Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಕೊರಿಂಥದವರಿಗೆ 13 - ಕನ್ನಡ ಸತ್ಯವೇದವು C.L. Bible (BSI)


ಅಂತಿಮ ಬುದ್ಧಿಮಾತು ಮತ್ತು ಆಶೀರ್ವಾದ

1 ನಾನು ನಿಮ್ಮ ಬಳಿಗೆ ಬರುತ್ತಿರುವುದು ಇದು ಮೂರನೆಯ ಬಾರಿ. “ಯಾವ ದೂರಿದ್ದರೂ ಅದಕ್ಕೆ ಇಬ್ಬರು ಮೂವರು ಸಾಕ್ಷಿಗಳ ಆಧಾರವಿರಬೇಕು,” ಎಂದು ಲಿಖಿತವಾಗಿದೆ.

2 ನಾನು ಎರಡನೆಯ ಸಾರಿ ನಿಮ್ಮ ಬಳಿಗೆ ಬಂದಿದ್ದಾಗ, ಪಾಪಮಾಡಿದ್ದವರನ್ನೂ ಇತರರನ್ನೂ ಎಚ್ಚರಿಸಿದ್ದೆನು. ಈಗ ದೂರವಿದ್ದರೂ ಮತ್ತೆ ಎಚ್ಚರಿಸುತ್ತಿದ್ದೇನೆ. ಪುನಃ ನಾನು ಬರುವಾಗ ಅವರಾರನ್ನೂ ಶಿಕ್ಷಿಸದೆ ಬಿಡುವುದಿಲ್ಲ.

3 ಕ್ರಿಸ್ತಯೇಸುವೇ ನನ್ನ ಮುಖಾಂತರ ಮಾತನಾಡುತ್ತಾರೆ ಎಂಬುದಕ್ಕೆ ಆಧಾರ ಬೇಕೆನ್ನುತ್ತೀರಲ್ಲವೇ? ಯೇಸುಕ್ರಿಸ್ತರು ನಿಮ್ಮ ವಿಷಯದಲ್ಲಿ ದುರ್ಬಲರಾಗಿ ವರ್ತಿಸಲಿಲ್ಲ. ಪ್ರಬಲರಾಗಿ ನಿಮ್ಮಲ್ಲಿಯೇ ಇದ್ದಾರೆ ಎಂಬುದೇ ಇದಕ್ಕೆ ಆಧಾರ.

4 ಬಲಹೀನಾವಸ್ಥೆಯಲ್ಲಿ ಅವರನ್ನು ಶಿಲುಬೆಗೇರಿಸಲಾಯಿತು ಎಂಬುದೇನೋ ನಿಜ. ಆದರೆ, ದೇವರ ಶಕ್ತಿಯಿಂದ ಅವರು ಜೀವಂತರಾಗಿದ್ದಾರೆ. ಕ್ರಿಸ್ತಯೇಸುವಿನಲ್ಲಿ ನಾವೂ ಬಲಹೀನರೇ. ಆದರೆ ನಿಮ್ಮ ವಿಷಯದಲ್ಲಿ ವರ್ತಿಸುವಾಗ ದೇವರ ಶಕ್ತಿಯಿಂದ ಯೇಸುಸ್ವಾಮಿಯೊಂದಿಗೆ ಜೀವಂತರಾಗಿದ್ದೇವೆ.

5 ನಿಮ್ಮ ಜೀವನ ವಿಶ್ವಾಸದಲ್ಲಿ ಬೇರೂರಿದೆಯೇ ಎಂಬುದನ್ನು ನೀವೇ ಪರೀಕ್ಷಿಸಿನೋಡಿ. ನಿಮ್ಮ ಅಂತರಂಗವನ್ನು ಪರಿಶೋಧಿಸಿ ನೋಡಿ. ಕ್ರಿಸ್ತಯೇಸು ನಿಮ್ಮಲ್ಲಿ ಇದ್ದಾರೆ ಎಂಬುದನ್ನು ಅರಿತಿದ್ದೀರಿ ಅಲ್ಲವೇ? ಅವರು ನಿಮ್ಮಲ್ಲಿ ಇಲ್ಲವಾದರೆ ನೀವು ಅಯೋಗ್ಯರೇ ಸರಿ.

6 ನಾವಂತೂ ಅಯೋಗ್ಯರಲ್ಲ ಎಂಬ ಅರಿವು ನಿಮಗಾಗಿದೆ ಎಂದು ನಂಬುತ್ತೇನೆ.

