1 ಯೋಹಾನನು 1 - ಕನ್ನಡ ಸತ್ಯವೇದವು C.L. Bible (BSI)ಸಜೀವವಾಣಿ 1 ನಿಮಗೆ ನಾವು ಪ್ರಚುರಪಡಿಸುವ ಸಜೀವವಾಣಿ ಆದಿಯಿಂದ ಇರುವಂಥಾದ್ದು. ಇದನ್ನು ಕಣ್ಣಾರೆ ಕಂಡಿದ್ದೇವೆ, ಕಿವಿಯಾರೆ ಕೇಳಿದ್ದೇವೆ, ಮನಸ್ಸಾರೆ ಗ್ರಹಿಸಿದ್ದೇವೆ ಮತ್ತು ಕೈಯಾರೆ ಮುಟ್ಟಿದ್ದೇವೆ. 2 ಆ ಜೀವ ಪ್ರತ್ಯಕ್ಷವಾಯಿತು. ಅದನ್ನು ನಾವು ನೋಡಿದ್ದೇವೆ. ಆ ಬಗ್ಗೆ ಸಾಕ್ಷಿ ಹೇಳುತ್ತೇವೆ. ಪಿತನ ಬಳಿಯಿದ್ದು ನಮಗೆ ಪ್ರತ್ಯಕ್ಷವಾದಂಥ ನಿತ್ಯಜೀವವನ್ನು ನಿಮಗೆ ಸಾರುತ್ತೇವೆ. 3 ಪಿತನೊಡನೆಯೂ ಅವರ ಪುತ್ರ ಕ್ರಿಸ್ತಯೇಸುವಿನೊಡನೆಯೂ ನಮಗಿರುವಂಥ ಅನ್ಯೋನ್ಯತೆಯಲ್ಲಿ ನೀವು ಸಹ ಭಾಗಿಗಳಾಗುವಂತೆ ನಾವು ಕಂಡುಕೇಳಿದ್ದನ್ನು ನಿಮಗೆ ಪ್ರಚುರಪಡಿಸುತ್ತೇವೆ. 4 ನಮ್ಮೆಲ್ಲರ ಆನಂದವು ಪರಿಪೂರ್ಣವಾಗುವಂತೆ ಇದನ್ನು ಬರೆಯುತ್ತಿದ್ದೇವೆ. ದೇವರೇ ಬೆಳಕು 5 ದೇವರೇ ಬೆಳಕು. ಅವರಲ್ಲಿ ಕತ್ತಲು ಎಂಬುದೇ ಇಲ್ಲ. ಅವರ ಪುತ್ರನಿಂದಲೇ ನಾವು ಕೇಳಿದ ಈ ಸಂದೇಶವನ್ನು ನಿಮಗೆ ಸಾರುತ್ತಿದ್ದೇವೆ. 6 ನಾವು ಕತ್ತಲಲ್ಲಿ ಬಾಳುತ್ತಾ ದೇವರೊಡನೆ ಅನ್ಯೋನ್ಯವಾಗಿದ್ದೇವೆಂದು ಹೇಳಿದರೆ ನಾವು ಸುಳ್ಳುಗಾರರು, ಸತ್ಯಕ್ಕನುಸಾರ ಬಾಳದವರು. 7 ಬದಲಿಗೆ, ದೇವರು ಬೆಳಕಿನಲ್ಲಿರುವಂತೆ ನಾವೂ ಬೆಳಕಿನಲ್ಲಿ ನಡೆದರೆ ನಮ್ಮಲ್ಲಿ ಪರಸ್ಪರ ಅನ್ಯೋನ್ಯತೆ ಇರುತ್ತದೆ. ಆಗ ದೇವರ ಪುತ್ರನಾದ ಯೇಸುವಿನ ರಕ್ತವು ನಮ್ಮನ್ನು ಎಲ್ಲ ಪಾಪದಿಂದಲೂ ಶುದ್ಧಗೊಳಿಸುತ್ತದೆ. 8 ನಮ್ಮಲ್ಲಿ ಪಾಪವಿಲ್ಲವೆಂದು ನಾವು ಹೇಳಿಕೊಂಡರೆ, ನಮ್ಮನ್ನು ನಾವೇ ವಂಚಿಸಿಕೊಳ್ಳುತ್ತೇವೆ ಮತ್ತು ಸತ್ಯವೆಂಬುದೇ ನಮ್ಮಲ್ಲಿ ಇರುವುದಿಲ್ಲ. 9 ಪ್ರತಿಯಾಗಿ, ನಮ್ಮ ಪಾಪಗಳನ್ನು ಒಪ್ಪಿಕೊಂಡರೆ, ಆಗ ನಂಬಿಕಸ್ಥರೂ ನೀತಿವಂತರೂ ಆದ ದೇವರು ನಮ್ಮ ಪಾಪಗಳನ್ನು ಕ್ಷಮಿಸಿ ಎಲ್ಲಾ ಅನೀತಿ - ಅಧರ್ಮಗಳಿಂದ ನಮ್ಮನ್ನು ಶುದ್ಧೀಕರಿಸುತ್ತಾರೆ. 10 ನಾವು ಪಾಪಮಾಡಲಿಲ್ಲವೆಂದು ಹೇಳಿದರೆ ದೇವರನ್ನು ಸುಳ್ಳುಗಾರರನ್ನಾಗಿಸುತ್ತೇವೆ ಮತ್ತು ಅವರ ವಾಣಿ ನಮ್ಮಲ್ಲಿ ಇರುವುದಿಲ್ಲ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India