1 ಸಮುಯೇಲ 7 - ಕನ್ನಡ ಸತ್ಯವೇದವು C.L. Bible (BSI)1 ಆಗ ಕಿರ್ಯತ್ಯಾರೀಮಿನವರು ಬಂದು ಸರ್ವೇಶ್ವರನ ಮಂಜೂಷವನ್ನು ತೆಗೆದುಕೊಂಡು ಹೋದರು. ಗುಡ್ಡದ ಮೇಲೆ ವಾಸವಾಗಿದ್ದ ಅಬೀನಾದಾಬನ ಮನೆಯಲ್ಲಿ ಅದನ್ನು ಇಟ್ಟು, ಅವನ ಮಗ ಎಲ್ಲಾಜಾರನನ್ನು ಅದರ ಸೇವೆಗಾಗಿ ಪ್ರತಿಷ್ಠಿಸಿದರು. ಇಸ್ರಯೇಲನ್ನು ಪಾಲಿಸಿದ ಸಮುವೇಲನು 2 ಮಂಜೂಷವು ಕಿರ್ಯತ್ಯಾರೀಮಿಗೆ ಬಂದು ಬಹಳ ದಿವಸಗಳು ಅಂದರೆ, ಇಪ್ಪತ್ತು ವರ್ಷಗಳು ಕಳೆದುಹೋದವು. ಈ ಕಾಲದಲ್ಲಿ ಎಲ್ಲ ಇಸ್ರಯೇಲರು ಸರ್ವೇಶ್ವರನಿಗಾಗಿ ಹಂಬಲಿಸುತ್ತಿದ್ದರು. 3 ಆಗ ಸಮುವೇಲನು ಅವರಿಗೆ, “ನೀವು ಪೂರ್ಣಮನಸ್ಸಿನಿಂದ ಸರ್ವೇಶ್ವರನಿಗೆ ಅಭಿಮುಖರಾಗಿ ನಿಮ್ಮ ಮಧ್ಯದಲ್ಲಿರುವ ಅಷ್ಟೋರೆತ್ ಮೊದಲಾದ ಅನ್ಯದೇವತೆಗಳನ್ನು ತೆಗೆದುಹಾಕಿರಿ. ಸರ್ವೇಶ್ವರನ ಮೇಲೆಯೇ ಮನಸ್ಸಿಟ್ಟು ಅವರೊಬ್ಬರಿಗೇ ಸೇವೆಸಲ್ಲಿಸಿರಿ; ಆಗ ಅವರು ನಿಮ್ಮನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಿ ಕಾಪಾಡುವರು,” ಎಂದನು. 4 ಹಾಗೆಯೇ ಇಸ್ರಯೇಲರು ಬಾಳ್ ಅಷ್ಟೋರೆತ್ ದೇವತೆಗಳನ್ನು ತೆಗೆದುಹಾಕಿ ಸರ್ವೇಶ್ವರಸ್ವಾಮಿಯೊಬ್ಬರಿಗೆ ಸೇವೆ ಸಲ್ಲಿಸತೊಡಗಿದರು. 5 ಸಮುವೇಲನು ಪುನಃ ಅವರಿಗೆ, “ಇಸ್ರಯೇಲರೆಲ್ಲರೂ ಮಿಚ್ಪೆಯಲ್ಲಿ ಕೂಡಿಬರಲಿ; ನಾನು ನಿಮಗೋಸ್ಕರ ಸರ್ವೇಶ್ವರನನ್ನು ಪ್ರಾರ್ಥಿಸುವೆನು,” ಎಂದನು. 6 ಅಂತೆಯೇ ಅವರು ಅಲ್ಲಿ ಕೂಡಿಬಂದು, ನೀರು ಸೇದಿ ಸರ್ವೇಶ್ವರನ ಮುಂದೆ ಹೊಯ್ದು, ಆ ದಿವಸ ಉಪವಾಸವಿದ್ದು, ದ್ರೋಹಿಗಳಾಗಿದ್ದೇವೆಂದು ಸರ್ವೇಶ್ವರನಿಗೆ ಅರಿಕೆಮಾಡಿದರು. ಸಮುವೇಲನು ಮಿಚ್ಪೆಯಲ್ಲಿ ಇಸ್ರಯೇಲರ ವ್ಯಾಜ್ಯಗಳನ್ನು ತೀರಿಸಿದನು. 7 ಇಸ್ರಯೇಲರು ಮಿಚ್ಪೆಯಲ್ಲಿ ಕೂಡಿಬಂದಿದ್ದಾರೆಂಬುದು ಫಿಲಿಷ್ಟಿಯರಿಗೆ ಗೊತ್ತಾದಾಗ ಅವರ ರಾಜರುಗಳು ಇಸ್ರಯೇಲರಿಗೆ ವಿರುದ್ಧ ಯುದ್ಧಕ್ಕೆ ಹೊರಟರು. ಇದನ್ನು ತಿಳಿದ ಇಸ್ರಯೇಲರು ಬಹಳವಾಗಿ ಭಯಪಟ್ಟರು. 8 ಅವರು ಸಮುವೇಲನಿಗೆ, “ನಮ್ಮ ದೇವರಾದ ಸರ್ವೇಶ್ವರ ನಮ್ಮನ್ನು ಫಿಲಿಷ್ಟಿಯರ ಕೈಯಿಂದ ತಪ್ಪಿಸಿ ರಕ್ಷಿಸುವ ಹಾಗೆ ನೀವು ನಮಗೋಸ್ಕರ ಪ್ರಾರ್ಥನೆಮಾಡಿ, ಸುಮ್ಮನಿರಬೇಡಿ,” ಎಂದರು. 9 ಆಗ ಸಮುವೇಲನು ಹಾಲುಕುಡಿಯುವ ಒಂದು ಕುರಿಮರಿಯನ್ನು ತಂದು ಸರ್ವೇಶ್ವರನಿಗೆ ದಹನಬಲಿಯಾಗಿ ಸಮರ್ಪಿಸಿ, ಇಸ್ರಯೇಲರ ಪರವಾಗಿ ಪ್ರಾರ್ಥನೆಮಾಡಿದನು. ಸರ್ವೇಶ್ವರ ಸದುತ್ತರವನ್ನು ದಯಪಾಲಿಸಿದರು. 10 ಹೇಗೆಂದರೆ, ಸಮುವೇಲನು ಬಲಿಯನ್ನರ್ಪಿಸುವ ವೇಳೆಯಲ್ಲಿ ಫಿಲಿಷ್ಟಿಯರು ಯುದ್ಧಕ್ಕಾಗಿ ಸಮೀಪಿಸಿದರು. ಸರ್ವೇಶ್ವರ ದೊಡ್ಡ ಗುಡುಗಿನಿಂದ ಅವರನ್ನು ಕಳವಳಗೊಳಿಸಿ, ಇಸ್ರಯೇಲರಿಗೆ ಸೋತು ಓಡಿಹೋಗುವಂತೆ ಮಾಡಿದರು. 11 ಇಸ್ರಯೇಲರಾದರೋ ಮಿಚ್ಪೆಯಿಂದ ಹೊರಟು ಬೇತ್ಕರಿನ ತಗ್ಗಿನವರೆಗೆ ಅವರನ್ನು ಹಿಂಬಾಲಿಸಿ ಹತಮಾಡಿದರು. 12 ಅನಂತರ ಸಮುವೇಲನು ಮಿಚ್ಪೆಗೂ ಶೇನಿಗೂ ಮಧ್ಯದಲ್ಲಿ ಒಂದು ಕಲ್ಲನ್ನು ನಿಲ್ಲಿಸಿ, “ಸರ್ವೇಶ್ವರ ಇಲ್ಲಿಯವರೆಗೆ ನಮಗೆ ಸಹಾಯ ಮಾಡಿದರು,” ಎಂದು ಹೇಳಿ ಅದಕ್ಕೆ, ‘ಎಬನೆಜೆರ್’ ಎಂದು ಹೆಸರಿಟ್ಟನು. 13 ಫಿಲಿಷ್ಟಿಯರು ಸೋತುಹೋದುದರಿಂದ ಮತ್ತೆ ಇಸ್ರಯೇಲರ ಪ್ರಾಂತ್ಯದೊಳಗೆ ಬರಲೇ ಇಲ್ಲ. ಸಮುವೇಲನ ಜೀವಮಾನದಲ್ಲೆಲ್ಲಾ ಸರ್ವೇಶ್ವರನ ಹಸ್ತ ಫಿಲಿಷ್ಟಿಯರಿಗೆ ವಿರೋಧವಾಗಿಯೇ ಇತ್ತು. 14 ಅವರು ಎಕ್ರೋನ್ ಮೊದಲುಗೊಂಡು ಗತ್ ಊರಿನವರೆಗೆ ಇಸ್ರಯೇಲರಿಂದ ಕಿತ್ತುಕೊಂಡಿದ್ದ ಎಲ್ಲ ಪಟ್ಟಣಗಳು ಇಸ್ರಯೇಲರಿಗೆ ದೊರಕಿದವು. ಅವುಗಳಿಗೆ ಸೇರಿದ ಗ್ರಾಮಗಳನ್ನೂ ಇಸ್ರಯೇಲರು ಫಿಲಿಷ್ಟಿಯರಿಂದ ತೆಗೆದುಕೊಂಡರು. ಇಸ್ರಯೇಲರಿಗೂ ಅಮೋರಿಯರಿಗೂ ಸಮಾಧಾನವಿತ್ತು. 15 ಸಮುವೇಲನು ಜೀವದಿಂದಿರುವವರೆಗೆ ಇಸ್ರಯೇಲರನ್ನು ಪಾಲಿಸುತ್ತಿದ್ದನು. 16 ಅವನು ಇಸ್ರಯೇಲರ ನ್ಯಾಯಗಳನ್ನು ತೀರಿಸುವುದಕ್ಕಾಗಿ ಪ್ರತಿವರ್ಷವೂ ಬೇತೇಲ್, ಗಿಲ್ಗಾಲ್, ಮಿಚ್ಪೆ ಎಂಬ ಪಟ್ಟಣಗಳನ್ನು ಸುತ್ತಿ ರಾಮಾಕ್ಕೆ ತಿರುಗಿ ಬರುತ್ತಿದ್ದನು. 17 ಅಲ್ಲಿ ಅವನ ಸ್ವಂತ ಮನೆ ಇದ್ದುದರಿಂದ ಅಲ್ಲಿಯೇ ಸರ್ವೇಶ್ವರನಿಗೆ ಒಂದು ಬಲಿಪೀಠವನ್ನು ಕಟ್ಟಿಸಿ ಇಸ್ರಯೇಲರನ್ನು ಪಾಲಿಸುತ್ತಿದ್ದನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India