ಮುನ್ನುಡಿ
ಏಷ್ಯಾ ಮೈನರ್ ಸೀಮೆಯ ಉತ್ತರಭಾಗದಲ್ಲಿ ಚದರಿದ್ದ ಕ್ರೈಸ್ತವಿಶ್ವಾಸಿಗಳಿಗೆ ಪ್ರೇಷಿತನಾದ ಪೇತ್ರನು ಬರೆದ ಪತ್ರ ಇದು. ಈ ಪತ್ರದಲ್ಲಿ ಕ್ರೈಸ್ತವಿಶ್ವಾಸಿಗಳನ್ನು, “ದೇವರಿಂದ ಆಯ್ಕೆಯಾದ ಜನಾಂಗ, ಮೀಸಲಾದ ಪ್ರಜೆ,” ಎಂದು ಕರೆದಿರುವುದು ಗಮನಾರ್ಹ. ಕ್ರೈಸ್ತಧರ್ಮಕ್ಕಾಗಿ ಚಿತ್ರಹಿಂಸೆಯನ್ನು ಅನುಭವಿಸುತ್ತಿದ್ದ ಭಕ್ತಾದಿಗಳು ತಮ್ಮ ವಿಶ್ವಾಸವನ್ನು ಕಳೆದುಕೊಳ್ಳದಂತೆ ಪ್ರೋತ್ಸಾಹಿಸುವುದೇ ಈ ಪತ್ರದ ಉದ್ದೇಶ.
ಲೇಖಕನು ಶುಭಸಂದೇಶವನ್ನು ಓದುಗರ ನೆನಪಿಗೆ ತರುತ್ತಾನೆ. ಯೇಸುಸ್ವಾಮಿಯ ಮರಣ, ಪುನರುತ್ಥಾನ ಮತ್ತು ಪುನರಾಗಮನವನ್ನು ಮುಂದಿಟ್ಟು ಅವರಲ್ಲಿ ವಿಶ್ವಾಸ, ನಿರೀಕ್ಷೆಯನ್ನು ತುಂಬಲು ಯತ್ನಿಸುತ್ತಾನೆ. ವಿಶ್ವಾಸಿಗಳು ತಾಳ್ಮೆಯಿಂದಲೂ ಕಷ್ಟಸಹಿಷ್ಣುತೆಯಿಂದಲೂ ಬಾಳಬೇಕು. ಹಿಂಸೆಬಾಧೆಗಳು ನಮ್ಮ ವಿಶ್ವಾಸವನ್ನು ಪರಿಶೋಧಿಸುವ ಅಗ್ನಿಕುಂಡ. ಇದರ ಪರಿಣಾಮವಾಗಿ ಕ್ರಿಸ್ತಯೇಸುವಿನ ಪುನರಾಗಮನ ದಿನದಂದು ಸಜ್ಜೀವವೆಂಬ ಸತ್ಫಲವನ್ನು ಪಡೆಯುತ್ತೇವೆ ಎಂದು ಅಭಯವನ್ನೀಯುತ್ತಾನೆ.
ಜೀವನದಲ್ಲಿ ಎಷ್ಟೇ ಎಡರುತೊಡರುಗಳಿದ್ದರೂ ನಾವು ಯೇಸುಕ್ರಿಸ್ತರಿಗೆ ಸೇರಿದವರು ಎಂಬುದನ್ನು ವಿಶ್ವಾಸಿಗಳು ಮನಸ್ಸಿನಲ್ಲಿ ಇಟ್ಟುಕೊಂಡು ಯೇಸುಸ್ವಾಮಿಗೆ ಜೀವಂತ ಸಾಕ್ಷಿಗಳಾಗಿ ಬಾಳಬೇಕೆಂದು ಲೇಖಕನು ಕರೆ ನಿಡುತ್ತಾನೆ.
ಪರಿವಿಡಿ
ಪೀಠಿಕೆ 1:1-2
ಜೀವೋದ್ಧಾರದ ನೆನಪು 1:3-12
ಪವಿತ್ರ ಜೀವನಕ್ಕೆ ಕರೆ 1:13—2:10
ಕ್ರೈಸ್ತ ಬಾಳ್ವೆಯಲ್ಲಿ ಕಷ್ಟಸಹಿಷ್ಣುತೆ 2:11—4:19
ಕ್ರೈಸ್ತರ ನಮ್ರ ಹಾಗೂ ಸೇವಾಸಕ್ತ ಜೀವನ 5:1-11
ಸಮಾಪ್ತಿ 5:12-14