Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಸಮುಯೇಲ 29 - ಕನ್ನಡ ಸತ್ಯವೇದವು C.L. Bible (BSI)


ದಾವೀದನು ಫಿಲಿಷ್ಟಿಯರಿಂದ ತಿರಸ್ಕೃತ

1 ಫಿಲಿಷ್ಟಿಯರು ತಮ್ಮ ಸೈನ್ಯವನ್ನು ಕೂಡಿಸಿಕೊಂಡು ಬಂದು ಅಫೇಕಿನಲ್ಲಿ ಪಾಳೆಯಮಾಡಿಕೊಂಡರು. ಇಸ್ರಯೇಲರು ಜೆಸ್ರೀಲ್ ಬೈಲಿನಲ್ಲಿರುವ ಬುಗ್ಗೆಯ ಬಳಿಯಲ್ಲಿ ಇಳಿದುಕೊಂಡರು.

2 ಫಿಲಿಷ್ಟಿಯ ರಾಜರುಗಳ ಸೈನಿಕರು ನೂರು ನೂರು ಮಂದಿಯಾಗಿ ಹಾಗು ಸಾವಿರ ಸಾವಿರ ಮಂದಿಯಾಗಿ ಬರುತ್ತಿರುವಾಗ ದಾವೀದನು ತನ್ನ ಜನರ ಸಹಿತವಾಗಿ ಆಕೀಷನ ಸಂಗಡ ಹಿಂಭಾಗದಲ್ಲಿದ್ದನು.

3 ಆಗ ಫಿಲಿಷ್ಟಿಯ ರಾಜರು, “ಈ ಹಿಬ್ರಿಯರು ಏಕೆ?” ಎಂದು ಆಕೀಷನನ್ನು ಕೇಳಿದರು. “ಈತ, ಇಸ್ರಯೇಲರ ಅರಸನಾದ ಸೌಲನ ಸೇವಕನಾದ ದಾವೀದನಲ್ಲವೇ? ಇವನು ಇಷ್ಟು ವರ್ಷ, ಇಷ್ಟು ದಿವಸಗಳಿಂದ ನನ್ನ ಬಳಿಯಲ್ಲೇ ಇದ್ದಾನೆ; ಸೌಲನನ್ನು ಬಿಟ್ಟು ನನ್ನ ಹತ್ತಿರ ಬಂದ ದಿವಸ ಮೊದಲುಗೊಂಡು ಇಂದಿನವರೆಗೂ ನಾನು ಇವನಲ್ಲಿ ಯಾವ ಅಪರಾಧವನ್ನೂ ಕಾಣಲಿಲ್ಲ,” ಎಂದು ಆಕೀಷನು ಉತ್ತರಕೊಟ್ಟನು.

4 ಆದರೆ ಆ ಫಿಲಿಷ್ಟಿಯ ರಾಜರುಗಳು ಅವನ ಮೇಲೆ ಕೋಪಗೊಂಡು, :ಈ ಮನುಷ್ಯನನ್ನು ಕಳುಹಿಸಿಬಿಡು; ಇವನು ಹಿಂದಿರುಗಿ ಹೋಗಿ ನೀನು ನೇಮಿಸಿದ್ದ ಸ್ಥಳದಲ್ಲೇ ವಾಸಿಸಲಿ; ನಮ್ಮ ಜೊತೆಯಲ್ಲಿ ಯುದ್ಧಕ್ಕೆ ಬರಬಾರದು. ಬಂದರೆ ನಮಗೇ ಶತ್ರುವಾಗಿ ನಿಂತಾನು. ಫಿಲಿಷ್ಟಿಯರ ತಲೆಗಳನ್ನು ಕಡುಯುವುದರಿಂದಲೇ ಇವನು ತನ್ನ ಯಜಮಾನನ ಮೆಚ್ಚಿಕೆಯನ್ನು ಪಡೆಯಬಹುದಲ್ಲವೇ?

5 ‘ಸೌಲನು ಕೊಂದನು ಸಾವಿರಗಟ್ಟಳೆ, ದಾವೀದನೋ ಕೊಂದನು ಹತ್ತು ಸಾವಿರಗಟ್ಟಳೆ,’ ಎಂದು ಮಹಿಳೆಯರು ಕುಣಿಯುತ್ತಾ ಪರಸ್ಪರವಾಗಿ ಹಾಡಿದ್ದು ಈ ದಾವೀದನನ್ನೇ ಕುರಿತು ಅಲ್ಲವೇ?’ ಎಂದರು.

6 ಆಗ ಆಕೀಷನು ದಾವೀದನನ್ನು ಕರೆದು, “ಸರ್ವೇಶ್ವರನಾಣೆ, ನೀನು ಯಥಾರ್ಥನು; ನೀನು ನನ್ನ ಸಂಗಡ ಪಾಳೆಯದಲ್ಲಿದ್ದುಕೊಂಡು ಯುದ್ಧಕ್ಕೆ ಹೋಗುತ್ತಾ ಬರುತ್ತಾ ಇರುವುದು ಯುಕ್ತವೆಂದು ನನಗೆ ತೋರಿತು. ನೀನು ಬಂದಂದಿನಿಂದ ಇಂದಿನವರೆಗೂ ನಿನ್ನಲ್ಲಿ ಯಾವ ದೋಷವನ್ನೂ ಕಾಣಲಿಲ್ಲ.

7 ಆದರೆ ರಾಜರುಗಳು ನಿನ್ನನ್ನು ಮೆಚ್ಚುವುದಿಲ್ಲ; ಆದುದರಿಂದ ನೀನು ಸಮಾಧಾನದಿಂದ ಹಿಂದಿರುಗಿ ಹೋಗು; ಅವರನ್ನು ಸಿಟ್ಟುಗೊಳಿಸಬಾರದು,” ಎಂದು ಹೇಳಿದನು.

8 ದಾವೀದನು ಆಕೀಷನಿಗೆ, “ನಾನೇನು ಮಾಡಿದೆ? ನಿಮ್ಮ ಸೇವಕನಾದ ನಾನು ನಿಮ್ಮ ಬಳಿಗೆ ಬಂದಂದಿನಿಂದ ಇಂದಿನವರೆಗೂ ನನ್ನಲ್ಲಿ ಯಾವ ಅಪರಾಧವನ್ನು ಕಂಡಿರಿ? ರಾಜರಾದ ನನ್ನ ಒಡೆಯರ ಜೊತೆಯಲ್ಲಿ ಹೋಗಿ ಅವರ ಶತ್ರುಗಳೊಡನೆ ನಾನೇಕೆ ಯುದ್ಧಮಾಡಬಾರದು? ಎಂದನು.

9 ಆಗ ಆಕೀಷನು ದಾವೀದನಿಗೆ, “ನೀನು ಒಳ್ಳೆಯವನೆಂದು ನನಗೆ ಗೊತ್ತಿದೆ; ನನ್ನ ದೃಷ್ಟಿಯಲ್ಲಿ ನೀನು ದೇವದೂತನಂತಿರುವೆ; ಆದರೆ ಫಿಲಿಷ್ಟಿಯದ ರಾಜರುಗಳು, ‘ಇವನು ನಮ್ಮ ಜೊತೆಯಲ್ಲಿ ಯುದ್ಧಕ್ಕೆ ಹೊರಡಬಾರದು’ ಎಂದು ಹೇಳುತ್ತಾರೆ;

10 ಆದ್ದರಿಂದ ನೀನೂ ನಿನ್ನ ಸಂಗಡ ಬಂದ ನಿನ್ನ ಒಡೆಯನ ಸೇವಕರೂ ನಾಳೆ ಬೆಳಿಗ್ಗೆ ಎದ್ದು ಹೊತ್ತುಮೂಡಿದ ಕೂಡಲೆ ಹಿಂದಿರುಗಿಹೋಗಿ,” ಎಂದು ಹೇಳಿದನು.

11 ದಾವೀದನು ತನ್ನ ಜನರೊಡನೆ ಬೆಳಿಗ್ಗೆ ಎದ್ದು ಹಿಂದಿರುಗಿ ಫಿಲಿಷ್ಟಿಯರ ದೇಶಕ್ಕೆ ಹೊರಟನು. ಫಿಲಿಷ್ಟಿಯರು ಜೆಸ್ರೀಲಿಗೆ ಹೋದರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು