1 ಸಮುಯೇಲ 27 - ಕನ್ನಡ ಸತ್ಯವೇದವು C.L. Bible (BSI)ಫಿಲಿಷ್ಟಿಯರ ನಡುವೆ ದಾವೀದನು 1 ದಾವೀದನು ತನ್ನ ಮನಸ್ಸಿನಲ್ಲೇ, “ನಾನು ಇಲ್ಲಿದ್ದರೆ ಹೇಗೂ ಒಂದು ದಿನ ಸೌಲನ ಕೈಯಿಂದ ಮಡಿಯಲೇ ಬೇಕು. ಆದುದರಿಂದ ಫಿಲಿಷ್ಟಿಯರ ದೇಶಕ್ಕೆ ಹೋಗಿ ತಪ್ಪಿಸಿಕೊಳ್ಳುವುದೇ ಉತ್ತಮ. ಆಮೇಲೆ ಸೌಲನು ಇಸ್ರಯೇಲ್ ಪ್ರಾಂತ್ಯಗಳಲ್ಲಿ ನನ್ನನ್ನು ಹುಡುಕುವುದನ್ನು ಬಿಟ್ಟುಬಿಡುವನು. ನಾನು ಅವನ ಕೈಯಿಂದ ತಪ್ಪಿಸಿಕೊಂಡು ಸುರಕ್ಷಿತನಾಗಿರುವೆನು,” ಎಂದುಕೊಂಡನು. 2 ಅಂತೆಯೇ ಅವನು ತನ್ನ ಆರುನೂರು ಮಂದಿ ಸೈನಿಕರೊಡನೆ ಗತ್ ಊರಿನ ಅರಸನೂ ಮಾವೋಕನ ಮಗನೂ ಆದ ಆಕೀಷನ ಬಳಿಗೆ ಹೋದನು. 3 ಅವನೂ ಅವನ ಜನರೂ ತಮ್ಮ ತಮ್ಮ ಕುಟುಂಬಸಹಿತವಾಗಿ ಆಕೀಷನ ಊರಾದ ಗತ್ ಊರಿನಲ್ಲಿ ನೆಲೆಸಿದರು. ದಾವೀದನ ಹೆಂಡತಿಯರಾಗಿದ್ದ ಜೆಸ್ರೀಲಿನವಳಾದ ಅಹೀನೋವಮಳು ಹಾಗು ಕರ್ಮೇಲ್ಯನಾದ ನಾಬಾಲನ ಹೆಂಡತಿ ಆಗಿದ್ದ ಅಬೀಗೈಲಳು ಅವನ ಸಂಗಡ ಇದ್ದರು. 4 ದಾವೀದನು ತಪ್ಪಿಸಿಕೊಂಡು ಗತ್ ಊರಿಗೆ ಹೋದನೆಂಬ ವರ್ತಮಾನವನ್ನು ಸೌಲನು ಕೇಳಿದ ಮೇಲೆ ಅವನನ್ನು ಬೆನ್ನಟ್ಟಿಹೋಗುವುದನ್ನು ಬಿಟ್ಟುಬಿಟ್ಟನು. 5 ಒಂದು ದಿನ ದಾವೀದನು ಆಕೀಷನಿಗೆ, “ನಿಮ್ಮ ಸೇವಕನಾದ ನಾನು ನಿಮ್ಮ ಸಂಗಡ ರಾಜಧಾನಿಯಲ್ಲೇಕೆ ವಾಸಿಸಬೇಕು? ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರಕಿರುವುದಾದರೆ ಯಾವುದಾದರೊಂದು ಹಳ್ಳಿಯಲ್ಲಿ ನನಗೆ ಸ್ಥಳಕೊಡಿಸಿ; ನಾನು ಅಲ್ಲೆ ವಾಸಿಸುವೆನು,” ಎಂದನು. 6 ಆಕೀಷನು ಕೂಡಲೆ ಅವನಿಗೆ ಚಿಕ್ಲಗ್ ಊರನ್ನು ಕೊಟ್ಟನು. ಆದುದರಿಂದ “ಚಿಕ್ಲಗ್” ಎಂಬುದು ಇಂದಿನವರೆಗೂ ಯೆಹೂದ ಅರಸರಿಗೆ ಸೇರಿದೆ. 