2 ಕೊರಿಂಥದವರಿಗೆ 3 - ಕನ್ನಡ ಸತ್ಯವೇದವು C.L. Bible (BSI)ಪ್ರಭುವನ್ನು ಪ್ರತಿಬಿಂಬಿಸುವ ಕನ್ನಡಿ 1 ನಾವೀಗ ಆತ್ಮಸ್ತುತಿಯನ್ನು ಮಾಡಲು ಆರಂಭಿಸಿದಂತೆ ತೋರುತ್ತದೆಯೇ? ಅಥವಾ ನಿಮಗೆ ತೋರಿಸಲು ಯೋಗ್ಯತಾಪತ್ರ ಇತರರಿಗೆ ಬೇಕಾಗಿರುವಂತೆ ನಮಗೂ ಬೇಕಾಗಿದೆಯೇ? ಇಲ್ಲವೆ, ಯೋಗ್ಯತಾಪತ್ರವನ್ನು ನಿಮ್ಮಿಂದ ಪಡೆಯುವ ಅವಶ್ಯಕತೆ ನಮಗೂ ಇದೆಯೇ? 2 ನೀವೇ ನಮ್ಮ ಯೋಗ್ಯತಾಪತ್ರ, ನಮ್ಮ ಹೃದಯ ಪಟಲದ ಮೇಲೆ ಬರೆಯಲಾದ ಪತ್ರ. ಅದನ್ನು ಯಾರು ಬೇಕಾದರೂ ಗುರುತಿಸಬಹುದು. ಓದಿ ತಿಳಿದುಕೊಳ್ಳಬಹುದು. 3 ಕ್ರಿಸ್ತಯೇಸುವೇ ನಮ್ಮಿಂದ ಬರೆಸಿದ ಪತ್ರ ನೀವು; ಇದು ಸ್ಪಷ್ಟ. ಬರೆದಿರುವುದು ಶಾಯಿಯಿಂದಲ್ಲ, ಜೀವಂತ ದೇವರ ಪವಿತ್ರಾತ್ಮರಿಂದ. ಕೊರೆದದ್ದೂ ಕಲ್ಲಿನ ಮೇಲೆ ಅಲ್ಲ, ಮಾನವ ಹೃದಯದ ಮೇಲೆ. 4 ಕ್ರಿಸ್ತಯೇಸುವಿನ ಮುಖಾಂತರ ನಮಗೆ ದೇವರಲ್ಲಿ ಇಂಥ ಭರವಸೆ ಇರುವುದರಿಂದಲೇ ಇದನ್ನು ಹೇಳುತ್ತಿದ್ದೇವೆ. 5 ನಮ್ಮ ಸ್ವಂತ ಶಕ್ತಿಯಿಂದಲೇ ಏನನ್ನೋ ಸಾಧಿಸಿಬಿಟ್ಟಿದ್ದೇವೆ ಎಂದು ಹೇಳಿಕೊಳ್ಳುವ ಸಾಮರ್ಥ್ಯ ನಮಗಿಲ್ಲ. ನಮ್ಮ ಸಾಮರ್ಥ್ಯವೆಲ್ಲ ದೇವರಿಂದಲೇ ಬಂದುದು. 6 ನಮಗೆ ಹೊಸ ಒಡಂಬಡಿಕೆಯ ಸೇವಕರಾಗುವಂಥ ಸಾಮರ್ಥ್ಯವನ್ನು ನೀಡಿದವರು ದೇವರೇ. ಈ ಒಡಂಬಡಿಕೆ ಲಿಖಿತ ಶಾಸನಕ್ಕೆ ಸಂಬಂಧಿಸಿದ್ದಲ್ಲ, ಪವಿತ್ರಾತ್ಮರಿಗೆ ಸಂಬಂಧಿಸಿದ್ದು. ಲಿಖಿತವಾದುದು ಮೃತ್ಯುಕಾರಕವಾದುದು; ಪವಿತ್ರಾತ್ಮ ಸಂಬಂಧವಾದುದು ಸಜ್ಜೀವದಾಯಕವಾದುದು. 7 ಕಲ್ಲಿನ ಮೇಲೆ ಕೊರೆಯಲಾದ ಶಾಸನ ಪ್ರಕಟವಾದಾಗ ದೇವರ ಮಹಿಮೆ ಕಾಣಿಸಿಕೊಂಡಿತು. ಆಗ ಮೋಶೆಯ ಮುಖವನ್ನು ಆವರಿಸಿದ್ದ ಪ್ರಭೆ ಕುಂದಿಹೋಗುವಂಥದ್ದಾಗಿದ್ದರೂ ಆ ಪ್ರಭೆಯಿಂದಾಗಿ ಆತನ ಮುಖವನ್ನು ದಿಟ್ಟಿಸಿನೋಡಲು ಇಸ್ರಯೇಲರಿಗೆ ಆಗಲಿಲ್ಲ. 8 ಮೃತ್ಯುಕಾರಕವಾದ ಈ ಶಾಸನ ಅಷ್ಟು ಮಹಿಮೆಯಿಂದ ಕೂಡಿತ್ತಾದರೆ ಪವಿತ್ರಾತ್ಮ ಚೈತನ್ಯದಿಂದ ಕೂಡಿದ ಸೇವೆಯು ಇನ್ನೆಷ್ಟು ಮಹಿಮೆಯಿಂದ ಕೂಡಿರಬೇಕು? 9 ದಂಡನೆಗೆ ಗುರಿಮಾಡುವ ಈ ಶಾಸನ ಸೇವೆ ಇಷ್ಟು ಮಹಿಮೆಯಿಂದ ಕೂಡಿದ್ದಾದರೆ, ಸದ್ಧರ್ಮಿಗಳೆಂದು ನಿರ್ಣಯಿಸುವ ಸೇವೆ ಇನ್ನೆಷ್ಟು ಮಹಿಮೆಯಿಂದ ಕೂಡಿರಬೇಕು? 10 ಈ ಸೇವೆಯ ಅಪರಿಮಿತ ಮಹಿಮೆಯ ಮುಂದೆ ಹಿಂದಿನ ಶಾಸನದ ಮಹಿಮೆ ಇಲ್ಲದಂತಾಗಿದೆ. 11 ಅಳಿದು ಹೋಗುವಂಥದ್ದೇ, ಅಷ್ಟು ಮಹಿಮೆಯಿಂದ ಕೂಡಿತ್ತಾದರೆ, ಶಾಶ್ವತವಾಗಿ ಉಳಿಯುವಂಥದ್ದು ಮತ್ತೆಷ್ಟು ಮಹಿಮೆಯಿಂದ ಕೂಡಿರಬೇಕು? 12 ನಮಗೆ ಇಂಥ ಭರವಸೆ ಇರುವುದರಿಂದಲೇ ನಾವು ಇಷ್ಟು ಧೈರ್ಯದಿಂದ ಇದ್ದೇವೆ. 13 ಕುಂದಿಹೋಗುವಂಥ ಮಹಿಮೆಯು ನಂದಿಹೋಗುವುದನ್ನು ಇಸ್ರಯೇಲರು ಕಾಣದಂತೆ ಮೋಶೆಯು ತನ್ನ ಮುಖಕ್ಕೆ ಮುಸುಕುಹಾಕಿಕೊಳ್ಳುತ್ತಿದ್ದನು. ನಾವು ಆತನಂತೆ ಅಲ್ಲ. 14 ಆ ಜನರ ಬುದ್ಧಿಗೆ ಮಂಕು ಕವಿದಿತ್ತು. ಇಂದಿನವರೆಗೂ ಹಳೆಯ ಒಡಂಬಡಿಕೆಯನ್ನು ಓದುವಾಗಲೆಲ್ಲಾ ಅದೇ ಮಂಕಿನ ಮುಸುಕು ಕವಿದಿದೆ. ಅದನ್ನು ಕ್ರಿಸ್ತಯೇಸುವಿನ ಮುಖಾಂತರವೇ ತೆಗೆಯಲು ಸಾಧ್ಯ. 15 ಹೌದು, ಮೋಶೆ ಬರೆದುದನ್ನು ಓದುವಾಗಲೆಲ್ಲಾ ಅವರ ಮನಸ್ಸು ಇಂದಿಗೂ ಅದೇ ಮುಸುಕಿನಿಂದ ಮುಚ್ಚಿದೆ. 16 ‘ಪ್ರಭುವಿಗೆ ಅಭಿಮುಖರಾದಾಗ ಮಾತ್ರ ಆ ಮುಸುಕನ್ನು ತೆಗೆಯಲಾಗುತ್ತದೆ.’ 17 ಈ ವಾಕ್ಯದಲ್ಲಿ, ‘ಪ್ರಭು’ ಎಂದರೆ ದೇವರ ಆತ್ಮವೇ. ಪ್ರಭುವಿನ ಆತ್ಮ ಎಲ್ಲಿದೆಯೋ ಅಲ್ಲಿ ವಿಮೋಚನೆಯೂ ಇದೆ. 18 ಮುಸುಕು ತೆರೆದ ಮುಖವುಳ್ಳ ನಾವೆಲ್ಲರೂ ಪ್ರಭುವಿನ ಮಹಿಮೆಯನ್ನು ಪ್ರತಿಬಿಂಬಿಸುವ ಕನ್ನಡಿಯಂತೆ ಇದ್ದೇವೆ. ಆ ಪ್ರಭುವಿನಿಂದ ಹೊರಹೊಮ್ಮುವ ಮಹಿಮೆ ನಮ್ಮನ್ನು ಅಧಿಕಾಧಿಕವಾಗಿ ಮಾರ್ಪಡಿಸಿ ಅವರನ್ನೇ ಹೋಲುವಂತೆ ಮಾಡುತ್ತದೆ. ಇದೆಲ್ಲಾ ದೇವರಾತ್ಮವಾಗಿರುವ ಪ್ರಭುವಿನ ಕಾರ್ಯವೇ ಸರಿ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India