Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಸಮುಯೇಲ 5 - ಕನ್ನಡ ಸತ್ಯವೇದವು C.L. Bible (BSI)


ದೇವರ ಮಂಜೂಷ ಫಿಲಿಷ್ಟಿಯರಿಗೆ ಮಾರಕ

1 ಫಿಲಿಷ್ಟಿಯರು ದೇವರ ಮಂಜೂಷವನ್ನು ಎಬೆನೆಜೆರಿನಿಂದ ಅಷ್ಡೋದಿನಲ್ಲಿರುವ ದಾಗೋನನ ಗುಡಿಗೆ ಒಯ್ದರು.

2 ಅಲ್ಲಿ ಅದನ್ನು ದಾಗೋನನ ಮಗ್ಗುಲಲ್ಲೇ ಇಟ್ಟರು.

3 ಅಷ್ಡೋದಿನವರು ಮರುದಿನ ಬೆಳಿಗ್ಗೆ ಎದ್ದು ನೋಡುವಾಗ ದಾಗೋನ್ ವಿಗ್ರಹ ಸರ್ವೇಶ್ವರನ ಮಂಜೂಷದ ಮುಂದೆ ಬೋರಲುಬಿದ್ದಿರುವುದನ್ನು ಕಂಡು ಅದನ್ನು ಪುನಃ ಅದರ ಸ್ಥಳದಲ್ಲಿಟ್ಟರು.

4 ಮಾರನೆಯ ದಿನ ಬೆಳಿಗ್ಗೆ ನೋಡುವಾಗ ದಾಗೋನನ ತಲೆ ಮತ್ತು ಕೈಗಳು ಮುರಿದು ಹೊಸ್ತಿಲಿನ ಮೇಲೆ ಬಿದ್ದಿದ್ದವು; ಮುಂಡ ಮಾತ್ರ ಸರ್ವೇಶ್ವರನ ಮಂಜೂಷದ ಮುಂದೆ ಬಿದ್ದಿತ್ತು.

5 (ಇಂದಿನವರೆಗೂ ದಾಗೋನನ ಯಾಜಕರು ಹಾಗು ಅವನ ಬಳಿಗೆ ಬರುವವರೆಲ್ಲರು ಅಷ್ಡೋದಿನ ಗುಡಿಯ ಹೊಸ್ತಿಲನ್ನು ತುಳಿಯದಿರುವುದಕ್ಕೆ ಇದೇ ಕಾರಣ.)

6 ಸರ್ವೇಶ್ವರನ ಹಸ್ತ ಅಷ್ಡೋದಿನವರಿಗೆ ಬಾಧಕವಾಗಿತ್ತು. ಸರ್ವೇಶ್ವರ ಗಡ್ಡೆರೋಗವನ್ನು ಬರಮಾಡಿ ಅವರ ನಗರವನ್ನೂ ಅದರ ಗ್ರಾಮಗಳನ್ನೂ ಹಾಳುಮಾಡಿದರು.

7 ಇದನ್ನು ನೋಡಿ ಆ ಅಷ್ಡೋದಿನ ಜನರು, “ಇಸ್ರಯೇಲ್ ದೇವರ ಮಂಜೂಷ ನಮ್ಮಲ್ಲಿರಬಾರದು; ಆತನ ಹಸ್ತ ನಮಗೂ ನಮ್ಮ ದೇವರಾದ ದಾಗೋನನಿಗೂ ಬಾಧಕವಾಗಿದೆ,” ಎಂದು ಹೇಳಿ

8 ಫಿಲಿಷ್ಟಿಯದ ರಾಜರೆಲ್ಲರನ್ನು ಕೂಡಿಸಿ, “ಇಸ್ರಯೇಲ್ ದೇವರ ಮಂಜೂಷವನ್ನು ಏನು ಮಾಡೋಣ?” ಎಂದು ವಿಚಾರಿಸಿದರು. ಅವರು ಅದನ್ನು ಗತ್ ಊರಿಗೆ ಕಳುಹಿಸಬೇಕೆಂದು ನಿರ್ಣಯಿಸಿದರು. ಹಾಗೆಯೇ ಇಸ್ರಯೇಲ್ ದೇವರ ಮಂಜೂಷವನ್ನು ಅಲ್ಲಿಗೆ ಕಳುಹಿಸಿದರು.

9 ಮಂಜೂಷವು ಅಲ್ಲಿ ಹೋದ ಮೇಲೆ ಸರ್ವೇಶ್ವರನ ಹಸ್ತ ಆ ಊರಿನವರಿಗೂ ಬಾಧಕವಾದುದರಿಂದ ಅಲ್ಲಿ ದೊಡ್ಡ ಗದ್ದಲ ಎದ್ದಿತು. ಸರ್ವೇಶ್ವರ ಆ ಊರಿನ ಚಿಕ್ಕವರಲ್ಲೂ ದೊಡ್ಡವರಲ್ಲೂ ಗಡ್ಡೆಗಳನ್ನು ಬರಮಾಡಿದರು.

10 ಆದುದರಿಂದ ಅವರು ದೇವರ ಮಂಜೂಷವನ್ನು ಎಕ್ರೋನಿಗೆ ಕಳುಹಿಸಿದರು. ಅದು ಅಲ್ಲಿಗೆ ಬಂದಾಗ ಆ ಊರಿನವರು, “ನೋಡಿ, ನಮ್ಮನ್ನೂ ನಮಗೆ ಸೇರಿದವರನ್ನೂ ಕೊಲ್ಲುವುದಕ್ಕಾಗಿಯೇ ಇಸ್ರಯೇಲ್ ದೇವರ ಮಂಜೂಷವನ್ನು ಇಲ್ಲಿಗೆ ಕಳುಹಿಸಿದ್ದಾರೆ,” ಎಂದು ಕೂಗಾಡಿದರು.

11 ದೇವರ ಹಸ್ತ ಅವರಿಗೂ ಬಾಧಕವಾಗಿದ್ದುದರಿಂದ ಅವರಿಗೆ ಮರಣಭಯವುಂಟಾಯಿತು. ಅವರು ಫಿಲಿಷ್ಟಿಯ ರಾಜರೆಲ್ಲರನ್ನು ಕೂಡಿಸಿ, “ಇಸ್ರಯೇಲ್ ದೇವರ ಮಂಜೂಷದಿಂದ ನಮಗೂ ನಮ್ಮ ಜನರಿಗೂ ಮರಣವುಂಟಾಗದ ಹಾಗೆ ಅದನ್ನು ಅದರ ಸ್ಥಳಕ್ಕೆ ಕಳುಹಿಸಿಬಿಡಿ,” ಎಂದು ಕೇಳಿಕೊಂಡರು.

12 ಉಳಿದ ಜನರಿಗೂ ಗಡ್ಡೆರೋಗ ಬಂದಿತ್ತು. ಪಟ್ಟಣದ ಗೋಳಾಟ ಗಗನಕ್ಕೇರಿತ್ತು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು