ಮುನ್ನುಡಿ
“ಸಮುವೇಲನು” ಎಂಬ ಪವಿತ್ರ ಗ್ರಂಥದ ಪ್ರಥಮ ಹಾಗು ದ್ವಿತೀಯ ಭಾಗಗಳು ಇಸ್ರಯೇಲ್ ಸಮಾಜ ಹೇಗೆ “ನ್ಯಾಯಸ್ಥಾಪಕರ” ಆಡಳಿತದಿಂದ “ಅರಸರ” ಪರಿಪಾಲನೆಗೆ ಒಳಗಾಯಿತು ಎಂಬ ಐತಿಹಾಸಿಕ ವಿವರಗಳಿಂದ ಕೂಡಿದೆ.
ಕುರುಬರಾಗಿ ಚಲನೆವಲನೆಯಲ್ಲಿದ್ದಾಗ ಈ ಜನಾಂಗ ತನ್ನ ಪಿತಾಮಹರ ನೇತೃತ್ವಕ್ಕೆ ಒಳಪಟ್ಟಿತು. ವಾಗ್ದತ್ತ ನಾಡಿಗೆ ಬಂದು ವ್ಯವಸಾಯ ಹಾಗು ತೋಟಗಾರಿಕೆಗೆ ನಡುಕಟ್ಟಿ ನಿಂತಾಗ ತಮ್ಮ ಒಳವ್ಯಾಜ್ಯಗಳನ್ನು ತೀರ್ಮಾನಿಸಲು ಹಾಗು ಹೊರಗಿನವರ ದಾಳಿಯಿಂದ ಕಾಪಾಡಲು “ನ್ಯಾಯಸ್ಥಾಪಕರ” ಅವಶ್ಯಕತೆಯನ್ನು ಮನಗಂಡಿತು. ಅನ್ಯರಾಜ್ಯಗಳ ಸಂಪರ್ಕದಿಂದಾಗಿ ಅವರಂತೆ ತಮಗೂ ಒಬ್ಬ ಅರಸನು ಬೇಕು ಎಂಬ ಅಪೇಕ್ಷೆ ಆಮೇಲೆ ತಲೆಯೆತ್ತಿಕೊಳ್ಳುತ್ತದೆ. “ದೇವರೇ ನಮ್ಮ ನಿಜವಾದ ಪಿತಾಮಹ, ಶಾಶ್ವತವಾದ ನ್ಯಾಯಸ್ಥಾಪಕ, ಅವರೇ ನಮ್ಮ ಪರಮೋನ್ನತ ರಾಜ,” ಎಂಬ ಪ್ರತಿವಾದ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತದೆ.
ದೇವರು ಜನಾಭಿಪ್ರಾಯವನ್ನು ಮಾನ್ಯಮಾಡುತ್ತಾರೆ. ನ್ಯಾಯಸ್ಥಾಪಕರನ್ನು ಒದಗಿಸಿದ ದೇವರು ಅರಸನನ್ನೂ ನೇಮಿಸುತ್ತಾರೆ. ಸಮುವೇಲನು ಈ ಇಸ್ರಯೇಲ್ ಜನಾಂಗದ ಕೊನೆಯ ಹಾಗು ಅದ್ವಿತೀಯ ನ್ಯಾಯಸ್ಥಾಪಕ. ಸೌಲನು ಅವರ ಮೊಟ್ಟ ಮೊದಲನೆಯ ಅರಸ. ದಾವೀದನು ಅವರ ಎರಡನೆಯ ಅರಸ. ಈ ಮೂವರು ಮಹಾತ್ಮರ ಚರಿತ್ರೆ ಈ ಗ್ರಂಥದಲ್ಲಿ ಮುಪ್ಪುರಿಗೊಂಡಿದೆ.
ದೇವರಿಗೆ ಪ್ರಾಮಾಣಿಕರಾಗಿ ನಡೆದುಕೊಳ್ಳುವವರಿಗೆ ಯಶಸ್ಸು, ಅವರಿಗೆ ಅವಿಧೇಯರಾಗಿ ನಡೆದುಕೊಳ್ಳುವವರಿಗೆ ವಿನಾಶ ಕಟ್ಟಿಟ್ಟ ಬುತ್ತಿ: “ನನ್ನನ್ನು ಸನ್ಮಾನಿಸುವವನನ್ನು ನಾನು ಸನ್ಮಾನಿಸುವೆನು; ನನ್ನನ್ನು ಉಪೇಕ್ಷಿಸುವವನನ್ನು ನಾನು ತಿರಸ್ಕರಿಸುವೆನು” (2:30); ಅರಸನಾಗಿರಲಿ, ಆಳಾಗಿರಲಿ, ಧನವಂತನಾಗಿರಲಿ, ದರಿದ್ರನಾಗಿರಲಿ, ಎಲ್ಲರು ದೇವರ ಪರಿಪಾಲನೆಗೆ ಒಳಪಟ್ಟಿರಬೇಕು; ಅವರ ಆಜ್ಞೆಯ ಅನುಸರಣೆಯಲ್ಲೇ ಸರ್ವರ ಹಕ್ಕುಬಾಧ್ಯತೆ ಸುರಕ್ಷಿತ. ಈ ತತ್ವಗಳೇ ಈ ಗ್ರಂಥದ ತಿರುಳೆನ್ನಬಹುದು.
ಪರಿವಿಡಿ
ಸಮುವೇಲನು ಇಸ್ರಯೇಲರ ನ್ಯಾಯಸ್ಥಾಪಕ 1:1—7:17
ಸೌಲನು ಇಸ್ರಯೇಲರ ಅರಸ 8:1—10:27
ಸೌಲನ ರಾಜ್ಯಭಾರದ ಆರಂಭ 11:1—15:35
ದಾವೀದನು ಮತ್ತು ಸೌಲನು 16:1—30:31
ಸೌಲನ ಮತ್ತು ಅವನ ಮಕ್ಕಳ ಸಾವು 31:1-13