Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಥೆಸಲೋನಿಕದವರಿಗೆ 5 - ಕನ್ನಡ ಸತ್ಯವೇದವು C.L. Bible (BSI)


ಕೊನೆಯದಿನ ಕಳ್ಳನಿಗೆ ಸಮಾನ

1 ಸಹೋದರರೇ, ಇದೆಲ್ಲ ನಡೆಯಲಿರುವ ಸಮಯ ಸಂದರ್ಭಗಳನ್ನು ಕುರಿತು ನಿಮಗೆ ಬರೆಯುವ ಅವಶ್ಯಕತೆಯಿಲ್ಲ.

2 ರಾತ್ರಿಯಲ್ಲಿ ಕಳ್ಳನು ಬರುವ ಹಾಗೆ ಪ್ರಭುವಿನ ದಿನವು ಬರುವುದೆಂದು ನೀವು ಚೆನ್ನಾಗಿ ಬಲ್ಲಿರಿ.

3 ಎಲ್ಲವೂ ಶಾಂತ, ಸುಭದ್ರವೆಂದು ಜನರು ಎಣಿಸುತ್ತಿರುವಾಗಲೇ, ಗರ್ಭಿಣಿಗೆ ಪ್ರಸವವೇದನೆ ಉಂಟಾಗುವಂತೆ, ವಿನಾಶವು ಫಕ್ಕನೆ ಅವರ ಮೇಲೆ ಬಂದೆರಗುವುದು. ಇದರಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ.

4 ಸಹೋದರರೇ, ಕಳ್ಳನಂತೆ ಆ ದಿನವು ನಿಮ್ಮನ್ನು ದಿಗ್ಭ್ರಮೆಗೊಳಿಸದಿರಲಿ. ಏಕೆಂದರೆ, ನೀವಿನ್ನು ಅಂಧಕಾರಕ್ಕೆ ಸೇರಿದವರಲ್ಲ. ಆ ದಿನವು ದಿಢೀರನೆ ನಿಮ್ಮ ಮೇಲೆ ಬರಬಾರದು.

5 ನೀವೆಲ್ಲರೂ ಬೆಳಕಿನ ಹಾಗೂ ಹಗಲಿನ ಮಕ್ಕಳು. ನಾವು ಕತ್ತಲೆಗಾಗಲಿ, ರಾತ್ರಿಗಾಗಲಿ ಸೇರಿದವರಲ್ಲ.

6 ಅಂದ ಮೇಲೆ, ಇತರರಂತೆ ನಾವು ನಿದ್ದೆಮಾಡದೆ ಎಚ್ಚರವಾಗಿದ್ದು ಸ್ವಸ್ಥಚಿತ್ತರಾಗಿ ವರ್ತಿಸೋಣ.

7 ನಿದ್ರೆಯೂ ಕುಡುಕತನವೂ ರಾತ್ರಿಗೆ ಸಂಬಂಧಿಸಿದವುಗಳು.

8 ನಾವು ಹಗಲಿಗೆ ಸೇರಿದವರಾದುದರಿಂದ ಸ್ವಸ್ಥಚಿತ್ತದಿಂದ ಇರೋಣ. ವಿಶ್ವಾಸ ಹಾಗೂ ಪ್ರೀತಿ ನಮಗೆ ವಕ್ಷಕವಚವಾಗಬೇಕು. ಜೀವೋದ್ಧಾರದ ನಿರೀಕ್ಷೆ ನಮಗೆ ಶಿರಸ್ತ್ರಾಣವಾಗಿರಬೇಕು.

9 ಕೋಪಾಗ್ನಿಗೆ ನಾವು ಗುರಿಯಾಗಬೇಕೆಂದಲ್ಲ, ನಮ್ಮ ಪ್ರಭು ಯೇಸುಕ್ರಿಸ್ತರಲ್ಲಿ ನಾವು ಜೀವೋದ್ಧಾರ ಹೊಂದಬೇಕೆಂಬುದೇ ದೈವೇಚ್ಛೆ.

10 ಯೇಸುಕ್ರಿಸ್ತರು ಮರಳಿ ಬರುವಾಗ, ನಾವು ಮೃತರಾಗಿದ್ದರೂ ಜೀವಂತವಾಗಿದ್ದರೂ ಅವರೊಡನೆಯೇ ನಾವು ಜೀವಿಸಬೇಕೆಂದೆ ನಮಗಾಗಿ ಅವರು ಸಾವನ್ನಪ್ಪಿದರು.

11 ಆದುದರಿಂದ ನೀವು ಈಗ ನಡೆದುಕೊಳ್ಳುತ್ತಿರುವಂತೆ, ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ, ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಗೊಳಿಸಿರಿ.


ಪೌಲನ ಹಿತಸಲಹೆಗಳು

12 ಸಹೋದರರೇ, ನಿಮ್ಮೊಡನೆ ದುಡಿಯುತ್ತಾ ಪ್ರಭುವಿನ ಹೆಸರಿನಲ್ಲಿ ನಿಮಗೆ ಅಧಿಕಾರಿಗಳೂ ಮಾರ್ಗದರ್ಶಕರೂ ಆಗಿರುವವರಿಗೆ ತಕ್ಕ ಸನ್ಮಾನವನ್ನು ಸಲ್ಲಿಸಿರಿ.

13 ಅವರು ನಿರ್ವಹಿಸುವ ಕಾರ್ಯದ ನಿಮಿತ್ತ ಅವರನ್ನು ಅತ್ಯಧಿಕ ಪ್ರೀತಿಯಿಂದ ಗೌರವಿಸಿರಿ. ನಿಮ್ಮನಿಮ್ಮೊಳಗೆ ಸಮಾಧಾನದಿಂದಿರಿ.

14 ಸಹೋದರರೇ, ಮೈಗಳ್ಳರಿಗೆ ಬುದ್ಧಿಹೇಳಿರಿ; ಮನಗುಂದಿದವರಿಗೆ ಧೈರ್ಯ ತುಂಬಿರಿ; ದುರ್ಬಲರಿಗೆ ನೆರವಾಗಿರಿ; ಎಲ್ಲರೊಡನೆ ಸಹನೆಯಿಂದಿರಿ. ಇದು ನಮ್ಮ ಪ್ರಬೋಧನೆ.

15 ಕೆಡುಕಿಗೆ ಪ್ರತಿಯಾಗಿ ಕೆಡುಕು ಮಾಡದೆ ಎಚ್ಚರದಿಂದಿರಿ. ಯಾವಾಗಲೂ ಒಬ್ಬರಿಗೊಬ್ಬರು ಮಾತ್ರವಲ್ಲದೆ ಎಲ್ಲರಿಗೂ ಹಿತವನ್ನೇ ಮಾಡಿರಿ.

16 ಸದಾ ಹರ್ಷಚಿತ್ತರಾಗಿರಿ.

17 ಎಡೆಬಿಡದೆ ಪ್ರಾರ್ಥಿಸಿರಿ.

18 ಎಲ್ಲಾ ಸಂದರ್ಭಗಳಲ್ಲೂ ಉಪಕಾರಸ್ಮರಣೆಮಾಡಿರಿ. ಕ್ರಿಸ್ತಯೇಸುವಿನಲ್ಲಿ ದೇವರು ನಿಮ್ಮಿಂದ ಇಚ್ಛಿಸುವುದು ಇದನ್ನೇ.

19 ಪವಿತ್ರಾತ್ಮರನ್ನು ನಿಶ್ಚೇತನಗೊಳಿಸಬೇಡಿ.

20 ಪ್ರವಾದನೆಗಳನ್ನು ಅಲ್ಲಗಳೆಯದಿರಿ.

21 ಅವುಗಳನ್ನೆಲ್ಲಾ ಪರಿಶೋಧಿಸಿ ಒಳ್ಳೆಯದನ್ನು ಅಂಗೀಕರಿಸಿ,

22 ಕೆಟ್ಟದ್ದನ್ನೆಲ್ಲಾ ಬಿಟ್ಟುಬಿಡಿ.

23 ಶಾಂತಿದಾಯಕ ದೇವರು ನಿಮ್ಮನ್ನು ಪೂರ್ಣವಾಗಿ ಪಾವನಗೊಳಿಸಲಿ. ನಮ್ಮ ಪ್ರಭು ಯೇಸು ಪುನರಾಗಮಿಸುವಾಗ ನಿಮ್ಮ ಆತ್ಮ, ಪ್ರಾಣ, ದೇಹ - ಇವುಗಳು ದೋಷರಹಿತವಾಗಿಯೂ ಸ್ವಸ್ಥವಾಗಿಯೂ ಇರುವಂತೆ ನಿಮ್ಮನ್ನು ಕಾಪಾಡಲಿ.

24 ನಿಮ್ಮನ್ನು ಕರೆದ ದೇವರು ಇದನ್ನು ಈಡೇರಿಸುವರು; ಏಕೆಂದರೆ, ದೇವರು ನಂಬಿಕಸ್ಥರು.

25 ಸಹೋದರರೇ, ನಮಗಾಗಿಯೂ ಪ್ರಾರ್ಥಿಸಿರಿ.

26 ಪವಿತ್ರವಾದ ಮುದ್ದಿಟ್ಟು ಸಹೋದರರೆಲ್ಲರನ್ನು ವಂದಿಸಿರಿ.

27 ಈ ಪತ್ರವನ್ನು ಎಲ್ಲ ಸಹೋದರರಿಗೂ ಓದಿಹೇಳಬೇಕೆಂದು ಪ್ರಭುವಿನ ಹೆಸರಿನಲ್ಲಿ ವಿಧಿಸುತ್ತಿದ್ದೇನೆ.

28 ನಮ್ಮ ಪ್ರಭುವಾದ ಯೇಸುಕ್ರಿಸ್ತರ ಅನುಗ್ರಹ ನಿಮ್ಮಲ್ಲಿರಲಿ!

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು