Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಪೂರ್ವಕಾಲ ವೃತ್ತಾಂತ 21 - ಕನ್ನಡ ಸತ್ಯವೇದವು C.L. Bible (BSI)


ದಾವೀದನು ಮಾಡಿಸಿದ ಜನಗಣತಿ
( ೨ ಸಮು. 24:1-25 )

1 ಸೈತಾನನು ಇಸ್ರಯೇಲರಿಗೆ ವಿರೋಧವಾಗಿ ಎದ್ದು ಇಸ್ರಯೇಲರ ಜನಗಣತಿ ಮಾಡುವುದಕ್ಕೆ ದಾವೀದನನ್ನು ಪ್ರೇರಿಸಿದನು.

2 ದಾವೀದನು ಯೋವಾಬನನ್ನೂ ಜನಾಧಿಪತಿಗಳನ್ನೂ ಕರೆದು, “ನನಗೆ ಜನರ ಲೆಕ್ಕ ಗೊತ್ತಾಗುವ ಹಾಗೆ ನೀವು ಬೇರ್ಷೆಬದಿಂದ ದಾನ್ ಊರಿನವರೆಗೂ ಸಂಚರಿಸಿ ಇಸ್ರಯೇಲರನ್ನು ಲೆಕ್ಕಮಾಡಿಕೊಂಡು ಬನ್ನಿ,” ಎಂದು ಆಜ್ಞಾಪಿಸಿದನು.

3 ಆಗ ಯೋವಾಬನು, “ನನ್ನ ಒಡೆಯರಾದ ಅರಸರೇ, ಸರ್ವೇಶ್ವರ ತಮ್ಮ ಪ್ರಜೆಗಳನ್ನು ನೂರರಷ್ಟು ಹೆಚ್ಚಿಸಲಿ; ಅವರೆಲ್ಲರೂ ನನ್ನ ಒಡೆಯರ ಸೇವಕರಷ್ಟೇ. ಆದರೆ ಒಡೆಯರು ಇಂಥದನ್ನು ಅಪೇಕ್ಷಿಸಿದ್ದೇಕೆ? ಇಸ್ರಯೇಲರನ್ನು ಅಪರಾಧಕ್ಕೆ ಗುರಿಮಾಡುವುದೇಕೆ?” ಎಂದನು.

4 ಆದರೆ ಅರಸನು ಯೋವಾಬನಿಗೆ ಕಿವಿಗೊಡದೆ ತನ್ನ ಮಾತನ್ನೇ ಸಾಧಿಸಿದ್ದರಿಂದ, ಅವನು ಹೊರಟುಹೋಗಿ ಇಸ್ರಯೇಲರ ಪ್ರಾಂತ್ಯಗಳಲ್ಲೆಲ್ಲಾ ಸಂಚರಿಸಿ ಜೆರುಸಲೇಮಿಗೆ ಹಿಂದಿರುಗಿದನು.

5 ಯೋವಾಬನು ದಾವೀದನಿಗೆ ಒಪ್ಪಿಸಿದ ಜನಗಣತಿಯ ಅಂಕೆಸಂಖ್ಯೆಗಳು ಇವು: ಇಸ್ರಯೇಲರಲ್ಲಿ ಯುದ್ಧಕ್ಕೆ ಹೋಗತಕ್ಕ ಸೈನಿಕರು ಹನ್ನೊಂದು ಲಕ್ಷ; ಯೆಹೂದ್ಯರಲ್ಲಿ ನಾಲ್ಕು ಲಕ್ಷದ ಎಪ್ಪತ್ತು ಸಾವಿರ.

6 ಅರಸನ ಆಜ್ಞೆ ಯೋವಾಬನಿಗೆ ಹಿಡಿಸಲಿಲ್ಲವಾದ್ದರಿಂದ, ಅವನು ಲೇವಿ, ಬೆನ್ಯಾಮೀನ್ ಕುಲಗಳವರ ಜನಗಣತಿಯನ್ನು ಮಾಡಲಿಲ್ಲ.

7 ಜನಗಣತಿ ಮಾಡಿದ್ದು ದೇವರಿಗೆ ಕೆಟ್ಟದ್ದು ಎಂದು ಕಂಡಿತು. ಆದ್ದರಿಂದ ಅವರು ಇಸ್ರಯೇಲರನ್ನು ಶಿಕ್ಷಿಸಿದರು.

8 ಆಗ ದಾವೀದನು, “ನಾನು ಬುದ್ಧಿಹೀನ ಕಾರ್ಯವನ್ನು ಮಾಡಿ ಪಾಪಿಯಾದೆ; ದಯವಿಟ್ಟು ನಿಮ್ಮ ದಾಸನ ಅಪರಾಧವನ್ನು ಕ್ಷಮಿಸಿ,” ಎಂದು ದೇವರನ್ನು ಪ್ರಾರ್ಥಿಸಿದನು.

9 ದೇವರು ದಾವೀದನ ದರ್ಶಿಯಾದ ಗಾದನಿಗೆ,

10 “ನೀನು ದಾವೀದನ ಹತ್ತಿರಕ್ಕೆ ಹೋಗಿ ಅವನಿಗೆ, ‘ನಾನು ಮೂರು ವಿಧವಾದ ಶಿಕ್ಷೆಯನ್ನು ನಿನ್ನ ಮುಂದಿಡುತ್ತೇನೆ. ಅವುಗಳಲ್ಲಿ ಯಾವುದನ್ನು ನಿನ್ನ ಮೇಲೆ ಬರಮಾಡಬೇಕೋ ಆರಿಸಿಕೋ ಎಂದು ಸರ್ವೇಶ್ವರ ಹೇಳುತ್ತಾರೆ’ ಎಂಬುದಾಗಿ ತಿಳಿಸು,” ಎಂದರು.

11 ಆಗ ಗಾದನು ದಾವೀದನ ಬಳಿಗೆ ಬಂದು, “ಸರ್ವೇಶ್ವರ ಹೇಳುವುದನ್ನು ಕೇಳು:

12 ‘ಮೂರು ವರ್ಷಗಳ ಕಾಲ ಕ್ಷಾಮ ಉಂಟಾಗಬೇಕೋ? ಇಲ್ಲವೆ ಮೂರು ತಿಂಗಳುಗಳವರೆಗೆ ನಿನ್ನ ಶತ್ರುಗಳ ಚಿತ್ರಹಿಂಸೆಗೆ ಬಲಿಯಾಗುವುದು ಬೇಕೋ? ಇಲ್ಲವೆ ಇಸ್ರಯೇಲರ ಸಮಸ್ತ ಪ್ರಾಂತ್ಯಗಳಿಗೆ ಸರ್ವೇಶ್ವರ ಕಳುಹಿಸುವ ಸಂಹಾರಕ ದೂತನಿಂದ ಉಂಟಾಗುವ ಮೂರು ದಿನಗಳ ಘೋರ ವ್ಯಾಧಿರೂಪವಾದ ಸರ್ವೇಶ್ವರನ ಶಿಕ್ಷೆ ಬೇಕೋ? ಈ ಮೂರರಲ್ಲಿ ಒಂದನ್ನು ಆರಿಸಿಕೋ’ ನನ್ನನ್ನು ಕಳುಹಿಸಿದವರಿಗೆ ಯಾವ ಉತ್ತರವನ್ನು ತೆಗೆದುಕೊಂಡು ಹೋಗಬೇಕು, ಆಲೋಚಿಸಿ ಹೇಳು,” ಎಂದು ಹೇಳಿದನು.

13 ಅದಕ್ಕೆ ದಾವೀದನು, “ನಾನು ಬಹಳ ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದೇನೆ. ಸರ್ವೇಶ್ವರನ ಕೈಯಲ್ಲೇ ಬೀಳುತ್ತೇನೆ; ಅವರು ಕೃಪಾಪೂರ್ಣರು, ಮನುಷ್ಯರ ಕೈಯಲ್ಲಿ ಬೀಳಲೊಲ್ಲೆ,” ಎಂದು ಹೇಳಿದನು.

14 ಆಗ ಸರ್ವೇಶ್ವರ ಇಸ್ರಯೇಲರ ಮೇಲೆ ವ್ಯಾಧಿಯನ್ನು ಬರಮಾಡಿದರು; ಅವರಲ್ಲಿ ಇಪ್ಪತ್ತು ಸಾವಿರ ಜನರು ಸತ್ತರು.

15 ದೇವರು ಜೆರುಸಲೇಮನ್ನು ಸಹ ಸಂಹರಿಸಬೇಕೆಂದು ದೂತನನ್ನು ಕಳುಹಿಸಿದರು. ಆದರೆ ಆ ದೂತನು ಸಂಹರಿಸುವುದಕ್ಕಿದ್ದಾಗ ಸರ್ವೇಶ್ವರ ಅದನ್ನು ಕಂಡು, ಆ ಕೇಡಿನ ವಿಷಯದಲ್ಲಿ ದುಃಖಪಟ್ಟರು. ಸಂಹಾರಕ ದೂತನಿಗೆ, “ಸಾಕು, ನಿನ್ನ ಕೈಯನ್ನು ಹಿಂದೆಗೆ,” ಎಂದು ಆಜ್ಞಾಪಿಸಿದರು. ಆಗ ಸರ್ವೇಶ್ವರನ ದೂತನು ಯೆಬೂಸಿಯನಾದ ಒರ್ನಾನನ ಕಣದಲ್ಲಿ ನಿಂತನು.

16 ದಾವೀದನು ಕಣ್ಣೆತ್ತಿ ನೋಡಿ ಸರ್ವೇಶ್ವರನ ದೂತನು ಭೂಮ್ಯಾಕಾಶಗಳ ನಡುವೆ ನಿಂತಿರುವುದನ್ನೂ ಚಾಚಿದ ಕೈಯಲ್ಲಿ ಜೆರುಸಲೇಮಿಗೆ ವಿರೋಧವಾಗಿ ಹಿರಿದ ಕತ್ತಿ ಇರುವುದನ್ನೂ ಕಂಡನು. ಆಗ ಅವನೂ ಹಿರಿಯರೂ ಗೋಣಿತಟ್ಟನ್ನು ಉಟ್ಟುಕೊಂಡು ಬೋರಲಾಗಿ ಬಿದ್ದರು.

17 ದಾವೀದನು ದೇವರಿಗೆ, “ಜನರನ್ನು ಲೆಕ್ಕಿಸಬೇಕೆಂದು ಆಜ್ಞಾಪಿಸಿದವನು ನಾನಲ್ಲವೇ; ಮಹಾಪಾಪ ಮಾಡಿದವನು ನಾನೇ; ಕುರಿಗಳಂತಿರುವ ಈ ಜನರು ಏನು ಮಾಡಿದ್ದಾರೆ? ಸರ್ವೇಶ್ವರಾ, ನನ್ನ ದೇವರೇ, ನಿಮ್ಮ ಕತ್ತಿ ನಿಮ್ಮ ಜನರನ್ನು ಬಾಧಿಸದೆ, ಅವರಿಗೆ ವಿರೋಧವಾಗಿ ಇರದೆ, ನನಗೂ ನನ್ನ ಮನೆಯವರಿಗೂ ವಿರೋಧ ಆಗಿರಲಿ,” ಎಂದು ಬೇಡಿಕೊಂಡನು.

18 ಆಗ ಸರ್ವೇಶ್ವರನ ದೂತನು ಗಾದನಿಗೆ, “ಯೆಬೂಸಿಯನಾದ ಒರ್ನಾನನ ಕಣದಲ್ಲಿ ಸರ್ವೇಶ್ವರನಿಗಾಗಿ ಒಂದು ಬಲಿಪೀಠವನ್ನು ಕಟ್ಟಿಸುವುದಕ್ಕೆ ಹೋಗಬೇಕೆಂದು ದಾವೀದನಿಗೆ ಹೇಳು,” ಎಂದು ಆಜ್ಞಾಪಿಸಿದನು.

19 ದಾವೀದನು ಗಾದನ ಮುಖಾಂತರ ತನಗಾದ ಸರ್ವೇಶ್ವರನ ಅಪ್ಪಣೆಯಂತೆ ಹೊರಟನು.

20 ಅಷ್ಟರಲ್ಲಿ ಗೋದಿಯನ್ನು ತುಳಿಸುತ್ತಿದ್ದ ಒರ್ನಾನನು ದೂತನನ್ನು ನೋಡಿದ್ದನು. ಅವನೊಡನಿದ್ದ ಅವನ ನಾಲ್ಕು ಮಂದಿ ಮಕ್ಕಳು ಅಡಗಿಕೊಂಡಿದ್ದರು.

21 ದಾವೀದನು ತನ್ನ ಬಳಿಗೆ ಬರುವುದನ್ನು ಒರ್ನಾನನು ಕಂಡು, ಕಣವನ್ನು ಬಿಟ್ಟುಹೋಗಿ, ಅವನಿಗೆ ಅಡ್ಡಬಿದ್ದನು.

22 ದಾವೀದನು ಅವನಿಗೆ, “ನಿನ್ನ ಕಣವನ್ನೂ ಭೂಮಿಯನ್ನೂ ನನಗೆ ಕೊಡು; ವ್ಯಾಧಿಯು ಜನರನ್ನು ಬಿಟ್ಟುಹೋಗುವಂತೆ ನಾನು ಅದರಲ್ಲಿ ಸರ್ವೇಶ್ವರನಿಗಾಗಿ ಒಂದು ಬಲಿಪೀಠವನ್ನು ಕಟ್ಟಿಸುತ್ತೇನೆ; ಪೂರ್ಣ ಕ್ರಯ ತೆಗೆದುಕೊಂಡು ಅದನ್ನು ಕೊಡು,” ಎಂದು ಹೇಳಿದನು.

23 ಆಗ ಒರ್ನಾನನು ದಾವೀದನಿಗೆ, “ನನ್ನ ಒಡೆಯರಾದ ಅರಸರು ತಮಗೆ ಇಷ್ಟವಾದದ್ದನ್ನು ತೆಗೆದುಕೊಂಡು ಬಲಿ ಅರ್ಪಿಸಬಹುದು. ಬಲಿದಾನಕ್ಕೆ ಇಲ್ಲಿ ಹೋರಿಗಳೂ ಸೌದೆಗೆ ಹಂತೀಕುಂಟೆಗಳೂ ನೈವೇದ್ಯಕ್ಕೆ ಗೋದಿಯೂ ಇರುತ್ತವೆ, ಇವೆಲ್ಲವನ್ನೂ ಕೊಡುತ್ತೇನೆ,” ಎಂದು ಹೇಳಿದನು.

24 ಅರಸ ದಾವೀದನು ಒರ್ನಾನನಿಗೆ, “ಹಾಗಲ್ಲ, ನಾನು ನಿನ್ನಿಂದ ಪೂರ್ಣಕ್ರಯಕ್ಕೆ ತೆಗೆದುಕೊಳ್ಳುತ್ತೇನೆ. ನಿನ್ನದನ್ನು ಕ್ರಯವಿಲ್ಲದೆ ತೆಗೆದುಕೊಂಡು ಸರ್ವೇಶ್ವರನಿಗೆ ಬಲಿಯಾಗಿ ಅರ್ಪಿಸಲು ನನಗೆ ಇಷ್ಟವಿಲ್ಲ,” ಎಂದು ಹೇಳಿದನು.

25 ಅಂತೆಯೇ ಆ ಭೂಮಿಗಾಗಿ ಅವನಿಗೆ ಆರುನೂರು ಬಂಗಾರದ ನಾಣ್ಯಗಳನ್ನು ಕೊಟ್ಟು,

26 ಅಲ್ಲಿ ಸರ್ವೇಶ್ವರಸ್ವಾಮಿಗಾಗಿ ಬಲಿಪೀಠವನ್ನು ಕಟ್ಟಿಸಿದನು. ಅದರ ಮೇಲೆ ದಹನಬಲಿಗಳನ್ನೂ ಶಾಂತಿಸಮಾಧಾನ ಬಲಿಗಳನ್ನೂ ಅರ್ಪಿಸಿ ಸರ್ವೇಶ್ವರನನ್ನು ಪ್ರಾರ್ಥಿಸಿದನು. ಸರ್ವೇಶ್ವರ ಅವನ ಮೊರೆಯನ್ನು ಆಲಿಸಿ, ಆಕಾಶದಿಂದ ಬಲಿಪೀಠದ ಮೇಲೆ ಬೆಂಕಿಯನ್ನು ಬರಮಾಡಿ,

27 ಆ ಕತ್ತಿಯನ್ನು ಒರೆಯಲ್ಲಿ ಹಾಕಬೇಕೆಂದು ದೂತನಿಗೆ ಆಜ್ಞಾಪಿಸಿದರು. ಅವನು ಹಾಗೆಯೇ ಮಾಡಿದನು.

28 ಮೋಶೆ ಮರುಭೂಮಿಯಲ್ಲಿ ಮಾಡಿಸಿದ್ದ ಸರ್ವೇಶ್ವರನ ಗುಡಾರವೂ ಬಲಿಪೀಠವೂ ಆ ಕಾಲದಲ್ಲಿ ಗಿಬ್ಯೋನಿನ ಪೂಜಾಸ್ಥಳದಲ್ಲೇ ಇದ್ದವು.

29 ಆದರೂ ದಾವೀದನು ಸರ್ವೇಶ್ವರನ ದೂತ ಹಿಡಿದಿದ್ದ ಕತ್ತಿಗೆ ಹೆದರಿ, ದೇವದರ್ಶನಕ್ಕಾಗಿ ಅಲ್ಲಿಗೆ ಹೋಗಲಾರದೆ, ಯೆಬೂಸಿಯನಾದ ಒರ್ನಾನನ ಕಣದಲ್ಲಿಯೇ ಬಲಿಯರ್ಪಿಸಿದನು.

30 ಆ ಕಾಲದಲ್ಲಿ ದಾವೀದನಿಗೆ ಸರ್ವೇಶ್ವರನಿಂದ ಸದುತ್ತರ ದೊರಕಿದ್ದರಿಂದ ಅವನು,

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು