Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಕೊರಿಂಥದವರಿಗೆ 11 - ಕನ್ನಡ ಸತ್ಯವೇದವು C.L. Bible (BSI)


ಕಪಟ ಪ್ರೇಷಿತರು

1 ನನ್ನನ್ನು ನಾನೇ ಹೊಗಳಿಕೊಳ್ಳುವ ಹುಚ್ಚುತನವನ್ನು ನೀವು ಸ್ವಲ್ಪ ಸಹಿಸಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ.

2 ನಿಮ್ಮ ಬಗ್ಗೆ ದೇವರಿಗಿರುವ ಪ್ರೇಮಾಸೂಯೆ ನನಗೂ ಇದೆ. ನಿಷ್ಕಳಂಕ ಕನ್ನಿಕೆಯೊಬ್ಬಳನ್ನು ಅವಳ ಏಕೈಕ ವರನಿಗೆ ನಿಶ್ಚಯಿಸುವ ರೀತಿಯಲ್ಲಿ ನಾನು ಕ್ರಿಸ್ತಯೇಸುವೆಂಬ ಏಕೈಕ ಪುರುಷನಿಗೆ ನಿಮ್ಮನ್ನು ನಿಶ್ಚಯಮಾಡಿದ್ದೇನೆ.

3 ಆದರೂ ಹವ್ವಳು ಸರ್ಪದ ಕುಯುಕ್ತಿಗೆ ಸಿಕ್ಕಿ ಮೋಸಹೋದಂತೆ ನೀವೂ ಕೂಡ ಕ್ರಿಸ್ತಯೇಸುವಿನ ವಿಷಯದಲ್ಲಿ ಇರಬೇಕಾದ ಶುದ್ಧ ಪಾತಿವ್ರತ್ಯವನ್ನು ಕಳೆದುಕೊಂಡು ಕೆಟ್ಟುಹೋದೀರಿ ಎಂಬ ಭಯ ನನಗುಂಟು.

4 ಏಕೆಂದರೆ, ಯಾರಾದರೂ ಬಂದು, ನಾವು ಬೋಧಿಸದೆ ಇರುವ ಬೇರೊಬ್ಬ ಯೇಸುವನ್ನು ಬೋಧಿಸಿದರೆ ನೀವು ಸ್ವೀಕರಿಸುತ್ತೀರಿ. ನೀವು ಹೊಂದಿರುವ ಪವಿತ್ರಾತ್ಮರಿಗೆ ಬದಲಾಗಿ ಬೇರೊಬ್ಬ ಆತ್ಮವನ್ನು ಪಡೆಯುವಂತೆ ಮಾಡಿದರೆ, ನೀವು ಸ್ವಾಗತಿಸುತ್ತೀರಿ. ನಿಮಗೆ ಈಗಾಗಲೇ ದೊರಕಿರುವ ಶುಭಸಂದೇಶವಲ್ಲದೆ ಬೇರೊಂದು ಸಂದೇಶವನ್ನು ನಿಮಗೆ ಸಾರಿದರೆ, ನೀವು ಒಮ್ಮೆಗೇ ಒಪ್ಪಿಕೊಳ್ಳುತ್ತೀರಿ. ಇದು ನಿಜಕ್ಕೂ ಆಶ್ಚರ್ಯವೇ ಸರಿ.

5 “ಮಹಾ ಪ್ರೇಷಿತರು” ಎನಿಸಿಕೊಳ್ಳುವ ಆ ಜನರಿಗಿಂತ ನಾನು ಯಾವುದರಲ್ಲೂ ಕಡಿಮೆಯಿಲ್ಲ.

6 ಮಾತಿನಲ್ಲಿ ಚತುರನಲ್ಲದಿದ್ದರೂ ಜ್ಞಾನದಲ್ಲಿ ಅಲ್ಪನಲ್ಲ. ಇದನ್ನು ನಿಮಗೆ ಎಲ್ಲಾ ಸಮಯಸಂದರ್ಭಗಳಲ್ಲೂ ಸ್ಪಷ್ಟಪಡಿಸಿದ್ದೇನೆ.

7 ನಿಮಗೆ ದೇವರ ಶುಭಸಂದೇಶವನ್ನು ಉಚಿತವಾಗಿಯೇ ಬೋಧಿಸಿದೆನು. ನಿಮ್ಮನ್ನು ಮೇಲಕ್ಕೇರಿಸಲು ನನ್ನನ್ನೇ ತಗ್ಗಸಿಕೊಂಡೆನು. ಹೀಗೆ ಮಾಡಿದ್ದು ತಪ್ಪಾಯಿತೇ?

8 ನಿಮಗೆ ಸೇವೆಮಾಡುವುದಕ್ಕೋಸ್ಕರ ನಾನು ಬೇರೆ ಸಭೆಗಳಿಂದ ನೆರವುಪಡೆಯುತ್ತಿದ್ದೆ, ನಿಮಗೋಸ್ಕರ ಇತರ ಸಭೆಗಳಿಂದ ಹಣ ವಸೂಲಿಮಾಡುತ್ತಿದ್ದೆ.

9 ನಾನು ನಿಮ್ಮೊಂದಿಗಿದ್ದಾಗ ನನಗೆ ಹಣದ ಕೊರತೆ ಇದ್ದರೂ ನಿಮ್ಮಲ್ಲಿ ಯಾರಿಗೂ ಹೊರೆಯಾಗಲಿಲ್ಲ. ಮಕೆದೋನಿಯದಿಂದ ಬಂದ ಸಹೋದರರು ನನ್ನ ಕೊರತೆಯನ್ನೆಲ್ಲಾ ನೀಗಿಸಿದರು. ನಿಮಗೆ ಯಾವುದರಲ್ಲೂ ಹೊರೆಯಾಗಬಾರದೆಂದು ಎಚ್ಚರಿಕೆ ವಹಿಸಿದ್ದೆ; ಇನ್ನು ಮುಂದಕ್ಕೂ ಎಚ್ಚರಿಕೆಯಿಂದ ಇರುತ್ತೇನೆ.

10 ಈ ನನ್ನ ಹೊಗಳಿಕೆಯನ್ನು ಅಖಾಯ ಪ್ರಾಂತ್ಯದ ಯಾರೂ ಅಡಗಿಸುವಂತಿಲ್ಲವೆಂದು ಕ್ರಿಸ್ತಯೇಸುವಿನ ಮುಂದೆ ಸತ್ಯವಾಗಿ ನುಡಿಯುತ್ತೇನೆ.

11 ನಿಮ್ಮಿಂದ ನಾನು ಏನನ್ನೂ ತೆಗೆದುಕೊಳ್ಳುತ್ತಿಲ್ಲವೇಕೆ? ನಿಮ್ಮ ಮೇಲೆ ಪ್ರೀತಿ ಇಲ್ಲದ್ದರಿಂದಲೋ? ಇಲ್ಲ, ನಿಮ್ಮ ಮೇಲೆ ನಮಗಿರುವ ಪ್ರೀತಿ ಎಷ್ಟೆಂದು ದೇವರೇ ಬಲ್ಲರು.

12 ಕೆಲವರು ತಾವು ಮಾಡುತ್ತಿರುವ ಕಾರ್ಯ, ನಾವು ಮಾಡುತ್ತಿರುವ ಪ್ರೇಷಿತರ ಕಾರ್ಯಕ್ಕೆ ಸರಿಸಮವೆಂದು ವಾದಿಸಲು ಅವಕಾಶವನ್ನು ಹುಡುಕುತ್ತಿದ್ದಾರೆ. ಅವರಿಗೆ ಅಂಥ ಆಸ್ಪದವನ್ನು ಕೊಡದಂತೆ ನಾನೀಗ ಮಾಡುತ್ತಿರುವುದನ್ನೇ ಮುಂದುವರಿಸಿಕೊಂಡು ಹೋಗುತ್ತೇನೆ.

13 ಅವರು ಕಪಟ ಪ್ರೇಷಿತರು, ಕಳ್ಳ ಕೆಲಸಗಾರರು, ಕ್ರಿಸ್ತಯೇಸುವಿನ ಪ್ರೇಷಿತರಂತೆ ನಟಿಸುವವರು.

14 ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಸೈತಾನನೂ ಸಹ ಜ್ಯೋತಿರ್ಮಯ ದೇವದೂತನಂತೆ ಕಾಣಿಸಿಕೊಳ್ಳಬಲ್ಲನು.

15 ಹೀಗಿರುವಲ್ಲಿ, ಅವನ ಸೇವಕರೂ ಸಹ ಸತ್ಯಸೇವಕರಂತೆ ವೇಷಧಾರಿಗಳಾದರೆ ಅದರಲ್ಲೇನು ಸೋಜಿಗ? ಅವರ ಕೃತ್ಯಗಳಂತೆಯೇ ಅವರ ಅಂತ್ಯವೂ ಇರುತ್ತದೆ.


ಸೇವೆಯಲ್ಲಿ ಕಷ್ಟದುರಿತಗಳ ಸುರಿಮಳೆ

16 ನನ್ನನ್ನು ಯಾರೂ ಹುಚ್ಚನೆಂದು ಭಾವಿಸದಿರಲಿ, ಎಂದು ಮತ್ತೆ ಹೇಳುತ್ತೇನೆ. ಒಂದು ವೇಳೆ ಹಾಗೆ ಭಾವಿಸಿದರೂ ಚಿಂತೆಯಿಲ್ಲ. ನನ್ನನ್ನು ಹುಚ್ಚನಾಗಿಯೇ ಸ್ವೀಕರಿಸಿ. ಆಗ ನಾನು ಆತ್ಮಪ್ರಶಂಸೆ ಮಾಡಿಕೊಳ್ಳಲು ಅಲ್ಪಸ್ವಲ್ಪವಾದರೂ ಆಸ್ಪದವಾಗುತ್ತದೆ.

17 ನಾನೀಗ ಹೇಳುತ್ತಿರುವುದು ಪ್ರಭುವಿನ ಪ್ರೇರಣೆಯಿಂದಲ್ಲ, ಧೈರ್ಯದಿಂದ ತನ್ನನ್ನೇ ಕೊಚ್ಚಿಕೊಳ್ಳುವ ಒಬ್ಬ ಹುಚ್ಚನಂತೆ ಹೇಳುತ್ತಿದ್ದೇನೆ:

18 ಅನೇಕರು ಕೇವಲ ಪ್ರಾಪಂಚಿಕ ವಿಷಯಗಳನ್ನು ಕುರಿತು ತಮ್ಮನ್ನೇ ಹೊಗಳಿಕೊಳ್ಳುತ್ತಾರೆ. ಹಾಗೆಯೇ ನಾನೂ ಹೊಗಳಿಕೊಳ್ಳುತ್ತೇನೆ.

19 ನೀವಾದರೋ ಮಹಾ ಬುದ್ಧಿವಂತರು! ಬುದ್ಧಿಹೀನರನ್ನು ಬಹಳವಾಗಿ ಸಹಿಸಿಕೊಳ್ಳುತ್ತೀರಿ.

20 ಯಾರಾದರೂ ನಿಮ್ಮನ್ನು ಅಧೀನಪಡಿಸಿಕೊಂಡರೂ ಕಬಳಿಸಿದರೂ ಮರುಳುಗೊಳಿಸಿದರೂ ತುಚ್ಛೀಕರಿಸಿದರೂ ಕೆನ್ನೆಗೆ ಬಿಗಿದರೂ ಎಲ್ಲವನ್ನೂ ಸಹಿಸಿಕೊಳ್ಳುತ್ತೀರಿ.

21 ಇದನ್ನೆಲ್ಲಾ ಮಾಡುವ ಸಾಹಸ ನಮಗಿಲ್ಲವೆಂದು ಹೇಳಿಕೊಳ್ಳಲು ನನಗೆ ನಾಚಿಕೆಯಾಗುತ್ತದೆ. ಯಾರಿಗಾದರೂ ಯಾರ ವಿಷಯದಲ್ಲಾದರೂ ಹೊಗಳಿಕೊಳ್ಳುವ ಧೈರ್ಯವಿದ್ದರೆ ಅದಕ್ಕಿಂತ ಹೆಚ್ಚಿನ ಧೈರ್ಯ ನನಗಿದೆ. ಇದನ್ನು ನಾನು ಹುಚ್ಚನಂತೆಯೇ ಹೇಳುತ್ತಿದ್ದೇನೆ ಎಂದು ಭಾವಿಸಿಕೊಳ್ಳಿ.

22 ಅವರು ಹಿಬ್ರಿಯರೋ? ನಾನೂ ಹಿಬ್ರಿಯನೇ. ಅವರು ಇಸ್ರಯೇಲರೋ? ನಾನೂ ಇಸ್ರಯೇಲನೇ. ಅವರು ಅಬ್ರಹಾಮನ ವಂಶದವರೋ? ನಾನೂ ಅದೆ ವಂಶದವನೇ.

23 ಅವರು ಕ್ರಿಸ್ತಯೇಸುವಿನ ದಾಸರೋ? (ನಾನು ಬುದ್ಧಿ ಕೆಟ್ಟವನಂತೆಯೇ ಮಾತನಾಡುತ್ತಿದ್ದೇನೆ) ಅವರಿಗಿಂತ ನಾನು ದಾಸಾನುದಾಸನು. ಅವರಿಗಿಂತ ಹೆಚ್ಚಾಗಿ ಸೇವೆಮಾಡಿದ್ದೇನೆ; ಅವರಿಗಿಂತ ಹೆಚ್ಚಾಗಿ ಸೆರೆಮನೆಗಳ ವಾಸವನ್ನು ಅನುಭವಿಸಿದ್ದೇನೆ; ಮಿತಿಮೀರಿ ಏಟುಪೆಟ್ಟುಗಳನ್ನು ತಿಂದಿದ್ದೇನೆ; ಅನೇಕ ಸಲ ಸಾವಿನ ದವಡೆಗೆ ಸಿಲುಕಿಕೊಂಡಿದ್ದೇನೆ.

24 ಐದು ಸಾರಿ ಯೆಹೂದ್ಯರಿಂದ ನನಗೆ ನಲವತ್ತಕ್ಕೆ ಒಂದು ಕಡಿಮೆ ಚಾಟಿ ಏಟುಗಳು ಬಿದ್ದವು.

25 ಮೂರು ಸಾರಿ ರೋಮನರು ನನ್ನನ್ನು ಛಡಿಗಳಿಂದ ಹೊಡೆಸಿದರು. ಒಮ್ಮೆ ಜನರು ನನ್ನನ್ನು ಕೊಲ್ಲಲೆಂದು ಕಲ್ಲು ತೂರಿದರು. ಮೂರು ಸಲ ನಾನಿದ್ದ ಹಡಗು ಒಡೆದು ನೀರುಪಾಲಾಯಿತು. ಒಂದು ರಾತ್ರಿ, ಒಂದು ಹಗಲು ನಡುಗಡಲಲ್ಲಿ ತೇಲಾಡಿದೆ.

26 ಪ್ರಭುವಿನ ಸೇವೆಯಲ್ಲಿ ನಾನು ಕೈಗೊಂಡ ಪ್ರಯಾಣಗಳು ಅನೇಕ; ನನಗೆ ಬಂದೊದಗಿದ ಅಪಾಯಗಳೂ ಅನೇಕ; ಪ್ರವಾಹಗಳ ಅಪಾಯ, ಕಳ್ಳಕಾಕರ ಅಪಾಯ, ಸ್ವಜನ ಹಾಗೂ ಅನ್ಯಜನರಿಂದ ಅಪಾಯ, ನಗರಗಳ ಹಾಗೂ ನಿರ್ಜನ‍ಪ್ರದೇಶಗಳ ಅಪಾಯ, ಕಡಲುಗಳ ಅಪಾಯ, ಕಪಟ ಸಹೋದರರಿಂದ ಅಪಾಯ - ಇವೆಲ್ಲಕ್ಕೂ ತುತ್ತಾದೆ.

27 ಶ್ರಮಪಟ್ಟು ದುಡಿದಿದ್ದೇನೆ, ಎಷ್ಟೋ ಸಾರಿ ನಿದ್ದೆಗೆಟ್ಟಿದ್ದೇನೆ; ಹಸಿವು ನೀರಡಿಕೆಗಳಿಂದ ಬಳಲಿದ್ದೇನೆ; ಅನೇಕ ಸಾರಿ ಊಟಬಟ್ಟೆಯಿಲ್ಲದೆ ಅಲೆದಿದ್ದೇನೆ; ಚಳಿಗಾಳಿಯಲ್ಲಿ ನಡುಗಿದ್ದೇನೆ.

28 ಇಂಥ ಇನ್ನಿತರ ಕಷ್ಟಸಂಕಟಗಳನ್ನು ಅನುಭವಿಸಿದ್ದೇನೆ. ಅಷ್ಟೇ ಅಲ್ಲದೆ, ಎಲ್ಲ ಸಭೆಗಳ ಹಿತಚಿಂತನೆಯೂ ನನ್ನನ್ನು ಅನುದಿನವೂ ಕಾಡಿಸಿದೆ.

29 ಒಬ್ಬನು ಬಲಹೀನನಾಗಿದ್ದರೆ, ಅವನೊಡನೆ ನಾನೂ ಬಲಹೀನನೇ. ಒಬ್ಬನು ಪಾಪಕ್ಕೆ ಬಲಿಯಾದರೆ ನಾನೂ ತಾಪದಿಂದ ಕುದಿಯುತ್ತೇನೆ.

30 ನಾನು ನನ್ನನ್ನೇ ಹೊಗಳಿಕೊಳ್ಳಬೇಕಾಗಿ ಬಂದರೆ, ನನ್ನ ದೌರ್ಬಲ್ಯವನ್ನು ಬಹಿರಂಗಪಡಿಸುವ ವಿಷಯಗಳ ಬಗ್ಗೆ ಹೊಗಳಿಕೊಳ್ಳುತ್ತೇನೆ.

31 ನಾನು ಹೇಳುತ್ತಿರುವುದು ಸುಳ್ಳಲ್ಲ, ನಮ್ಮ ಪ್ರಭು ಯೇಸುಕ್ರಿಸ್ತರ ತಂದೆಯಾದ ದೇವರೇ ಇದನ್ನು ಬಲ್ಲರು. ಅವರಿಗೆ ಯುಗಯುಗಾಂತರಕ್ಕೂ ಸ್ತುತಿ ಸಲ್ಲಲಿ!

32 ನಾನು ದಮಸ್ಕಸಿನಲ್ಲಿದ್ದಾಗ ರಾಜ ಅರೇತನ ಕೈಕೆಳಗಿದ್ದ ರಾಜ್ಯಪಾಲನು ನನ್ನನ್ನು ಸೆರೆಹಿಡಿಯುವ ಸಲುವಾಗಿ ಪಟ್ಟಣದ ದ್ವಾರಗಳಿಗೆ ಕಾವಲಿರಿಸಿದ್ದನು.

33 ಆದರೆ, ಕೆಲವರು ನನ್ನನ್ನು ಗೂಡೆಯಲ್ಲಿ ಕೂರಿಸಿ ಗೋಡೆಯ ಕಿಂಡಿಯೊಂದರ ಮೂಲಕ ಕೆಳಗಿಳಿಸಿದರು. ಹೀಗೆ ನಾನು ಅವನ ಕೈಯಿಂದ ಪಾರಾದೆ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು