Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಪೇತ್ರನು 1 - ಕನ್ನಡ ಸತ್ಯವೇದವು C.L. Bible (BSI)


ಪೀಠಿಕೆ

1 ಪೊಂತ, ಗಲಾತ್ಯ, ಕಪ್ಪದೋಕ್ಯ, ಏಷ್ಯಾ, ಬಿಥೂನಿಯ ಪ್ರಾಂತ್ಯಗಳಲ್ಲಿ ಚದರಿಹೋಗಿ ನಿರಾಶ್ರಿತರಂತೆ ಜೀವಿಸುತ್ತಿರುವ ದೇವಜನರಿಗೆ - ಯೇಸುಕ್ರಿಸ್ತರ ಪ್ರೇಷಿತನಾದ ಪೇತ್ರನು ಬರೆಯುವ ಪತ್ರ :

2 ನೀವು ಯೇಸುಕ್ರಿಸ್ತರಿಗೆ ಶರಣಾಗಿ ಅವರ ರಕ್ತದಿಂದ ಶುದ್ಧೀಕರಣಹೊಂದಲು ತಂದೆಯಾದ ದೇವರ ಸಂಕಲ್ಪಾನುಸಾರ ಆಯ್ಕೆಯಾದವರು; ಅವರ ಆತ್ಮದ ಮುಖಾಂತರ ಪವಿತ್ರೀಕರಿಸಲಾದವರು. ನಿಮಗೆ ಕೃಪಾಶೀರ್ವಾದವೂ ಶಾಂತಿಸಮಾಧಾನವೂ ಸಮೃದ್ಧಿಯಾಗಿ ಲಭಿಸಲಿ!


ಜೀವಂತ ನಿರೀಕ್ಷೆ

3 ನಮ್ಮ ಪ್ರಭು ಯೇಸುಕ್ರಿಸ್ತರ ತಂದೆಯಾದ ದೇವರಿಗೆ ಸ್ತುತಿಸ್ತೋತ್ರ ಸಲ್ಲಲಿ! ಯೇಸುಕ್ರಿಸ್ತರನ್ನು ಮರಣದಿಂದ ಪುನರುತ್ಥಾನಗೊಳಿಸುವುದರ ಮೂಲಕ ದೇವರು ತಮ್ಮ ಅಪಾರ ಕರುಣೆಯಿಂದ ನಮಗೆ ಹೊಸ ಜನ್ಮವನ್ನು ಮತ್ತು ಜೀವಂತ ನಿರೀಕ್ಷೆಯನ್ನು ನೀಡಿದ್ದಾರೆ.

4 ಹೀಗೆ ಅವರು, ತಮ್ಮ ಸ್ವಂತ ಜನರಿಗಾಗಿ ಸ್ವರ್ಗದಲ್ಲಿ ಕಾದಿರಿಸಿರುವ ಅಳಿಯದ, ಅಕ್ಷಯವಾದ, ಅನಂತವಾದ ಸಿರಿಸಂಪತ್ತಿಗೆ ನಿಮ್ಮನ್ನು ಬಾಧ್ಯರನ್ನಾಗಿ ಮಾಡಿದ್ದಾರೆ.

5 ಅಂತ್ಯಕಾಲದಲ್ಲಿ ಪ್ರತ್ಯಕ್ಷವಾಗಲಿರುವ ಜೀವೋದ್ಧಾರವು ವಿಶ್ವಾಸಿಗಳಾದ ನಿಮಗೆ ಲಭಿಸುವಂತೆ ದೇವರು ತಮ್ಮ ಶಕ್ತಿಯಿಂದ ನಿಮ್ಮನ್ನು ಕಾಪಾಡುತ್ತಾರೆ.

6 ಸದ್ಯಕ್ಕೆ ನೀವು ಕೊಂಚಕಾಲ ಹಲವಿಧವಾದ ಪರಿಶೋಧನೆಗಳ ನಿಮಿತ್ತ ದುಃಖವನ್ನು ಅನುಭವಿಸಬೇಕಾಗಿದ್ದರೂ ಪ್ರತ್ಯಕ್ಷವಾಗಲಿರುವ ಆ ಸಿರಿಸಂಪತ್ತನ್ನು ಜ್ಞಾಪಿಸಿಕೊಂಡು ಹರ್ಷಚಿತ್ತರಾಗಿರಿ.

7 ಪರಿಶೋಧನೆಗಳು ಬಂದೊದಗುವುದು ನಿಮ್ಮ ವಿಶ್ವಾಸವನ್ನು ಪುಟವಿಡುವುದಕ್ಕಾಗಿಯೇ. ನಶಿಸಿಹೋಗುವ ಬಂಗಾರವೂ ಕೂಡ ಬೆಂಕಿಯಿಂದ ಪರಿಶೋಧಿತವಾಗುತ್ತದೆ. ಬಂಗಾರಕ್ಕಿಂತಲೂ ಬಹು ಅಮೂಲ್ಯವಾದ ನಿಮ್ಮ ವಿಶ್ವಾಸವು ಶೋಧಿತವಾಗಬೇಕು. ಆಗ ಮಾತ್ರ ಯೇಸುಕ್ರಿಸ್ತರು ಪ್ರತ್ಯಕ್ಷವಾಗುವ ದಿನದಂದು ನಿಮಗೆ ಪ್ರಶಂಸೆ, ಪ್ರತಿಷ್ಠೆ ಹಾಗೂ ಪ್ರತಿಭೆ ದೊರಕುತ್ತವೆ.

8 ಕ್ರಿಸ್ತಯೇಸುವನ್ನು ನೀವು ನೋಡದಿದ್ದರೂ ಅವರನ್ನು ಪ್ರೀತಿಸುತ್ತೀರಿ. ನೀವೀಗ ಕಣ್ಣಾರೆ ಕಾಣದಿದ್ದರೂ ಅವರನ್ನು ವಿಶ್ವಾಸಿಸುತ್ತೀರಿ.

9 ಇದರ ಅಂತಿಮ ಫಲವಾಗಿ ಜೀವೋದ್ಧಾರವನ್ನು ಪಡೆಯುತ್ತೀರಿ. ಈ ಕಾರಣದಿಂದ ಅವರ್ಣನೀಯವಾದ ಮಹದಾನಂದದಿಂದ ನಲಿಯುತ್ತೀರಿ.

10 ಈ ಜೀವೋದ್ಧಾರವನ್ನು ಕುರಿತೇ ಪ್ರವಾದಿಗಳು ಸೂಕ್ಷ್ಮವಾಗಿ ವಿಚಾರಿಸಿ ಸಂಶೋಧನೆ ನಡೆಸಿದರು. ದೇವರು ನಿಮಗೆ ಕೊಡಲಿದ್ದ ಈ ವರವನ್ನು ಕುರಿತೇ ಅವರು ಪ್ರವಾದಿಸಿದರು.

11 ಕ್ರಿಸ್ತಯೇಸು ಅನುಭವಿಸಬೇಕಾಗಿದ್ದ ಮರಣವನ್ನು, ಯಾತನೆಯನ್ನು ಮತ್ತು ಅನಂತರದ ಪುನರುತ್ಥಾನದ ಮಹಿಮೆಯನ್ನು ಈ ಪ್ರವಾದಿಗಳು ಪ್ರವಾದಿಸುವಾಗ, ತಮ್ಮಲ್ಲಿದ್ದ ಕ್ರಿಸ್ತಾತ್ಮವು ಇದಕ್ಕೆ ಯಾವ ಸಮಯ ಸಂದರ್ಭವನ್ನು ಸೂಚಿಸುತ್ತದೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿದರು.

12 ಈ ಸೇವಾಕಾರ್ಯವನ್ನು ಅವರು ಸ್ವಾರ್ಥಸಾಧನೆಗಾಗಿ ಅಲ್ಲ, ನಿಮಗೋಸ್ಕರವಾಗಿಯೇ ಮಾಡುತ್ತಿರುವುದಾಗಿ ಅವರಿಗೆ ತಿಳಿಸಲಾಗಿತ್ತು. ಅವರು ಪ್ರವಾದಿಸಿದ ಘಟನೆಗಳು ಈಗ ಸಂಭವಿಸಿವೆ ಎಂಬುದನ್ನು ಸ್ವರ್ಗದಿಂದ ಕಳುಹಿಸಲಾದ ಪವಿತ್ರಾತ್ಮರ ಶಕ್ತಿಯಿಂದ, ಶುಭಸಂದೇಶವನ್ನು ಸಾರಿದವರ ಮುಖಾಂತರ ನಿಮಗೆ ಪ್ರಕಟಿಸಲಾಗಿದೆ. ದೇವದೂತರು ಸಹ ವೀಕ್ಷಿಸಲು ಅಪೇಕ್ಷಿಸುವಂಥ ಸಂಗತಿಗಳಿವು.


ಪವಿತ್ರ ಜೀವನಕ್ಕೆ ಕರೆ

13 ಆದ್ದರಿಂದ ನೀವು ಸ್ವಸ್ಥಚಿತ್ತರಾಗಿರಿ. ನಿಮ್ಮ ಮನಸ್ಸು ಕಾರ್ಯೋನ್ಮುಖವಾಗಿರಲಿ. ಯೇಸುಕ್ರಿಸ್ತರು ಪ್ರತ್ಯಕ್ಷವಾಗುವಾಗ ನಿಮಗೆ ಲಭಿಸಲಿರುವ ಸೌಭಾಗ್ಯದಲ್ಲಿ ಪೂರ್ಣ ನಿರೀಕ್ಷೆ ಉಳ್ಳವರಾಗಿರಿ.

14 ವಿಧೇಯರಾದ ಮಕ್ಕಳಂತೆ ನಡೆದುಕೊಳ್ಳಿ. ನೀವು ಅಜ್ಞಾನಿಗಳಾಗಿದ್ದಾಗ ದುರಿಚ್ಛೆಗಳಿಗೆ ಈಡಾಗಿದ್ದಿರಿ; ಈಗ ಅವುಗಳಿಗೆ ಎಡೆಕೊಡಬೇಡಿ.

15 ಅದಕ್ಕೆ ಬದಲು ನಿಮ್ಮನ್ನು ಕರೆದ ದೇವರು ಪವಿತ್ರರಾಗಿರುವಂತೆ ನೀವೂ ನಿಮ್ಮ ನಡೆನುಡಿಯಲ್ಲಿ ಪವಿತ್ರರಾಗಿರಿ.

16 ಏಕೆಂದರೆ, “ನಾನು ಪವಿತ್ರನಾಗಿರುವುದರಿಂದ ನೀವೂ ಪವಿತ್ರರಾಗಿರಿ,” ಎಂದು ಲಿಖಿತವಾಗಿದೆ.

17 ನೀವು ದೇವರಿಗೆ ಪ್ರಾರ್ಥನೆಮಾಡುವಾಗ, ಅವರನ್ನು “ತಂದೆಯೇ” ಎಂದು ಸಂಬೋಧಿಸುತ್ತೀರಿ. ಅವರು ಪಕ್ಷಪಾತಿ ಅಲ್ಲ. ಎಲ್ಲರಿಗೂ ಅವರವರ ಕೃತ್ಯಗಳಿಗೆ ತಕ್ಕಂತೆ ನ್ಯಾಯತೀರ್ಪು ನೀಡುವವರು. ಆದ್ದರಿಂದ ನಿಮ್ಮ ಇಹಲೋಕದ ಯಾತ್ರೆಯನ್ನು ಭಯಭಕ್ತಿಯಿಂದ ಸಾಗಿಸಿರಿ.

18 ನಿಮ್ಮ ಪೂರ್ವಜರಿಂದ ಪರಂಪರೆಯಾಗಿ ಬಂದಿರುವ ನಿರರ್ಥಕ ನಡವಳಿಕೆಯಿಂದ ನಿಮ್ಮನ್ನು ಬಿಡುಗಡೆಮಾಡಲು ಕೊಡಲಾದ ಬೆಲೆಯು ಎಂಥದ್ದೆಂದು ನಿಮಗೆ ತಿಳಿದಿದೆ. ಅದು ನಶಿಸಿಹೋಗುವ ಬೆಳ್ಳಿಬಂಗಾರವಲ್ಲ.

19 ಬದಲಿಗೆ, ಯಾವ ನ್ಯೂನತೆಯೂ ಇಲ್ಲದ, ಯಾವ ಕಳಂಕವೂ ಇಲ್ಲದ ಬಲಿಯ ಕುರಿಮರಿಯಂಥ ಕ್ರಿಸ್ತಯೇಸುವಿನ ಅಮೂಲ್ಯ ರಕ್ತವೇ ಆ ಬೆಲೆ.

20 ವಿಶ್ವಸೃಷ್ಟಿಗೆ ಮೊದಲೇ ಯೇಸುಕ್ರಿಸ್ತರನ್ನು ದೇವರು ಇದಕ್ಕೆಂದು ಗೊತ್ತುಮಾಡಿದ್ದರು. ಈ ಅಂತಿಮ ದಿನಗಳಲ್ಲಿ ನಿಮಗೋಸ್ಕರ ಯೇಸು ಪ್ರತ್ಯಕ್ಷರಾದರು.

21 ಮರಣದಿಂದ ಪುನರುತ್ಥಾನಗೊಳಿಸಿ ಮಹಿಮೆಪಡಿಸಿದ ದೇವರಲ್ಲಿ ನೀವು ವಿಶ್ವಾಸವಿಟ್ಟದ್ದು ಇವರ ಮುಖಾಂತರವೇ. ಹೀಗೆ ನಿಮ್ಮ ವಿಶ್ವಾಸವೂ ನಿರೀಕ್ಷೆಯೂ ದೇವರಲ್ಲೇ ನೆಲೆಗೊಂಡಿವೆ.

22 ಸತ್ಯಕ್ಕೆ ಶರಣಾಗಿ ಆತ್ಮಶುದ್ಧಿಹೊಂದಿರುವ ನೀವು ಸಹೋದರರನ್ನು ನಿಷ್ಕಪಟದಿಂದ ಪ್ರೀತಿಸಬಲ್ಲಿರಿ. ಎಂದೇ, ಒಬ್ಬರನ್ನೊಬ್ಬರು ಹೃತ್ಪೂರ್ವಕವಾಗಿಯೂ ಯಥಾರ್ಥವಾಗಿಯೂ ಪ್ರೀತಿಸಿರಿ.

23 ನೀವು ಸಜೀವವಾದ ಅನಂತ ದೈವವಾಕ್ಯದ ಮೂಲಕ ಹೊಸಜನ್ಮವನ್ನು ಪಡೆದಿದ್ದೀರಿ; ಈ ಜನ್ಮವನ್ನು ನೀವು ಪಡೆದಿರುವುದು ಮರ್ತ್ಯಮಾನವನಿಂದಲ್ಲ, ಅಮರ ದೇವರಿಂದ.

24 ಪವಿತ್ರಗ್ರಂಥದಲ್ಲಿ ಬರೆದಿರುವಂತೆ : ನರಮಾನವರೆಲ್ಲರೂ ಗರಿಹುಲ್ಲಿನಂತೆ ಅವರ ವೈಭವವೆಲ್ಲವೂ ಹುಲ್ಲಿನ ಹೂವಿನಂತೆ. ಹುಲ್ಲೊಣಗಿ ಹೂ ಬಾಡಿಬೀಳುವುದು ಪ್ರಭುವಿನ ವಾಕ್ಯವಾದರೋ ಶಾಶ್ವತವಾಗಿ ನಿಲ್ಲುವುದು.

25 ಈ ವಾಕ್ಯವೇ ನಿಮಗೆ ಸಾರಲಾದ ಶುಭಸಂದೇಶ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು