Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಪೂರ್ವಕಾಲ ವೃತ್ತಾಂತ 14 - ಕನ್ನಡ ಸತ್ಯವೇದವು C.L. Bible (BSI)


ಜೆರುಸಲೇಮಿನಲ್ಲಿ ದಾವೀದನ ಚಟುವಟಿಕೆಗಳು
( ೨ ಸಮು. 5:11-16 )

1 ಟೈರಿನ ಅರಸ ಹೀರಾಮನು ದಾವೀದನ ಬಳಿಗೆ ತನ್ನ ವಾಣಿಜ್ಯ ನಿಯೋಗವನ್ನು ಕಳುಹಿಸಿದನು. ಅರಮನೆಯನ್ನು ಕಟ್ಟಲು ಅವನಿಗೆ ದೇವದಾರು ಮರದ ದಿಮ್ಮಿಗಳನ್ನು, ಶಿಲ್ಪಿಗಳನ್ನು ಹಾಗು ಬಡಗಿಯವರನ್ನು ಕಳುಹಿಸಿಕೊಟ್ಟನು.

2 ಹೀಗೆ ದಾವೀದನು ದೇವಪ್ರಜೆಗಳಾದ ಇಸ್ರಯೇಲರ ನಿಮಿತ್ತ ತನ್ನ ರಾಜ್ಯವನ್ನು ಉನ್ನತ ಸ್ಥಾನಕ್ಕೇರಿಸಿ ತನ್ನನ್ನು ಇಸ್ರಯೇಲ್ ರಾಜನನ್ನಾಗಿ ಸ್ಥಿರಪಡಿಸುವರೆಂದು ತಿಳಿದುಕೊಂಡನು.

3 ಜೆರುಸಲೇಮಿನಲ್ಲೂ ದಾವೀದನು ಹಲವು ಮಹಿಳೆಯರನ್ನು ವಿವಾಹವಾಗಿ ಇನ್ನೂ ಕೆಲವು ಮಂದಿ ಗಂಡು ಮಕ್ಕಳನ್ನೂ ಹೆಣ್ಣು ಮಕ್ಕಳನ್ನೂ ಪಡೆದನು.

4 ಜೆರುಸಲೇಮಿನಲ್ಲಿ ಅವನಿಗೆ ಹುಟ್ಟಿದ ಗಂಡು ಮಕ್ಕಳು: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ್,

5 ಇಬ್ಹಾರ್, ಎಲೀಷೂವ, ಎಲ್ಪೆಲೆಟ್,

6 ನೋಗಹ, ನೆಫೆಗ್, ಯಾಫೀಯ,

7 ಎಲೀಷಾಮ, ಬೇಲ್ಯಾದ ಹಾಗು ಎಲೀಫೆಲೆಟ್ ಎಂಬವರು.


ಫಿಲಿಷ್ಟಿಯರ ಮೇಲೆ ವಿಜಯ
( ೨ ಸಮು. 5:17-25 )

8 ದಾವೀದನು ಇಸ್ರಯೇಲರೆಲ್ಲರ ಇಡೀ ನಾಡಿಗೆ ಅರಸನಾಗಿ ಅಭಿಷಿಕ್ತನಾಗಿದ್ದಾನೆಂಬ ವರ್ತಮಾನವನ್ನು ಫಿಲಿಷ್ಟಿಯರು ಕೇಳಿದರು. ಅವನನ್ನು ಸೆರೆಹಿಡಿಯಲು ತಮ್ಮ ಸೈನ್ಯವನ್ನು ಕಳುಹಿಸಿದರು. ದಾವೀದನು ಅವರನ್ನು ಎದುರಿಸಲು ಸಿದ್ಧನಾದನು.

9 ಫಿಲಿಷ್ಟಿಯರು ರೆಫಾಯಿಮ್ ಕಣಿವೆಯನ್ನು ತಲುಪಿ ಸುಲಿಗೆಮಾಡಲು ಪ್ರಾರಂಭಿಸಿದರು.

10 “ಫಿಲಿಷ್ಟಿಯರ ಮೇಲೆ ನಾನು ದಾಳಿಮಾಡಬಹುದೊ? ನೀವು ನನಗೆ ಜಯವನ್ನು ಕೊಡುವಿರೋ", ಎಂದು ದಾವೀದನು ದೇವರಾದ ಸರ್ವೇಶ್ವರನನ್ನು ಪ್ರಾರ್ಥಿಸಿದನು. “ಹೌದು, ಅವರನ್ನು ಎದುರಿಸು, ನಾನು ನಿನಗೆ ಜಯವನ್ನು ಕೊಡುವೆನು,” ಎಂದು ಸರ್ವೇಶ್ವರ ಉತ್ತರಕೊಟ್ಟರು.

11 ಹೀಗೆ ದಾವೀದ ಬಾಳ್ ಪೆರಾಚೀಮ್ ಎಂಬಲ್ಲಿ ಅವರ ಮೇಲೆ ದಾಳಿಮಾಡಿ ಅವರನ್ನು ಸೋಲಿಸಿದನು. “ಕಟ್ಟೆಯೊಡೆದ ಪ್ರವಾಹದಂತೆ ನುಗ್ಗಿ, ವೈರಿಸೈನ್ಯವನ್ನು ನಾಶಮಾಡಲು ಸರ್ವೇಶ್ವರ ನನ್ನನ್ನು ಉಪಯೋಗಿಸಿದ್ದಾರೆ,” ಎಂದು ಹೇಳಿದನು. ಈ ಕಾರಣ ಆ ಸ್ಥಳಕ್ಕೆ ‘ಬಾಳ್ ಪೆರಾಚೀಮ್’ ಎಂಬ ಹೆಸರು ಬಂದಿತು.

12 ಫಿಲಿಷ್ಟಿಯರು ತಲೆ ತಪ್ಪಿಸಿಕೊಂಡು ಓಡಿಹೋಗುವಾಗ ತಮ್ಮ ವಿಗ್ರಹಗಳನ್ನು ಅಲ್ಲೇ ಬಿಟ್ಟುಹೋದರು. ಅವೆಲ್ಲವನ್ನು ಸುಟ್ಟುಹಾಕಬೇಕೆಂದು ದಾವೀದನು ಅಪ್ಪಣೆಮಾಡಿದನು.

13 ಸ್ವಲ್ಪವೇ ಸಮಯದ ನಂತರ ಫಿಲಿಷ್ಟಿಯರು ಪುನಃ ಬಂದು ಕಣಿವೆಯಲ್ಲಿ ಕೊಳ್ಳೆ ಹೊಡೆಯಲು ಪ್ರಾರಂಭಿಸಿದರು.

14 ದಾವೀದನು ಮತ್ತೊಮ್ಮೆ ಸರ್ವೇಶ್ವರನ ಸನ್ನಿಧಿಯಲ್ಲಿ ವಿಚಾರಿಸಿದನು. “ನೀನು ಅವರನ್ನು ಬೆನ್ನಟ್ಟಬೇಡ, ಸುತ್ತಿಕೊಂಡು ಹೋಗಿ ಬಾಕಾಮರಗಳಿರುವ ಆಚೆಕಡೆಯಿಂದ ಅವರ ಮೇಲೆ ದಾಳಿಮಾಡು.

15 ಆ ಮರಗಳ ತುದಿಯಲ್ಲಿ ಹೆಜ್ಜೆಗಳ ಸಪ್ಪಳ ಕೇಳುವಾಗ, ದೇವರು ಫಿಲಿಷ್ಟಿಯರ ಸೈನ್ಯವನ್ನು ಸೋಲಿಸುವುದಕ್ಕಾಗಿ ನನಗೆ ಮುಂದಾಗಿ ಹೊರಟಿದ್ದಾರೆಂದು ತಿಳಿದುಕೊಂಡು ಅವರ ಮೇಲೆ ದಾಳಿಮಾಡು,” ಎಂದು ಸರ್ವೇಶ್ವರ ಉತ್ತರಕೊಟ್ಟರು.

16 ಸರ್ವೇಶ್ವರ ಹೇಳಿದಂತೆಯೇ ದಾವೀದನು ಮಾಡಿದನು. ಫಿಲಿಷ್ಟಿಯರನ್ನು ಗಿಬ್ಯೋನಿನಿಂದ ಗೆಜೆರಿನವರೆಗೂ ಹಿಮ್ಮೆಟ್ಟಿದನು.

17 ದಾವೀದನ ಹೆಸರು ಎಲ್ಲಾ ಕಡೆಗಳಲ್ಲಿ ಪ್ರಖ್ಯಾತಿಗೆ ಬಂದಿತು; ಎಲ್ಲಾ ದೇಶಗಳವರೂ ದಾವೀದನಿಗೆ ಭಯಪಡುವಂತೆ ಸರ್ವೇಶ್ವರ ಮಾಡಿದರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು