1 ಯೋಹಾನನು 5 - ಕನ್ನಡ ಸತ್ಯವೇದವು C.L. Bible (BSI)ವಿಶ್ವಾಸದ ವಿಜಯ 1 ಯೇಸುವೇ ‘ಕ್ರಿಸ್ತ’ ಎಂದು ವಿಶ್ವಾಸಿಸುವ ಪ್ರತಿಯೊಬ್ಬನೂ ದೇವರ ಮಗು. ತಂದೆಯನ್ನು ಪ್ರೀತಿಸುವವನು ಆತನ ಮಗುವನ್ನೂ ಪ್ರೀತಿಸುತ್ತಾನೆ. 2 ದೇವರನ್ನು ಪ್ರೀತಿಸಿ, ಅವರ ಆಜ್ಞೆಗಳನ್ನು ಪಾಲಿಸುವುದರಿಂದ ನಾವು ದೇವರ ಮಕ್ಕಳನ್ನು ಪ್ರೀತಿಸುತ್ತೇವೆಂಬುದು ನಿಶ್ಚಯ ಆಗುತ್ತದೆ. 3 ದೇವರನ್ನು ಪ್ರೀತಿಸುವುದು ಎಂದರೆ ಅವರು ಕೊಟ್ಟ ಆಜ್ಞೆಗಳನ್ನು ಅನುಸರಿಸಿ ನಡೆಯುವುದೇ. ಅವರ ಆಜ್ಞೆಗಳು ನಮಗೆ ಹೊರೆಯೇನೂ ಅಲ್ಲ. 4 ದೇವರಿಂದ ಜನಿಸಿದ ಪ್ರತಿ ಒಬ್ಬನೂ ಲೋಕವನ್ನು ಜಯಿಸುತ್ತಾನೆ. ಲೋಕವನ್ನು ಜಯಿಸುವಂಥದು ನಮ್ಮ ವಿಶ್ವಾಸವೇ. 5 ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ತ್ರೈಯೇಕ ಸಾಕ್ಷ್ಯ 6 ಕ್ರಿಸ್ತಯೇಸುವೇ ಜಲ ಮತ್ತು ರಕ್ತದಿಂದ ಸಾಕ್ಷಿಹೊಂದಿದವರು. ಜಲದಿಂದ ಮಾತ್ರವಲ್ಲ ಜಲ ಮತ್ತು ರಕ್ತದಿಂದ ಸಾಕ್ಷಿಹೊಂದಿದವರು. 7 ಇದಕ್ಕೆ ಪವಿತ್ರಾತ್ಮ ಸಾಕ್ಷಿ. ಏಕೆಂದರೆ, ಪವಿತ್ರಾತ್ಮ ಸತ್ಯಸ್ವರೂಪಿ. 8 ಹೀಗೆ ಪವಿತ್ರಾತ್ಮ, ಜಲ ಮತ್ತು ರಕ್ತವೆಂಬ ಮೂರು ಸಾಕ್ಷಿಗಳು ಇವೆ. ಈ ಮೂರೂ ಕೊಡುವ ಸಾಕ್ಷ್ಯ ಒಂದೇ. 9 ಮನುಷ್ಯರು ಕೊಡುವ ಸಾಕ್ಷ್ಯವನ್ನು ನಾವು ಅಂಗೀಕರಿಸುತ್ತೇವೆ. ದೇವರು ನೀಡುವ ಸಾಕ್ಷ್ಯ ಅದಕ್ಕಿಂತಲೂ ಶ್ರೇಷ್ಠವಾದುದು. ದೇವರ ಈ ಸಾಕ್ಷ್ಯ ಅವರ ಪುತ್ರನನ್ನು ಕುರಿತದ್ದಾಗಿದೆ. 10 ದೇವರ ಪುತ್ರನಲ್ಲಿ ವಿಶ್ವಾಸವಿಡುವವನು ಈ ಸಾಕ್ಷ್ಯವನ್ನು ತನ್ನ ಅಂತರಂಗದಲ್ಲೇ ಹೊಂದಿರುತ್ತಾನೆ. ದೇವರಲ್ಲಿ ವಿಶ್ವಾಸವಿಡದವನಾದರೋ ಅವರನ್ನು ಸುಳ್ಳುಗಾರರನ್ನಾಗಿಸುತ್ತಾನೆ. ಹೇಗೆಂದರೆ, ದೇವರು ತಮ್ಮ ಪುತ್ರನ ಪರವಾಗಿ ಕೊಟ್ಟ ಸಾಕ್ಷ್ಯದಲ್ಲಿ ಅವನಿಗೆ ನಂಬಿಕೆಯಿಲ್ಲ. 11 ದೇವರು ನಮಗೆ ನಿತ್ಯಜೀವವನ್ನು ಅನುಗ್ರಹಿಸಿದ್ದಾರೆ. ಆ ಜೀವ ಅವರ ಪುತ್ರನಲ್ಲಿದೆ ಎಂಬುದೇ ಈ ಸಾಕ್ಷ್ಯ. 12 ಯಾರಲ್ಲಿ ದೇವರ ಪುತ್ರ ಇದ್ದಾನೋ ಅವನಲ್ಲಿ ಆ ಜೀವವಿರುತ್ತದೆ. ಯಾರಲ್ಲಿ ದೇವರ ಪುತ್ರನಿಲ್ಲವೋ ಅವನಲ್ಲಿ ಆ ಜೀವ ಇರುವುದಿಲ್ಲ. ನಿತ್ಯಜೀವ 13 ದೇವರ ಪುತ್ರನ ನಾಮದಲ್ಲಿ ವಿಶ್ವಾಸ ಇಟ್ಟಿರುವ ನೀವು ನಿತ್ಯಜೀವವನ್ನು ಪಡೆದವರು ಎಂಬುದನ್ನು ತಿಳಿಸಲೆಂದೇ ನಾನು ನಿಮಗೆ ಇದನ್ನೆಲ್ಲಾ ಬರೆದಿದ್ದೇನೆ. 14 ದೇವರ ಚಿತ್ತಾನುಸಾರ ಏನನ್ನು ಬೇಡಿಕೊಂಡರೂ ಅವರು ನಮ್ಮ ವಿಜ್ಞಾಪನೆಗೆ ಕಿವಿಗೊಡುತ್ತಾರೆಂಬ ಭರವಸೆ ನಮಗಿದೆ. 15 ನಾವು ಏನನ್ನು ಬೇಡಿಕೊಂಡರೂ ನಮ್ಮ ವಿಜ್ಞಾಪನೆಗೆ ದೇವರು ಕಿವಿಗೊಡುತ್ತಾರೆ ಎಂಬುದು ನಮಗೆ ತಿಳಿದಿದ್ದರೆ ನಾವು ಬೇಡಿದುದೆಲ್ಲವೂ ನಮಗೆ ಲಭಿಸಿದಂತೆಯೇ ಎಂಬುದೂ ನಮಗೆ ತಿಳಿದಿದೆ. 16 ಮಾರಕವಲ್ಲದ ಪಾಪವೊಂದನ್ನು ಸಹೋದರನು ಮಾಡುವುದನ್ನು ಯಾರಾದರೂ ಕಂಡರೆ, ಆ ಸಹೋದರನಿಗಾಗಿ ದೇವರಲ್ಲಿ ಬೇಡಿಕೊಳ್ಳಿರಿ. ದೇವರು ಆ ಸಹೋದರನಿಗೆ ಸಜ್ಜೀವವನ್ನು ಅನುಗ್ರಹಿಸುವರು. ಮಾರಕವಲ್ಲದ ಪಾಪವನ್ನು ಕುರಿತೇ ಈ ಮಾತನ್ನು ಹೇಳುತ್ತಿದ್ದೇನೆ. ಮಾರಕವಾದ ಪಾಪವೂ ಉಂಟು. ಅದರ ವಿಷಯವಾಗಿ ಬೇಡಿಕೊಳ್ಳಬೇಕೆಂದು ನಾನು ಹೇಳುತ್ತಿಲ್ಲ. 17 ಅಕ್ರಮವಾದುದೆಲ್ಲವೂ ಪಾಪವೇ. ಆದರೆ ಮಾರಕವಲ್ಲದಂಥ ಪಾಪವೂ ಇದೆ. 18 ನಮಗೆ ತಿಳಿದಿರುವಂತೆ ದೇವರಿಂದ ಜನಿಸಿದವನು ಪಾಪಜೀವಿಯಾಗಿರುವುದಿಲ್ಲ. ಏಕೆಂದರೆ, ದೇವರ ಪುತ್ರನ ರಕ್ಷಣೆ ಅವನಿಗಿದೆ. ಕೇಡಿಗನ ಹಿಡಿತಕ್ಕೆ ಅವನು ಸಿಗನು. 19 ಇಡೀ ಲೋಕವು ಕೇಡಿಗನ ವಶದಲ್ಲಿ ಇದ್ದರು ಸಹ ನಾವು ದೇವರಿಗೆ ಸೇರಿದವರೆಂಬುದು ನಮಗೆ ತಿಳಿದಿದೆ. 20 ದೇವರ ಪುತ್ರ ಆಗಮಿಸಿ, ಸತ್ಯಸ್ವರೂಪರಾದ ದೇವರನ್ನು ನಾವು ತಿಳಿದುಕೊಳ್ಳುವಂತೆ ನಮಗೆ ಅರಿವನ್ನು ನೀಡಿದ್ದಾರೆ. ಇದನ್ನು ನಾವು ಬಲ್ಲೆವು. ದೇವರ ಪುತ್ರರಾದ ಯೇಸುಕ್ರಿಸ್ತರಲ್ಲಿ ನೆಲೆಸಿರುವ ನಾವು ಸತ್ಯಸ್ವರೂಪಿಯಲ್ಲೇ ನೆಲೆಸಿದ್ದೇವೆ. ನಿಜವಾದ ದೇವರೂ ನಿತ್ಯಜೀವವೂ ಇವರೇ. 21 ಪ್ರಿಯ ಮಕ್ಕಳೇ, ಮಿಥ್ಯ ದೇವರುಗಳಿಂದ ನೀವು ದೂರವಿರಿ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India