7 ದಾವೀದನು ಫಿಲಿಷ್ಟಿಯರ ದೇಶದಲ್ಲಿ ಒಂದು ವರ್ಷ ಮತ್ತು ನಾಲ್ಕು ತಿಂಗಳು ವಾಸವಾಗಿದ್ದನು. 8 ಈ ಅವಧಿಯಲ್ಲಿ ಅವನು ಮತ್ತು ಅವನ ಜನರು ಗೆಷೂರ್ಯರ ಮೇಲೆ, ಗಿಜ್ರೀಯರ ಮೇಲೆ ಹಾಗು ಅಮಾಲೇಕ್ಯರ ಮೇಲೆ ದಾಳಿಮಾಡುತ್ತಿದ್ದರು. ಇವರುಗಳ ಪ್ರಾಂತ್ಯಗಳು ತೇಲಾಮಿನಿಂದ ಶೂರಿನವರೆಗೂ ಹಾಗು ಈಜಿಪ್ಟಿನವರೆಗೂ ವಿಸ್ತರಿಸಿತ್ತು. 9 ಸ್ತ್ರೀಪುರುಷರಲ್ಲಿ ಒಬ್ಬರನ್ನೂ ಉಳಿಸದೆ ದೇಶದ ನಿವಾಸಿಗಳನ್ನೆಲ್ಲ ಕೊಂದು, ದನ, ಕುರಿ, ಕತ್ತೆ, ಒಂಟೆ, ಉಡುಗೊರೆ ಇವುಗಳನ್ನು ತೆಗೆದುಕೊಂಡು ದಾವೀದನು ಆಕೀಷನ ಬಳಿಗೆ ಹೋಗುತ್ತಿದ್ದನು. 10 ಆಕೀಷನು, “ಈ ಹೊತ್ತು ಯಾವ ಪ್ರಾಂತ್ಯದವರನ್ನು ಸೂರೆಮಾಡಿಕೊಂಡು ಬಂದಿರಿ?” ಎಂದು ಕೇಳುತ್ತಿದ್ದನು. ದಾವೀದನು ಅವನಿಗೆ, ದಕ್ಷಿಣ ಪ್ರಾಂತ್ಯದಲ್ಲಿರುವ ಯೆಹೂದ್ಯರು, ಎರಹ್ಮೇಲ್ಯರು, ಕೇನ್ಯರು ಇವರಲ್ಲಿ ಯಾರ ಹೆಸರನ್ನಾದರೂ ಹೇಳುತ್ತಿದ್ದನು. 11 ದಾವೀದನು ತನ್ನ ಕೃತ್ಯವನ್ನು ಜನರು ಹರಡಬಹುದೆಂದು ನೆನೆಸಿ ಅವನು ಯಾರನ್ನೂ ಗತ್ ಊರಿಗೆ ತಾರದೆ ಸ್ತ್ರೀಪುರುಷರನ್ನೆಲ್ಲ ಅಲ್ಲೇ ಕೊಂದುಹಾಕುತ್ತಿದ್ದನು. ಅವನು ಫಿಲಿಷ್ಟಿಯರ ದೇಶದಲ್ಲಿ ವಾಸವಾಗಿದ್ದ ಅವಧಿಯಲ್ಲಿ ಇದೇ ರೀತಿ ಮಾಡುತ್ತಿದ್ದನು. 12 “ದಾವೀದನ ಹೆಸರು ಸ್ವಜನರಾದ ಇಸ್ರಯೇಲರಲ್ಲೇ ತಿರಸ್ಕೃತವಾಗಿದೆ. ಆದುದರಿಂದ ಇವನು ಎಂದೆಂದಿಗೂ ತನ್ನ ಅಧೀನನಾಗಿಯೇ ಇರುವನು,” ಎಂದು ಆಕೀಷನು ನಂಬಿದ್ದನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India