1 ಸಮುಯೇಲ 11 - ಕನ್ನಡ ಸತ್ಯವೇದವು C.L. Bible (BSI)ಸೌಲನಿಂದ ಅಮ್ಮೋನಿಯರ ಸೋಲು 1 ಒಂದು ತಿಂಗಳ ನಂತರ ಅಮ್ಮೋನಿಯನಾದ ನಾಹಾಷನು ದಂಡೆತ್ತಿ ಬಂದು ಯಾಬೇಷ್ ಗಿಲ್ಯಾದಿಗೆ ಮುತ್ತಿಗೆ ಹಾಕಿದನು. ಯಾಬೇಷಿನವರು ಅವನನ್ನು, “ನೀನು ನಮ್ಮ ಸಂಗಡ ಸಂಧಾನ ಮಾಡಿಕೋ; ನಾವು ನಿನಗೆ ಅಧೀನರಾಗಿರುತ್ತೇವೆ,” ಎಂದು ಬೇಡಿಕೊಂಡರು. 2 ಅದಕ್ಕೆ ಅವನು, “ಇಸ್ರಯೇಲರೆಲ್ಲರನ್ನು ಅವಮಾನಪಡಿಸುವುದಕ್ಕಾಗಿ ನಾನು ಮೊದಲು ನಿಮ್ಮಲ್ಲಿ ಪ್ರತಿಯೊಬ್ಬರ ಬಲಗಣ್ಣನ್ನು ಕಿತ್ತು ಹಾಕುತ್ತೇನೆ. ಇದಕ್ಕೆ ನೀವು ಒಪ್ಪುವಿರಾದರೆ ನಿಮ್ಮ ಸಂಗಡ ಸಂಧಾನ ಮಾಡಿಕೊಳ್ಳುತ್ತೇನೆ,” ಎಂದು ಉತ್ತರಕೊಟ್ಟನು. 3 ಆಗ ಯಾಬೇಷಿನ ಹಿರಿಯರು ಅವನಿಗೆ, “ಏಳು ದಿವಸಗಳವರೆಗೆ ಸಮಯ ಕೊಡು; ಅಷ್ಟರೊಳಗೆ ನಾವು ಇಸ್ರಯೇಲರ ಪ್ರಾಂತ್ಯಗಳಿಗೆ ದೂತರನ್ನು ಕಳುಹಿಸುತ್ತೇವೆ. ನಮ್ಮನ್ನು ಯಾರೂ ರಕ್ಷಿಸದಿದ್ದರೆ ನಾವು ನಿನ್ನ ಬಳಿಗೆ ಬಂದು ಶರಣಾಗುತ್ತೇವೆ,” ಎಂದು ವಿನಂತಿಸಿದರು. 4 ದೂತರು ಸೌಲನು ವಾಸವಾಗಿದ್ದ ಗಿಬೆಯಕ್ಕೆ ಬಂದು ಅಲ್ಲಿನವರಿಗೆ ಈ ವರ್ತಮಾನವನ್ನು ತಿಳಿಸಿದರು. ಎಲ್ಲರೂ ಗಟ್ಟಿಯಾಗಿ ಅಳತೊಡಗಿದರು. 5 ಅಷ್ಟರಲ್ಲಿ ಸೌಲನು ಹೊಲದಿಂದ ದನಗಳನ್ನು ಹೊಡೆದುಕೊಂಡು ಬಂದನು. ಜನರು ಗೋಳಾಡುವುದಕ್ಕೇನು ಕಾರಣವೆಂದು ಕೇಳಲು ಯಾಬೇಷಿನವರ ವರ್ತಮಾನವನ್ನು ಅವನಿಗೆ ತಿಳಿಸಲಾಯಿತು. 6 ಆಗ ಸರ್ವೇಶ್ವರನ ಆತ್ಮ ಅವನ ಮೇಲೆ ಬಂದಿತು. ಅವನು ಅತ್ಯಂತ ಕುಪಿತನಾದನು. 7 ಒಂದು ಜೋಡಿ ಎತ್ತುಗಳನ್ನು ತೆಗೆದುಕೊಂಡು ತುಂಡುತುಂಡು ಮಾಡಿ, ಆ ತುಂಡುಗಳನ್ನು ದೂತರ ಮುಖಾಂತರ ಇಸ್ರಯೇಲರ ಎಲ್ಲ ಪ್ರಾಂತ್ಯಗಳಿಗೆ ಕಳುಹಿಸಿದನು. “ಯಾರು ಸೌಲ ಹಾಗು ಸಮುವೇಲರನ್ನು ಹಿಂಬಾಲಿಸುವುದಿಲ್ಲವೋ ಅವರ ಎತ್ತುಗಳನ್ನು ಹೀಗೆಯೇ ಕಡಿಯಲಾಗುವುದು,” ಎಂದು ಹೇಳಿಸಿದನು. ಸರ್ವೇಶ್ವರನ ಭಯಭಕ್ತಿಯಿಂದ ಪ್ರೇರಿತರಾದ ಜನರೆಲ್ಲರೂ ಏಕಮನಸ್ಸಿನಿಂದ ಕೂಡಿಬಂದರು. 8 ಅವರನ್ನು ಬೆಜೆಕಿನಲ್ಲಿ ಕ್ರಮಪಡಿಸಿ ಲೆಕ್ಕಿಸಿದಾಗ ಇಸ್ರಯೇಲರಲ್ಲಿ ಮೂರು ಲಕ್ಷ ಸೈನಿಕರೂ ಯೆಹೂದ್ಯರಲ್ಲಿ ಮೂವತ್ತು ಸಾವಿರ ಸೈನಿಕರೂ ಇದ್ದರು. 9 ಬಂದಿದ್ದ ದೂತರಿಗೆ, “ನಾಳೆ ಮಧ್ಯಾಹ್ನದೊಳಗೆ ನಿಮಗೆ ಸಹಾಯ ಸಿಕ್ಕುವುದೆಂದು ಯಾಬೇಷ್ ಗಿಲ್ಯಾದಿನವರಿಗೆ ತಿಳಿಸಿರಿ,” ಎಂದು ಹೇಳಿ ಅವರನ್ನು ಕಳುಹಿಸಲಾಯಿತು. 10 ದೂತರು ಹೋಗಿ ಈ ವರ್ತಮಾನವನ್ನು ತಿಳಿಸಲು ಯಾಬೇಷಿನವರು ಸಂತೋಷಭರಿತರಾದರು. ಅಮ್ಮೋನಿಯರಿಗೆ, “ನಾವು ನಾಳೆ ನಿಮ್ಮ ಬಳಿಗೆ ಬರುವೆವು; ನಿಮ್ಮ ಇಚ್ಛೆಯ ಪ್ರಕಾರ ಮಾಡಬಹುದು,” ಎಂದು ಹೇಳಿದರು. 11 ಸೌಲನು ಬೆಳಗಿನ ಜಾವದಲ್ಲಿ ತನ್ನ ಜನರನ್ನು ಮೂರು ಪಂಗಡವಾಗಿ ವಿಂಗಡಿಸಿದನು. ಅಮ್ಮೋನಿಯರ ಪಾಳೆಯದೊಳಕ್ಕೆ ನುಗ್ಗಿ ದಾಳಿಮಾಡಿ ಮಧ್ಯಾಹ್ನದವರೆಗೆ ಅವರನ್ನು ಸದೆಬಡಿದನು. ಅಳಿದುಳಿದವರನ್ನು ಒಬ್ಬರನ್ನೊಬ್ಬರು ಕೂಡದ ಹಾಗೆ ಚದರಿಸಿಬಿಟ್ಟನು. 12 ತರುವಾಯ ಜನರು ಸಮುವೇಲನಿಗೆ, “ಸೌಲನು ನಮಗೆ ಅರಸನಾಗಬಾರದೆಂದು ಹೇಳಿದವರಾರು? ಅವರನ್ನು ನಮಗೆ ಒಪ್ಪಿಸಿರಿ; ನಾವೇ ಕೊಂದುಹಾಕುತ್ತೇವೆ,” ಎಂದರು. ಸೌಲನು ಅವರಿಗೆ, 13 “ಸರ್ವೇಶ್ವರ ಈ ದಿನ ಇಸ್ರಯೇಲರಿಗೆ ಜಯವನ್ನುಂಟುಮಾಡಿರುವರು. ಆದ್ದರಿಂದ ಯಾರನ್ನೂ ಕೊಲ್ಲಬಾರದು,” ಎಂದು ಹೇಳಿದನು. 14 ಸಮುವೇಲನು ಜನರಿಗೆ, “ಬನ್ನಿ, ಗಿಲ್ಗಾಲಿಗೆ ಹೋಗಿ ಸೌಲನ ಅರಸುತನವನ್ನು ಘೋಷಿಸೋಣ,” ಎಂದನು. 15 ಅವರೆಲ್ಲರು ಅಲ್ಲಿಗೆ ಹೋಗಿ ಸರ್ವೇಶ್ವರನ ಸನ್ನಿಧಿಯಲ್ಲಿ ಸೌಲನ ಅರಸುತನವನ್ನು ಘೋಷಿಸಿ ಸ್ಥಿರಪಡಿಸಿದರು. ಸರ್ವೇಶ್ವರನಿಗೆ ಶಾಂತಿಸಮಾಧಾನದ ಬಲಿಗಳನ್ನು ಸಮರ್ಪಿಸಿದರು. ಸೌಲನೊಡನೆ ಸೇರಿ ಬಹಳವಾಗಿ ಆನಂದಿಸಿದರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India