Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಅರಸುಗಳು 1 - ಕನ್ನಡ ಸತ್ಯವೇದವು C.L. Bible (BSI)


ಪ್ರವಾದಿ ಎಲೀಯನು ಮತ್ತು ಅರಸ ಅಹಜ್ಯನು

1 ಅಹಾಬನು ಮರಣಹೊಂದಿದ ನಂತರ ಮೋವಾಬ್ಯರು ಇಸ್ರಯೇಲರ ವಿರುದ್ಧ ದಂಗೆ ಎದ್ದರು.

2 ಅಹಜ್ಯನು ಸಮಾರಿಯದಲ್ಲಿದ್ದ ತನ್ನ ಮೇಲುಪ್ಪರಿಗೆಯ ಕಿಟಕಿಯೊಂದರಿಂದ ಬಿದ್ದು ಅಸ್ವಸ್ಥನಾಗಿದ್ದನು. ಅವನು ತನ್ನ ಸೇವಕರನ್ನು ಕರೆದು, “ನೀವು ಎಕ್ರೋನಿನ ದೇವರಾದ ‘ಬಾಳ್ಜೆಬೂಬ’ನ ಸನ್ನಿಧಿಗೆ ಹೋಗಿ ನಾನು ಈ ಅಸ್ವಸ್ಥತೆಯಿಂದ ಗುಣವಾಗುವೆನೋ ಇಲ್ಲವೋ, ಎಂದು ವಿಚಾರಿಸಿ ಬನ್ನಿ,” ಎಂದು ಹೇಳಿ ಕಳುಹಿಸಿದನು.

3 ಆದರೆ ಸರ್ವೇಶ್ವರ ಸ್ವಾಮಿಯ ದೂತನು ತಿಷ್ಬೀಯನಾದ ಎಲೀಯನಿಗೆ, “ನೀನು ಹೋಗಿ ಸಮಾರಿಯದ ಅರಸನ ಆ ಸೇವಕರನ್ನು ಭೇಟಿಯಾಗು. ಅವರಿಗೆ, ‘ನೀವು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವ ಅಗತ್ಯವಾದರೂ ಏನು? ಇಸ್ರಯೇಲರಲ್ಲಿ ದೇವರಿಲ್ಲವೆ?

4 ಈ ಕಾರಣ ಅಹಜ್ಯನು ತಾನು ಹಿಡಿದ ಹಾಸಿಗೆಯಿಂದ ಏಳದೆ ಸಾಯಲೇಬೇಕು ಎನ್ನುತ್ತಾರೆ ಸರ್ವೇಶ್ವರ’ ಎಂದು ಹೇಳು,” ಎಂದು ಆಜ್ಞಾಪಿಸಿದರು. ಎಲೀಯನು ಹಾಗೆಯೇ ಮಾಡಿದನು.

5 ದೂತರು ಅರಸನ ಬಳಿಗೆ ಹಿಂದಿರುಗಿ ಬಂದಾಗ ಅರಸನು, “ನೀವು ಹಿಂದಿರುಗಿದ್ದೇಕೆ?” ಎಂದು ಕೇಳಿದನು.

6 ಅದಕ್ಕೆ ಅವರು, “ಒಬ್ಬ ವ್ಯಕ್ತಿ ನಮ್ಮನ್ನು ಎದುರುಗೊಂಡು, “ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ಹಿಂದಿರುಗಿರಿ. ಸರ್ವೇಶ್ವರನ ಹೆಸರಿನಲ್ಲಿ ಅವನಿಗೆ ಹೀಗೆಂದು ಹೇಳಿರಿ: ‘ನೀವು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವ ಅಗತ್ಯವಾದರೂ ಏನು? ಇಸ್ರಯೇಲರಲ್ಲಿ ದೇವರಿಲ್ಲವೆ? ಹೀಗೆ ಮಾಡಿದ್ದರಿಂದ ನೀವು ಹಿಡಿದ ಹಾಸಿಗೆಯಿಂದ ಏಳದೆ ಸಾಯಲೇಬೇಕು ಎಂಬುದಾಗಿ ಹೇಳಿರಿ’ ಎಂದು ಆಜ್ಞಾಪಿಸಿದನು,” ಎಂದು ಉತ್ತರಕೊಟ್ಟರು.

7 ಅದಕ್ಕೆ ಅರಸನು, “ನಿಮ್ಮನ್ನು ಭೇಟಿಯಾಗಿ ಹೀಗೆಂದು ನುಡಿದ ಆ ವ್ಯಕ್ತಿ ಹೇಗಿದ್ದನು?” ಎಂದು ವಿಚಾರಿಸಿದನು.

8 ಅವರು, “ಅವನು ಕಂಬಳಿಯನ್ನು ಹೊದ್ದುಕೊಂಡಿದ್ದ; ಅವನ ಸೊಂಟಕ್ಕೆ ತೊಗಲಿನ ನಡುಕಟ್ಟು ಇತ್ತು,” ಎಂದರು. ಆಗ ಅರಸನು, “ಆ ವ್ಯಕ್ತಿ ತಿಷ್ಬೀಯನಾದ ಎಲೀಯನೇ ಆಗಿರಬೇಕು,” ಎಂದುಕೊಂಡನು.

9 ಬಳಿಕ ಅರಸನು ಎಲೀಯನನ್ನು ಕರೆದುತರುವುದಕ್ಕಾಗಿ ಒಬ್ಬ ಪಂಚಾಶದಧಿಪತಿಯನ್ನು ಅವನ ಐವತ್ತುಮಂದಿ ಸಿಪಾಯಿಗಳೊಡನೆ ಕಳುಹಿಸಿದನು. ಇವನು ಬಂದು ಎಲೀಯನು ಬೆಟ್ಟದ ತುದಿಯಲ್ಲಿ ಕುಳಿತಿರುವುದನ್ನು ಕಂಡನು. “ದೈವಪುರುಷರೇ, ಇಳಿದು ಬನ್ನಿ, ಅರಸರು ತಮ್ಮನ್ನು ಕರೆಯುತ್ತಿದ್ದಾರೆ,” ಎಂದು ಆಮಂತ್ರಿಸಿದನು.

10 ಅದಕ್ಕೆ ಎಲೀಯನು, “ನಾನು ದೈವಪುರುಷನಾಗಿ ಇರುವುದು ನಿಜವಾದರೆ ಆಕಾಶದಿಂದ ಬೆಂಕಿಬಿದ್ದು ನಿನ್ನನ್ನೂ ನಿನ್ನ ಐವತ್ತುಮಂದಿ ಸಿಪಾಯಿಗಳನ್ನೂ ದಹಿಸಿಬಿಡಲಿ,” ಎಂದನು. ಕೂಡಲೆ ಆಕಾಶದಿಂದ ಬೆಂಕಿಬಿದ್ದು ಅವನನ್ನೂ ಅವನ ಐವತ್ತುಮಂದಿ ಸಿಪಾಯಿಗಳನ್ನೂ ದಹಿಸಿಬಿಟ್ಟಿತು.

11 ಆಮೇಲೆ ಅರಸನು ಇನ್ನೊಬ್ಬ ಪಂಶಾಶದಧಿಪತಿಯನ್ನು ಅವನ ಐವತ್ತುಮಂದಿ ಸಿಪಾಯಿಗಳ ಸಮೇತ ಕಳುಹಿಸಿದನು. ಇವನು ಬಂದು ಎಲೀಯನಿಗೆ, “ದೈವಪುರುಷರೇ, ಬೇಗನೆ ಇಳಿದು ಬನ್ನಿ; ಅರಸರು ನಿಮ್ಮನ್ನು ಕರೆಯುತ್ತಾರೆ,” ಎಂದು ಹೇಳಿದನು.

12 ಅದಕ್ಕೆ ಎಲೀಯನು, “ನಾನು ದೈವಪುರುಷ ಹೌದಾದರೆ ಆಕಾಶದಿಂದ ಬೆಂಕಿಬಿದ್ದು ನಿನ್ನನ್ನೂ ನಿನ್ನ ಐವತ್ತುಮಂದಿ ಸಿಪಾಯಿಗಳನ್ನೂ ದಹಿಸಿಬಿಡಲಿ,” ಎಂದನು. ಕೂಡಲೆ ದೇವರು ಆಕಾಶದಿಂದ ಕಳುಹಿಸಿದ ಬೆಂಕಿ ಬಂದು ಅವನನ್ನೂ ಅವನ ಐವತ್ತುಮಂದಿ ಸಿಪಾಯಿಗಳನ್ನೂ ಸುಟ್ಟುಬಿಟ್ಟಿತು.

13 ಅರಸನು ಮತ್ತೊಬ್ಬ ಪಚಾಶದಧಿಪತಿಯನ್ನು ಅವನ ಐವತ್ತುಮಂದಿ ಸಿಪಾಯಿಗಳೊಡನೆ ಕಳುಹಿಸಿದನು. ಇವನು ಬಂದು, ಎಲೀಯನ ಮುಂದೆ ಮೊಣಕಾಲೂರಿ, “ದೈವಪುರುಷರೇ, ನನ್ನ ಮತ್ತು ನನ್ನ ಸೇವಕರಾದ ಈ ಐವತ್ತುಮಂದಿಯ ಪ್ರಾಣ ನಿಮ್ಮ ದೃಷ್ಟಿಯಲ್ಲಿ ಮೌಲ್ಯವುಳ್ಳದ್ದಾಗಿರಲಿ;

14 ಆಕಾಶದಿಂದ ಬೆಂಕಿಬಿದ್ದು ನನಗೆ ಮುಂದೆ ಬಂದ ಆ ಇಬ್ಬರು ಪಂಚಾಶದಧಿಪತಿಗಳನ್ನೂ ಅವರ ಸಿಪಾಯಿಗಳನ್ನೂ ದಹಿಸಿಬಿಟ್ಟಿತಲ್ಲವೆ? ನನ್ನ ಪ್ರಾಣವಾದರೂ ನಿಮ್ಮ ದೃಷ್ಟಿಯಲ್ಲಿ ಮೌಲ್ಯವುಳ್ಳದೆಂದು ಮಾನ್ಯವಾಗಲಿ,” ಎಂದು ಬೇಡಿಕೊಂಡನು.

15 ಆಗ ಸರ್ವೇಶ್ವರನ ದೂತನು ಎಲೀಯನಿಗೆ, “ನೀನು ಇವನ ಸಂಗಡ ಹೋಗು; ಹೆದರಬೇಡ,” ಎಂದು ಹೇಳಿದನು. ಆದ್ದರಿಂದ ಎಲೀಯನು ಎದ್ದು ಇವನ ಜೊತೆಯಲ್ಲೇ ಅರಸನ ಬಳಿಗೆ ಹೋದನು.

16 ಅರಸನಿಗೆ, “ನೀವು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವುದಕ್ಕೆ ದೂತರನ್ನು ಕಳುಹಿಸಿದ್ದೇಕೆ? ಇಸ್ರಯೇಲರಲ್ಲಿ ದೇವರಿಲ್ಲವೆ? ಹೀಗೆ ಮಾಡಿದ್ದರಿಂದ ನೀವು ಹಿಡಿದ ಹಾಸಿಗೆಯಿಂದ ಏಳದೆ ಸಾಯಲೇಬೇಕು ಎಂಬುದಾಗಿ ಸರ್ವೇಶ್ವರ ಹೇಳಿದ್ದಾರೆ,” ಎಂದನು.

17 ಸರ್ವೇಶ್ವರ ಎಲೀಯನ ಮುಖಾಂತರ ಮುಂತಿಳಿಸಿದಂತೆಯೇ ಅರಸನು ಸತ್ತುಹೋದನು. ಅವನಿಗೆ ಮಕ್ಕಳಿರಲಿಲ್ಲ. ಅವನ ಸ್ಥಾನದಲ್ಲಿ ಅವನ ತಮ್ಮ ಯೋರಾಮನು, ಯೆಹೂದ್ಯರ ಅರಸ ಯೆಹೋಷಾಫಾಟನ ಮಗ ಯೆಹೋರಾಮನ ಅಳ್ವಿಕೆಯ ಎರಡನೆಯ ವರ್ಷದಲ್ಲಿ, ಅರಸನಾದನು.

18 ಅಹಜ್ಯನ ಉಳಿದ ಚರಿತ್ರೆ ಹಾಗು ಕಾರ್ಯಕಲಾಪಗಳು ಇಸ್ರಯೇಲ್ ಅರಸುಗಳ ಇತಿಹಾಸ ಗ್ರಂಥದಲ್ಲಿ ಲಿಖಿತವಾಗಿವೆ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು