1 ಪೇತ್ರನು 3 - ಕನ್ನಡ ಸತ್ಯವೇದವು C.L. Bible (BSI)ಸತಿಪತಿಯರ ಸನ್ನಡತೆ 1 ಅಂತೆಯೇ ಸ್ತ್ರೀಯರೇ, ನೀವು ನಿಮ್ಮ ಪತಿಯರಿಗೆ ವಿಧೇಯರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯವನ್ನು ನಂಬದೆ ಇರಬಹುದು. ಆದರೂ ಯಾವ ಮಾತುಕತೆಯಿಲ್ಲದೆ ನಿಮ್ಮ ಸನ್ನಡತೆಯಿಂದಲೇ ಅವರನ್ನು ಜಯಿಸಬಹುದು. 2 ಅವರು ಗಮನಿಸುವುದು ತಮ್ಮ ಪತ್ನಿಯರ ಭಯಭಕ್ತಿಯನ್ನು, ಸುಗುಣಶೀಲತೆಯನ್ನು. 3 ಕೇಶವಿನ್ಯಾಸ, ಚಿನ್ನಾಭರಣದ ತೊಡುಗ಼ೆ, ನಯನವುರಾದ ಉಡುಗೆ - ಈ ಮೊದಲಾದ ಹೊರಗಣ ಶೃಂಗಾರವೇ ನಿಮ್ಮ ಅಲಂಕಾರವಾಗಿರಬಾರದು. 4 ಬದಲಿಗೆ, ಶಾಶ್ವತವಾದ, ಶಾಂತ ಹಾಗೂ ಸೌಮ್ಯಗುಣಗಳಿಂದ ಕೂಡಿದ ಆಂತರ್ಯದ ಭೂಷಣವೇ ನಿಮ್ಮ ಅಲಂಕಾರವಾಗಿರಲಿ. ಇದೇ ದೇವರ ದೃಷ್ಟಿಯಲ್ಲಿ ಅತೀ ಅಮೂಲ್ಯವಾದುದು. 5 ಪ್ರಾಚೀನಕಾಲದ ದೈವಭಕ್ತೆಯರಾದ ಸ್ತ್ರೀಯರು ಹೀಗೆಯೇ ಸಿಂಗರಿಸಿಕೊಂಡು ತಮ್ಮ ತಮ್ಮ ಪತಿಯರಿಗೆ ವಿಧೇಯರಾಗಿದ್ದರು. 6 ಉದಾಹರಣೆಗೆ: ಸಾರಳು ತನ್ನ ಪತಿ ಅಬ್ರಹಾಮನಿಗೆ ವಿಧೇಯಳಾಗಿದ್ದು ಆತನನ್ನು, “ಯಜಮಾನ” ಎಂದು ಕರೆಯುತ್ತಿದ್ದಳು. ಯಾವ ಭಯಭೀತಿಯಿಲ್ಲದೆ ಸತ್ಕಾರ್ಯಗಳನ್ನು ಮಾಡುವವರಾಗಿದ್ದರೆ, ನೀವೂ ಸಾರಳ ಕುಮಾರ್ತಿಯರೇ ಹೌದು. 7 ಅದೇ ಪ್ರಕಾರ ಪುರುಷರೇ, ಸರಿಯಾದ ತಿಳುವಳಿಕೆಯಿಂದ ನಿಮ್ಮ ನಿಮ್ಮ ಪತ್ನಿಯರೊಡನೆ ಸಹಜೀವನ ನಡೆಸಿರಿ. ಅವರು ಅಬಲೆಯರು ಮಾತ್ರವಲ್ಲ, ಸಜ್ಜೀವ ಕೊಡುಗೆಗೆ ನಿಮ್ಮೊಂದಿಗೆ ಸಮಬಾಧ್ಯರು ಎಂದು ತಿಳಿದು ಅವರನ್ನು ಗೌರವಿಸಿರಿ. ಆಗ ನಿಮ್ಮ ಪ್ರಾರ್ಥನೆಗೆ ಅಡಚಣೆ ಉಂಟಾಗದು. ಸದಾಚಾರಕ್ಕಾಗಿ ಶಿಕ್ಷೆ - ಸಹಿಷ್ಣುತೆ 8 ಕಡೆಯದಾಗಿ ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ; ಪರಸ್ಪರ ಸಹಾನುಭೂತಿ ಇರಲಿ. ಒಡಹುಟ್ಟಿದವರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ; ದಯೆತೋರುವವರೂ ದೀನಭಾವವುಳ್ಳವರೂ ಆಗಿರಿ. 9 ಮುಯ್ಯಿಗೆ ಮುಯ್ಯಿ ತೀರಿಸಬೇಡಿರಿ; ಶಾಪಕ್ಕೆ ಪ್ರತಿಶಾಪ ಹಾಕದೆ ಆಶೀರ್ವಾದ ಮಾಡಿರಿ. ಹೀಗೆ ಮಾಡಿದರೆ ದೇವರ ಆಶೀರ್ವಾದವನ್ನು ಬಾಧ್ಯವಾಗಿ ಪಡೆಯುವಿರಿ. 10 “ಆನಂದಕರ ಜೀವನದ ಬಯಕೆ ಯಾರಿಗಿದೆಯೋ ಸುದಿನಗಳನು ಕಾಣುವ ಆಶೆ ಯಾರಿಗಿದೆಯೋ ಅಂಥವನು ಬಿಗಿಹಿಡಿಯಲಿ ನಾಲಿಗೆಯನು ಕೆಟ್ಟದನು ನುಡಿಯದಂತೆ ತಡೆಹಿಡಿಯಲಿ ತುಟಿಯನು ಕಪಟವನಾಡದಂತೆ. 11 ಕೆಡಕನ್ನು ಬಿಟ್ಟು ಒಳಿತನ್ನು ಕೈಗೊಳ್ಳಲಿ ಶಾಂತಿಯನರಸಿ ಅದರ ಸ್ಥಾಪನೆಗೆ ಶ್ರಮಿಸಲಿ. 12 ನೀತಿವಂತರನು ಕಾಯುವನು ಸರ್ವೇಶ್ವರನು ಅವರ ವಿಜ್ಞಾಪನೆಗೆ ಕಿವಿಗೊಡುವನು. ಕೆಡುಕರಿಗಾದರೋ ಆತನು ವಿಮುಖನು,” ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ. 13 ನೀವು ಒಳ್ಳೆಯದನ್ನು ಮಾಡುವುದರಲ್ಲಿ ಆಸಕ್ತರಾಗಿದ್ದರೆ ನಿಮಗೆ ಕೇಡು ಬಗೆಯುವವರು ಯಾರು? 14 ನ್ಯಾಯನೀತಿಯ ನಿಮಿತ್ತ ಹಿಂಸೆಯನ್ನು ಅನುಭವಿಸಬೇಕಾಗಿ ಬಂದರೂ ನೀವು ಭಾಗ್ಯವಂತರು. ಮಾನವರ ಬೆದರಿಕೆಗೆ ಹೆದರಬೇಡಿ, ಕಳವಳ ಪಡಬೇಡಿ. 15 ಕ್ರಿಸ್ತಯೇಸುವನ್ನು ಪ್ರಭುವೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠಾಪಿಸಿರಿ. ನಿಮ್ಮಲ್ಲಿರುವ ನಂಬಿಕೆ ನಿರೀಕ್ಷೆಯ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಅವರಿಗೆ ತಕ್ಕ ಉತ್ತರ ಕೊಡಲು ಸರ್ವದಾ ಸಿದ್ಧರಾಗಿರಿ. 16 ಹಾಗೆ ಉತ್ತರ ಕೊಡುವಾಗ ಮರ್ಯಾದೆಯಿಂದಲೂ ಶಾಂತಿಸಮಾಧಾನದಿಂದಲೂ ಮಾತನಾಡಿ. ನಿಮ್ಮ ಮನಸ್ಸಾಕ್ಷಿ ಶುದ್ಧವಾಗಿರಲಿ. ಆಗ ಉತ್ತಮವಾದ ನಿಮ್ಮ ಕ್ರಿಸ್ತೀಯ ವರ್ತನೆಯನ್ನು ಕಂಡು ದೂಷಿಸಿದವರು, ನಿಮ್ಮನ್ನು ನಿಂದಿಸಿದ್ದಕ್ಕಾಗಿ ತಾವೇ ನಾಚಿಕೆಪಡುವರು. 17 ಕೆಟ್ಟದ್ದನ್ನು ಮಾಡಿ ಶಿಕ್ಷೆಯನ್ನು ಅನುಭವಿಸುವುದಕ್ಕಿಂತ ದೇವರ ಚಿತ್ತವಾದರೆ, ಒಳ್ಳೆಯದನ್ನು ಮಾಡಿ ಶಿಕ್ಷೆಯನ್ನು ಅನುಭವಿಸುವುದೇ ಲೇಸು. 18 ಅಂತೆಯೇ ಕ್ರಿಸ್ತಯೇಸು ನೀತಿವಂತರಾಗಿದ್ದರೂ ಅನೀತಿವಂತರಿಗಾಗಿ ಪ್ರಾಣತ್ಯಾಗಮಾಡಿದರು. ಪಾಪ ನಿವಾರಣಾರ್ಥವಾಗಿ ಒಂದೇ ಸಾರಿಗೆ ಮಾತ್ರವಲ್ಲ, ಎಂದೆಂದಿಗೂ ನಮ್ಮನ್ನು ದೇವರ ಬಳಿಗೆ ಸೇರಿಸಲು ಸತ್ತರು. ದೇಹದಲ್ಲಿ ಅವರು ವಧಿತರಾದರೂ ಆತ್ಮದಲ್ಲಿ ಜೀವಂತರಾದರು. 19 ಆಧ್ಯಾತ್ಮಿಕವಾಗಿಯೇ ತೆರಳಿ ಸೆರೆಯಲ್ಲಿದ್ದ ಆತ್ಮಗಳಿಗೆ ಶುಭಸಂದೇಶವನ್ನು ಬೋಧಿಸಿದರು. 20 ಪೂರ್ವಕಾಲದಲ್ಲಿ ನೋವನು ನಾವೆಯನ್ನು ಕಟ್ಟುತ್ತಿದ್ದಾಗ ತಾಳ್ಮೆಯಿಂದಿದ್ದ ದೇವರಿಗೆ ಅವಿಧೇಯರಾಗಿದ್ದ ಆತ್ಮಗಳೇ ಅವು. ನಾವೆಯೊಳಗಿದ್ದು ಕೆಲವರು, ಅಂದರೆ ಎಂಟು ಜನರು, ಜಲದಿಂದ ರಕ್ಷಣೆಹೊಂದಿದರು. 21 ಇದು ದೀಕ್ಷಾಸ್ನಾನವನ್ನು ಸೂಚಿಸುವ ಒಂದು ಸಂಕೇತ. ಈ ದೀಕ್ಷಾಸ್ನಾನ ಯೇಸುಕ್ರಿಸ್ತರ ಪುನರುತ್ಥಾನದ ಮೂಲಕ ನಿಮಗೆ ಜೀವೋದ್ಧಾರವನ್ನು ನೀಡುತ್ತದೆ. ಇದು ಕೇವಲ ದೇಹದ ಮಾಲಿನ್ಯವನ್ನು ಹೋಗಲಾಡಿಸುವಂಥಾದ್ದಲ್ಲ; ಶುದ್ಧಮನಸ್ಸಿನಿಂದ ದೇವರಿಗೆ ಮಾಡುವ ಪ್ರಮಾಣ ವಚನವಾಗಿದೆ. 22 ಯೇಸುಕ್ರಿಸ್ತರು ಸ್ವರ್ಗಕ್ಕೆ ಏರಿ, ದೇವರ ಬಲಪಾರ್ಶ್ವದಲ್ಲಿ ಆಸೀನರಾಗಿದ್ದಾರೆ; ದೂತಗಣಗಳ ಮೇಲೂ ಸ್ವರ್ಗೀಯ ಶಕ್ತರ ಹಾಗೂ ಅಧಿಕಾರಿಗಳ ಮೇಲೂ ಆಳ್ವಿಕೆ ನಡೆಸುತ್ತಿದ್ದಾರೆ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India