Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಪೇತ್ರನು 4 - ಕನ್ನಡ ಸತ್ಯವೇದವು C.L. Bible (BSI)


ಸುಧಾರಿತ ಜೀವನ

1 ಕ್ರಿಸ್ತಯೇಸು ದೈಹಿಕವಾಗಿ ಹಿಂಸೆಬಾಧೆಯನ್ನು ಅನುಭವಿಸಿದ್ದರಿಂದ ನೀವೂ ಅವರಲ್ಲಿದ್ದ ಅದೇ ಭಾವನೆಯಿಂದ ನಿಮ್ಮನ್ನು ಬಲಪಡಿಸಿಕೊಳ್ಳಿರಿ. ದೈಹಿಕವಾಗಿ ಹಿಂಸೆಪಡುವವನು ಪಾಪ ಜೀವನದೊಡನೆ ಸಂಬಂಧವನ್ನು ಕಡಿದುಕೊಂಡವನು.

2 ಉಳಿದಿರುವ ತನ್ನ ಜೀವಮಾನ ಕಾಲವನ್ನು ಲೌಕಿಕ ವ್ಯಾಮೋಹಗಳಲ್ಲಿ ಕಳೆಯದೆ ದೇವರ ಚಿತ್ತಕ್ಕನುಸಾರ ಕಳೆಯುತ್ತಾನೆ.

3 ಕ್ರೈಸ್ತರಲ್ಲದವರು ಮಾಡಲು ಇಚ್ಛಿಸುವುದನ್ನೆಲ್ಲಾ ನೀವು ಗತಕಾಲದಲ್ಲಿ ಮಾಡಿದ್ದು ಸಾಕು. ಆಗ ನೀವು ಅಶ್ಲೀಲತೆ, ಕಾಮ, ಕುಡುಕುತನ, ಅಮಲೇರುವಿಕೆ, ದುಂದೌತಣ ಮತ್ತು ಯೋಗ್ಯವಲ್ಲದ ವಿಗ್ರಹಾರಾಧನೆ - ಈ ಮುಂತಾದವುಗಳಿಗೆ ಒಳಗಾಗಿದ್ದಿರಿ.

4 ಈಗಲಾದರೋ ನೀವು ಮುಂಚಿನಂತೆ ಲಂಪಟ ಜೀವನದಲ್ಲಿ ಅವರೊಡನೆ ಬೆರೆಯದಿರುವುದನ್ನು ಕಂಡು ಸುಖೇದಾಶ್ಚರ್ಯದಿಂದ ನಿಮ್ಮನ್ನು ದೂಷಿಸುತ್ತಾರೆ.

5 ಜೀವಂತರಿಗೂ ಮೃತರಿಗೂ ನ್ಯಾಯತೀರಿಸಲು ಸಿದ್ಧವಾಗಿರುವ ದೇವರಿಗೆ ಅವರು ಲೆಕ್ಕಕೊಡಬೇಕಾಗುವುದು.

6 ಮೃತರಿಗೂ ಶುಭಸಂದೇಶವನ್ನು ಬೋಧಿಸಲಾಯಿತು. ಏಕೆಂದರೆ, ದೇಹದ ಮಟ್ಟಿಗೆ ಸಕಲ ಮಾನವರಂತೆ ಮರಣವೆಂಬ ತೀರ್ಪನ್ನು ಹೊಂದಿದ್ದರೂ ದೇವರ ಆತ್ಮದ ಮಟ್ಟಿಗೆ ದೇವರಂತೆಯೇ ಜೀವಿಸಲೆಂದು ಆ ಸಂದೇಶವನ್ನು ಬೋಧಿಸಲಾಯಿತು.


ವರದಾನಗಳು ಪರರ ಒಳಿತಿಗಾಗಿ

7 ಎಲ್ಲದರ ಅಂತ್ಯಕಾಲವು ಹತ್ತಿರವಾಯಿತು. ಈ ಕಾರಣ ನೀವು ಜಿತೇಂದ್ರಿಯರಾಗಿಯೂ ಜಾಗ್ರತರಾಗಿಯೂ ಪ್ರಾರ್ಥನೆಮಾಡುತ್ತಿರಿ.

8 ಎಲ್ಲಕ್ಕೂ ಮಿಗಿಲಾಗಿ ಒಬ್ಬರನ್ನೊಬ್ಬರು ಯಥಾರ್ಥವಾಗಿ ಪ್ರೀತಿಸಿರಿ. ಏಕೆಂದರೆ, ಪ್ರೀತಿ ಅಸಂಖ್ಯಾತ ಪಾಪಗಳನ್ನು ಅಳಿಸಿಹಾಕುತ್ತದೆ.

9 ಗೊಣಗುಟ್ಟದೆ ಒಬ್ಬರಿಗೊಬ್ಬರು ಅತಿಥಿಸತ್ಕಾರ ಮಾಡಿ.

10 ದೇವರ ವಿವಿಧ ವರಗಳ ವಿಷಯದಲ್ಲಿ ಉತ್ತಮ ನಿರ್ವಾಹಕನಂತೆ ಪ್ರತಿಯೊಬ್ಬನೂ ದೇವರು ತನಗೆ ಕೊಟ್ಟಿರುವ ವಿಶೇಷ ವರದಾನಗಳನ್ನು ಇತರರ ಒಳಿತಿಗಾಗಿ ಬಳಸಲಿ.

11 ಬೋಧಿಸುವ ವರವನ್ನು ಪಡೆದವನು ದೇವರ ವಾಕ್ಯವನ್ನು ಬೋಧಿಸುವವನಂತೆ ಬೋಧನೆಮಾಡಲಿ. ಸೇವೆಮಾಡುವ ವರವನ್ನು ಪಡೆದವನು, ದೇವರಿಂದ ಶಕ್ತಿಯನ್ನು ಪಡೆದವನಂತೆ ಸೇವೆಮಾಡಲಿ. ಇದರಿಂದ ಯೇಸುಕ್ರಿಸ್ತರ ಮುಖಾಂತರ ಎಲ್ಲದರಲ್ಲಿಯೂ ದೇವರಿಗೆ ಸ್ತುತಿಯುಂಟಾಗುವುದು. ಅವರಿಗೆ ಸದಾಕಾಲ ಮಹಿಮೆಯೂ ಸರ್ವಾಧಿಕಾರವೂ ಸಲ್ಲಲಿ. ಆಮೆನ್.


ಕ್ರೈಸ್ತವಿಶ್ವಾಸಕ್ಕಾಗಿ ಕಷ್ಟಸಹಿಷ್ಣುತೆ

12 ಪ್ರಿಯರೇ, ಪರಿಶೋಧನೆಗೆಂದು ನಿಮಗೆ ಬಂದೊದಗಿರುವ ಅಗ್ನಿಪರೀಕ್ಷೆಗಾಗಿ ಆಶ್ಚರ್ಯಪಡಬೇಡಿ. ಅನಿರೀಕ್ಷಿತವಾಗಿ ಏನೋ ಸಂಭವಿಸಿಬಿಟ್ಟಿತೆಂದು ವಿಸ್ಮಯಪಡಬೇಡಿ.

13 ಬದಲಿಗೆ, ಯೇಸುಕ್ರಿಸ್ತರ ಬಾಧೆಗಳಲ್ಲಿ ಪಾಲುಹೊಂದಿರುತ್ತೀರೆಂದು ಸಂತೋಷಪಡಿ; ಅವರ ಮಹಿಮೆಯು ಪ್ರತ್ಯಕ್ಷವಾಗುವಾಗ ಪೂರ್ಣ ಹರ್ಷಾನಂದವನ್ನು ಪಡೆಯುವಿರಿ.

14 ಕ್ರಿಸ್ತಯೇಸುವಿನ ನಾಮದ ನಿಮಿತ್ತ ನಿಂದೆ ಅವಮಾನಗಳಿಗೆ ಗುರಿಯಾದರೆ ನೀವು ಧನ್ಯರು! ಮಹಿಮಾನ್ವಿತ ದೇವರ ಆತ್ಮವು ನಿಮ್ಮಲ್ಲಿ ನೆಲಸಿರುವುದು.

15 ನಿಮ್ಮಲ್ಲಿ ಯಾರೂ ಕೊಲೆಗಾರ, ಕಳ್ಳ, ಕೆಡುಕ, ಕುಚೋದ್ಯಗಾರ, ಎಂಬ ಕಾರಣದಿಂದ ಹಿಂಸೆಬಾಧೆಗಳಿಗೆ ಗುರಿಯಾಗಬಾರದು.

16 ಅದಕ್ಕೆ ಪ್ರತಿಯಾಗಿ, ಒಬ್ಬನು ಕ್ರೈಸ್ತವಿಶ್ವಾಸಿ ಎಂಬ ಕಾರಣದಿಂದ ಹಿಂಸೆಯನ್ನು ಅನುಭವಿಸಿದರೆ ಅಂಥವನು ನಾಚಿಕೆಪಡಬೇಕಾಗಿಲ್ಲ; ಕ್ರೈಸ್ತವಿಶ್ವಾಸಿ ಎಂಬ ಆ ಹೆಸರನ್ನು ಪಡೆದುದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಲಿ.

17 ನ್ಯಾಯತೀರ್ಪಿನ ಕಾಲವು ಬಂದಿದೆ. ಮೊತ್ತಮೊದಲು ದೇವರ ಸ್ವಂತಜನರೇ ಆ ತೀರ್ಪಿಗೆ ಗುರಿಯಾಗುವರು. ದೇವಜನರಾದ ನಾವೇ ಅದಕ್ಕೆ ಮೊದಲು ಒಳಗಾಗುವುದಾದರೆ ದೇವರ ಶುಭಸಂದೇಶದಲ್ಲಿ ವಿಶ್ವಾಸವಿಡದವರ ಗತಿಯಾದರೂ ಏನು?

18 “ಸಜ್ಜನರೇ ಸದ್ಗತಿಯನ್ನು ಹೊಂದುವುದು ಕಷ್ಟವಾಗುವುದಾದರೆ ಇನ್ನು ಭಕ್ತಿಹೀನರೂ ಪಾಪಿಗಳೂ ಆದವರ ಪಾಡೇನು?” ಎಂದು ಪವಿತ್ರಗ್ರಂಥದಲ್ಲೇ ಬರೆದಿದೆ.

19 ಆದ್ದರಿಂದ, ದೇವರ ಚಿತ್ತಾನುಸಾರ ಹಿಂಸೆಬಾಧೆಯನ್ನು ಅನುಭವಿಸುವವರು ತಮ್ಮ ಸತ್ಕ್ರಿಯೆಗಳಲ್ಲಿ ನಿರತರಾಗಿರಲಿ. ಸೃಷ್ಟಿಕರ್ತನಿಗೆ ಶರಣಾಗಲಿ. ಆತ ಅವರನ್ನೆಂದಿಗೂ ಕೈಬಿಡನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು