1 ಪೂರ್ವಕಾಲ ವೃತ್ತಾಂತ 10 - ಕನ್ನಡ ಸತ್ಯವೇದವು C.L. Bible (BSI)ಅರಸ ಸೌಲನ ಮರಣ ( ೧ ಸಮು. 31:1-13 ) 1 ಗಿಲ್ಬೋವ ಬೆಟ್ಟದಲ್ಲಿ ಇಸ್ರಯೇಲ್ ಅವರಿಗೂ ಫಿಲಿಷ್ಟಿಯರಿಗೂ ಘೋರಯುದ್ಧ ನಡೆಯಿತು. ಅನೇಕ ಜನ ಇಸ್ರಯೇಲರು ಯುದ್ಧದಲ್ಲಿ ಹತರಾದರು. ಅರಸ ಸೌಲನೂ ಅವನ ಮಕ್ಕಳೂ ಇನ್ನುಳಿದವರೂ ತಪ್ಪಿಸಿಕೊಂಡು ಓಡಿಹೋಗಲು ಪ್ರಯತ್ನಿಸಿದರು. 2 ಆದರೆ ಫಿಲಿಷ್ಟಿಯರು ಅವರನ್ನು ಬೆನ್ನಟ್ಟಿ ಸೌಲನ ಮಕ್ಕಳಾದ ಯೋನಾತಾನ, ಅಬೀನಾದಾಬ, ಮಲ್ಕೀಷೂವರನ್ನು ಕೊಂದುಹಾಕಿದರು. 3 ಘೋರ ಯುದ್ಧದ ಮಧ್ಯದಲ್ಲಿ ಸೌಲನು ತಪ್ಪಿಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ವೈರಿ ಬಾಣವು ಅವನಿಗೆ ತಾಕಲು ಅವನು ತೀವ್ರ ಗಾಯಗೊಂಡನು. 4 ಆಗ ಅವನು ತನ್ನ ಆಯುಧವಾಹಕ ಯುವಕನನ್ನು ಕರೆದು, ‘ದೇವರಲ್ಲಿ ನಂಬಿಕೆ ಇಲ್ಲದ ಈ ಫಿಲಿಷ್ಟಿಯರ ಹಸ್ತಗಳಿಂದ ನಾನು ಸಾಯಬಾರದು. ನಿನ್ನ ಖಡ್ಗವನ್ನು ಹಿಡಿದು ನನ್ನನ್ನು ಕೊಂದುಬಿಡು’, ಎಂದನು. ಆದರೆ ಆ ಯುವಕನು ಭಯಗೊಂಡು ಹಿಂಜರಿದನು. ಸೌಲನು ತನ್ನ ಖಡ್ಗವನ್ನೇ ಎತ್ತಿಟ್ಟು ಅದರ ಮೇಲೆ ಹಾರಿಬಿದ್ದು ಸತ್ತುಹೋದನು. 5 ಸೌಲನು ಮೃತನಾದದ್ದನ್ನು ನೋಡಿ ಆ ಯುವಕನು ಸಹ ತನ್ನ ಖಡ್ಗದ ಮೇಲೆ ಬಿದ್ದು ಸತ್ತುಹೋದನು. 6 ಹೀಗೆ ಸೌಲನೂ ಅವನ ಮೂರು ಮಂದಿ ಗಂಡುಮಕ್ಕಳೂ ಅದೇ ದಿವಸ ಮೃತರಾದರು. ಸೌಲನ ಮನೆಯವರಲ್ಲಿ ರಾಜ್ಯ ಆಳಲು ಯಾರೂ ಉಳಿಯಲಿಲ್ಲ. 7 ತಗ್ಗಿನಲ್ಲಿ ನೆಲೆಸಿದ್ದ ಇಸ್ರಯೇಲರು ತಮ್ಮ ಸೈನ್ಯವು ಪಲಾಯನಗೈಯಿತು ಮತ್ತು ಸೌಲನೂ ಅವನ ಮಕ್ಕಳೂ ಮರಣ ಹೊಂದಿದರು ಎಂಬ ವಾರ್ತೆಯನ್ನು ಕೇಳಿ ಅವರೂ ತಮ್ಮ ಪಟ್ಟಣಗಳನ್ನು ಬಿಟ್ಟು ಓಡಿಹೋದರು. ಅನಂತರ ಫಿಲಿಷ್ಟಿಯರು ಬಂದು ಅವುಗಳನ್ನು ವಶಪಡಿಸಿಕೊಂಡರು. 8 ಕಾಳಗದ ಮರುದಿನ ಫಿಲಿಷ್ಟಿಯರು ಸತ್ತವರ ಒಡವೆವಸ್ತುಗಳನ್ನು ಸುಲಿಗೆಮಾಡಲು ಹೋದಾಗ, ಗಿಲ್ಬೋವ ಬೆಟ್ಟದಲ್ಲಿ ಸೌಲ ಹಾಗೂ ಅವನ ಮಕ್ಕಳು ಸತ್ತುಬಿದ್ದಿರುವುದನ್ನು ಕಂಡರು. 9 ಸೌಲನ ತಲೆಯನ್ನು ಕಡಿದು ದೇಹದಿಂದ ಬೇರ್ಪಡಿಸಿದರು. ಅವನ ಆಯುಧಗಳನ್ನು ಬಿಚ್ಚಿಕೊಂಡರು. ಅವುಗಳೊಂದಿಗೆ ಸುದ್ದಿವಾಹಕರನ್ನು ತಮ್ಮ ನಾಡಿನ ಎಲ್ಲೆಡೆಗೂ ಕಳುಹಿಸಿ, ಈ ಜಯವಾರ್ತೆಯನ್ನು ತಮ್ಮ ದೇವತೆಗಳಿಗೂ ಜನರಿಗೂ ಮುಟ್ಟಿಸಿದರು. 10 ಸೌಲನ ಆಯುಧಗಳನ್ನು ತೆಗೆದುಕೊಂಡು ಹೋಗಿ ತಮ್ಮ ಒಂದು ಗುಡಿಯಲ್ಲಿಟ್ಟರು. ಸೌಲನ ತಲೆಯನ್ನು ತಮ್ಮ ದೇವರಾದ ದಾಗೋನನ ಗುಡಿಯಲ್ಲಿ ನೇತುಹಾಕಿದರು. 11 ಸೌಲನಿಗೆ ಫಿಲಿಷ್ಟಿಯರು ಮಾಡಿದ್ದು ಎಲ್ಲವನ್ನೂ ಯಾಬೇಷ್ ಗಿಲ್ಯಾದಿನ ಜನರು ಕೇಳಿದರು. 12 ಅವರಲ್ಲಿ ಅತೀ ಶೂರರಾದವರು ಹೋಗಿ ಸೌಲನ ಮತ್ತು ಅವನ ಮಕ್ಕಳ ಶವಗಳನ್ನು ತೆಗೆದುಕೊಂಡು ಯಾಬೇಷಿಗೆ ಬಂದರು. ಅಲ್ಲಿ ಅವುಗಳನ್ನು ಏಲಾ ಮರದ ಕೆಳಗೆ ಸಮಾಧಿಮಾಡಿ ಏಳು ದಿನ ಉಪವಾಸ ಆಚರಿಸಿದರು. 13 ಸೌಲನು ಸರ್ವೇಶ್ವರನಿಗೆ ಅವಿಧೇಯನಾದ್ದರಿಂದ ಮರಣ ಹೊಂದಿದನು. ಅವನು ಸರ್ವೇಶ್ವರನ ಆಜ್ಞೆಗಳನ್ನು ಮೀರಿದನು; ಸರ್ವೇಶ್ವರನನ್ನು ವಿಚಾರಿಸದೆ ಭೂತಪ್ರೇತಗಳನ್ನು ವಿಚಾರಿಸಿದನು. 14 ಆದುದರಿಂದ ಸರ್ವೇಶ್ವರ ಅವನನ್ನು ಕೊಲ್ಲಿಸಿ ಜೆಸ್ಸೆಯ ಮಗ ದಾವೀದನಿಗೆ ರಾಜ್ಯವನ್ನೊಪ್ಪಿಸಿದರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India