Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಸಮುಯೇಲ 28 - ಕನ್ನಡ ಸತ್ಯವೇದವು C.L. Bible (BSI)


ಫಿಲಿಷ್ಟಿಯರಿಗೂ ಇಸ್ರಯೇಲರಿಗೂ ಯುದ್ಧ

1 ಆ ಕಾಲದಲ್ಲಿ ಫಿಲಿಷ್ಟಿಯರು ಇಸ್ರಯೇಲರೊಡನೆ ಯುದ್ಧಮಾಡುವುದಕ್ಕಾಗಿ ಸೈನ್ಯವನ್ನು ಕೂಡಿಸತೊಡಗಿದರು. ಆಗ ಆಕೀಷನು ದಾವೀದನಿಗೆ, “ನೀನೂ ನಿನ್ನ ಜನರೂ ಯುದ್ಧಕ್ಕೆ ನನ್ನ ಜೊತೆಯಲ್ಲೇ ಬರಬೇಕೆಂಬುದು ನಿನಗೆ ಗೊತ್ತಿದೆಯಲ್ಲವೇ?’ ಎಂದನು.

2 ದಾವೀದನು, “ಹೌದು, ತಮ್ಮ ಸೇವಕನ ಸಾಹಸ ತಮಗೇ ಗೊತ್ತಾಗುವುದು,” ಎಂದನು. ಆಕೀಷನು, “ಹಾಗಾದರೆ ಯುದ್ಧಕಾಲದಲ್ಲೆಲ್ಲಾ ನಿನ್ನನ್ನೇ ನನ್ನ ಮೈಗಾವಲಿಗೆ ನೇಮಿಸಿಕೊಳ್ಳುತ್ತೇನೆ,” ಎಂದನು.


ಜಯಾಪಜಯಗಳ ಬಗ್ಗೆ ಮಾಂತ್ರಿಕರ ಹೇಳಿಕೆ

3 ಸಮುವೇಲನು ಮರಣಹೊಂದಿದ್ದನು. ಇಸ್ರಯೇಲರು ಅವನಿಗಾಗಿ ಸಂತಾಪ ಸೂಚಿಸುತ್ತಾ ಅವನ ಶವವನ್ನು ಅವನ ಸ್ವಂತ ಊರಾದ ರಾಮಾದಲ್ಲಿ ಸಮಾಧಿಮಾಡಿದ್ದರು. ಸೌಲನು ಭೂತಪ್ರೇತಗಳನ್ನು ವಿಚಾರಿಸುವವರನ್ನೂ ಬೇತಾಳಿಕರನ್ನೂ ನಾಡಿನಿಂದ ಹೊರಡಿಸಿಬಿಟ್ಟಿದ್ದನು.

4 ಫಿಲಿಷ್ಟಿಯರು ಸೈನ್ಯಕೂಡಿಸಿಕೊಂಡು ಬಂದು ಶೂನೇಮಿನಲ್ಲಿ ಪಾಳೆಯಮಾಡಿಕೊಂಡಿದ್ದರು. ಸೌಲನು ಸಮಸ್ತ ಇಸ್ರಯೇಲರೊಡನೆ ಬಂದು ಗಿಲ್ಬೋವದಲ್ಲಿ ಇಳಿದುಕೊಂಡನು.

5 ಫಿಲಿಷ್ಟಿಯರ ಪಾಳೆಯವನ್ನು ಕಂಡಾಗ ಭಯಭೀತಿಯಿಂದ ಅವನ ಎದೆಯೊಡೆಯಿತು.

6 ಸರ್ವೇಶ್ವರನ ಸನ್ನಿಧಿಯಲ್ಲಿ ವಿಚಾರಿಸುವುದರಿಂದಾಗಲಿ, ಕನಸುಗಳಿಂದಾಗಲಿ, ಊರಿಮಿನಿಂದಾಗಲಿ ಪ್ರವಾದಿಗಳಿಂದಾಗಲಿ ಅವನಿಗೆ ಉತ್ತರ ಸಿಗಲಿಲ್ಲ.

7 ಆದುದರಿಂದ ಅವನು ತನ್ನ ಸೇವಕರಿಗೆ, “ಭೂತಪ್ರೇತಗಳಲ್ಲಿ ವಿಚಾರಿಸಬಲ್ಲ ಒಬ್ಬ ಸ್ತ್ರೀಯನ್ನು ಹುಡುಕಿರಿ; ನಾನು ಆಕೆಯ ಬಳಿಗೇ ಹೋಗಿ ವಿಚಾರಿಸುವೆನು,” ಎಂದು ಹೇಳಿದನು. ಅವರು, “ಅಂಥವಳೊಬ್ಬಳು ಏಂದೋರಿನಲ್ಲಿದ್ದಾಳೆ,” ಎಂದರು.

8 ಆಗ ಸೌಲನು ಉಡಿಗೆತೊಡಿಗೆಗಳಿಂದ ತನ್ನನ್ನು ಮಾರ್ಪಡಿಸಿಕೊಂಡು ಇಬ್ಬರು ಸೇವಕರೊಡನೆ ಹೊರಟು ರಾತ್ರಿಯಲ್ಲಿ ಆಕೆಯ ಮನೆಗೆ ಬಂದನು. “ದಯವಿಟ್ಟು ನನಗಾಗಿ ಭೂತಪ್ರೇತಗಳಲ್ಲಿ ವಿಚಾರಿಸಿ ಶಾಸ್ತ್ರ ಹೇಳು; ನಾನು ಯಾವನ ಹೆಸರು ಹೇಳುತ್ತೇನೋ ಅವನನ್ನು ಇಲ್ಲಿಗೆ ಬರಮಾಡು,” ಎಂದು ಆಕೆಯನ್ನು ಬೇಡಿಕೊಂಡನು.

9 ಆಗ ಆಕೆ ಅವನಿಗೆ, “ಸೌಲನು ಮಾಡಿದ್ದು ನಿನಗೆ ಗೊತ್ತುಂಟು; ಅವನು ಭೂತಪ್ರೇತಗಳನ್ನು ವಿಚಾರಿಸುವವರನ್ನು ಹಾಗು ಬೇತಾಳಿಕರನ್ನು ನಾಡಿನಿಂದ ಹೊರಡಿಸಿಬಿಟ್ಟನಲ್ಲವೇ? ಹೀಗಿದ್ದರೂ ನಾನು ಸಾಯುವಂತೆ ನೀನು ನನ್ನ ಪ್ರಾಣಕ್ಕೆ ಉರಲೊಡ್ಡುವುದೇಕೆ?” ಎಂದಳು.

10 ಅದಕ್ಕೆ ಸೌಲನು, ” ಸರ್ವೇಶ್ವರನಾಣೆ, ಈ ವಿಷಯದಲ್ಲಿ ನೀನು ದಂಡನೆಗೆ ಗುರಿಯಾಗುವುದಿಲ್ಲ,” ಎಂದು ಆಕೆಗೆ ಸರ್ವೇಶ್ವರನ ಹೆಸರಿನಲ್ಲಿ ಪ್ರಮಾಣ ಮಾಡಿದನು.

11 ಆಗ ಆ ಸ್ತ್ರೀ, “ನಿನಗೆ ಯಾರನ್ನು ಬರಮಾಡಬೇಕು?” ಎಂದಳು. “ಸಮುವೇಲನನ್ನು,” ಎಂದು ಉತ್ತರಕೊಟ್ಟನು.

12 ಆ ಸ್ತ್ರೀ ಸಮುವೇಲನನ್ನು ಕಂಡಕೂಡಲೆ ಗಟ್ಟಿಯಾಗಿ ಕೂಗಿ ಸೌಲನಿಗೆ, “ನೀನು ನನ್ನನ್ನು ವಂಚಿಸಿದ್ದೇಕೆ? ನೀನು ಸೌಲನಲ್ಲವೇ?,” ಎಂದಳು.

13 ಆಗ ಅರಸನು, “ಹೆದರಬೇಡ, ನಿನಗೇನು ಕಾಣಿಸುತ್ತದೆ?” ಎಂದು ಆಕೆಯನ್ನು ಕೇಳಿದನು. “ಭೂಮಿಯೊಳಗಿಂದ ಪ್ರೇತಾತ್ಮವೊಂದು ಬರುತ್ತಿರುವುದನ್ನು ನೋಡುತ್ತಿದ್ದೇನೆ,” ಎಂದು ಉತ್ತರಕೊಟ್ಟಳು.

14 ಅವನು ಮತ್ತೆ, “ಅವನ ರೂಪ ಹೇಗಿದೆ?” ಎಂದು ಕೇಳಿದನು. ಆಕೆ, “ನಿಲುವಂಗಿಯನ್ನು ತೊಟ್ಟುಕೊಂಡ ಒಬ್ಬ ಮುದುಕ ಬರುತ್ತಿದ್ದಾನೆ,” ಎಂದು ಹೇಳಿದಳು. ಅವನು ಸಮುವೇಲನೇ ಎಂದು ಸೌಲನು ತಿಳಿದು ನೆಲದಮಟ್ಟಿಗೂ ಬಾಗಿ ನಮಸ್ಕರಿಸಿದನು.

15 ಆಗ ಸಮುವೇಲನು ಸೌಲನನ್ನು, “ನೀನು ನನ್ನ ವಿಶ್ರಾಂತಿಯನ್ನು ಕೆಡಿಸಿದ್ದೇಕೆ? ನನ್ನನ್ನು ಇಲ್ಲಿಗೆ ಏಕೆ ಬರಮಾಡಿದೆ?” ಎಂದು ಕೇಳಿದನು. ಅದಕ್ಕೆ ಸೌಲನು, “ನಾನು ಬಲು ಇಕ್ಕಟ್ಟಿನಲ್ಲಿ ಇದ್ದೇನೆ; ಫಿಲಿಷ್ಟಿಯರು ನನಗೆ ವಿರೋಧವಾಗಿ ಯುದ್ಧಕ್ಕೆ ಬಂದಿದ್ದಾರೆ; ದೇವರು ನನ್ನನ್ನು ಕೈಬಿಟ್ಟು ದೂರಹೋಗಿದ್ದಾರೆ; ಅವರು ನನಗೆ ಪ್ರವಾದಿಗಳಿಂದಾಗಲಿ, ಕನಸುಗಳಿಂದಾಗಲಿ ಉತ್ತರಕೊಡಲೊಲ್ಲರು. ಆದುದರಿಂದ ನಾನು ಮಾಡಬೇಕಾದುದನ್ನು ನೀನು ತಿಳಿಸುವೆಯೆಂದು ನಿನ್ನನ್ನು ಇಲ್ಲಿಗೆ ಬರಮಾಡಿದೆನು,” ಎಂದನು.

16 ಆಗ ಸಮುವೇಲನು, “ಸರ್ವೇಶ್ವರ ನಿನ್ನನ್ನು ಕೈಬಿಟ್ಟು ನಿನಗೆ ವಿರೋಧಿಯಾದ ಮೇಲೆ ನೀನು ನನ್ನನ್ನು ವಿಚಾರಿಸುವುದೇಕೆ?

17 ಅವರು ನನ್ನ ಮುಖಾಂತರ ನಿನಗೆ ಹೇಳಿದ್ದನ್ನು ನೆರವೇರಿಸಿದ್ದಾರೆ; ರಾಜ್ಯವನ್ನು ನಿನ್ನಿಂದ ಕಿತ್ತುಕೊಂಡು ನಿನ್ನ ನೆರೆಯವನಾದ ದಾವೀದನಿಗೆ ಕೊಟ್ಟಿದ್ದಾರೆ.

18 ನೀನು ಸರ್ವೇಶ್ವರನ ಮಾತನ್ನು ಕೇಳಲಿಲ್ಲ; ಅವರು ಅಮಾಲೇಕ್ಯರ ಮೇಲೆ ಉಗ್ರಕೋಪಗೊಂಡು ಮಾಡಿದ ಕೋಪಾಜ್ಞೆಯನ್ನು ನೀನು ನೆರವೇರಿಸಲಿಲ್ಲ. ಆದುದರಿಂದಲೇ ಸರ್ವೇಶ್ವರ ಈಗ ನಿನಗೆ ಹೀಗೆ ಮಾಡುತ್ತಾರೆ.

19 ನಿನ್ನ ಸಮೇತ ಇಸ್ರಯೇಲರನ್ನು ಫಿಲಿಷ್ಟಿಯರ ಕೈಗೆ ಒಪ್ಪಿಸುವರು. ನಾಳೆ ನೀನೂ ನಿನ್ನ ಮಕ್ಕಳೂ ನಾನಿರುವಲ್ಲಿಗೆ ಬರುವಿರಿ. ಸರ್ವೇಶ್ವರ ಇಸ್ರಯೇಲ್ ಸೈನ್ಯವನ್ನು ಫಿಲಿಷ್ಟಿಯರ ಕೈಗೆ ಒಪ್ಪಿಸುವರು,” ಎಂದು ಹೇಳಿದನು.

20 ಸೌಲನು ಸಮುವೇಲನ ಮಾತುಗಳನ್ನು ಕೇಳಿದ ಕೂಡಲೆ ದಿಗ್ಭ್ರಾಂತನಾಗಿ ನೆಲದ ಮೇಲೆ ಕೈಕಾಲು ಚಾಚಿಬಿದ್ದನು. ಅವನು ಇಡೀ ದಿವಸ ಊಟಮಾಡಿರಲಿಲ್ಲ. ಆದುದರಿಂದ ಅವನಲ್ಲಿ ಬಲವೇ ಇರಲಿಲ್ಲ.

21 ಆ ಸ್ತ್ರೀ ಸೌಲನ ಹತ್ತಿರಕ್ಕೆ ಬಂದು ಅವನು ಬಹುಭೀತನಾಗಿದ್ದಾನೆಂದು ಕಂಡು, “ನಿಮ್ಮ ದಾಸಿಯಾದ ನಾನು ನಿಮ್ಮ ಮಾತು ಕೇಳಿದೆನು; ಕೈಯಲ್ಲಿ ಜೀವ ಹಿಡಿದವಳಾಗಿ ನಿಮ್ಮ ಅಪ್ಪಣೆಯನ್ನು ನೆರವೇರಿಸಿದೆನು.

22 ಆದುದರಿಂದ ಈಗ ನೀವು ದಯವಿಟ್ಟು ನಿಮ್ಮ ದಾಸಿಯ ಮಾತನ್ನು ಕೇಳಬೇಕು. ಸ್ವಲ್ಪ ಆಹಾರ ತರುತ್ತೇನೆ, ಪ್ರಯಾಣಕ್ಕೆ ಬಲಬರುವ ಹಾಗೆ ಅದನ್ನು ಊಟಮಾಡಿ,” ಎಂದು ಹೇಳಿದಳು.

23 ಅವನು, “ಒಲ್ಲೆ; ಊಟಮಾಡುವುದಿಲ್ಲ,” ಎಂದನು. ಆದರೆ, ಅವನ ಸೇವಕರೂ ಆ ಸ್ತ್ರೀಯೂ ಬಹಳವಾಗಿ ಬೇಡಿಕೊಂಡಿದ್ದರಿಂದ ಅವನು ಕಡೆಗೆ ಅವರ ಮಾತಿಗೆ ಒಪ್ಪಿ ನೆಲದಿಂದೆದ್ದು ಮಂಚದ ಮೇಲೆ ಕುಳಿತುಕೊಂಡನು.

24 ಆ ಸ್ತ್ರೀಗೆ ಮನೆಯಲ್ಲಿ ಒಂದು ಕೊಬ್ಬಿದ ಕರುವಿತ್ತು. ಆಕೆ ಶೀಘ್ರವಾಗಿ ಅದನ್ನು ಕೊಯ್ದು, ಪಕ್ವಮಾಡಿ, ಹಿಟ್ಟನ್ನು ತೆಗೆದುಕೊಂಡು ನಾದಿ, ಹುಳಿಯಿಲ್ಲದ ರೊಟ್ಟಿಗಳನ್ನು ಸುಟ್ಟು,

25 ಸೌಲನಿಗೂ ಅವನ ಸೇವಕರಿಗೂ ಬಡಿಸಿದಳು. ಅವರು ಊಟಮಾಡಿ ಅದೇ ರಾತ್ರಿ ಹೊರಟುಹೋದರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು