸತತ ಸಾವಿಗೆ ಈಡಾಗಿದ್ದೇವೆ. 12 ಹೀಗೆ ನಮ್ಮಲ್ಲಿ ಸಾವು ಕಾರ್ಯಗತವಾಗುತ್ತಿದ್ದರೆ ನಿಮ್ಮಲ್ಲಿ ಜೀವ ಕಾರ್ಯಗತವಾಗುತ್ತಿದೆ. 13 “ನಾನು ವಿಶ್ವಾಸವಿಟ್ಟೆನು. ಆದ್ದರಿಂದ ಮಾತನಾಡಿದೆನು,” ಎಂದು ಪವಿತ್ರಗ್ರಂಥದಲ್ಲಿ ಬರೆಯಲಾಗಿದೆ. ಇದೇ ಮನೋಭಾವನೆಯಿಂದ ಕೂಡಿರುವ ನಾವು ಮಾತನಾಡಲೇಬೇಕು. ಏಕೆಂದರೆ ನಮಗೆ ವಿಶ್ವಾಸವಿದೆ. 14 ಪ್ರಭು ಯೇಸುವನ್ನು ಪುನರುತ್ಥಾನಗೊಳಿಸಿದ ದೇವರು ನಮ್ಮನ್ನು ಯೇಸುಕ್ರಿಸ್ತರೊಡನೆ ಪುನರುತ್ಥಾನಗೊಳಿಸಿ ತಮ್ಮ ಸಾನ್ನಿಧ್ಯಕ್ಕೆ ಬರಮಾಡಿಕೊಳ್ಳುವರು ಎಂಬುದನ್ನು ನಾವು ಬಲ್ಲೆವು. ಅಂತೆಯೇ ನಿಮ್ಮನ್ನೂ ಬರಮಾಡಿಕೊಳ್ಳುವರು. 15 ಇದೆಲ್ಲವೂ ನಿಮ್ಮ ಒಳಿತಿಗಾಗಿಯೇ. ಹೀಗೆ ಅನೇಕರಲ್ಲಿ ದೇವರ ವರಪ್ರಸಾದವು ಉಕ್ಕಿ ಹರಿಯುವುದು; ಅವರಲ್ಲಿ ಕೃತಜ್ಞತಾಭಾವನೆಯನ್ನು ಹೆಚ್ಚಿಸುವುದು; ಇದರಿಂದಾಗಿ ದೇವರ ಮಹಿಮೆ ಬೆಳಗುವುದು. ವಿಶ್ವಾಸಭರಿತ ಬಾಳು 16 ಹೀಗಿರಲು, ನಾವು ಎದೆಗುಂದುವುದಿಲ್ಲ. ನಮ್ಮ ಭೌತಿಕ ದೇಹವು ನಶಿಸುತ್ತಿದ್ದರೂ ನಮ್ಮ ಅಂತರಂಗವು ದಿನೇದಿನೇ ನೂತನವಾಗುತ್ತದೆ. 17 ನಾವು ಅನುಭವಿಸುತ್ತಿರುವ ಕಷ್ಟಸಂಕಟಗಳು ಅಲ್ಪವಾದುವು, ಕ್ಷಣಿಕವಾದುವು. ಅವುಗಳಿಂದ ಲಭಿಸುವ ಮಹಿಮೆಯಾದರೋ ಅಪಾರವಾದುದು, ಅನಂತವಾದುದು. 18 ನಮ್ಮ ಗಮನವು ಕೇಂದ್ರೀಕೃತವಾಗಿರುವುದು ಗೋಚರವಾದುವುಗಳ ಮೇಲಲ್ಲ, ಅಗೋಚರವಾದುವುಗಳ ಮೇಲೆ. ಗೋಚರವಾದುವುಗಳು ತಾತ್ಕಾಲಿಕ; ಅಗೋಚರವಾದುವುಗಳು ಶಾಶ್ವತ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India