7 ನೀವು ಯಾವ ಕೇಡನ್ನೂ ಮಾಡಬಾರದೆಂದು ದೇವರಲ್ಲಿ ನಾವು ಪ್ರಾರ್ಥಿಸುತ್ತೇವೆ. ಇದರಲ್ಲಿ ನಾವು ಮಾತ್ರ ಯೋಗ್ಯರೆಂದು ತೋರಿಸಿಕೊಳ್ಳುವ ಉದ್ದೇಶ ನಮಗಿಲ್ಲ. ನಾವು ಅಯೋಗ್ಯರೆನಿಸಿಕೊಂಡಿದ್ದರೂ ನೀವು ಒಳಿತನ್ನೇ ಮಾಡಬೇಕೆಂಬುದು ನಮ್ಮ ಉದ್ದೇಶ.

8 ಸತ್ಯದ ಪರವಾಗಿ ಅಲ್ಲದೆ ಅದಕ್ಕೆ ವಿರುದ್ಧವಾಗಿ ನಾವೇನನ್ನೂ ಮಾಡಲಾರೆವು.

9 ನೀವು ನಿಜವಾಗಿ ಬಲಾಢ್ಯರಾಗಿದ್ದರೆ ನಾವು ಬಲಹೀನರಾಗಿದ್ದರೂ ನಮಗೆ ಸಂತೋಷವೇ. ನೀವು ಕ್ರೈಸ್ತವಿಶ್ವಾಸದಲ್ಲಿ ಪರಿಪೂರ್ಣರಾಗಬೇಕೆಂಬುದೇ ನಮ್ಮ ಪ್ರಾರ್ಥನೆಯ ಉದ್ದೇಶ.

10 ಆದ್ದರಿಂದಲೇ ನಿಮ್ಮ ಬಳಿಗೆ ಬರುವುದಕ್ಕೆ ಮುಂಚೆಯೇ ಇದನ್ನೆಲ್ಲಾ ಬರೆಯುತ್ತಿದ್ದೇನೆ. ನಿಮ್ಮನ್ನು ಕೆಡವಿ ಹಾಳುಮಾಡುವುದಕ್ಕಲ್ಲ, ಕಟ್ಟಿ ಎಬ್ಬಿಸುವುದಕ್ಕಾಗಿಯೇ ಪ್ರಭು ನನಗೆ ಅಧಿಕಾರವನ್ನು ಕೊಟ್ಟಿರುವುದು. ಎಂದೇ, ನಿಮ್ಮ ಮಧ್ಯೆ ಬಂದಾಗ ಅಧಿಕಾರ ಪ್ರಯೋಗಿಸಿ ಕಠಿಣವಾಗಿ ವರ್ತಿಸಲು ಅವಕಾಶವಿರಬಾರದೆಂಬುದೇ ನನ್ನ ಅಪೇಕ್ಷೆ.

11 ಕೊನೆಯದಾಗಿ ಪ್ರಿಯ ಸಹೋದರರೇ, ಸಂತೋಷದಿಂದಿರಿ, ಪರಿಪೂರ್ಣರಾಗಲು ಪ್ರಯತ್ನಿಸಿರಿ. ನನ್ನ ಬುದ್ಧಿಮಾತುಗಳಿಗೆ ಕಿವಿಗೊಡಿ; ಒಮ್ಮನಸ್ಸಿನಿಂದ ಬಾಳಿರಿ; ಸಮಾಧಾನದಿಂದ ಜೀವಿಸಿರಿ; ಆಗ ಪ್ರೀತಿ ಮತ್ತು ಶಾಂತಿ ಸ್ವರೂಪರಾದ ದೇವರು ನಿಮ್ಮೊಡನೆ ಇರುತ್ತಾರೆ.

12 ಪವಿತ್ರವಾದ ಮುದ್ದಿಟ್ಟು ಒಬ್ಬರನ್ನು ಒಬ್ಬರು ವಂದಿಸಿರಿ. ದೇವಜನರೆಲ್ಲರೂ ನಿಮಗೆ ಶುಭಾಶಯಗಳನ್ನು ಕೋರಿದ್ದಾರೆ.

13 ನಮ್ಮ ಪ್ರಭು ಯೇಸುಕ್ರಿಸ್ತರ ವರಪ್ರಸಾದವೂ ದೇವರ ಪ್ರೀತಿಯೂ ಪವಿತ್ರಾತ್ಮರ ಅನ್ಯೋನ್ಯತೆಯೂ ನಿಮ್ಮೆಲ್ಲರೊಡನೆ ಇರಲಿ!

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು