2 ಕೊರಿಂಥದವರಿಗೆ 10 - ಕನ್ನಡ ಸತ್ಯವೇದವು C.L. Bible (BSI)ಪೌಲನ ಸೇವಾ ಸಮರ್ಥನೆ 1 “ಪೌಲನು ನಮ್ಮ ಹತ್ತಿರವಿರುವಾಗ ಮೆದುವಾಗಿಯೂ ದೂರವಿರುವಾಗ ಕಠಿಣನಾಗಿಯೂ ವರ್ತಿಸುತ್ತಾನೆ,” ಎಂದು ನಿಮ್ಮಲ್ಲಿ ಕೆಲವರು ಮಾತನಾಡಿಕೊಳ್ಳುವುದು ನನಗೆ ತಿಳಿದುಬಂದಿದೆ. ವಿನಯಶೀಲರೂ ದೀನದಯಾಳುವೂ ಆದ ಕ್ರಿಸ್ತಯೇಸುವಿನ ಹೆಸರಿನಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ: 2 ನಾನು ನಿಮ್ಮ ಬಳಿಗೆ ಬಂದಾಗ, ಕಠಿಣನಾಗಿ ವರ್ತಿಸಲು ಅವಕಾಶ ಕೊಡಬೇಡಿ. ನಾವು ಪ್ರಾಪಂಚಿಕ ರೀತಿನೀತಿಗಳಿಗೆ ಅನುಗುಣವಾಗಿ ನಡೆಯುತ್ತಿದ್ದೇವೆಂದು ದೂಷಿಸುವವರ ವಿರುದ್ಧ ಖಂಡಿತವಾಗಿಯೂ ಕಠಿಣನಾಗಿಯೇ ವರ್ತಿಸಬೇಕೆಂದಿದ್ದೇನೆ. 3 ನಾವು ಪ್ರಪಂಚದಲ್ಲಿ ಬಾಳುತ್ತಿದ್ದರೂ ನಮ್ಮ ಹೋರಾಟ ಪ್ರಾಪಂಚಿಕ ಉದ್ದೇಶದಿಂದ ಕೂಡಿದ್ದಲ್ಲ. 4 ನಾವು ಬಳಸುವ ಆಯುಧಗಳು ಮಾನವ ನಿರ್ಮಿತವಾದುವಲ್ಲ, ದೇವರ ಶಕ್ತಿಯಿಂದ ಕೂಡಿದುವು; ಕೋಟೆಕೊತ್ತಲಗಳನ್ನು ಕೆಡವಬಲ್ಲವು. ಅವುಗಳಿಂದ ನಾವು ಎಲ್ಲ ಕುತರ್ಕಗಳನ್ನು ನಿರ್ಮೂಲಮಾಡಬಲ್ಲೆವು. 5 ದೈವಜ್ಞಾನಕ್ಕೆ ವಿರುದ್ಧ ತಲೆ ಎತ್ತುವ ದುರ್ಗಗಳನ್ನು ಧ್ವಂಸಮಾಡಬಲ್ಲೆವು. ಮಾನವನ ಪ್ರತಿಯೊಂದು ಆಲೋಚನೆಗಳನ್ನೂ ಬಂಧಿಸಬಲ್ಲೆವು. 6 ನೀವು ಸಂಪೂರ್ಣರಾಗಿ ವಿಧೇಯರಾದ ಮೇಲೆ ಪ್ರತಿಯೊಂದು ಅವಿಧೇಯ ಕೃತ್ಯವನ್ನು ಶಿಕ್ಷಿಸಲು ನಾವು ಹಿಂಜರಿಯೆವು. 7 ನೀವು ಹೊರಗಿನ ತೋರಿಕೆಗಳನ್ನು ಗಮನಿಸುವಂತವರು. ಯಾರಾದರೂ ತಾನು ಕ್ರಿಸ್ತಯೇಸುವಿಗೆ ಸೇರಿದವನು ಎಂದು ದೃಢವಾಗಿ ನಂಬುವುದಾದರೆ, ಅವನು ಮತ್ತೆ ತನ್ನನ್ನೇ ಪರೀಕ್ಷಿಸಿ ನೋಡಲಿ. ಏಕೆಂದರೆ, ಅವನಂತೆಯೇ ನಾವೂ ಕ್ರಿಸ್ತಯೇಸುವಿಗೆ ಸೇರಿದವರು. 8 ಪ್ರಭು ನಮಗೆ ಅಧಿಕಾರವನ್ನು ಕೊಟ್ಟಿರುವುದು ನಿಮ್ಮನ್ನು ಕೆಡವಿ ಹಾಳುಮಾಡುವುದಕ್ಕಲ್ಲ, ಕಟ್ಟಿ ಎಬ್ಬಿಸುವುದಕ್ಕಾಗಿ. ಈ ಅಧಿಕಾರವನ್ನು ಕುರಿತು ಒಂದು ವೇಳೆ, ನಾವು ಕೊಂಚ ಹೆಚ್ಚಾಗಿ ಹೊಗಳಿಕೊಂಡಿದ್ದರೂ ಅದಕ್ಕಾಗಿ ಸಂಕೋಚಪಡುವುದಿಲ್ಲ. 9 ನಾನು ನನ್ನ ಪತ್ರಗಳ ಮೂಲಕ ನಿಮ್ಮನ್ನು ಬೆದರಿಸುತ್ತಿದ್ದೇನೆ ಎಂದು ಯಾರೂ ಭಾವಿಸಬಾರದು. 10 “ಪೌಲನ ಪತ್ರಗಳು ಪ್ರಬಲವಾದುವು, ತೀಕ್ಷ್ಣವಾದುವು; ಆದರೆ ಆತನು ಸ್ವತಃ ನಮ್ಮಲ್ಲಿಗೆ ಬಂದಾಗ ಆತನು ದುರ್ಬಲನು ಹಾಗೂ ಆತನ ಮಾತು ಸಹ ಕೆಲಸಕ್ಕೆ ಬಾರದವು,” ಎಂದು ಕೆಲವರು ಹೇಳುತ್ತಿದ್ದಾರಂತೆ. 11 ದೂರದಲ್ಲಿದ್ದಾಗ ಪತ್ರದ ಮೂಲಕ ನಾವು ಹೇಗೆ ಕಾಣಿಸಿಕೊಳ್ಳುತ್ತೇವೋ ಹಾಗೆಯೇ ಹತ್ತಿರ ಬಂದಾಗಲೂ ನಡೆದುಕೊಳ್ಳುತ್ತೇವೆ ಎಂಬುದನ್ನು ಆ ವ್ಯಕ್ತಿಗಳು ತಿಳಿದುಕೊಳ್ಳಲಿ. 12 ಕೆಲವರು ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಾರೆ. ಅವರಂತೆ ಕೊಚ್ಚಿಕೊಳ್ಳುವುದಕ್ಕೂ ಅವರೊಡನೆ ಹೋಲಿಸಿಕೊಳ್ಳುವುದಕ್ಕೂ ನಾವು ಯತ್ನಿಸುವುದಿಲ್ಲ. ಅವರಿಗೆ ತಾವು ಹಾಕಿಕೊಂಡದ್ದೇ ಅಳತೆಗೋಲು. ತಮಗೆ ತಾವೇ ತಾಳೆಹಾಕಿಕೊಳ್ಳುವಂಥ ಅವಿವೇಕಿಗಳು. 13 ನಾವಾದರೋ ಹಾಗೆ ಮಿತಿಮೀರಿ ಹೊಗಳಿಕೊಳ್ಳುವುದಿಲ್ಲ. ನಮಗೆ ದೇವರು ತಾವೇ ನಿಯಮಿಸಿದ ಕಾರ್ಯಕ್ಷೇತ್ರದ ಸರಹದ್ದನ್ನು ನಾವು ಮೀರುವುದಿಲ್ಲ. ಈ ಸರಹದ್ದಿಗೆ ನೀವೂ ಒಳಪಟ್ಟಿದ್ದೀರಿ. 14 ಇತರರಿಗಿಂತಲೂ ಮೊದಲೇ ನಿಮಗೆ ಯೇಸುಕ್ರಿಸ್ತರ ಶುಭಸಂದೇಶವನ್ನು ತಂದವರು ನಾವು. ಹೀಗಿರುವಲ್ಲಿ ನಿಮ್ಮ ವಿಷಯದಲ್ಲಿ ನಾವು ಈಗ ಹೊಗಳಿಕೊಳ್ಳುವಾಗ ನಮ್ಮ ಸರಹದ್ದನ್ನು ಉಲ್ಲಂಘಿಸುತ್ತಿಲ್ಲ. 15 ಇತರರ ಪ್ರಯಾಸದ ಫಲಗಳನ್ನು ನಮ್ಮದೆಂದುಕೊಂಡು ಎಲ್ಲೆಮೀರಿ ನಾವು ಹೊಗಳಿಕೊಳ್ಳುತ್ತಿಲ್ಲ. ಆದರೆ ನಿಮ್ಮ ವಿಶ್ವಾಸ ವೃದ್ಧಿಯಾದಂತೆಲ್ಲಾ ನಮ್ಮ ಕಾರ್ಯಕ್ಷೇತ್ರ ಇನ್ನೂ ವಿಸ್ತಾರವಾಗಬೇಕು. 16 ಮತ್ತೊಬ್ಬರ ಕ್ಷೇತ್ರದ ಸೇವಾಫಲಗಳನ್ನು ನಮ್ಮದೆಂದು ಹೊಗಳಿಕೊಳ್ಳದೆ, ನಿಮ್ಮ ಗಡಿಯಾಚೆಯ ನಾಡುಗಳಲ್ಲೂ ಶುಭಸಂದೇಶವನ್ನು ಸಾರಬೇಕೆಂಬುದೇ ನಮ್ಮ ಆಶಯ. 17 “ಹೆಚ್ಚಳಪಡುವವನು ಪ್ರಭುವಿನಲ್ಲೇ ಹೆಚ್ಚಳಪಡಲಿ,” ಎಂದು ಪವಿತ್ರಗ್ರಂಥದಲ್ಲಿ ಲಿಖಿತವಾಗಿದೆ. 18 ಅಂತೆಯೇ, ತನ್ನನ್ನು ತಾನೇ ಹೊಗಳಿಕೊಳ್ಳುವವನು ಅಲ್ಲ, ಪ್ರಭು ಯಾರನ್ನು ಹೊಗಳುತ್ತಾರೋ, ಅವನೇ ಧನ್ಯನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India