Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಕೊರಿಂಥದವರಿಗೆ 2 - ಕನ್ನಡ ಸತ್ಯವೇದವು C.L. Bible (BSI)

1 ಇನ್ನೊಮ್ಮೆ ನಿಮ್ಮ ಬಳಿಗೆ ಬಂದು, ನಿಮ್ಮನ್ನು ದುಃಖಕ್ಕೀಡುಮಾಡಬಾರದೆಂದು ನಾನು ನಿರ್ಧರಿಸಿಕೊಂಡೆ.

2 ನಾನೇ ನಿಮ್ಮನ್ನು ದುಃಖಪಡಿಸಿದೆನಾದರೆ, ನನ್ನನ್ನು ಸಂತೋಷಪಡಿಸುವವರು ಯಾರು? ನನ್ನಿಂದ ದುಃಖಕ್ಕೆ ಒಳಗಾದ ನೀವೇ ಅಲ್ಲವೇ?

3 ಇದಕ್ಕಾಗಿಯೇ ನಾನು ಆ ಪತ್ರವನ್ನು ಬರೆದದ್ದು; ನನ್ನನ್ನು ಸಂತೋಷಪಡಿಸಬೇಕಾದವರೇ ನನ್ನನ್ನು ದುಃಖಕ್ಕೆ ಈಡುಮಾಡಬಾರದೆಂದು ನಾನು ಬರಲಿಲ್ಲ. ನನ್ನ ಸಂತೋಷವೇ ನಿಮ್ಮ ಸಂತೋಷವೆಂದು ನೀವು ಭಾವಿಸುತ್ತೀರೆಂದು ಬಲ್ಲೆ.

4 ಮನೋವ್ಯಥೆಯಿಂದಲೂ ಹೃದಯವೇದನೆಯಿಂದಲೂ ಕಣ್ಣೀರಿಡುತ್ತಾ ನಾನು ನಿಮಗೆ ಪತ್ರ ಬರೆದೆ. ನಿಮ್ಮನ್ನು ದುಃಖಕ್ಕೀಡುಮಾಡಬೇಕೆಂದಲ್ಲ, ನಿಮ್ಮನ್ನು ಎಷ್ಟರಮಟ್ಟಿಗೆ ಪ್ರೀತಿಸುತ್ತಿರುವೆನೆಂದು ನೀವು ತಿಳಿದುಕೊಳ್ಳಬೇಕೆಂದು ಬರೆದೆ.


ತಪ್ಪಿತಸ್ಥನಿಗೆ ಕ್ಷಮೆ

5 ಒಬ್ಬನು ದುಃಖವನ್ನುಂಟುಮಾಡಿದ್ದಾನಾದರೆ, ಅವನು ಹಾಗೆ ಮಾಡಿದ್ದು ನನಗೊಬ್ಬನಿಗೇ ಅಲ್ಲ. ಒಂದು ವಿಧದಲ್ಲಿ ನಿಮಗೆಲ್ಲರಿಗೂ ಸಹ ದುಃಖವನ್ನುಂಟುಮಾಡಿದ್ದಾನೆ. ಅವನ ಮೇಲೆ ಹೆಚ್ಚು ಕಠಿಣನಾಗಿರಲು ನನಗೆ ಇಷ್ಟವಿಲ್ಲ.

6 ನಿಮ್ಮಲ್ಲಿ ಬಹುಮಂದಿ ಅವನಿಗೆ ವಿಧಿಸಿರುವ ಶಿಕ್ಷೆಯೇ ಸಾಕಾಗಿದೆ.

7 ಈಗ ನೀವು ಅವನನ್ನು ಕ್ಷಮಿಸಿ ಸಂತೈಸಿರಿ. ಇಲ್ಲವಾದರೆ ಅವನು ಅತೀವ ದುಃಖದಲ್ಲಿಯೇ ಮುಳುಗಿಹೋದಾನು.

8 ನಿಮ್ಮ ಪ್ರೀತಿ ಅವನಿಗೆ ಮನದಟ್ಟಾಗುವಂತೆ ನಡೆದುಕೊಳ್ಳಬೇಕೆಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ.

9 ನೀವು ಎಲ್ಲ ವಿಷಯಗಳಲ್ಲೂ ನನಗೆ ವಿಧೇಯರಾಗಿದ್ದೀರೋ ಇಲ್ಲವೋ ಎಂದು ಪರೀಕ್ಷಿಸಲು ನಾನು ಬರೆದದ್ದು.

10 ನೀವು ಯಾರನ್ನು ಕ್ಷಮಿಸುತ್ತೀರೋ ಅವನನ್ನು ನಾನೂ ಕ್ಷಮಿಸುತ್ತೇನೆ. ನಾನು ಯಾವುದನ್ನಾದರೂ ಕ್ಷಮಿಸಿದ್ದರೆ ಅಥವಾ ಕ್ಷಮಿಸಬೇಕಾಗಿದ್ದರೆ ಅದನ್ನು ಕ್ರಿಸ್ತಯೇಸುವಿನ ಸಮ್ಮುಖದಲ್ಲಿ ನಿಮಗೋಸ್ಕರ ಕ್ಷಮಿಸುತ್ತೇನೆ.

11 ಸೈತಾನನ ಕುತಂತ್ರಗಳನ್ನು ನಾವು ಅರಿಯದವರಲ್ಲ; ಅವನ ಕೈ ಮೇಲಾಗದಂತೆ ನಾವು ನೋಡಿಕೊಳ್ಳಬೇಕು.


ಕ್ರಿಸ್ತನ ಕಸ್ತೂರಿ

12 ಯೇಸುಕ್ರಿಸ್ತರ ಶುಭಸಂದೇಶವನ್ನು ಸಾರುವುದಕ್ಕೆ ನಾನು ತ್ರೋವಕ್ಕೆ ಬಂದಾಗ, ಪ್ರಭುವಿನ ಕೃಪೆಯಿಂದ ನನಗೆ ಸದವಕಾಶದ ಬಾಗಿಲು ತೆರೆದಿತ್ತು.

13 ಆದರೆ ನನ್ನ ಸಹೋದರ ತೀತನನ್ನು ಅಲ್ಲಿ ಕಾಣದೆಹೋದುದರಿಂದ ನನ್ನ ಮನಸ್ಸಿಗೆ ನೆಮ್ಮದಿ ಇಲ್ಲವಾಯಿತು. ಕೂಡಲೇ ಅಲ್ಲಿಯ ಜನರಿಂದ ಬೀಳ್ಕೊಂಡು ಮಕೆದೋನಿಯಕ್ಕೆ ಹೊರಟೆ.

14 ಯೇಸುಕ್ರಿಸ್ತರ ಅನ್ಯೋನ್ಯತೆಯಲ್ಲಿ ನಮ್ಮನ್ನು ಸದಾ ವಿಜಯೋತ್ಸವದತ್ತ ನಡೆಸುವ ಹಾಗು ಕ್ರಿಸ್ತಜ್ಞಾನವೆಂಬ ಪರಿಮಳವನ್ನು ಎಲ್ಲೆಡೆಯಲ್ಲೂ ನಮ್ಮ ಮೂಲಕ ಪಸರಿಸುವ ದೇವರಿಗೆ ವಂದನೆಗಳು.

15 ಹೌದು, ಉದ್ಧಾರದ ಮಾರ್ಗದಲ್ಲಿರುವವರಿಗೂ ವಿನಾಶಮಾರ್ಗದಲ್ಲಿರುವವರಿಗೂ ಕ್ರಿಸ್ತಯೇಸುವೇ ದೇವರಿಗರ್ಪಿಸಿದ ಪರಿಮಳದಂತೆ ನಾವು ಇದ್ದೇವೆ.

16 ವಿನಾಶ ಮಾರ್ಗದಲ್ಲಿರುವವರಿಗೆ ಇದು ಮೃತ್ಯುಕಾರಕ ಗಂಧ; ಉದ್ಧಾರ ಮಾರ್ಗದಲ್ಲಿರುವವರಿಗೆ ಇದು ಸಜ್ಜೀವದಾಯಕ ಸುಗಂಧ. ಇಂಥ ಕಾರ್ಯಕ್ಕೆ ಸಮರ್ಥರು ಯಾರು?

17 ಎಷ್ಟೋ ಮಂದಿ ದೇವರ ವಾಕ್ಯವನ್ನು ಕಲಬೆರಕೆ ಮಾಡಿ ವ್ಯಾಪಾರಮಾಡುತ್ತಾರೆ. ನಾವು ಹಾಗಲ್ಲ; ದೇವರಿಂದಲೇ ನಿಯೋಜಿತರಾಗಿ, ದೇವರ ಸಮಕ್ಷಮದಲ್ಲಿ ಕ್ರಿಸ್ತಯೇಸುವಿನ ಅನ್ಯೋನ್ಯತೆಯಲ್ಲಿ ನಾವು ಯಥಾರ್ಥವಾದುದನ್ನೇ ಉಪದೇಶಿಸುವವರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು