1 ಪೂರ್ವಕಾಲ ವೃತ್ತಾಂತ 13 - ಕನ್ನಡ ಸತ್ಯವೇದವು C.L. Bible (BSI)ಕಿರ್ಯತ್ಯಾರೀಮಿನಿಂದ ಮಂಜೂಷದ ಸ್ಥಳಾಂತರ ( ೨ ಸಮು. 6:1-11 ) 1 ಅರಸ ದಾವೀದನು ಸರ್ವಸಹಸ್ರಾಧಿಪತಿಗಳೊಂದಿಗೂ ಶತಾಧಿಪತಿಗಳೊಂದಿಗೂ ಸಮಾಲೋಚನೆ ನಡೆಸಿದನು. 2 “ನೀವು ಎಲ್ಲರು ಸಮ್ಮತಿಸಿದರೆ, ಇದು ನಮ್ಮ ದೇವರಾದ ಸರ್ವೇಶ್ವರಸ್ವಾಮಿಯ ಚಿತ್ತವಾಗಿದ್ದರೆ, ಇಲ್ಲಿ ನಮ್ಮೊಂದಿಗೆ ಶೀಘ್ರವಾಗಿ ಬಂದು ಸೇರಬೇಕೆಂದು ಉಳಿದ ಎಲ್ಲಾ ನಮ್ಮ ದೇಶಬಾಂಧವರಿಗೆ, ಯಾಜಕ-ಲೇವಿಯರಿಗೆ ಹಾಗು ಅವರ ಪಟ್ಟಣಗಳಿಗೆ ಸಂದೇಶವನ್ನು ಕಳುಹಿಸೋಣ. 3 ಅನಂತರ ನಾವು ಹೋಗಿ ಅರಸ ಸೌಲ ನಿರ್ಲಕ್ಷಿಸಿದ್ದ ದೇವಮಂಜೂಷವನ್ನು ತೆಗೆದುಕೊಂಡು ಬರೋಣ,” ಎಂದು ಜನರೆಲ್ಲರಿಗೆ ಸಲಹೆ ಮಾಡಿದನು. 4 ಈ ಸಲಹೆಯನ್ನು ಸರ್ವರೂ ಮೆಚ್ಚಿ ಅನುಮೋದಿಸಿದರು. 5 ಹೀಗೆ ಅರಸ ದಾವೀದನು ಕಿರ್ಯತ್ಯಾರೀಮಿನಿಂದ ಜೆರುಸಲೇಮಿಗೆ ದೇವಮಂಜೂಷವನ್ನು ತರಲು ದೇಶದ ಎಲ್ಲಾ ಕಡೆಗಳಿಂದಲೂ, ದಕ್ಷಿಣದ ಈಜಿಪ್ಟ್ ಗಡಿಯಿಂದ ಉತ್ತರದ ಹಾಮಾತ್ ಕಣಿವೆಯವರೆಗಿನ ಜನರನ್ನು ಒಂದುಗೂಡಿಸಿದನು. 6 ದಾವೀದನೂ ಜನರೂ ಜುದೇಯದಲ್ಲಿ ‘ಬಾಳಾ’ ಎಂದು ಹೆಸರುಗೊಂಡಿದ್ದ ಕಿರ್ಯತ್ಯಾರೀಮ ಪಟ್ಟಣಕ್ಕೆ ಮಂಜೂಷವನ್ನು ತರಲು ಹೋದರು. ಆ ಮಂಜೂಷವು ಕೆರೂಬಿಯರ ನಡುವೆ ಆಸೀನರಾಗಿರುವ ಸರ್ವೇಶ ದೇವರ ನಾಮದಿಂದ ಸುಪ್ರಸಿದ್ಧವಾಗಿತ್ತು. 7 ಅಬೀನಾದಾಬಿನ ಮನೆಯಿಂದ ಆ ದೇವಮಂಜೂಷವನ್ನು ಹೊರಗೆ ತಂದು, ಒಂದು ಹೊಸ ಎತ್ತಿನ ಬಂಡಿಯ ಮೇಲಿಟ್ಟರು. ಉಜ್ಜನೂ ಅಹಿಯೋವನೂ ಬಂಡಿಯನ್ನು ನಡೆಸುತ್ತಿದ್ದರು. 8 ದಾವೀದನೂ ಎಲ್ಲಾ ಜನರೂ ಕಿನ್ನರಿ, ಸ್ವರಮಂಡಲ, ತಮಟೆ, ತಾಳ, ತುತೂರಿ ಮುಂತಾದ ವಾದ್ಯಗಳನ್ನು ಬಾರಿಸುತ್ತಾ ಪೂರ್ಣಶಕ್ತಿಯಿಂದ ಹಾಡುತ್ತಾ ದೇವರ ಮುಂದೆ ನರ್ತಿಸುತ್ತಾ ನಡೆದರು. 9 ಕೀದೋನ್ ಎಂಬಲ್ಲಿ ಕಾಳುತೂರುವ ಕಣಕ್ಕೆ ಬಂದಾಗ ಎತ್ತುಗಳು ಎಡವಿದವು. ಆಗ ಉಜ್ಜನು ತನ್ನ ಕೈಗಳನ್ನು ಚಾಚಿ ದೇವಮಂಜೂಷವನ್ನು ಹಿಡಿದುಕೊಂಡನು. 10 ಮಂಜೂಷವನ್ನು ಮುಟ್ಟಿದ್ದಕ್ಕಾಗಿ ಕೂಡಲೇ ಸರ್ವೇಶ್ವರ ಉಜ್ಜನ ಮೇಲೆ ಉಗ್ರಕೋಪ ತಾಳಿ ಅವನನ್ನು ಕೊಂದುಹಾಕಿದರು. ದೇವರ ಸನ್ನಿಧಿಯಲ್ಲಿಯೇ ಅವನು ಮರಣ ಹೊಂದಿದನು. 11 ಆ ಸ್ಥಳಕ್ಕೆ ಅಂದಿನಿಂದ ‘ಪೆರೆಚ್ ಉಜ್ಜ’ ಎಂಬ ಹೆಸರು ಬಂತು. ಸರ್ವೇಶ್ವರ ಕೋಪದಿಂದ ಉಜ್ಜನನ್ನು ಶಿಕ್ಷಿಸಿದ್ದಕ್ಕಾಗಿ ದಾವೀದನು ಭಯದಿಂದ ಕಂಗೆಟ್ಟನು. 12 ಸರ್ವೇಶ್ವರನ ಭಯದಿಂದ ದಾವೀದನು, “ದೇವರ ಮಂಜೂಷವನ್ನು ನಾನಿರುವಲ್ಲಿಗೆ ಈಗ ಹೇಗೆ ತಾನೆ ತೆಗೆದುಕೊಂಡು ಹೋಗಲಿ?” ಎಂದು ಕಳವಳಪಟ್ಟನು. 13 ಅದನ್ನು ಜೆರುಸಲೇಮಿಗೆ ತನ್ನೊಂದಿಗೆ ತೆಗೆದುಕೊಂಡು ಹೋಗಲಿಲ್ಲ. ಗತ್ ಊರಿನ ನಿವಾಸಿ ಓಬೇದೆದೋಮನ ಮನೆಯಲ್ಲಿ ಅದನ್ನು ಇರಿಸಿದನು. 14 ಅದು ಅಲ್ಲಿ ಮೂರು ತಿಂಗಳು ಇತ್ತು. ಸರ್ವೇಶ್ವರ ಆ ಅವಧಿಯಲ್ಲಿ ಓಬೇದೆದೋಮನ ಕುಟುಂಬವನ್ನೂ ಅವನಿಗೆ ಇದ್ದುದೆಲ್ಲವನ್ನೂ ಆಶೀರ್ವದಿಸಿದರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India