Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಸಮುಯೇಲ 6 - ಕನ್ನಡ ಸತ್ಯವೇದವು C.L. Bible (BSI)


ಮರಳಿ ಬಂದ ಮಂಜೂಷ

1 ಸರ್ವೇಶ್ವರನ ಮಂಜೂಷ ಫಿಲಿಷ್ಟಿಯರ ದೇಶದಲ್ಲಿ ಏಳು ತಿಂಗಳಿತ್ತು.

2 ಫಿಲಿಷ್ಟಿಯರು ಅವರ ಪೂಜಾರಿಗಳನ್ನೂ ಮಂತ್ರಗಾರರನ್ನೂ ಕರೆದು, “ಸರ್ವೇಶ್ವರನ ಮಂಜೂಷವನ್ನು ಏನು ಮಾಡಬೇಕು? ಅದನ್ನು ಮರಳಿ ಅದರ ಸ್ಥಳಕ್ಕೆ ಹೇಗೆ ಕಳುಹಿಸುವುದು? ನಮಗೆ ತಿಳಿಸಿ,” ಎಂದು ಕೇಳಿಕೊಂಡರು.

3 ಮರುತ್ತರವಾಗಿ ಅವರು, “ಇಸ್ರಯೇಲ್ ದೇವರ ಮಂಜೂಷವನ್ನು ಸುಮ್ಮನೆ ಕಳುಹಿಸಬಾರದು; ನಿಮ್ಮ ಪಾಪಕ್ಕಾಗಿ ಪ್ರಾಯಶ್ಚಿತ್ತ ದ್ರವ್ಯದೊಡನೆ ಕಳುಹಿಸಬೇಕು. ಆಗ ಮಾತ್ರ ನೀವು ಗುಣಹೊಂದುವಿರಿ; ಅಲ್ಲದೆ ಅವರ ದೇವರ ಶಿಕ್ಷಾಹಸ್ತ ನಿಮ್ಮನ್ನು ಬಾಧಿಸುತ್ತಿದ್ದುದಕ್ಕೆ ಕಾರಣ ಗೊತ್ತಾಗುವುದು,” ಎಂದು ಹೇಳಿದರು.

4 ಆ ಜನರು, “ನಾವು ಪ್ರಾಯಶ್ಚಿತಾರ್ಥವಾಗಿ ಏನನ್ನು ಕಳುಹಿಸಬೇಕು?” ಎಂದು ವಿಚಾರಿಸಿದರು. ಅದಕ್ಕೆ ಅವರು, “ನಿಮಗೂ ನಿಮ್ಮ ರಾಜರುಗಳಿಗೂ ಒಂದೇ ವಿಧವಾದ ವ್ಯಾಧಿ ಇರುವುದರಿಂದ ನಿಮ್ಮ ರಾಜರುಗಳ ಸಂಖ್ಯೆಗೆ ಸರಿಯಾಗಿ ಐದು ಬಂಗಾರದ ಗಡ್ಡೆಗಳನ್ನು ಹಾಗು ಐದು ಬಂಗಾರದ ಇಲಿಗಳನ್ನು ಮಾಡಿಸಬೇಕು.

5 ನಿಮ್ಮ ದೇಶನಿವಾಸಿಗಳ ವಿನಾಶಕ್ಕೆ ಕಾರಣವಾಗಿರುವ ಈ ಗಡ್ಡೆಗಳ ಹಾಗು ಇಲಿಗಳ ರೂಪವನ್ನು ಚಿನ್ನದಿಂದ ಮಾಡಿಸಿ ಇಸ್ರಯೇಲ್ ದೇವರಿಗೆ ಬಹುಮಾನವಾಗಿ ಕೊಡಿ. ಆಗ ಆತನ ಶಿಕ್ಷಾಹಸ್ತ ನಿಮ್ಮನ್ನೂ ನಿಮ್ಮ ದೇವತೆಗಳನ್ನೂ ಹಾಗು ಪ್ರಾಂತ್ಯಗಳನ್ನೂ ಬಿಟ್ಟುಹೋಗಬಹುದು.

6 ಈಜಿಪ್ಟ್ ನವರಂತೆ ಆಗಲಿ, ಫರೋಹನಂತೆ ಆಗಲಿ ನೀವೇಕೆ ನಿಮ್ಮ ಹೃದಯಗಳನ್ನು ಕಠಿಣಪಡಿಸಿಕೊಳ್ಳಬೇಕು? ಇಸ್ರಯೇಲರನ್ನು ಕಳುಹಿಸಲೊಲ್ಲದ ಈ ಈಜಿಪ್ಟ್ ನವರನ್ನು ಸರ್ವೇಶ್ವರನು ಎಷ್ಟೋ ವಿಧವಾಗಿ ಬಾಧಿಸಬೇಕಾಯಿತಲ್ಲವೆ?

7 ಈಗ ನೀವು ಒಂದು ಹೊಸ ಒಡಂಬಡಿಕೆಯನ್ನು ಮಾಡಿಸಿರಿ. ಅದಕ್ಕೆ ಹಾಲುಕರೆಯುವ ಮತ್ತು ಎಂದೂ ನೊಗಹೊರದ ಎರಡು ಹಸುಗಳನ್ನು ಹೂಡಿಸಿರಿ.

8 ಆ ಬಂಡಿಯ ಮೇಲೆ ಸರ್ವೇಶ್ವರನ ಮಂಜೂಷವನ್ನು ಹಾಗು ನೀವು ಪ್ರಾಯಶ್ಚಿತಾರ್ಥವಾಗಿ ಕೊಡುವ ಬಂಗಾರದ ವಸ್ತುಗಳುಳ್ಳ ಚಿಕ್ಕಪೆಟ್ಟಿಗೆಯನ್ನು ಇಡಿ. ಬಳಿಕ ಆ ಬಂಡಿಯನ್ನು ಹೊರಡಿಸಿ ಹೋಗಬಿಡಿ. ಆ ಹಸುಗಳ ಕರುಗಳನ್ನು ಮನೆಗೆ ತೆಗೆದುಕೊಂಡು ಹೋಗಿ.

9 ಬಂಡಿ ಹೋಗುವ ದಾರಿಯನ್ನು ಗಮನಿಸಿರಿ. ಅದು ತಾನಾಗಿ ಸ್ವದೇಶದ ದಾರಿಹಿಡಿದು ಬೇತ್‍ಷೆಮೆಷಿನ ಕಡೆಗೆ ಹೋದರೆ ಈಗ ಬಂದಿರುವ ಕೇಡನ್ನು ಕಳುಹಿಸಿದವನು ಆ ಸರ್ವೇಶ್ವರನೇ ಎಂದು ತಿಳಿಯಿರಿ. ಬಂಡಿ ಆ ಮಾರ್ಗವನ್ನು ಹಿಡಿಯದಿದ್ದರೆ ಆ ಸರ್ವೇಶ್ವರನ ಹಸ್ತ ನಮ್ಮನ್ನು ಮುಟ್ಟಲಿಲ್ಲ, ಈ ಕೇಡು ಆಕಸ್ಮಿಕವಾಗಿ ಬಂದಿದೆ ಎಂದು ತಿಳಿದುಕೊಳ್ಳಿ,” ಎಂದು ಹೇಳಿದರು.

10 ಫಿಲಿಷ್ಟಿಯರು ಅದೇ ಪ್ರಕಾರ ಮಾಡಿದರು; ಹಾಲುಕರೆಯುವ ಎರಡು ಹಸುಗಳನ್ನು ತೆಗೆದುಕೊಂಡು ಬಂಡಿಗೆ ಹೂಡಿದರು. ಅವುಗಳ ಕರುಗಳನ್ನು ಮನೆಯಲ್ಲೇ ಕಟ್ಟಿಹಾಕಿದರು.

11 ಸರ್ವೇಶ್ವರನ ಮಂಜೂಷವನ್ನು ಮತ್ತು ಚಿನ್ನದ ಇಲಿಗಳೂ ಗಡ್ಡೆಗಳೂ ಇದ್ದ ಚಿಕ್ಕಪೆಟ್ಟಿಗೆಯನ್ನು ಬಂಡಿಯಲ್ಲಿ ಇಟ್ಟರು.

12 ಕೂಡಲೆ ಆ ಹಸುಗಳು ಬೇತ್‍ಷೆಮೆಷಿನ ರಾಜಮಾರ್ಗವನ್ನು ಹಿಡಿದು, ಅಂಬಾ ಎನ್ನುತ್ತಾ ನೆಟ್ಟಗೆ ಮುಂದೆ ಸಾಗಿದವು. ಎಡಕ್ಕಾಗಲಿ, ಬಲಕ್ಕಾಗಲಿ ತಿರುಗಲಿಲ್ಲ. ಫಿಲಿಷ್ಟಿಯ ರಾಜರುಗಳು ಬೇತ್ ಷೆಮೆಷಿನ ಎಲ್ಲೆಯವರೆಗೂ ಅವುಗಳ ಹಿಂದೆಹೋದರು.

13 ಬೇತ್ ಷೆಮೆಷಿನವರು ಅಲ್ಲಿನ ತಗ್ಗಿನಲ್ಲಿ ಗೋದಿಬೆಳೆಯನ್ನು ಕೊಯ್ಯುತ್ತಿದ್ದರು. ಕಣ್ಣೆತ್ತಿ ಸರ್ವೇಶ್ವರನ ಮಂಜೂಷವನ್ನು ನೋಡಿ ಬಹಳ ಸಂತೋಷಪಟ್ಟರು.

14 ಆ ಬಂಡಿ ಬೇತ್‍ಷೆಮೆಷಿನವನಾದ ಯೆಹೋಶುವನ ಹೊಲದಲ್ಲಿದ್ದ ಒಂದು ದೊಡ್ಡ ಕಲ್ಲಿನ ಬಳಿ ಬಂದು ನಿಂತಿತು. ಅವರು ಅಲ್ಲಿಗೆ ಹೋಗಿ, ಬಂಡಿಯ ಕಟ್ಟಿಗೆಗಳನ್ನು ಮುರಿದು, ಅಗ್ನಿ ಮಾಡಿ ಆ ಹಸುಗಳನ್ನು ಸರ್ವೇಶ್ವರನಿಗೆ ದಹನಬಲಿಯಾಗಿ ಅರ್ಪಿಸಿದರು.

15 ಲೇವಿಯರು ಸರ್ವೇಶ್ವರನ ಮಂಜೂಷವನ್ನು ಹಾಗು ಚಿನ್ನದ ವಸ್ತುಗಳಿದ್ದ ಚಿಕ್ಕಪೆಟ್ಟಿಗೆಯನ್ನು ಇಳಿಸಿ ಆ ದೊಡ್ಡ ಕಲ್ಲಿನ ಮೇಲಿಟ್ಟರು. ಬೇತ್‍ಷೆಮೆಷಿನವರು ಅದೇ ದಿನ ಸರ್ವೇಶ್ವರನಿಗೆ ದಹನಬಲಿಗಳನ್ನು ಹಾಗು ಶಾಂತಿಸಮಾಧಾನದ ಬಲಿಗಳನ್ನು ಸಮರ್ಪಿಸಿದರು.

16 ಇದನ್ನೆಲ್ಲ ನೋಡಿದ ಮೇಲೆ ಫಿಲಿಷ್ಟಿಯರ ಐದು ಮಂದಿ ರಾಜರು ಅದೇ ದಿನ ಎಕ್ರೋನಿಗೆ ಹಿಂದಿರುಗಿದರು.

17 ಫಿಲಿಷ್ಟಿಯರು ಸರ್ವೇಶ್ವರನಿಗೆ ಪ್ರಾಯಶ್ಚಿತಾರ್ಥವಾಗಿ ಸಮರ್ಪಿಸಿದ ಚಿನ್ನದ ಗಡ್ಡೆಗಳ ಸಂಸ್ಥಾನಾನುಸಾರವಾದ ಪಟ್ಟಿ ಇದು: ಅಷ್ಡೋದ್, ಗಾಜಾ, ಪರವಾಗಿ ಒಂದು, ಅಷ್ಕೆಲೋನ್ ಪರವಾಗಿ ಒಂದು, ಗತ್ ಪರವಾಗಿ ಒಂದು ಮತ್ತು ಎಕ್ರೋನ್ ಪರವಾಗಿ ಒಂದು,

18 ಅವರು ಕಳುಹಿಸಿದ ಬಂಗಾರದ ಇಲಿಗಳು ಫಿಲಿಷ್ಟಿಯರ ಐದು ಮಂದಿ ರಾಜರ ಅಧೀನದಲ್ಲಿದ್ದ ಎಲ್ಲ ಪುಟ್ಟ ಗ್ರಾಮಗಳ ಹಾಗು ಕೋಟೆಪೇಟೆಗಳ ಸಂಖ್ಯೆಗೆ ಸರಿಯಾಗಿದ್ದವು. ಸರ್ವೇಶ್ವರನ ಮಂಜೂಷವನ್ನು ಇಡಲಾಗಿದ್ದ ಆ ದೊಡ್ಡ ಕಲ್ಲು ಇಂದಿನವರೆಗೂ ಬೇತ್ ಷೆಮೆಷಿನ ಯೆಹೋಶುವಿನ ಹೊಲದಲ್ಲಿ ಸಾಕ್ಷಿಯಾಗಿ ನಿಂತಿದೆ.

19 ಮಂಜೂಷವನ್ನು ತೆರೆದು ನೋಡಿದ ಬೇತ್ ಷೆಮೆಷಿನವರಾದ ಎಪ್ಪತ್ತು ಮಂದಿಯನ್ನು ಸರ್ವೇಶ್ವರ ನಾಶಮಾಡಿದರು. ಈ ವಿನಾಶಕ್ಕಾಗಿ ಬೇತ್ ಷೆಮೆಷಿನವರು ಗೋಳಾಡಿದರು.


ಕಿರ್ಯತ್ಯಾರೀಮಿನಲ್ಲಿ ಮಂಜೂಷ

20 “ಪರಮಪಾವನ ದೇವರಾದ ಸರ್ವೆಶ್ವರನ ಮುಂದೆ ಯಾರು ತಾನೆ ನಿಂತಾರು? ಇನ್ನು ಮುಂದೆ ಇವರು ಹೋಗತಕ್ಕ ಸ್ಥಳ ಯಾವುದು?” ಎಂದು ಮಾತಾಡಿಕೊಂಡರು ಜನರು.

21 ಕಿರ್ಯತ್ಯಾರೀಮಿನವರ ಬಳಿಗೆ ದೂತರನ್ನು ಕಳುಹಿಸಿ, “ಫಿಲಿಷ್ಟಿಯರು ಸರ್ವೇಶ್ವರನ ಮಂಜೂಷವನ್ನು ಕಳುಹಿಸಿದ್ದಾರೆ; ನೀವು ಬಂದು ಅದನ್ನು ತೆಗೆದುಕೊಂಡು ಹೋಗಿ,” ಎಂದು ತಿಳಿಸಿದರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು