1 ಪೇತ್ರನು 5 - ಕನ್ನಡ ಸತ್ಯವೇದವು C.L. Bible (BSI)ದೇವರ ಮಂದೆಯ ಪಾಲನೆ 1 ಕ್ರಿಸ್ತಯೇಸುವಿನ ಮರಣ -ಯಾತನೆಯನ್ನು ಕಣ್ಣಾರೆ ಕಂಡವನೂ ಮುಂದೆ ಪ್ರತ್ಯಕ್ಷವಾಗುವ ಮಹಿಮೆಯಲ್ಲಿ ಭಾಗಿಯಾಗಲಿರುವವನೂ ಸಭಾಪ್ರಮುಖನೂ ಆದ ನಾನು, ನಿಮ್ಮಲ್ಲಿ ಪ್ರಮುಖರಾದ ಇತರರನ್ನು ಪ್ರೋತ್ಸಾಹಿಸಿ ವಿನಂತಿಸುವುದೇನೆಂದರೆ: 2 ನನ್ನ ಜೊತೆಹಿರಿಯರೇ, ದೇವರು ನಿಮಗೆ ವಹಿಸಿಕೊಟ್ಟಿರುವ ಮಂದೆಯನ್ನು ಕಾಯಿರಿ. ಕಡ್ಡಾಯದಿಂದಲ್ಲ, ದೇವರ ಚಿತ್ತಾನುಸಾರ ಅಕ್ಕರೆಯಿಂದ ಕಾಯಿರಿ. ದ್ರವ್ಯದ ದುರಾಶೆಯಿಂದಲ್ಲ, ಸೇವಾಸಕ್ತಿಯಿಂದ ಕಾಯಿರಿ. 3 ನಿಮ್ಮ ಪಾಲನೆಗೆ ಒಳಗಾಗಿರುವವರ ಮೇಲೆ ದರ್ಪದಿಂದ ದೊರೆತನಮಾಡದೆ ದೇವರ ಮಂದೆಗೆ ಆದರ್ಶ ಮಾದರಿಗಳಾಗಿರಿ. 4 ಆಗ ಮಾತ್ರ, ಪ್ರಧಾನ ಕುರಿಗಾಹಿ ಪ್ರತ್ಯಕ್ಷನಾಗುವಾಗ ಮಲಿನವಾಗದ ಮಹಿಮಾನ್ವಿತ ಜಯಮಾಲೆಯನ್ನು ಪಡೆಯುವಿರಿ. 5 ಅಂತೆಯೇ ಯುವಜನರೇ, ನೀವು ಹಿರಿಯರಿಗೆ ವಿಧೇಯರಾಗಿ ನಡೆದುಕೊಳ್ಳಿ. ನೀವೆಲ್ಲರೂ ದೀನಮನೋಭಾವನೆಯನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಸೇವೆಮಾಡಿ. “ಗರ್ವಿಷ್ಠರನ್ನು ದೇವರು ವಿರೋಧಿಸುತ್ತಾರೆ. ನಮ್ರರಿಗಾದರೋ ಅವರು ದಯೆತೋರುತ್ತಾರೆ,” ಎಂದು ಪವಿತ್ರಗ್ರಂಥದಲ್ಲಿ ಲಿಖಿತವಾಗಿದೆ. 6 ದೇವರ ಪರಾಕ್ರಮಕ್ಕೆ ತಗ್ಗಿ ನಮ್ರರಾಗಿ ನಡೆದುಕೊಳ್ಳಿ. ಆಗ ಅವರು ನಿಮ್ಮನ್ನು ಸಕಾಲದಲ್ಲಿ ಮೇಲಕ್ಕೆತ್ತುವರು; 7 ನಿಮ್ಮ ಚಿಂತೆಯನ್ನೆಲ್ಲಾ ಅವರಿಗೇ ಬಿಟ್ಟುಬಿಡಿ. ನಿಮ್ಮ ಮೇಲೆ ಅವರಿಗೆ ಲಕ್ಷ್ಯವಿದೆ. 8 ಸ್ವಸ್ಥಚಿತ್ತರಾಗಿರಿ, ಜಾಗರೂಕರಾಗಿರಿ. ಏಕೆಂದರೆ, ನಿಮ್ಮ ಶತ್ರುವಾಗಿರುವ ಸೈತಾನನು ಗರ್ಜಿಸುವ ಸಿಂಹದಂತೆ, ಯಾರನ್ನು ಕಬಳಿಸುವುದೆಂದು ಅತ್ತಿತ್ತ ಹುಡುಕಾಡುತ್ತಿರುವನು. 9 ವಿಶ್ವಾಸದಲ್ಲಿ ದೃಢವಾಗಿದ್ದು ಅವನನ್ನು ಎದುರಿಸಿರಿ. ನಿಮ್ಮ ಸಹ ವಿಶ್ವಾಸಿಗಳು ಜಗತ್ತಿನಲ್ಲೆಲ್ಲಾ ಇಂಥ ಹಿಂಸೆಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂದು ನಿಮಗೆ ತಿಳಿದಿದೆ. 10 ಯೇಸುಕ್ರಿಸ್ತರಲ್ಲಿ ನಿಮ್ಮನ್ನು ತಮ್ಮ ಶಾಶ್ವತ ಮಹಿಮೆಗೆ ಕರೆದ ಕೃಪಾನಿಧಿಯಾದ ದೇವರು ನೀವು ಸ್ವಲ್ಪಕಾಲ ಹಿಂಸೆಬಾಧೆಯನ್ನು ಅನುಭವಿಸಿದ ನಂತರ ನಿಮ್ಮನ್ನು ಪೂರ್ವಸ್ಥಿತಿಗೆ ತರುವರು; ನಿಮ್ಮನ್ನು ಸ್ಥಿರಗೊಳಿಸಿ ಬಲಪಡಿಸುವರು. 11 ಅವರ ಆಳ್ವಿಕೆ ಯುಗಯುಗಾಂತರಕ್ಕೂ ಇರಲಿ. ಆಮೆನ್. ಅಂತಿಮ ವಂದನೆ 12 ನನ್ನ ಈ ಪುಟ್ಟ ಪತ್ರವನ್ನು ನಂಬಿಕಸ್ಥ ಸಹೋದರನಾದ ಸಿಲ್ವಾನನ ಸಹಾಯದಿಂದ ನಿಮಗೆ ಬರೆದಿರುತ್ತೇನೆ. ನಿಮ್ಮನ್ನು ಪ್ರೋತ್ಸಾಹಿಸಲೆಂದು ಮತ್ತು ಇದುವೇ ದೇವರ ನಿಜವಾದ ಅನುಗ್ರಹವೆಂದು ಸ್ಪಷ್ಟೀಕರಿಸಲು ಬರೆದಿದ್ದೇನೆ. ಈ ಅನುಗ್ರಹದಲ್ಲಿ ನೀವು ದೃಢವಾಗಿ ನಿಲ್ಲಿರಿ. 13 ನಿಮ್ಮ ಹಾಗೆ ದೇವರಿಂದ ಆಯ್ಕೆಯಾದ ಬಾಬಿಲೋನಿನಲ್ಲಿರುವ ಸಭೆ ನಿಮಗೆ ವಂದನೆಗಳನ್ನು ತಿಳಿಸುತ್ತದೆ. ಅಂತೆಯೇ, ನನ್ನ ಮಗನಂತಿರುವ ಮಾರ್ಕನು ನಿಮ್ಮನ್ನು ವಂದಿಸಿದ್ದಾನೆ. 14 ಪ್ರೀತಿಯ ಮುದ್ದನ್ನಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಯೇಸುಕ್ರಿಸ್ತರಲ್ಲಿರುವ ನಿಮ್ಮೆಲ್ಲರಿಗೂ ಶಾಂತಿಸಮಾಧಾನ ಲಭಿಸಲಿ! |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India