Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಸಮುಯೇಲ 16 - ಕನ್ನಡ ಸತ್ಯವೇದವು C.L. Bible (BSI)


ಸೌಲನು ಮತ್ತು ದಾವೀದನು ಸಮುವೇಲನಿಂದ ದಾವೀದನಿಗೆ ರಾಜಾಭಿಷೇಕ

1 ಸರ್ವೇಶ್ವರಸ್ವಾಮಿ ಸಮುವೇಲನಿಗೆ, “ನಾನು ಸೌಲನನ್ನು ಇಸ್ರಯೇಲರ ಅರಸನಾಗಿರುವುದಕ್ಕೆ ಅಯೋಗ್ಯನೆಂದು ತಳ್ಳಿಬಿಟ್ಟೆನಲ್ಲವೆ? ನೀನು ಅವನಿಗಾಗಿ ಎಷ್ಟರವರೆಗೆ ದುಃಖಿಸುತ್ತಿರುವೆ? ಕೊಂಬನ್ನು ಎಣ್ಣೆಯಿಂದ ತುಂಬಿಸಿಕೊಂಡು ಬಾ; ನಾನು ನಿನ್ನನ್ನು ಬೆತ್ಲೆಹೇಮಿನವನಾದ ಜೆಸ್ಸೆಯನ ಬಳಿಗೆ ಕಳುಹಿಸುತ್ತೇನೆ. ಅವನ ಮಕ್ಕಳಲ್ಲೊಬ್ಬನನ್ನು ಅರಸನನ್ನಾಗಿ ಆರಿಸಿಕೊಂಡಿದ್ದೇನೆ,” ಎಂದು ಹೇಳಿದರು.

2 ಅದಕ್ಕೆ ಸಮುವೇಲನು, “ನಾನು ಹೋಗುವುದು ಹೇಗೆ? ಇದು ಸೌಲನಿಗೆ ಗೊತ್ತಾದರೆ ಅವನು ನನ್ನನ್ನು ಕೊಂದುಹಾಕುವನಲ್ಲವೇ?’ ಎಂದನು. ಆಗ ಸರ್ವೇಶ್ವರ, “ನೀನು ಒಂದು ಕಡಸನ್ನು ತೆಗೆದುಕೊಂಡು ಹೋಗು. ಸರ್ವೇಶ್ವರನಿಗೆ ಬಲಿಯರ್ಪಣೆ ಮಾಡಲು ಬಂದಿದ್ದೇನೆ ಎಂದು ಹೇಳಿ ಜೆಸ್ಸೆಯನನ್ನು ಅದಕ್ಕೆ ಆಮಂತ್ರಿಸು.

3 ಆಮೇಲೆ ನೀನು ಮಾಡಬೇಕಾದುದನ್ನು ನಾನೇ ತಿಳಿಸುತ್ತೇನೆ; ನಾನು ಯಾರನ್ನು ತೋರಿಸುತ್ತೇನೋ ಅವನನ್ನೇ ನೀನು ಅಭಿಷೇಕಿಸಬೇಕು,” ಎಂದರು.

4 ಸರ್ವೇಶ್ವರ ಹೇಳಿದಂತೆಯೇ ಸಮುವೇಲನು ಬೆತ್ಲೆಹೇಮಿಗೆ ಹೋದನು. ಆ ಊರಿನ ಹಿರಿಯರು ನಡುನಡುಗುತ್ತಾ ಬಂದು, ಅವನನ್ನು ಎದುರುಗೊಂಡು, “ನಿನ್ನ ಆಗಮನ ನಮಗೆ ಶುಭಕರವಾಗಿದೆಯೇ?’ ಎಂದು ಕೇಳಿದರು. ಅವನು,

5 ಹೌದು, ಶುಭಕರವಾಗಿದೆ; ಸರ್ವೇಶ್ವರನಿಗೆ ಬಲಿಯನ್ನರ್ಪಿಸುವುದಕ್ಕೆ ಬಂದಿದ್ದೇನೆ. ನೀವು ಶುದ್ಧರಾಗಿ ನನ್ನ ಜೊತೆಯಲ್ಲಿ ಬಲಿಯರ್ಪಣೆಗೆ ಬನ್ನಿ,” ಎಂದು ಹೇಳಿ ಜೆಸ್ಸೆಯನನ್ನೂ ಅವನ ಮಕ್ಕಳನ್ನೂ ಶುದ್ಧೀಕರಿಸಿ ಅವರನ್ನೂ ಬಲಿಯರ್ಪಣೆಗೆ ಆಮಂತ್ರಿಸಿದನು. ಅವರು ಬಂದರು.

6 ಸಮುವೇಲನು ಎಲೀಯಾಬನನ್ನು ನೋಡಿ ತನ್ನಷ್ಟಕ್ಕೆ, “ನಿಶ್ಚಯವಾಗಿ ಸರ್ವೇಶ್ವರ ಅಭಿಷೇಕಕ್ಕೆ ಆರಿಸಿಕೊಂಡವನು ನನ್ನ ಮುಂದೆಯೇ ಇದ್ದಾನೆ,” ಎಂದುಕೊಂಡನು.

7 ಆದರೆ ಸರ್ವೇಶ್ವರಸ್ವಾಮಿ ಸಮುವೇಲನಿಗೆ, “ನೀನು ಅವನ ಚೆಲುವಿಕೆಯನ್ನಾಗಲಿ ಎತ್ತರವನ್ನಾಗಲಿ ನೋಡಬೇಡ; ನಾನು ಅವನನ್ನು ತಳ್ಳಿಬಿಟ್ಟಿದ್ದೇನೆ. ಸರ್ವೇಶ್ವರ ಮನುಷ್ಯರಂತೆ ಬಹಿರಂಗದ ತೋರಿಕೆಯನ್ನು ನೋಡುವುದಿಲ್ಲ; ಅಂತರಂಗವನ್ನೇ ವೀಕ್ಷಿಸುತ್ತಾನೆ,” ಎಂದರು.

8 ಜೆಸ್ಸೆಯನು ಅಬಿನಾದಾಬನನ್ನು ಸಮುವೇಲನ ಬಳಿಗೆ ಬರಮಾಡಲು ಸಮುವೇಲನು, “ಸರ್ವೇಶ್ವರ ಇವನನ್ನೂ ಆರಿಸಿಕೊಳ್ಳಲಿಲ್ಲ,” ಎಂದು ಹೇಳಿದನು.

9 ತರುವಾಯ ಜೆಸ್ಸೆಯನು ಶಮ್ಮ ಎಂಬವನನ್ನು ಬರಮಾಡಲು ಸಮುವೇಲನು, “ಸರ್ವೇಶ್ವರ ಇವನನ್ನೂ ಆರಿಸಿಕೊಳ್ಳಲಿಲ್ಲ,” ಎಂದು ಹೇಳಿದನು.

10 ಹೀಗೆ ಜೆಸ್ಸೆಯನು ತನ್ನ ಮಕ್ಕಳಲ್ಲಿ ಏಳು ಮಂದಿಯನ್ನೂ ಅವನ ಬಳಿಗೆ ಬರಮಾಡಿದರೂ ಅವನು, “ಸರ್ವೇಶ್ವರ ಇವರನ್ನು ಆರಿಸಿಕೊಳ್ಳಲಿಲ್ಲ,” ಎಂದು ನುಡಿದನು.

11 ಅನಂತರ ಸಮುವೇಲನು ಜೆಸ್ಸೆಯನನ್ನು, “ನಿನ್ನ ಮಕ್ಕಳೆಲ್ಲಾ ಇಷ್ಟೇಮಂದಿಯೋ?” ಎಂದು ಕೇಳಿದನು. ಅವನು, “ಇವರೆಲ್ಲರಿಗಿಂತಲೂ ಚಿಕ್ಕವನು ಒಬ್ಬನಿದ್ದಾನೆ; ಅವನು ಕುರಿಮೇಯಿಸುವುದಕ್ಕೆ ಹೋಗಿದ್ದಾನೆ,” ಎಂದು ಉತ್ತರಕೊಟ್ಟನು. ಆಗ ಸಮುವೇಲನು, “ಅವನನ್ನು ಇಲ್ಲಿಗೆ ಬರಮಾಡು; ಅವನು ಬರುವವರೆಗೂ ನಾವು ಊಟಕ್ಕೆ ಕುಳಿತುಕೊಳ್ಳಬಾರದು,” ಎಂದು ಹೇಳಿದನು. ಜೆಸ್ಸೆಯನು ಅವನನ್ನು ಕರೆದುತರಿಸಿದನು.

12 ಅವನು ಕೆಂಬಣ್ಣದವನು, ಸುಂದರ ನೇತ್ರನು, ಹಾಗು ನೋಟಕ್ಕೆ ರಮಣೀಯನು. ಸರ್ವೇಶ್ವರ ಸಮುವೇಲನಿಗೆ, “ಎದ್ದು ಇವನನ್ನು ಅಭಿಷೇಕಿಸು; ನಾನು ಆರಿಸಿಕೊಂಡವನು ಇವನೇ,” ಎಂದು ಆಜ್ಞಾಪಿಸಿದರು.

13 ಸಮುವೇಲನು ಎಣ್ಣೆಯ ಕೊಂಬನ್ನು ತೆಗೆದುಕೊಂಡು ಅವನನ್ನು ಅವನ ಸಹೋದರರ ಮಧ್ಯದಲ್ಲಿ ಅಭಿಷೇಕಿಸಿದನು. ಕೂಡಲೆ ಸರ್ವೇಶ್ವರನ ಆತ್ಮವು ದಾವೀದನ ಮೇಲೆ ಬಂದು ನೆಲೆಗೊಂಡಿತು. ಅನಂತರ ಸಮುವೇಲನು ರಾಮಾಕ್ಕೆ ಹೊರಟುಹೋದನು.


ಸೌಲನ ಆಸ್ಥಾನದಲ್ಲಿ ದಾವೀದನು

14 ಸರ್ವೇಶ್ವರನ ಆತ್ಮ ಸೌಲನನ್ನು ಬಿಟ್ಟುಹೋಯಿತು. ಅವರಿಂದ ಬಂದ ದುರಾತ್ಮವೊಂದು ಅವನನ್ನು ಪೀಡಿಸುತ್ತಿತ್ತು.

15 ಆದ್ದರಿಂದ ಅವನ ಸೇವಕರು ಅವನಿಗೆ, “ಇಗೋ, ದೇವರಿಂದ ಬಂದ ದುರಾತ್ಮ ನಿಮ್ಮನ್ನು ಪೀಡಿಸುತ್ತಾ ಇದೆ.

16 ಒಡೆಯಾ, ಅಪ್ಪಣೆಯಾಗಲಿ, ನಿಮ್ಮ ಸನ್ನಿಧಿಯಲ್ಲಿ ನಿಂತಿರುವ ನಿಮ್ಮ ಸೇವಕರಾದ ನಾವು ಹೋಗಿ ಕಿನ್ನರಿ ಬಾರಿಸುವವರಲ್ಲಿ ನಿಪುಣನಾದ ಒಬ್ಬನನ್ನು ಹುಡುಕಿ ತರುತ್ತೇವೆ. ಸರ್ವೇಶ್ವರನಿಂದ ಕಳುಹಿಸಲಾದ ದುರಾತ್ಮ ನಿಮ್ಮ ಮೇಲೆ ಬರುವಾಗ ಅವನು ಕಿನ್ನರಿ ಬಾರಿಸಿದರೆ ನಿಮಗೆ ಉಪಶಮನ ಆಗುವುದು,” ಎಂದು ಹೇಳಿದರು.

17 ಸೌಲನು ಅವರಿಗೆ, “ಚೆನ್ನಾಗಿ ಬಾರಿಸಬಲ್ಲವನಾದ ಒಬ್ಬನನ್ನು ನನಗಾಗಿ ಹುಡುಕಿ ಕರೆದುಕೊಂಡು ಬನ್ನಿ,” ಎಂದು ಆಜ್ಞಾಪಿಸಿದನು.

18 ಸೇವಕರಲ್ಲೊಬ್ಬನು ಅವನಿಗೆ, “ಬೆತ್ಲೆಹೇಮಿನವನಾದ ಜೆಸ್ಸೆಯನ ಮಗನನ್ನು ನೋಡಿದ್ದೇನೆ; ಅವನು ಚೆನ್ನಾಗಿ ಬಾರಿಸಬಲ್ಲನು. ಅವನು ಪರಾಕ್ರಮಶಾಲಿ, ರಣಶೂರ, ವಾಕ್ಚತುರ, ಸುಂದರ ಹಾಗು ಸರ್ವೇಶ್ವರನ ಅನುಗ್ರಹ ಹೊಂದಿದವ,” ಎಂದು ತಿಳಿಸಿದನು.

19 ಕೂಡಲೆ ಸೌಲನು ಜೆಸ್ಸೆಯನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ಕುರಿ ಮೇಯಿಸುತ್ತಿರುವ ನಿನ್ನ ಮಗ ದಾವೀದನನ್ನು ನನ್ನ ಬಳಿಗೆ ಕಳುಹಿಸು,” ಎಂದು ಹೇಳಿಸಿದನು.

20 ಜೆಸ್ಸೆಯನು ರೊಟ್ಟಿಯನ್ನು, ಒಂದು ಬುದ್ದಲಿ ದ್ರಾಕ್ಷಾರಸವನ್ನು ಹಾಗು ಒಂದು ಹೋತಮರಿಯನ್ನು ಕತ್ತೆಯ ಮೇಲೆ ಹೇರಿಸಿ, ತನ್ನ ಮಗ ದಾವೀದನ ಮುಖಾಂತರ ಸೌಲನಿಗೆ ಕಳುಹಿಸಿದನು.

21 ಹೀಗೆ ದಾವೀದನು ಸೌಲನ ಬಳಿಗೆ ಬಂದು ಅವನ ಸೇವಕನಾದನು. ಸೌಲನು ಅವನನ್ನು ಬಹಳವಾಗಿ ಪ್ರೀತಿಸಿದನು, ತನ್ನ ಆಯುಧಗಳನ್ನು ಹೊರುವುದಕ್ಕೆ ನೇಮಿಸಿಕೊಂಡನು.

22 ತರುವಾಯ ಸೌಲನು ಜೆಸ್ಸೆಯನ ಬಳಿಗೆ ದೂತರನ್ನು ಅಟ್ಟಿ, ಅವನಿಗೆ, “ನಾನು ದಾವೀದನನ್ನು ಮೆಚ್ಚಿದ್ದೇನೆ; ಅವನು ನನ್ನ ಸನ್ನಿಧಿಯಲ್ಲೇ ಸೇವೆಮಾಡಲಿ,” ಎಂದು ತಿಳಿಸಿದನು.

23 ದೇವರಿಂದ ಕಳುಹಿಸಲಾಗಿದ್ದ ದುರಾತ್ಮ ಸೌಲನ ಮೇಲೆ ಬಂದಾಗ ದಾವೀದನು ಕಿನ್ನರಿಯನ್ನು ಬಾರಿಸುತ್ತಿದ್ದನು. ಆಗ ಆ ದುರಾತ್ಮ ಸೌಲನನ್ನು ಬಿಟ್ಟುಹೋಗುತ್ತಿತ್ತು. ಅವನು ಉಪಶಮನಹೊಂದಿ ಚೆನ್ನಾಗಿರುತ್ತಿದ್ದನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು