Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಪೂರ್ವಕಾಲ ವೃತ್ತಾಂತ 15 - ಕನ್ನಡ ಸತ್ಯವೇದವು C.L. Bible (BSI)


ದೇವಮಂಜೂಷದ ಸ್ಥಳಾಂತರಕ್ಕೆ ಸಿದ್ಧತೆ

1 ದಾವೀದ ನಗರದಲ್ಲಿ ದಾವೀದನು ತನ್ನ ವೈಯಕ್ತಿಕ ಉಪಯೋಗಕ್ಕಾಗಿ ಮನೆಗಳನ್ನು ಕಟ್ಟಿಸಿಕೊಂಡನು. ದೇವಮಂಜೂಷಕ್ಕೂ ಒಂದು ಸ್ಥಳವನ್ನು ಸಿದ್ಧಪಡಿಸಿ ಅದಕ್ಕೆ ಒಂದು ಗುಡಾರವನ್ನು ಹಾಕಿಸಿದನು.

2 ‘ಲೇವಿಯರು ಮಾತ್ರವೇ ದೇವಮಂಜೂಷವನ್ನು ಹೊರಬೇಕು. ಏಕೆಂದರೆ ಸದಾಕಾಲ ತಮ್ಮ ಸೇವೆಮಾಡುವುದಕ್ಕೂ ಮಂಜೂಷವನ್ನು ಹೊರುವುದಕ್ಕೂ ಸರ್ವೇಶ್ವರನಿಂದ ಆಯ್ಕೆಯಾದವರು ಅವರೇ’ ಎಂದು ನಿಶ್ಚಯಿಸಿಕೊಂಡನು.

3 ತಾನು ಸಿದ್ಧಪಡಿಸಿದ ಸ್ಥಳಕ್ಕೆ ಸರ್ವೇಶ್ವರನ ಮಂಜೂಷವನ್ನು ತರುವುದಕ್ಕಾಗಿ ಎಲ್ಲಾ ಇಸ್ರಯೇಲರನ್ನು ಜೆರುಸಲೇಮಿಗೆ ಬರಮಾಡಿಕೊಂಡನು.

4 ಅನಂತರ ಆರೋನನ ಸಂತತಿಯವರನ್ನೂ ಲೇವಿಯರನ್ನೂ ಕರೆಯಿಸಿದನು.

5 ಅಂತೆಯೇ, ಲೇವಿಯರಲ್ಲಿ ಕೇಹತನ ಊರಿಯೇಲನೆಂಬ ಮೇಲ್ವಿಚಾರಕನು ತನ್ನ ಕುಲದ ನೂರಿಪ್ಪತ್ತು ಸದಸ್ಯರೊಂದಿಗೆ ಬಂದನು.

6 ಮೆರಾರೀ ಗೋತ್ರದಿಂದ ಮೇಲ್ವಿಚಾರಕ ಅಸಾಯನು ಇನ್ನೂರ ಇಪ್ಪತ್ತು ಜನರೊಂದಿಗೆ ಬಂದನು;

7 ಗೇರ್ಷೋನ್ ಗೋತ್ರದಿಂದ ಮೇಲ್ವಿಚಾರಕ ಯೋವೇಲ ನೂರ ಮೂವತ್ತು ಜನರೊಂದಿಗೆ ಬಂದನು;

8 ಎಲೀಚಾಫನ್ಯ ಗೋತ್ರದಿಂದ ಮೇಲ್ವಿಚಾರಕ ಶೆಮಾಯ ಇನ್ನೂರು ಜನರೊಂದಿಗೆ ಬಂದನು;

9 ಹೆಬ್ರೋನ್ ಗೋತ್ರದಿಂದ ಮೇಲ್ವಿಚಾರಕ ಎಲೀಯೋಲನು ಎಂಬತ್ತು ಜನರೊಂದಿಗೆ ಬಂದನು.

10 ಉಜ್ಜೀಯೇಲನ ಗೋತ್ರದಿಂದ ಮೇಲ್ವಿಚಾರಕ ಅಮ್ಮೀನಾದಾಬ ನೂರಹನ್ನೆರಡು ಜನರೊಂದಿಗೆ ಬಂದನು.

11 ದಾವೀದನು ಯಾಜಕರಾದ ಚಾದೋಕ್ ಹಾಗು ಎಬ್ಯಾತಾರರೆಂಬುವರನ್ನು ಕರೆಯಿಸಿದನು; ಅಂತೆಯೇ ಲೇವಿಯರಾದ ಊರಿಯೇಲ್, ಅಸಾಯ, ಯೋವೇಲ್, ಶೆಮಾಯ, ಎಲೀಯೋಲ್ ಮತ್ತು ಅಮ್ಮೀನಾದಾಬ್ ಎಂಬವರನ್ನೂ ಕರೆಯಿಸಿದನು.

12 “ನೀವು ಲೇವಿಯರ ಗೋತ್ರಗಳ ನಾಯಕರು; ನಾನು ಸಿದ್ಧಪಡಿಸಿದ ಸ್ಥಳಕ್ಕೆ ಇಸ್ರಯೇಲರ ದೇವರಾದ ಸರ್ವೇಶ್ವರನ ಮಂಜೂಷವನ್ನು ತರುವುದಕ್ಕಾಗಿ ನೀವು ಹಾಗು ನಿಮ್ಮ ಜೊತೆಯಲ್ಲಿ ಲೇವಿಯರೂ ನಿಮ್ಮನ್ನೇ ಶುದ್ಧಪಡಿಸಿಕೊಳ್ಳಿರಿ.

13 ಮೊದಲೊಂದು ಸಾರಿ, ಅದನ್ನು ತರಲು ನೀವು ಇಲ್ಲದೇ ಹೋದುದರಿಂದ ಹಾಗು ನಾವು ತಕ್ಕ ರೀತಿಯಲ್ಲಿ ಅವರನ್ನು ಆರಾಧಿಸದೇ ಹೋದುದಕ್ಕಾಗಿ ನಮ್ಮ ದೇವರಾದ ಸರ್ವೇಶ್ವರ ನಮ್ಮನ್ನು ಶಿಕ್ಷಿಸಿದರು,” ಎಂದು ಅವರನ್ನು ಎಚ್ಚರಿಸಿದನು.

14 ಆಗ ಯಾಜಕರೂ ಲೇವಿಯರೂ ಇಸ್ರಯೇಲರ ದೇವರಾದ ಸರ್ವೇಶ್ವರನ ಮಂಜೂಷವನ್ನು ತರುವುದಕ್ಕಾಗಿ ತಮ್ಮನ್ನೇ ಶುದ್ಧೀಕರಿಸಿಕೊಂಡರು.

15 ಲೇವಿಯರು ಅದನ್ನು ಗುದಿಗೆಗಳ ಮೇಲಿಟ್ಟು, ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆ, ತಮ್ಮ ಹೆಗಲಮೇಲೆ ಹೊತ್ತುಕೊಂಡು ನಡೆದರು.

16 ಸ್ವರಮಂಡಲ, ಕಿನ್ನರಿ, ತಾಳಗಳೊಂದಿಗೆ ಸಂಭ್ರಮದಿಂದ ವಾದ್ಯಗಳನ್ನು ಬಾರಿಸುವುದಕ್ಕೂ ಹಾಡುವುದಕ್ಕೂ ವಿವಿಧ ಲೇವಿಯರನ್ನು ನೇಮಿಸಬೇಕೆಂದು ದಾವೀದನು ಲೇವಿಯರ ನಾಯಕನಿಗೆ ಆಜ್ಞಾಪಿಸಿದನು.

17-21 ಗಾಯಕರ ಮಂಡಳಿಯಿಂದ ಕಂಚಿನ ತಾಳಗಳನ್ನು ಬಾರಿಸಲು ಆಯ್ಕೆಹೊಂದಿದವರು: ಯೋವೇಲನ ಮಗ ಹೇಮಾನ್, ಅವನ ಬಂಧು ಬೆರೆಕ್ಯನ ಮಗ ಆಸಾಫ್, ಮೆರಾರೀ ಕುಟುಂಬಕ್ಕೆ ಸೇರಿದ ಕೂಷಾಯನ ಮಗ ಏತಾನ್ ಎಂಬವರು. ತಮಗೆ ಸಹಾಯ ಮಾಡಲು ತಾರಸ್ಥಾಯಿಯ ತಂತಿವಾದ್ಯಗಳನ್ನು ಬಾರಿಸಲು ಜೆಕರ್ಯ, ಬೇನ್, ಯಾಜೀಯೇಲ್, ಶಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಬೆನಾಯ ಹಾಗು ಮಸೇಯ ಎಂಬವರನ್ನು ಆರಿಸಿಕೊಂಡರು. ಮಂದ್ರಸ್ಥಾಯಿಯ ಕಿನ್ನರಿಗಳನ್ನು ಬಾರಿಸಲು ಮತಿತ್ಯ, ಎಲೀಫೆಲೇಹು, ಮಿಕ್ನೇಯ, ದೇವಾಲಯದ ದ್ವಾರಪಾಲಕರಾದ ಓಬೇದೆದೋಮ್ ಮತ್ತು ಯೆಗೀಯೇಲರನ್ನೂ ನೇಮಿಸಿಕೊಂಡರು.

22 ಸಂಗೀತದಲ್ಲಿ ಪರಿಣತನಾದ ಕೆನನ್ಯ, ಲೇವಿಯರ ವಾದ್ಯವೃಂದಕ್ಕೆ ಮುಖ್ಯಸ್ಥನಾಗಿ ನೇಮಕಗೊಂಡನು.

23-24 ಬೆರಕ್ಕ ಹಾಗು ಎಲ್ಕಾನ ಎಂಬವರು ಓಬೇದೆದೋಮ್ ಮತ್ತು ಯೆಹೀಯರೊಂದಿಗೆ ಮಂಜೂಷದ ಕಾವಲುಗಾರರಾಗಿ ನೇಮಕವಾದರು. ಯಾಜಕರಾದ ಶೆಬನ್ಯ, ಯೋಷಾಫಾಟ್, ನೆತನೇಲ್, ಅಮಾಸೈ, ಜೆಕರ್ಯ, ಬೆನಾಯ ಹಾಗು ಎಲೀಯೆಜೆರ್ ಎಂಬವರು ಮಂಜೂಷದ ಮುಂದೆ ತುತ್ತೂರಿಗಳನ್ನು ಊದಲು ಆಯ್ಕೆಯಾದರು.


ಜೆರುಸಲೇಮಿಗೆ ಮಂಜೂಷದ ಸ್ಥಳಾಂತರ
( ೨ ಸಮು. 6:12-22 )

25 ಹೀಗೆ ಅರಸ ದಾವೀದನು, ಇಸ್ರಯೇಲಿನ ನಾಯಕರು ಹಾಗು ಸೈನ್ಯದ ಅಧಿಕಾರಿಗಳು ನಿಬಂಧನ ಮಂಜೂಷವನ್ನು ತರಲು ಓಬೇದೆದೋಮನ ಮನೆಗೆ ಹೋದರು. ಇದನ್ನು ಒಂದು ದೊಡ್ಡ ಜಾತ್ರೆಯಂತೆಯೇ ಆಚರಿಸಲಾಯಿತು.

26 ಮಂಜೂಷವನ್ನು ಹೊತ್ತುಕೊಂಡು ಬರುತ್ತಿದ್ದ ಲೇವಿಯರಿಗೆ ದೇವರ ಸಹಾಯ ದೊರೆತುದರಿಂದ ಅವರು ಏಳು ಹೋರಿಗಳನ್ನೂ ಏಳು ಕುರಿಗಳನ್ನೂ ಬಲಿದಾನ ಮಾಡಿದರು.

27 ದಾವೀದನು, ಮಂಜೂಷ ಹೊತ್ತವರು, ವಾದ್ಯ ಬಾರಿಸುವವರು ಹಾಗು ಅವರ ನಾಯಕ ಕೆನನ್ಯನು ಅತ್ಯುತ್ತಮ ನೂಲಿನಿಂದ ತಯಾರಿಸಿದ ನಿಲುವಂಗಿಗಳನ್ನು ಧರಿಸಿದ್ದರು. ದಾವೀದನು ಏಫೋದನ್ನು ಕೂಡ ಧರಿಸಿಕೊಂಡಿದ್ದನು.

28 ಹೀಗೆ ಎಲ್ಲಾ ಇಸ್ರಯೇಲರು ಜೆರುಸಲೇಮಿನವರೆಗೆ ಆನಂದಘೋಷಣೆಗಳಿಂದಲೂ ತುತೂರಿ, ಕೊಂಬು, ತಾಳ, ತಂತಿ, ವಾದ್ಯಗಳ ಸಂಗೀತದಿಂದಲೂ ಸರ್ವೇಶ್ವರನ ನಿಬಂಧನಾ ಮಂಜೂಷವನ್ನು ಹೊತ್ತುತಂದರು.

29 ಆ ಮಂಜೂಷ ಪಟ್ಟಣದೊಳಗೆ ಬರುತ್ತಿದ್ದಂತೆ ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ಇಣಿಕಿ ನೋಡಿದಳು. ದಾವೀದನು ಸಂತೋಷದಿಂದ ಕುಣಿಯುತ್ತಾ ನರ್ತಿಸುತ್ತಾ ಇದ್ದುದನ್ನು ಕಂಡಳು. ಅದನ್ನು ನೋಡಿ ಅವನ ಬಗ್ಗೆ ಅವಳಲ್ಲಿ ತಿರಸ್ಕಾರ ಭಾವ ಮೂಡಿತು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು