Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಸಮುಯೇಲ 23 - ಕನ್ನಡ ಸತ್ಯವೇದವು C.L. Bible (BSI)


ಕೆಯೀಲಾ ಊರಿನಲ್ಲಿ ದಾವೀದನು

1 ಫಿಲಿಷ್ಟಿಯರು ಕೆಯೀಲಾಕ್ಕೆ ಮುತ್ತಿಗೆ ಹಾಕಿ ಅಲ್ಲಿನ ಕಣಗಳನ್ನು ಸೂರೆಮಾಡುತ್ತಿದ್ದಾರೆಂದು ದಾವೀದನಿಗೆ ತಿಳಿಸಲಾಯಿತು.

2 ಅವನು, “ನಾನು ಹೋಗಿ ಆ ಫಿಲಿಷ್ಟಿಯರ ಮೇಲೆ ದಾಳಿಮಾಡಲೆ?” ಎಂದು ಸರ್ವೇಶ್ವರನನ್ನು ಕೇಳಿದನು. ಸರ್ವೇಶ್ವರ ಅವನಿಗೆ, “ಹೋಗಿ ಫಿಲಿಷ್ಟಿಯರ ಮೇಲೆ ದಾಳಿಮಾಡಿ ಕೆಯೀಲಾ ಊರನ್ನು ರಕ್ಷಿಸು,” ಎಂದು ಉತ್ತರಕೊಟ್ಟರು.

3 ಆದರೆ ದಾವೀದನ ಸೈನಿಕರು ಅವನಿಗೆ, “ನಮಗೆ ಯೆಹೂದ ನಾಡಿನಲ್ಲಿಯೇ ಇಷ್ಟು ಆಪತ್ತುಗಳು ಇರುವಲ್ಲಿ ಫಿಲಿಷ್ಟಿಯ ಸೈನ್ಯದೊಡನೆ ಯುದ್ಧಮಾಡುವುದಕ್ಕಾಗಿ ಕೆಯೀಲಾಕ್ಕೆ ಹೋದರೆ ಅಲ್ಲಿ ಎಷ್ಟೋ ಅಧಿಕವಾದ ಗಂಡಾಂತರಗಳು ಕಾದಿರಬಹುದಲ್ಲವೆ?” ಎಂದರು.

4 ಆದುದರಿಂದ ಮತ್ತೆ ಸರ್ವೇಶ್ವರನನ್ನು ಕೇಳಿದನು. ಅವರು, “ನೀನೆದ್ದು ಕೆಯೀಲಾಕ್ಕೆ ಹೋಗು; ನಾನು ಫಿಲಿಷ್ಟಿಯರನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು,” ಎಂದು ಉತ್ತರಕೊಟ್ಟರು.

5 ಆಗ ದಾವೀದನು ತನ್ನ ಜನರೊಡನೆ ಕೆಯೀಲಾಕ್ಕೆ ಹೋಗಿ ಫಿಲಿಷ್ಟಿಯರೊಡನೆ ಯುದ್ಧಮಾಡಿದನು. ಅವರನ್ನು ಪೂರ್ಣವಾಗಿ ಸೋಲಿಸಿ, ಅವರ ಪಶುಗಳನ್ನು ತೆಗೆದುಕೊಂಡು ಕೆಯೀಲಾದವರನ್ನು ಕಾಪಾಡಿದನು.

6 ದಾವೀದನ ಬಳಿಗೆ ಓಡಿಬಂದಿದ್ದ ಅಹೀಮೆಲೆಕನ ಮಗನಾದ ಎಬ್ಯಾತಾರನು ಕೆಯೀಲಕ್ಕೆ ಬರುವಾಗ ‘ಏಫೋದ’ನ್ನು ತಂದಿದ್ದನು.

7 ದಾವೀದನು ಕೆಯೀಲಾದಲ್ಲಿದ್ದಾನೆಂಬ ಸಮಾಚಾರ ಸೌಲನಿಗೆ ಮುಟ್ಟಿತು. ಆಗ ಅವನು, “ದೇವರು ದಾವೀದನನ್ನು ನನ್ನ ಕೈಗೆ ಒಪ್ಪಿಸಿದ್ದಾರೆ. ಅವನು ಅಗುಳಿಕದಗಳಿಂದ ಭದ್ರವಾಗಿರುವ ಕೋಟೆಯನ್ನು ಪ್ರವೇಶಿಸಿದ್ದಾನಲ್ಲವೆ? ಅವನು ಅಲ್ಲಿಂದ ತಪ್ಪಿಸಿಕೊಳ್ಳಲಾರನು,” ಎಂದುಕೊಂಡನು.

8 ಕೆಯೀಲಾದಲ್ಲಿದ್ದ ದಾವೀದನನ್ನೂ ಅವನ ಜನರನ್ನೂ ಹಿಡಿಯುವುದಕ್ಕಾಗಿ ಸೈನ್ಯವನ್ನು ಕೂಡಿಸಿದನು.

9 ಸೌಲನು ತನಗೆ ಕೇಡುಮಾಡಬೇಕೆಂದಿದ್ದಾನೆಂದು ದಾವೀದನು ತಿಳಿದು ಯಾಜಕನಾದ ಎಬ್ಯಾತಾರನಿಗೆ, “ಏಫೋದನ್ನು ಇಲ್ಲಿಗೆ ತೆಗೆದುಕೊಂಡು ಬಾ,” ಎಂದು ಹೇಳಿ ತರಿಸಿ,

10 “ಇಸ್ರಯೇಲ್ ದೇವರಾದ ಸರ್ವೇಶ್ವರಾ, ಸೌಲನು ಕೆಯೀಲಾಕ್ಕೆ ಬಂದು ನನ್ನ ನಿಮಿತ್ತ ಪಟ್ಟಣವನ್ನು ಹಾಳುಮಾಡಬೇಕೆಂದಿದ್ದಾನೆ ಎಂದು ನಿಮ್ಮ ದಾಸನಾದ ನನಗೆ ಸುದ್ದಿಬಂದಿದೆ.

11 ನಾನು ಕೇಳಿದ ಸುದ್ದಿಯಂತೆ ಅವನು ನಿಜವಾಗಿ ಬರುವನೇ? ಕೆಯೀಲಾ ಪುರಜನರು ನನ್ನನ್ನು ಅವನ ಕೈಗೆ ಒಪ್ಪಿಸುವರೇ? ಇಸ್ರಯೇಲ ದೇವರಾದ ಸರ್ವೇಶ್ವರಾ, ಈ ವಿಷಯದಲ್ಲಿ ಉತ್ತರ ದಯಪಾಲಿಸಿ,” ಎಂದು ಪ್ರಾರ್ಥಿಸಿದನು. ಸೌಲನು ಬರುವನೆಂಬುದಾಗಿ ಸರ್ವೇಶ್ವರನಿಂದ ಉತ್ತರ ಸಿಕ್ಕಿತು.

12 ದಾವೀದನು ಪುನಃ ಸರ್ವೇಶ್ವರನನ್ನು, ಕೆಯೀಲಾದವರು ನನ್ನನ್ನೂ ನನ್ನ ಜನರನ್ನೂ ಸೌಲನ ಕೈಗೆ ಒಪ್ಪಿಸುವರೇ?” ಎಂದು ಕೇಳಿದಾಗ ಅವರು, “ಒಪ್ಪಿಸಿಕೊಡುವರು,” ಎಂದು ಉತ್ತರಕೊಟ್ಟರು.

13 ಆಗ ದಾವೀದನು ತನ್ನ ಸಂಗಡ ಇದ್ದ ಆರುನೂರು ಜನರ ಸಹಿತವಾಗಿ ಕೆಯೀಲಾ ಊರನ್ನು ಬಿಟ್ಟು ಎಲ್ಲೆಲ್ಲಿಯೋ ಅಲೆದಾಡಿದನು. ದಾವೀದನು ಕೆಯೀಲಾದಿಂದ ತಪ್ಪಿಸಿಕೊಂಡನು ಎಂದು ಸೌಲನಿಗೆ ಗೊತ್ತಾಗಲು ಅವನು ಪ್ರಯಾಣವನ್ನು ನಿಲ್ಲಿಸಿಬಿಟ್ಟನು.


ಗುಡ್ಡಪ್ರದೇಶಗಳಲ್ಲಿ ದಾವೀದ

14 ಅನಂತರ ದಾವೀದನು ಮರುಭೂಮಿಯಲ್ಲಿರುವ ಆಯಾ ಆಶ್ರಯಗಿರಿಗಳಲ್ಲಿ ಇರುತ್ತಿದ್ದನು. ಕಡೆಗೆ ಜೀಫ್ ಮರುಭೂಮಿಯ ಪರ್ವತಪ್ರಾಂತ್ಯಕ್ಕೆ ಬಂದು ಅಲ್ಲಿ ವಾಸಮಾಡಿದನು. ದಿನಂಪ್ರತಿ ಹುಡುಕುತ್ತಿದ್ದರೂ ದೇವರು ಆತನನ್ನು ಸೌಲನ ಕೈಗೆ ಒಪ್ಪಿಸಲಿಲ್ಲ.

15 ಸೌಲನು ತನ್ನನ್ನು ಕೊಲ್ಲಲು ಹೊರಟಿದ್ದಾನೆಂದು ದಾವೀದನು ತಿಳಿದು ಜೀಫ್ ಮರುಭೂಮಿಯ ಹೋರೆಷದಲ್ಲಿ ಅಡಗಿಕೊಂಡಿದ್ದನು.

16 ಆಗ ಸೌಲನ ಮಗ ಯೋನಾತಾನನು ಅಲ್ಲಿಗೆ ಹೋಗಿ,

17 ದಾವೀದನಿಗೆ, “ಭಯಪಡಬೇಡ; ನೀನು ನನ್ನ ತಂದೆಯಾದ ಸೌಲನ ಕೈಗೆ ಸಿಕ್ಕಿಬೀಳುವುದಿಲ್ಲ; ನೀನು ಇಸ್ರಯೇಲರ ಅರಸನಾಗುವೆ; ನಾನು ನಿನಗೆ ಎರಡನೆಯವನಾಗಿರುವೆನು. ಹೀಗಾಗುವುದೆಂದು ನನ್ನ ತಂದೆ ಸೌಲ ತಿಳಿದುಕೊಂಡಿದ್ದಾರೆ.” ಎಂದು ಹೇಳಿ ದೇವರ ಹೆಸರಿನಲ್ಲಿ ಧೈರ್ಯತುಂಬಿದನು.

18 ಅವರಿಬ್ಬರೂ ಸರ್ವೇಶ್ವರನ ಸನ್ನಿಧಿಯಲ್ಲಿ ಒಪ್ಪಂದಮಾಡಿಕೊಂಡರು. ತರುವಾಯ ಯೋನಾತಾನನು ತನ್ನ ಮನೆಗೆ ಹೋದನು. ದಾವೀದನು ಹೋರೆಷದಲ್ಲಿಯೇ ಇದ್ದನು.

19 ಜೀಫ್ಯರು ಗಿಬೆಯದಲ್ಲಿದ್ದ ಸೌಲನ ಬಳಿಗೆ ಬಂದು, “ಒಡೆಯಾ, ಆಲಿಸಬೇಕು; ದಾವೀದನು ನಮ್ಮ ಪ್ರಾಂತ್ಯಕ್ಕೆ ಸೇರಿದ ಹೋರೆಷದ ಗಿರಿಗಳಲ್ಲಿ ಅಂದರೆ ಮರುಭೂಮಿಯ ದಕ್ಷಿಣದಲ್ಲಿ ಇರುವ ಹಕೀಲಾ ಬೆಟ್ಟದಲ್ಲಿ ಅಡಗಿಕೊಂಡಿದ್ದಾನೆ.

20 ಅರಸರು ಕುತೂಹಲದಂತೆ ನಮ್ಮ ಜೊತೆಯಲ್ಲಿ ಬರೋಣವಾಗಲಿ; ಅವನನ್ನು ತಮ್ಮ ಕೈಗೆ ಒಪ್ಪಿಸುವ ಕೆಲಸ ನಮ್ಮದು,” ಎಂದು ಹೇಳಿದರು.

21 ಆಗ ಸೌಲನು ಅವರಿಗೆ, “ನೀವು ನನ್ನ ಮೇಲೆ ಕನಿಕರಪಟ್ಟದ್ದರಿಂದ ಸರ್ವೇಶ್ವರನ ಆಶೀರ್ವಾದ ನಿಮ್ಮ ಮೇಲಿರಲಿ!

22 ನೀವು ದಯವಿಟ್ಟು ಹೋಗಿ ಅವನು ತಿರುಗಾಡುವ ಸ್ಥಳವನ್ನೂ ಅಲ್ಲಿ ಅವನ ಗುರುತು ಕಂಡಿರುವವರನ್ನೂ ಸೂಕ್ಷ್ಮವಾಗಿ ವಿಚಾರಿಸಿ ಗೊತ್ತುಮಾಡಿಕೊಳ್ಳಿ. ಅವನು ಬಹಳ ಯುಕ್ತಿವಂತನೆಂದು ಕೇಳಿದ್ದೇನೆ.

23 ಆದ್ದರಿಂದ ಅವನು ಅಡಗಿಕೊಳ್ಳತಕ್ಕ ಎಲ್ಲಾ ಗುಟ್ಟಾದ ಸ್ಥಳಗಳನ್ನು ಗೊತ್ತುಮಾಡಿಕೊಂಡು ಖಚಿತವಾದ ವರ್ತಮಾನವನ್ನು ನನಗೆ ಮುಟ್ಟಿಸಿರಿ. ನಾನು ನಿಮ್ಮ ಸಂಗಡ ಬರುವೆನು. ಅವನು ನಾಡಿನಲ್ಲಿ ಇರುವುದಾದರೆ ಯೆಹೂದ ಪ್ರಜೆಗಳ ಮಧ್ಯದಲ್ಲೆಲ್ಲಾ ಹುಡುಕಿ ಅವನನ್ನು ಹಿಡಿಯುವೆನು,” ಎಂದನು.

24 ಅವರು ಹೊರಟು ಸೌಲನ ಮುಂದಾಗಿ ಜೀಫಿಗೆ ಬಂದರು. ದಾವೀದನೂ ಅವನ ಜನರೂ ಮಾವೋನ್ ಮರುಭೂಮಿಯ ದಕ್ಷಿಣದಿಕ್ಕಿನಲ್ಲಿ ಇರುವ ಅರಾಬಾ ಎಂಬ ತಗ್ಗಾದ ಪ್ರದೇಶದಲ್ಲಿ ಇದ್ದರು.

25 ಸೌಲನು ತನ್ನ ಜನರೊಡನೆ ದಾವೀದನನ್ನು ಹಿಡಿಯುವುದಕ್ಕೆ ಬಂದನು. ಈ ಸಮಾಚಾರ ದಾವೀದನಿಗೆ ಸಿಕ್ಕಿತು. ಅವನು ಮಾವೋನಿನಲ್ಲಿ ಇರುವ ಒಂದು ಕಡಿದಾದ ಬೆಟ್ಟಕ್ಕೆ ಹೋಗಿ ಅಡಗಿಕೊಂಡನು. ಸೌಲನು ಇದನ್ನು ಕೇಳಿ ಮಾವೋನ್ ಮರುಭೂಮಿಗೆ ಬಂದು ಆ ಬೆಟ್ಟದ ಒಂದು ಕಡೆಯಲ್ಲಿ ಹೋಗುತ್ತಿದ್ದನು.

26 ಅದರ ಇನ್ನೊಂದು ಕಡೆಯಲ್ಲಿ ದಾವೀದನೂ ಅವನ ಜನರೂ ಇದ್ದರು. ದಾವೀದನೂ ಅವನ ಜನರೂ ತಪ್ಪಿಸಿಕೊಳ್ಳುವುದಕ್ಕೆ ತ್ವರೆಪಡುತ್ತಿದ್ದರು. ಅಷ್ಟರಲ್ಲಿ ಸೌಲನೂ ಅವನ ಜನರೂ ಬಂದು ಅವರನ್ನು ಸುತ್ತಿ ಹಿಡಿಯುವುದಕ್ಕಿದ್ದರು.

27 ಅದೇ ವೇಳೆಗೆ ದೂತನೊಬ್ಬನು ಸೌಲನ ಬಳಿಗೆ ಬಂದು, “ಬೇಗ ಬನ್ನಿ, ಫಿಲಿಷ್ಟಿಯರು ನಾಡಿನೊಳಕ್ಕೆ ನುಗ್ಗಿದ್ದಾರೆ,” ಎಂದು ತಿಳಿಸಿದನು.

28 ಆದ್ದರಿಂದ ಅವನು ದಾವೀದನನ್ನು ಹಿಡಿಯುವ ಕೆಲಸವನ್ನು ಬಿಟ್ಟು ಫಿಲಿಷ್ಟಿಯರಿಗೆ ವಿರುದ್ಧ ಯುದ್ಧಕ್ಕೆ ಹೊರಟನು. ಈ ಕಾರಣ ಆ ಬೆಟ್ಟಕ್ಕೆ’ಅಡ್ಡಬೆಟ್ಟ’ ಎಂದು ಹೆಸರಾಯಿತು.

29 ದಾವೀದನು ಅಲ್ಲಿಂದ ಗುಡ್ಡ ಹತ್ತಿಹೋಗಿ ಏಂಗೆದಿಯ ಗಿರಿಗಳಲ್ಲಿ ವಾಸಿಸಿದನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು