Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಸಮುಯೇಲ 3 - ಕನ್ನಡ ಸತ್ಯವೇದವು C.L. Bible (BSI)


ಸಮುವೇಲನಿಗೆ ಕೇಳಿಬಂದ ದೇವೋಕ್ತಿ

1 ಬಾಲಕ ಸಮುವೇಲನು ಏಲಿಯ ನೇತೃತ್ವದಲ್ಲಿ ಸರ್ವೇಶ್ವರನ ಸೇವೆಮಾಡುತ್ತಾ ಬಂದನು. ಆ ಕಾಲದಲ್ಲಿ ದೇವೋಕ್ತಿಗಳು ವಿರಳ ಆಗಿದ್ದವು; ದೇವದರ್ಶನಗಳು ಅಪರೂಪವಾಗಿಬಿಟ್ಟಿದ್ದವು.

2 ಏಲಿಯ ಕಣ್ಣುಗಳು ದಿನದಿನಕ್ಕೂ ಮೊಬ್ಬಾಗುತ್ತಾ ಬಂದು ಕುರುಡನಂಥಾಗಿಬಿಟ್ಟಿದ್ದನು. ಒಂದು ರಾತ್ರಿ ಅವನು ತನ್ನ ಕೋಣೆಯಲ್ಲಿ ಮಲಗಿದ್ದನು.

3 ಸಮುವೇಲನು ಸರ್ವೇಶ್ವರನ ಮಂದಿರದಲ್ಲಿ, ದೇವರ ಮಂಜೂಷವಿದ್ದ ಸ್ಥಳದಲ್ಲಿ ಮಲಗಿದ್ದನು. ದೇವರ ದೀಪ ಇನ್ನೂ ಉರಿಯುತ್ತಿತ್ತು.

4 ಆಗ ಸರ್ವೇಶ್ವರಸ್ವಾಮಿ ಸಮುವೇಲನನ್ನು ಕರೆದರು. ಸಮುವೇಲನು, “ಇಗೋ ಬಂದೇ,” ಎಂದು ಉತ್ತರಕೊಟ್ಟು,

5 ಒಡನೆ ಏಲಿಯ ಬಳಿಗೆ ಹೋಗಿ, “ಇಗೋ ಬಂದಿದ್ದೇನೆ; ನೀವು ನನ್ನನ್ನು ಕರೆದಿರಲ್ಲವೆ?” ಎಂದನು. ಏಲಿ, “ನಾನು ನಿನ್ನನ್ನು ಕರೆಯಲಿಲ್ಲ; ಹೋಗಿ ಮಲಗಿಕೋ,” ಎಂದನು. ಸಮುವೇಲನು ಹೋಗಿ ಮಲಗಿದನು.

6 ಸರ್ವೇಶ್ವರ ಪುನಃ, “ಸಮುವೇಲನೇ,” ಎಂದು ಕರೆದರು. ಸಮುವೇಲನು ಕೂಡಲೆ ಎದ್ದು ಏಲಿಯ ಬಳಿಗೆ ಹೋಗಿ, “ಇಗೋ ಬಂದಿದ್ದೇನೆ; ನೀವು ನನ್ನನ್ನು ಕರೆದಿರಲ್ಲವೆ?” ಎಂದನು. ಅವನು, “ಮಗನೇ, ನಾನು ನಿನ್ನನ್ನು ಕರೆಯಲಿಲ್ಲ; ಹೋಗಿ ಮಲಗಿಕೋ,” ಎಂದನು.

7 ಈವರೆಗೂ ಸಮುವೇಲನಿಗೆ ಸರ್ವೇಶ್ವರನ ನೇರ ಅನುಭವ ಆಗಿರಲಿಲ್ಲ. ದೇವರ ವಾಣಿ ಅವನಿಗೆ ಕೇಳಿಸಿರಲಿಲ್ಲ.

8 ಸರ್ವೇಶ್ವರ ಸಮುವೇಲನನ್ನು ಮೂರನೆಯ ಸಾರಿ ಕರೆದರು. ಅವನು ತಟ್ಟನೆ ಏಲಿಯ ಹತ್ತಿರ ಓಡಿ, “ಇಗೋ, ಬಂದಿದ್ದೇನೆ, ನನ್ನನ್ನು ಕರೆದಿರಲ್ಲಾ,” ಎಂದನು. ಹುಡುಗನನ್ನು ಕರೆದವರು ಸರ್ವೇಶ್ವರನೇ ಎಂದು ಏಲಿಗೆ ತಿಳಿಯಿತು.

9 ಅವನು ಸಮುವೇಲನಿಗೆ, “ಹೋಗಿ ಮಲಗಿಕೋ; ಮತ್ತೆ ಅವರು ನಿನ್ನನ್ನು ಕರೆದರೆ, ‘ಸರ್ವೇಶ್ವರಾ, ಅಪ್ಪಣೆಯಾಗಲಿ; ತಮ್ಮ ದಾಸ ಕಾದಿದ್ದಾನೆ,’ ಎಂದು ಹೇಳು,” ಎಂದನು. ಸಮುವೇಲನು ಹಿಂದಿರುಗಿ ಹೋಗಿ ತನ್ನ ಸ್ಥಳದಲ್ಲೇ ಮಲಗಿಕೊಂಡನು.

10 ಸರ್ವೇಶ್ವರ ಪ್ರತ್ಯಕ್ಷರಾಗಿ ಹಿಂದಿನಂತೆಯೇ, “ಸಮುವೇಲನೇ, ಸಮುವೇಲನೇ,” ಎಂದರು. ಸಮುವೇಲನು, “ಅಪ್ಪಣೆಯಾಗಲಿ, ತಮ್ಮ ದಾಸನಾದ ನಾನು ಕಾದಿದ್ದೇನೆ,” ಎಂದನು.

11 ಆಗ ಸರ್ವೇಶ್ವರ ಸಮುವೇಲನಿಗೆ, “ನಾನು ಇಸ್ರಯೇಲರಲ್ಲಿ ಒಂದು ವಿಶೇಷಕಾರ್ಯವನ್ನು ನಡಿಸುವೆನು. ಈ ವಿಷಯವನ್ನು ಕೇಳುವವರ ಕಿವಿಗಳೆರಡೂ ನಿಮಿರುವುವು!

12 ಏಲಿಯ ಮನೆಯನ್ನು ಕುರಿತು ತಿಳಿಸಿದ್ದೆಲ್ಲವನ್ನೂ ಆ ದಿನ ತಪ್ಪದೆ ನೆರವೇರಿಸುವೆನು.

13 ತನ್ನ ಮಕ್ಕಳು ದೇವದೂಷಕರು ಎಂದು ಅವನಿಗೆ ತಿಳಿದುಬಂದರೂ ಅವನು ಅವರನ್ನು ತಿದ್ದಲಿಲ್ಲ. ಈ ಪಾಪದ ನಿಮಿತ್ತ ಅವನ ಕುಟುಂಬವನ್ನು ನಿತ್ಯದಂಡನೆಗೆ ಗುರಿಮಾಡಿದ್ದೇನೆಂದು ಅವನಿಗೆ ಮೊದಲೇ ತಿಳಿಸಿದೆನು.

14 ಏಲಿಯ ಮನೆಯವರ ಅಪರಾಧವು ಎಂದಿಗೂ ಬಲಿಯಿಂದಾಗಲಿ ನೈವೇದ್ಯಗಳಿಂದಾಗಲಿ ಪರಿಹಾರವಾಗುವುದಿಲ್ಲವೆಂದು ಪ್ರಮಾಣಮಾಡಿದ್ದೇನೆ,” ಎಂದು ಹೇಳಿದರು.

15 ಅನಂತರ ಸಮುವೇಲನು ಮಲಗಿ, ಮುಂಜಾನೆಯಲ್ಲೇ ಎದ್ದು, ಸರ್ವೇಶ್ವರನ ಮಂದಿರದ ಬಾಗಿಲುಗಳನ್ನು ತೆರೆದನು. ತಾನು ಕಂಡದ್ದನ್ನು ಏಲಿಗೆ ತಿಳಿಸಲು ಭಯಪಟ್ಟನು.

16 ಆದರೆ, ಏಲಿ, “ಮಗನೇ, ಸಮುವೇಲನೇ”, ಎಂದು ಕರೆದಾಗ ಅವನು, “ಇಗೋ, ಇದ್ದೇನೆ,” ಎಂದನು.

17 ಏಲಿ ಅವನಿಗೆ, “ಸರ್ವೇಶ್ವರ ನಿನಗೆ ತಿಳಿಸಿದ್ದೇನು? ಅವರ ಮಾತುಗಳಲ್ಲಿ ಒಂದನ್ನಾದರೂ ಮರೆಮಾಡಬೇಡ; ಮಾಡಿದೆಯಾದರೆ ಸರ್ವೇಶ್ವರ ಇಷ್ಟಬಂದ ಹಾಗೆ ನಿನ್ನನ್ನು ದಂಡಿಸಲಿ,” ಎಂದು ಹೇಳಿದನು.

18 ಸಮುವೇಲನು ಮುಚ್ಚುಮರೆಯಿಲ್ಲದೆ ಎಲ್ಲವನ್ನೂ ತಿಳಿಸಿದನು. ಏಲಿ ಅದನ್ನು ಕೇಳಿ, “ಅವರೇ ಸರ್ವೇಶ್ವರ. ತಮಗೆ ಸರಿಕಂಡಂತೆ ಮಾಡಲಿ,” ಎಂದನು.

19 ಸಮುವೇಲನು ದೊಡ್ಡವನಾಗುತ್ತಾ ಬಂದನು. ಸರ್ವೇಶ್ವರ ಅವನೊಡನೆ ಇದ್ದರು. ಆದುದರಿಂದಲೆ ಅವನು ಪ್ರವಾದನೆ ಮಾಡಿದವುಗಳಲ್ಲಿ ಒಂದೂ ತಪ್ಪಿಹೋಗಲಿಲ್ಲ.

20 ಸರ್ವೇಶ್ವರ ಅವನನ್ನು ತಮ್ಮ ಪ್ರವಾದಿಯನ್ನಾಗಿ ನೇಮಿಸಿಕೊಂಡರು. ಈ ಸಂಗತಿ ದಾನ್ ಊರಿನಿಂದ ಬೇರ್ಷೆಬದವರೆಗಿದ್ದ ಎಲ್ಲ ಇಸ್ರಯೇಲರಿಗೆ ತಿಳಿಯಿತು.

21 ಸರ್ವೇಶ್ವರ, ಶಿಲೋವಿನಲ್ಲಿ ದರ್ಶನಕೊಡುವುದಕ್ಕೆ ಪ್ರಾರಂಭಿಸಿ ದೈವವಾಣಿಯ ಮೂಲಕ ಸಮುವೇಲನಿಗೆ ತಮ್ಮನ್ನೇ ಶೃತಪಡಿಸುತ್ತಾ ಬಂದರು. ಇಸ್ರಯೇಲರೆಲ್ಲರಿಗೆ ಸಮುವೇಲನು ಸರ್ವೇಶ್ವರನ ವಚನಗಳನ್ನು ತಿಳಿಸುತ್ತಾ ಇದ್ದನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು