1 ಯೋಹಾನನು 2 - ಕನ್ನಡ ಸತ್ಯವೇದವು C.L. Bible (BSI)ಪರಿಹಾರ ಬಲಿ 1 ಪ್ರಿಯಮಕ್ಕಳೇ, ನೀವು ಪಾಪಮಾಡಬಾರದೆಂದೇ ನಾನಿದನ್ನು ನಿಮಗೆ ಬರೆಯುತ್ತಿದ್ದೇನೆ. ಒಂದು ವೇಳೆ ಯಾರಾದರೂ ಪಾಪಮಾಡಿದ್ದೇ ಆದರೆ ನಮ್ಮ ಪರವಾಗಿ ಪಿತನ ಬಳಿಯಲ್ಲಿ ಬಿನ್ನಯಿಸಲು ಒಬ್ಬರಿದ್ದಾರೆ. ಅವರೇ ಸತ್ಯಸ್ವರೂಪರಾದ ಯೇಸುಕ್ರಿಸ್ತರು. 2 ಅವರೇ ನಮ್ಮ ಪಾಪಗಳನ್ನು ನಿವಾರಿಸುವ ಪರಿಹಾರ ಬಲಿಯಾಗಿದ್ದಾರೆ. ನಮ್ಮ ಪಾಪಗಳನ್ನು ಮಾತ್ರವಲ್ಲ, ಇಡೀ ಜಗತ್ತಿನ ಪಾಪಗಳನ್ನು ಅವರು ಪರಿಹರಿಸುತ್ತಾರೆ. 3 ನಾವು ದೇವರ ಆಜ್ಞೆಗಳನ್ನು ಕೈಗೊಂಡು ನಡೆದರೆ ಅದರಿಂದಲೇ ಅವರ ಅರಿವು ನಮಗಿದೆ ಎಂದು ಖಚಿತವಾಗುತ್ತದೆ. 4 ದೇವರನ್ನು ಬಲ್ಲೆನೆಂದು ಹೇಳಿಕೊಳ್ಳುತ್ತಾ ಅವರ ಆಜ್ಞೆಗಳನ್ನು ಕೈಗೊಳ್ಳದೆ ಇರುವವನು ಸುಳ್ಳುಗಾರ ಮತ್ತು ಸತ್ಯವೆಂಬುದೇ ಅವನಲ್ಲಿ ಇರುವುದಿಲ್ಲ. 5 ಆದರೆ ದೇವರ ವಾಕ್ಯವನ್ನು ಕೈಗೊಂಡು ನಡೆಯುವವನಲ್ಲಿ ಪ್ರೀತಿ ನಿಜಕ್ಕೂ ಸಿದ್ಧಿಗೆ ಬಂದಿರುತ್ತದೆ. 6 ತಾನು ದೇವರಲ್ಲಿ ನೆಲೆಸಿದ್ದೇನೆಂದು ಹೇಳುವವನು ಕ್ರಿಸ್ತಯೇಸು ಜೀವಿಸಿದಂತೆಯೇ ಜೀವಿಸಬೇಕು. ಇದರಿಂದಲೇ ನಾವು ದೇವರಲ್ಲಿ ನೆಲೆಗೊಂಡಿದ್ದೇವೆಂದು ತಿಳಿದುಕೊಳ್ಳುತ್ತೇವೆ. ಆಜ್ಞೆ 7 ಪ್ರಿಯರೇ, ನಾನು ನಿಮಗೆ ಬರೆಯುತ್ತಿರುವುದು ಹೊಸ ಆಜ್ಞೆಯೇನೂ ಅಲ್ಲ, ಮೊದಲಿನಿಂದಲೂ ನೀವು ಪಡೆದಿರುವ ಹಳೆಯ ಆಜ್ಞೆಯೇ. ಈ ಆಜ್ಞೆಯೇ ನೀವು ಈಗಾಗಲೇ ಕೇಳಿರುವ ಸಂದೇಶ. 8 ಆದರೂ ನಾನೀಗ ನಿಮಗೆ ಬರೆಯುತ್ತಿರುವುದು ಒಂದು ವಿಧದಲ್ಲಿ ಹೊಸ ಆಜ್ಞೆಯೇ ಸರಿ. ಅದರ ನೈಜಗುಣವು ಕ್ರಿಸ್ತಯೇಸುವಿನಲ್ಲಿ ಬೆಳಗಿದಂತೆ, ನಿಮ್ಮ ಜೀವನದಲ್ಲೂ ಬೆಳಗುತ್ತದೆ. ಏಕೆಂದರೆ, ಕತ್ತಲು ಕಳೆದುಹೋಗುತ್ತಿದೆ; ನಿಜವಾದ ಬೆಳಕು ಈಗಾಗಲೇ ಪ್ರಕಾಶಿಸುತ್ತಿದೆ. 9 “ನಾನು ಬೆಳಕಿನಲ್ಲಿದ್ದೇನೆ” ಎಂದು ಹೇಳಿಕೊಂಡು ತನ್ನ ಸಹೋದರನನ್ನು ದ್ವೇಷಿಸುವವನು ಇನ್ನೂ ಕತ್ತಲಲ್ಲೇ ಇದ್ದಾನೆ. 10 ತನ್ನ ಸಹೋದರನನ್ನು ಪ್ರೀತಿಸುವವನಾದರೋ ಬೆಳಕಿನಲ್ಲಿ ನೆಲೆಗೊಂಡಿರುತ್ತಾನೆ. ಎಡವಿ ಪಾಪದಲ್ಲಿ ಬೀಳಿಸುವಂಥದ್ದೇನೂ ಅವನಲ್ಲಿ ಇರದು. 11 ತನ್ನ ಸಹೋದರನನ್ನು ದ್ವೇಷಿಸುವವನು ಕತ್ತಲಲ್ಲಿ ಇದ್ದಾನೆ; ಕತ್ತಲಲ್ಲೇ ನಡೆಯುತ್ತಾನೆ. ಕತ್ತಲು ಅವನನ್ನು ಕುರುಡಾಗಿಸಿರುವುದರಿಂದ ಎತ್ತ ಹೋಗುತ್ತಿದ್ದಾನೆಂದು ಅವನಿಗೇ ತಿಳಿಯದು. 12 ಬರೆಯುತಿಹೆನು ಪ್ರಿಯಮಕ್ಕಳಿರಾ, ಇದನ್ನು ಏಕೆನೆ, ಕ್ರಿಸ್ತನಾಮದ ನಿಮಿತ್ತ ಕ್ಷಮಿಸಲಾಯಿತು ನಿಮ್ಮ ಪಾಪಗಳನ್ನು. 13 ಬರೆಯುತಿಹೆನು ತಂದೆಗಳಿರಾ, ಇದನ್ನು ಏಕೆನೆ, ಬಲ್ಲವರಾದಿರಿ ಆದಿಯಿಂದಿರುವಾತನನ್ನು. ಬರೆಯುತಿಹೆನು ಯುವಜನರಿರಾ, ಇದನ್ನು ಏಕೆನೆ, ನೀವು ಜಯಿಸಿದ್ದಾಯಿತು ಆ ಕಡುಗೇಡಿಗನನ್ನು. 14 ಬರೆದಿಹೆನು ಮಕ್ಕಳಿರಾ, ಇದನ್ನು ಏಕೆನೆ, ಬಲ್ಲವರಾದಿರಿ ಪರಮ ಪಿತನನ್ನು. ಬರೆದಿಹೆನು ಶಕ್ತಿಯುತ ಯುವಜನರಿರಾ, ಇದನ್ನು ಏಕೆನೆ, ನೆಲೆಗೊಳಿಸಿರುವಿರಿ ನಿಮ್ಮಲ್ಲಿ ದೈವವಾಕ್ಯವನ್ನು ಮಾತ್ರವಲ್ಲ, ನೀವು ಜಯಿಸಿದ್ದಾಯಿತು ಆ ಕಡುಗೇಡಿಗನನ್ನು. 15 ಲೋಕಕ್ಕೂ ಲೌಕಿಕವಾದವುಗಳಿಗೂ ನೀವು ಒಲಿಯಬಾರದು. ಈ ಲೋಕವನ್ನು ಒಲಿದರೆ ಪಿತನಲ್ಲಿ ನಿಮಗೆ ಒಲವಿಲ್ಲವೆಂದಾಯಿತು. 16 ಲೋಕಸಂಬಂಧವಾದ ದೈಹಿಕ ದುರಿಚ್ಛೆ, ಕಣ್ಣಿನ ಕಾಮುಕತೆ, ಐಶ್ವರ್ಯದ ಅಹಂಭಾವ - ಇಂಥವು ಪಿತನಿಂದ ಬಂದುವಲ್ಲ, ಲೋಕದಿಂದಲೇ ಬಂದುವು. 17 ಲೋಕವೂ ಅದರ ವ್ಯಾಮೋಹವೂ ಗತಿಸಿಹೋಗುವುವು. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಚಿರಂಜೀವಿಯಾಗಿ ಬಾಳುವನು. ಸತ್ಯದಿಂದ ಸುಳ್ಳು ಜನಿಸದು 18 ನನ್ನ ಪ್ರಿಯ ಮಕ್ಕಳೇ, ಅಂತಿಮ ಕಾಲ ಸಮೀಪಿಸಿತು. ಕ್ರಿಸ್ತವಿರೋಧಿ ಬರುವನೆಂದು ನೀವು ಕೇಳಿದ್ದೀರಿ. ಈಗಾಗಲೇ ಅನೇಕ ಕ್ರಿಸ್ತವಿರೋಧಿಗಳು ತಲೆದೋರಿದ್ದಾರೆ. ಇದರಿಂದ ಅಂತಿಮಕಾಲ ಸನ್ನಿಹಿತವಾಯಿತೆಂದು ನಮಗೆ ತಿಳಿದುಬರುತ್ತದೆ. 19 ಈ ಕ್ರಿಸ್ತವಿರೋಧಿಗಳು ನಮ್ಮವರಾಗಿರಲಿಲ್ಲ. ಆದಕಾರಣ, ಅವರು ನಮ್ಮನ್ನು ತೊರೆದರು. ಅವರು ನಮ್ಮವರೇ ಆಗಿದ್ದರೆ, ನಮ್ಮೊಂದಿಗೇ ಇರುತ್ತಿದ್ದರು. ಆದರೆ ಅವರು ನಮ್ಮನ್ನು ತೊರೆದು ಹೋದರು. ಇದರಿಂದ ಕ್ರೈಸ್ತರೆನಿಸಿಕೊಳ್ಳುವವರೆಲ್ಲರೂ ನಮ್ಮವರಲ್ಲ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ. 20 ನೀವಾದರೋ ಪರಿಶುದ್ಧವಾದವರಿಂದ ಅಭಿಷಿಕ್ತರಾಗಿದ್ದೀರಿ. ಸತ್ಯವನ್ನು ಅರಿತವರಾಗಿದ್ದೀರಿ. 21 ನೀವು ಸತ್ಯವನ್ನು ಅರಿಯದವರೆಂದು ಭಾವಿಸಿ ನಾನು ಬರೆಯುತ್ತಿಲ್ಲ, ನೀವು ಸತ್ಯವನ್ನು ಅರಿತವರು; ಸತ್ಯದಿಂದ ಸುಳ್ಳು ಜನಿಸದೆಂಬುದನ್ನು ತಿಳಿದವರು. ಆದುದರಿಂದ ನಾನು ನಿಮಗೆ ಬರೆದಿದ್ದೇನೆ. 22 ಅಸತ್ಯವಾದಿ ಎಂದರೆ ಯಾರು? ಯೇಸುವೇ ಕ್ರಿಸ್ತ ಎಂಬುದನ್ನು ಯಾರು ಅಲ್ಲಗಳೆಯುತ್ತಾನೋ ಅವನೇ ಅಸತ್ಯವಾದಿ; ಅವನೇ ಕ್ರಿಸ್ತವಿರೋಧಿ. ಅವನು ಪಿತನನ್ನು ಮತ್ತು ಪುತ್ರನನ್ನು ತಿರಸ್ಕರಿಸುತ್ತಾನೆ. 23 ಪುತ್ರನನ್ನು ತಿರಸ್ಕರಿಸುವವನು ಪಿತನನ್ನೂ ತಿರಸ್ಕರಿಸುತ್ತಾನೆ. ಪುತ್ರನನ್ನು ಅಂಗೀಕರಿಸುವವನು ಪಿತನನ್ನೂ ಅಂಗೀಕರಿಸುತ್ತಾನೆ. 24 ಮೊದಲಿನಿಂದಲೂ ನೀವು ಯಾವ ಸಂದೇಶವನ್ನು ಕೇಳಿದ್ದೀರೋ ಅದು ನಿಮ್ಮಲ್ಲಿ ನೆಲೆಸಲಿ. ಮೊದಲಿನಿಂದಲೂ ನೀವು ಕೇಳಿದ ಸಂದೇಶ ನಿಮ್ಮಲ್ಲಿ ನೆಲೆಸಿದರೆ ಪುತ್ರನಲ್ಲಿಯೂ ಪಿತನಲ್ಲಿಯೂ ನೀವು ನೆಲೆಸುತ್ತೀರಿ. 25 ಕ್ರಿಸ್ತಯೇಸು ನಮಗೆ ವಾಗ್ದಾನಮಾಡಿರುವ ನಿತ್ಯಜೀವ ಇದೇ. 26 ನಿಮ್ಮನ್ನು ಸನ್ಮಾರ್ಗದಿಂದ ತಪ್ಪಿಸಬೇಕೆಂದಿರುವವರನ್ನು ಕುರಿತು ಇದನ್ನು ನಿಮಗೆ ಬರೆದಿದ್ದೇನೆ. 27 ನೀವು ಕ್ರಿಸ್ತಯೇಸುವಿನಿಂದ ಅಭಿಷಿಕ್ತರಾಗಿದ್ದೀರಿ. ಆ ಅಭಿಷೇಕವು ನಿಮ್ಮಲ್ಲಿ ನೆಲೆಸಿದೆ. ಆದ್ದರಿಂದ ಯಾರೂ ನಿಮಗೆ ಬೋಧಿಸುವ ಅವಶ್ಯಕತೆಯಿಲ್ಲ. ಆ ಅಭಿಷೇಕವೇ ನಿಮಗೆ ಎಲ್ಲವನ್ನೂ ಬೋಧಿಸುತ್ತಾ ಬರುತ್ತದೆ. ಈ ಬೋಧನೆ ಸತ್ಯವಾದುದು, ಮಿಥ್ಯವಾದುದಲ್ಲ. ಅದರ ಪ್ರಕಾರವೇ ಕ್ರಿಸ್ತಯೇಸುವಿನಲ್ಲಿ ನೆಲೆಸಿರಿ. 28 ಹೌದು ಪ್ರಿಯ ಮಕ್ಕಳೇ, ಕ್ರಿಸ್ತಯೇಸು ಪ್ರತ್ಯಕ್ಷರಾಗುವಾಗ, ಅವರ ಪುನರಾಗಮನದ ಪ್ರಯುಕ್ತ ಅವರ ಮುಂದೆ ನಾವು ನಾಚಿಕೆಪಡದೆ ಧೈರ್ಯದಿಂದಿರುವಂತೆ ಅವರಲ್ಲಿ ನೆಲೆಗೊಂಡಿರೋಣ. 29 ಕ್ರಿಸ್ತಯೇಸು ಸತ್ಯಸ್ವರೂಪಿ ಎಂಬುದನ್ನು ನೀವು ಬಲ್ಲಿರಿ. ಎಂದೇ, ಸತ್ಯಮಾರ್ಗದಲ್ಲಿ ನಡೆಯುವ ಪ್ರತಿಯೊಬ್ಬನೂ ಅವರಿಂದ ಜನಿಸಿದವನು ಎಂಬುದು ನಿಮಗೆ ವೇದ್ಯವಾಗಿರಬೇಕು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India