Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಪೂರ್ವಕಾಲ ವೃತ್ತಾಂತ 19 - ಕನ್ನಡ ಸತ್ಯವೇದವು C.L. Bible (BSI)


ಅಮ್ಮೋನಿಯರ ಮತ್ತು ಸಿರಿಯಾದವರ ವಿರುದ್ಧ ದಾವೀದನ ಯುದ್ಧ
( ೨ ಸಮು. 10:1-19 )

1 ಇದಾದನಂತರ ಅಮ್ಮೋನಿಯರ ಅರಸ ನಾಹಾಷನು ಸತ್ತನು. ಅವನಿಗೆ ಬದಲಾಗಿ ಅವನ ಮಗ ಅರಸನಾದನು.

2 ದಾವೀದನು, “ನಾಹಾಷನು ನನಗೆ ಸ್ನೇಹ ತೋರಿಸಿದ್ದರಿಂದ ನಾನೂ ಅವನ ಮಗ ಹಾನೂನನಿಗೆ ಸ್ನೇಹ ತೋರಿಸುವೆನು,” ಎಂದುಕೊಂಡು ಪಿತೃಶೋಕದಲ್ಲಿದ್ದ ಹಾನೂನನನ್ನು ಸಂತೈಸುವುದಕ್ಕಾಗಿ ತನ್ನ ದೂತರನ್ನು ಕಳುಹಿಸಿದನು. ಅವರು ಹಾನೂನನನ್ನು ಸಂತೈಸುವುದಕ್ಕಾಗಿ ಅಮ್ಮೋನಿಯರ ದೇಶಕ್ಕೆ ಬಂದರು.

3 ಅಲ್ಲಿನ ನಾಯಕರು ಹಾನೂನನಿಗೆ, “ದಾವೀದನು ನಿಮ್ಮ ಬಳಿಗೆ ಸಂತೈಸುವವರನ್ನು ಕಳುಹಿಸಿದ್ದಾನೆ. ಇದರಿಂದ ಅವನು ನಿಮ್ಮ ತಂದೆಯನ್ನು ಸನ್ಮಾನಿಸುತ್ತಾನೆ ಎಂದು ತಿಳಿಯುತ್ತೀರೋ? ಇಲ್ಲ, ಅವನ ಆಳುಗಳು ದೇಶವನ್ನು ಸಂಚರಿಸಿ ನೋಡಿ ಅದನ್ನು ಸ್ವಾಧೀನ ಮಾಡಿಕೊಳ್ಳಬೇಕೆಂದು ಬಂದಿದ್ದಾರೆ,” ಎಂದು ದೂರಿತ್ತರು.

4 ಆದುದರಿಂದ ಹಾನೂನನು ದಾವೀದನ ಸೈನಿಕರನ್ನು ಬಂಧಿಸಿದನು. ಗಡ್ಡದ ಅರ್ಧಭಾಗವನ್ನು ಬೋಳಿಸಿ ಅವರ ಸೊಂಟದ ಕೆಳಭಾಗದ ನಿಲುವಂಗಿಗಳನ್ನು ಕತ್ತರಿಸಿ ಕಳುಹಿಸಿಬಿಟ್ಟನು.

5 ಅವರು ಹೋಗಿ ಈ ವರ್ತಮಾನವನ್ನು ದಾವೀದನಿಗೆ ಹೇಳಿಕಳುಹಿಸಿದರು. ಬಹಳವಾಗಿ ಅಪಮಾನಹೊಂದಿದ ಅವರಿಗೆ ಆಗ ದಾವೀದನು ಆಳುಗಳ ಮುಖಾಂತರ, “ನಿಮ್ಮ ಗಡ್ಡ ಬೆಳೆಯುವವರೆಗೆ ನೀವು ಜೆರಿಕೋವಿನಲ್ಲಿದ್ದು ಅನಂತರ ಬನ್ನಿ,” ಎಂದು ಹೇಳಿಸಿದನು.

6 ತಾವು ದಾವೀದನಿಗೆ ವೈರಿಗಳಾದೆವು ಎಂದು ಹಾನೂನನಿಗೂ ಅಮ್ಮೋನಿಯರಿಗೂ ತಿಳಿಯಿತು. ಆದುದರಿಂದ ಅವರು ಎರಡು ನದಿಗಳ ಮಧ್ಯದಲ್ಲಿರುವ ಸಿರಿಯಾ ಸೀಮೆಯಿಂದಲೂ ಸಿರಿಯಾದ ಮಾಕದಿಂದಲೂ ಚೊಬಾ ರಾಜ್ಯದಿಂದಲೂ ರಥಗಳನ್ನೂ ರಾಹುತರನ್ನೂ ತರಿಸುವುದಕ್ಕಾಗಿ ಮೂವತ್ತನಾಲ್ಕು ಸಾವಿರ ಕಿಲೋಗ್ರಾಂ ಬೆಳ್ಳಿಯನ್ನು ಕಳುಹಿಸಿದರು.

7 ಆಗ ಮೂವತ್ತೆರಡು ಸಾವಿರ ಮಂದಿ ರಥಬಲದವರೂ ಮಾಕದ ಅರಸನೂ ಅವನ ದಂಡಾಳುಗಳೂ ಅವರ ಸಹಾಯಕ್ಕಾಗಿ ಮೆದಬ ಊರಿನ ಮುಂದೆ ಪಾಳೆಯ ಮಾಡಿಕೊಂಡರು.

8 ಈ ಸುದ್ದಿ ದಾವೀದನಿಗೆ ಮುಟ್ಟಿತು. ಅವನು ಯೋವಾಬನನ್ನೂ ಎಲ್ಲಾ ಶೂರಸೈನಿಕರನ್ನೂ ಕಳುಹಿಸಿದನು.

9 ಕೂಡಲೆ ಅಮ್ಮೋನಿಯರು ಹೊರಗೆ ಬಂದು ಊರುಬಾಗಿಲಿನ ಬಳಿಯಲ್ಲಿ ವ್ಯೂಹಕಟ್ಟಿದರು. ಅವರ ಸಹಾಯಕ್ಕಾಗಿ ಬಂದ ಅರಸರು ಪ್ರತ್ಯೇಕವಾಗಿ ಮೈದಾನದಲ್ಲಿ ಇಳಿದುಕೊಂಡಿದ್ದರು.

10 ಯೋವಾಬನು ತನ್ನ ಮುಂದೆಯೂ ಹಿಂದೆಯೂ ಯುದ್ಧ ಪ್ರಾರಂಭವಾದದ್ದನ್ನು ಕಂಡು ಇಸ್ರಯೇಲರಲ್ಲಿ ಶ್ರೇಷ್ಠರಾದ ಎಲ್ಲಾ ಸೈನಿಕರನ್ನು ಆರಿಸಿಕೊಂಡು ಅವರನ್ನು ಸಿರಿಯಾದವರಿಗೆ ಇದಿರಾಗಿ ನಿಲ್ಲಿಸಿದನು.

11 ಉಳಿದ ಜನರನ್ನು ತನ್ನ ತಮ್ಮನಾದ ಅಬೀಷೈಯ ವಶಕ್ಕೆ ಕೊಟ್ಟು,

12 “ಸಿರಿಯಾದವರು ನನ್ನನ್ನು ಸೋಲಿಸುವಂತೆ ಕಂಡರೆ ನೀನು ನನ್ನ ಸಹಾಯಕ್ಕೆ ಬಾ; ಅಮ್ಮೋನಿಯರು ನಿನ್ನನ್ನು ಸೋಲಿಸುವಂತೆ ಕಂಡರೆ ನಾನು ನಿನ್ನ ಸಹಾಯಕ್ಕೆ ಬರುತ್ತೇನೆ.

13 ಧೈರ್ಯದಿಂದಿರು, ನಮ್ಮ ಜನರಿಗಾಗಿ ಹಾಗು ನಮ್ಮ ದೇವರ ಪಟ್ಟಣಗಳಿಗಾಗಿ ನಮ್ಮ ಪೌರುಷವನ್ನು ತೋರಿಸೋಣ; ಸರ್ವೇಶ್ವರ ತಮಗೆ ಸರಿಕಾಣುವಂಥದನ್ನು ಮಾಡಲಿ,” ಎಂದು ಹೇಳಿ ಅವನನ್ನು ಅಮ್ಮೋನಿಯರಿಗೆ ವಿರೋಧವಾಗಿ ಕಳುಹಿಸಿದನು.

14 ಯೋವಾಬನೂ ಅವನ ಜನರೂ ಸಿರಿಯಾದವರಿಗೆ ವಿರೋಧವಾಗಿ ಯುದ್ಧ ಪ್ರಾರಂಭಿಸಿದಾಗ ಸಿರಿಯಾದವರು ಓಡಿಹೋದರು.

15 ಇವರು ಓಡಿಹೋಗುವುದನ್ನು ಅಮ್ಮೋನಿಯರು ಕಂಡು ಅವರೂ ಅವನ ತಮ್ಮ ಅಬೀಷೈಯ ಎದುರಿನಿಂದ ಓಡಿಹೋಗಿ ಪಟ್ಟಣವನ್ನು ಹೊಕ್ಕರು. ಯೋವಾಬನು ಜೆರುಸಲೇಮಿಗೆ ಹೋದನು.

16 ಸಿರಿಯಾದವರಿಗೆ ತಮ್ಮ ಸೈನ್ಯ ಇಸ್ರಯೇಲರಿಂದ ಪರಾಭವಗೊಂಡಿತೆಂದು ಗೊತ್ತಾಯಿತು. ಎಂದೇ ಯೂಫ್ರೆಟಿಸ್ ನದಿಯ ಆಚೆಯಲ್ಲಿದ್ದ ಸಿರಿಯಾದವರನ್ನು ಕರೇ ಕಳುಹಿಸಿದರು. ಹದರೆಜೆರನ ಸೇನಾಪತಿಯಾದ ಶೋಫಕನು ಅವರ ನಾಯಕನಾದನು.

17 ಈ ಸುದ್ದಿ ದಾವೀದನಿಗೆ ಮುಟ್ಟಿದಾಗ ಅವನು ಇಸ್ರಯೇಲರೆಲ್ಲರನ್ನೂ ಕೂಡಿಸಿಕೊಂಡು ಜೋರ್ಡನ್ ನದಿಯನ್ನು ದಾಟಿ, ಸಿರಿಯಾದವರ ಸಮೀಪಕ್ಕೆ ಬಂದು, ಅವರೊಡನೆ ಕಾಳಗ ನಡೆಸಲು ವ್ಯೂಹಕಟ್ಟಿದನು.

18 ಸಿರಿಯಾದವರು ಯುದ್ಧಕ್ಕೆ ನಿಂತಾಗ ಇಸ್ರಯೇಲರ ಮುಂದೆ ಸೋತು ಓಡಿಹೋದರು;ದಾವೀದನು ಸಿರಿಯಾದವರ ಏಳುಸಾವಿರ ರಥಗಳನ್ನು ಹಾಳುಮಾಡಿದನು. ನಲವತ್ತು ಸಾವಿರ ಮಂದಿ ಕಾಲಾಳುಗಳನ್ನು ಸದೆಬಡಿದನು. ಸೇನಾಪತಿಯಾದ ಶೋಫಕನನ್ನೂ ಕೊಂದುಬಿಟ್ಟನು.

19 ಹದರೆಜೆರನಿಗೆ ದಾಸರಾಗಿ ಇದ್ದವರು ಇಸ್ರಯೇಲರ ಮುಂದೆ ತಮ್ಮ ಕೈಸಾಗದೆಂದು ತಿಳಿದು, ದಾವೀದನೊಡನೆ ಸಂಧಾನ ಮಾಡಿಕೊಂಡು ಅವನಿಗೆ ಅಧೀನರಾದರು.ಅಂದಿನಿಂದ ಸಿರಿಯಾದವರು ಅಮ್ಮೋನಿಯರಿಗೆ ಸಹಾಯಮಾಡಲು ಸಮ್ಮತಿಸಲಿಲ್ಲ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು