2 ಅರಸುಗಳು 24 - ಕನ್ನಡ ಸತ್ಯವೇದವು C.L. Bible (BSI)1 ಯೆಹೋಯಾಕೀಮನು ಅವನಿಗೆ ಅಧೀನನಾಗಿ ಮೂರು ವರ್ಷಗಳಾದ ನಂತರ ಅವನಿಗೆ ವಿರುದ್ಧ ದಂಗೆಯೆದ್ದನು. 2 ಸರ್ವೇಶ್ವರ, ತನ್ನ ದಾಸರಾದ ಪ್ರವಾದಿಗಳ ಮುಖಾಂತರ ಮುಂತಿಳಿಸಿದ ಪ್ರಕಾರ ಜುದೇಯ ರಾಜ್ಯವನ್ನು ಹಾಳುಮಾಡುವುದಕ್ಕಾಗಿ ಬಾಬಿಲೋನಿಯ, ಸಿರಿಯ, ಮೋಬಾವ, ಅಮ್ಮೋನ್ ದೇಶೀಯರಾದ ಸುಲಿಗೆಗಾರರನ್ನು ಕಳುಹಿಸಿದರು. 3 ನಿರಪರಾಧಿಗಳ ಹತ್ಯೆಯಿಂದ ಜೆರುಸಲೇಮನ್ನು ರಕ್ತಮಯವಾಗಿಸಿದ್ದ ಮನಸ್ಸೆಯ ದುಷ್ಕೃತ್ಯಗಳನ್ನು ಸರ್ವೇಶ್ವರ ಕ್ಷಮಿಸದೆ ಹೋದರು; 4 ಅವುಗಳಿಗಾಗಿ ಯೆಹೂದ್ಯರನ್ನು ತನ್ನ ಸನ್ನಿಧಿಯಿಂದ ತೆಗೆದುಹಾಕಬೇಕೆಂದಿದ್ದುದರಿಂದ ಸರ್ವೇಶ್ವರನ ಅಪ್ಪಣೆಯ ಪ್ರಕಾರ ಈ ಶಿಕ್ಷೆ ಅವರಿಗೆ ವಿಧಿಸಲಾಯಿತು. 5 ಯೆಹೋಯಾಕೀಮನ ಉಳಿದ ಚರಿತ್ರೆ ಹಾಗು ಕಾರ್ಯಕಲಾಪಗಳು ಜುದೇಯ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿವೆ. 6 ಅವನು ಮೃತನಾಗಿ ಪಿತೃಗಳ ಬಳಿ ಸೇರಿದನು. ಅವನ ಸ್ಥಾನದಲ್ಲಿ ಅವನ ಮಗ ಯೆಹೋಯಾಖೀನನು ಅರಸನಾದನು. 7 ಬಾಬಿಲೋನಿನ ಅರಸನು ಈಜಿಪ್ಟಿನ ಪ್ರವಾಹಕ್ಕೂ ಯೂಫ್ರಟಿಸ್ ನದಿಗೂ ಮಧ್ಯದಲ್ಲಿದ್ದ ಈಜಿಪ್ಟ್ ರಾಜನ ಎಲ್ಲಾ ದೇಶವನ್ನು ಸ್ವಾಧೀನ ಮಾಡಿಕೊಂಡನು. ಅಂದಿನಿಂದ ಈಜಿಪ್ಟಿನ ಅರಸನು ತನ್ನ ದೇಶದಿಂದ ಈಚೆಗೆ ಬರಲೇ ಇಲ್ಲ. ಜುದೇಯದ ಅರಸ ಯೆಹೋಯಾಖೀನ ( ೨ ಪೂರ್ವ. 36:9-10 ) 8 ಯೆಹೋಯಾಖೀನನು ಅರಸನಾದಾಗ ಹದಿನೆಂಟು ವರ್ಷದವನಾಗಿದ್ದು ಜೆರುಸಲೇಮಿನಲ್ಲಿ ಮೂರು ತಿಂಗಳು ಆಳಿದನು. ಜೆರುಸಲೇಮಿನ ಎಲ್ನಾತಾನನ ಮಗಳಾದ ನೆಹುಷ್ಟಾ ಎಂಬಾಕೆ ಇವನ ತಾಯಿ. 9 ಇವನು ತನ್ನ ತಂದೆಯಂತೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದನು. 10 ಅವನ ಕಾಲದಲ್ಲಿ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಸೈನ್ಯದವರು ಜೆರುಸಲೇಮಿಗೆ ದಂಡೆತ್ತಿ ಬಂದು ಅದಕ್ಕೆ ಮುತ್ತಿಗೆ ಹಾಕಿದರು. 11 ಅಷ್ಟರಲ್ಲಿ ನೆಬೂಕದ್ನೆಚ್ಚರನೂ ಬಂದನು. 12 ಆಗ ಜುದೇಯದ ಅರಸ ಯೆಹೋಯಾಖೀನನು, ತನ್ನ ತಾಯಿ, ಪರಿವಾರದವರು, ಸೇನಾಪತಿಗಳು, ಕಂಚುಕಿಗಳು ಇವರೊಡನೆ ಅವನ ಬಳಿಗೆ ಹೋದನು. ಅವನು ಇವನನ್ನು ತನ್ನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ಸೆರೆಹಿಡಿದನು. 13 ಇದಲ್ಲದೆ, ಸರ್ವೇಶ್ವರ ಮುಂತಿಳಿಸಿದ ಪ್ರಕಾರ, ಅವನು ಸರ್ವೇಶ್ವರನ ಆಲಯದ ಮತ್ತು ಅರಮನೆಯ ಭಂಡಾರಗಳಲ್ಲಿದ್ದ ದ್ರವ್ಯವನ್ನೆಲ್ಲಾ ದೋಚಿಕೊಂಡು ಹೋದನು. ಇಸ್ರಯೇಲರ ಅರಸನಾದ ಸೊಲೊಮೋನನು ಸರ್ವೇಶ್ವರನ ಆಲಯಕ್ಕಾಗಿ ಮಾಡಿಸಿದ್ದ ಬಂಗಾರದ ಎಲ್ಲಾ ಆಭರಣಗಳನ್ನು ಮುರಿದುಬಿಟ್ಟನು. 14 ಜೆರುಸಲೇಮಿನಲ್ಲಿದ್ದ ಎಲ್ಲಾ ಪದಾಧಿಕಾರಿಗಳನ್ನೂ ಯೋಧರನ್ನೂ ಕಮ್ಮಾರರು ಮೊದಲಾದ ಕೈಗಾರಿಕೆಯವರನ್ನೂ ಒಟ್ಟಾರೆ ಹತ್ತು ಸಾವಿರ ಜನರನ್ನು ಸೆರೆಗೊಯ್ದನು. ನಾಡಿನ ಜನರಲ್ಲಿ ಕೇವಲ ಬಡವರನ್ನು ಹೊರತಾಗಿ ಬೇರೆ ಯಾರನ್ನೂ ಬಿಡಲಿಲ್ಲ. 15 ಅವನು ಯೆಹೋಯಾಖೀನನ್ನೂ ಅವನ ತಾಯಿ, ಹೆಂಡತಿಯರು, ಕಂಚುಕಿಗಳನ್ನೂ ನಾಡಿನ ಪ್ರಧಾನ ಪುರುಷರು ಇವರನ್ನೂ, 16 ಏಳು ಸಾವಿರ ಮಂದಿ ಯೋಧರನ್ನೂ ಸಾವಿರ ಮಂದಿ ಕಮ್ಮಾರರು ಮೊದಲಾದ ಕೈಗಾರಿಕೆಯವರನ್ನೂ ಜೆರುಸಲೇಮಿನಿಂದ ಬಾಬಿಲೋನಿಗೆ ಒಯ್ದನು. ಅವರೆಲ್ಲರು ಪುಷ್ಟರೂ ರಣವೀರರೂ ಆಗಿದ್ದರು. 17 ಬಾಬಿಲೋನಿನ ಅರಸನು ಯೆಹೋಯಾಖೀನನಿಗೆ ಬದಲಾಗಿ ಅವನ ಚಿಕ್ಕಪ್ಪನಾದ ಮತ್ತನ್ಯ ಎಂಬುವನನ್ನು ಅರಸನನ್ನಾಗಿ ನೇಮಿಸಿ ಅವನಿಗೆ ‘ಚಿದ್ಕೀಯ’ ಎಂಬ ಹೆಸರಿಟ್ಟನು. ಜುದೇಯದ ಅರಸ ಚಿದ್ಕೀಯನು ( ೨ ಪೂರ್ವ. 36:11-12 ; ಯೆರೆ. 52:1-3 ) 18 ಚಿದ್ಕೀಯನು ಇಪ್ಪತ್ತೊಂದು ವರ್ಷ ತುಂಬಿದ ಮೇಲೆ ಅರಸನಾಗಿ ಜೆರುಸಲೇಮನ್ನು ಹನ್ನೊಂದು ವರ್ಷ ಆಳಿದನು. ಅವನ ತಾಯಿ ಲಿಬ್ನದ ಯೆರೆಮೀಯನ ಮಗಳಾದ ಹಮೂಟಲ್ ಎಂಬಾಕೆ. 19 ಚಿದ್ಕೀಯನು ಯೆಹೋಯಾಕೀಮನಂತೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾಗಿ ಇದ್ದನು. 20 ಸರ್ವೇಶ್ವರಸ್ವಾಮಿ ಬಹಳ ಕೋಪಗೊಂಡು ಜೆರುಸಲೇಮಿನವರ ಮೇಲೂ ಬೇರೆ ಎಲ್ಲ ಯೆಹೂದ್ಯರ ಮೇಲೂ ಇದನ್ನೆಲ್ಲ ಬರಮಾಡಿ, ಕಡೆಗೆ ಅವರನ್ನು ತಮ್ಮ ಸನ್ನಿಧಿಯಿಂದ ತಳ್ಳಿಬಿಟ್ಟರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India