Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಥೆಸಲೋನಿಕದವರಿಗೆ 4 - ಕನ್ನಡ ಸತ್ಯವೇದವು C.L. Bible (BSI)


ಸದ್ಗುಣವೇ ಸೌಭಾಗ್ಯ

1 ಕಡೆಯದಾಗಿ ಸಹೋದರರೇ, ನೀವು ಹೇಗೆ ಬಾಳಬೇಕು. ದೇವರು ಮೆಚ್ಚುವಂತೆ ಹೇಗೆ ನಡೆದುಕೊಳ್ಳಬೇಕು, ಎಂಬುದನ್ನು ನಮ್ಮಿಂದ ಕಲಿತುಕೊಂಡಿರಿ. ಅಂತೆಯೇ ಜೀವಿಸುತ್ತಿದ್ದೀರಿ. ನಿಮ್ಮ ನಡತೆ ಇನ್ನೂ ಉತ್ತಮಗೊಳ್ಳಬೇಕೆಂದು ಪ್ರಭು ಯೇಸುವಿನ ಹೆಸರಿನಲ್ಲಿ ನಾವು ನಿಮ್ಮನ್ನು ಕೇಳಿಕೊಳ್ಳುತ್ತೇವೆ ಹಾಗೂ ಪ್ರಬೋಧಿಸುತ್ತೇವೆ.

2 ಪ್ರಭು ಯೇಸುವಿನ ಅಧಿಕಾರದಿಂದ ನಾವು ನಿಮಗೆ ವಿಧಿಸಿದ ನಿಯಮಗಳನ್ನು ನೀವು ಬಲ್ಲಿರಿ.

3 ನೀವು ಕೆಟ್ಟ ನಡತೆಯನ್ನು ಬಿಟ್ಟು ಪರಿಶುದ್ಧರಾಗಿ ಜೀವಿಸಬೇಕು ಎಂಬುದು ದೇವರ ಚಿತ್ತ.

4 ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಪತ್ನಿಯನ್ನು ಘನತೆ ಗೌರವದಿಂದಲೂ ಶುದ್ಧಮನಸ್ಸಿನಿಂದಲೂ ನಡೆಸಿಕೊಳ್ಳಬೇಕು.

5 ದೇವರ ಅರಿವೇ ಇಲ್ಲದ ಅನ್ಯಜನರಂತೆ ಕಾಮಾತಿರೇಕದಿಂದ ವರ್ತಿಸಬಾರದು.

6 ಈ ವಿಷಯದಲ್ಲಿ ಯಾರೂ ತನ್ನ ಸಹೋದರನನ್ನು ವಂಚಿಸಿ ಅತಿಕ್ರಮಿಸದಿರಲಿ. ಹೀಗೆ ವರ್ತಿಸುವವರು ಪ್ರಭುವಿನ ಪ್ರತೀಕಾರಕ್ಕೆ ಒಳಗಾಗುವರೆಂದು ನಾವು ನಿಮಗೆ ಮುನ್ನೆಚ್ಚರಿಕೆ ಕೊಟ್ಟಿದ್ದೇವೆ.

7 ದೇವರು ನಮ್ಮನ್ನು ಕರೆದಿರುವುದು ಅಶುದ್ಧ ನಡತೆಗಲ್ಲ, ಪರಿಶುದ್ಧ ನಡತೆಗೆ.

8 ಅಂದಮೇಲೆ, ಈ ಬೋಧನೆಯನ್ನು ತಿರಸ್ಕರಿಸುವವನು ಮನುಷ್ಯನನ್ನು ಮಾತ್ರವಲ್ಲ, ನಿಮಗೆ ಪವಿತ್ರಾತ್ಮರನ್ನು ಪ್ರದಾನ ಮಾಡಿರುವ ದೇವರನ್ನೇ ತಿರಸ್ಕರಿಸುತ್ತಾನೆ.

9 ಸಹೋದರ ಪ್ರೇಮವನ್ನು ಕುರಿತು ನಿಮಗೆ ಬರೆಯುವ ಅವಶ್ಯಕತೆಯಿಲ್ಲ. ನೀವು ಒಬ್ಬರನ್ನೊಬ್ಬರು ಪ್ರೀತಿಸುವುದನ್ನು ದೇವರಿಂದಲೇ ಕಲಿತಿದ್ದೀರಿ.

10 ಮಕೆದೋನಿಯದಲ್ಲಿ ವಾಸಿಸುವ ಎಲ್ಲ ಸಹೋದರರನ್ನೂ ನೀವು ಪ್ರೀತಿಸುತ್ತಿರುವುದೇನೋ ನಿಜ. ಆದರೂ ಸಹೋದರರೇ, ನಿಮ್ಮ ಈ ಪ್ರೀತಿ ಇನ್ನೂ ಅಧಿಕಾಧಿಕವಾಗಬೇಕೆಂಬುದೇ ನಮ್ಮ ಆಶಯ.

11 ಮತ್ತೊಬ್ಬರ ವಿಷಯದಲ್ಲಿ ನೀವು ತಲೆಹಾಕದೆ ನಿಮ್ಮ ಸ್ವಂತಕಾರ್ಯಗಳಲ್ಲೇ ಮಗ್ನರಾಗಿರಿ. ನೆಮ್ಮದಿಯ ಜೀವನವೇ ನಿಮ್ಮ ಗುರಿಯಾಗಿರಲಿ. ನಿಮ್ಮ ಸ್ವಂತ ದುಡಿಮೆಯಿಂದ ಬದುಕನ್ನು ಸಾಗಿಸಿರಿ. ಇದೇ ನಿಮಗೆ ನಮ್ಮ ಆದೇಶ.

12 ಹೀಗೆ ಬಾಳಿದರೆ ಅನ್ಯಜನರು ನಿಮ್ಮನ್ನು ಗೌರವಿಸುವರು; ಇತರರನ್ನು ಅವಲಂಬಿಸುವ ಅವಶ್ಯಕತೆ ನಿಮಗಿರುವುದಿಲ್ಲ.


ಪ್ರಭುವಿನ ಪುನರಾಗಮನ

13 ಸಹೋದರರೇ, ಮೃತರ ಮುಂದಿನ ಸ್ಥಿತಿಗತಿಯ ವಿಷಯವಾಗಿ ನೀವು ತಿಳಿದಿರಬೇಕು ಎಂಬುದೇ ನಮ್ಮ ಬಯಕೆ. ಏಕೆಂದರೆ, ನಂಬಿಕೆ ನಿರೀಕ್ಷೆಯಿಲ್ಲದ ಇತರರಂತೆ ಮೃತರಿಗಾಗಿ ನೀವು ದುಃಖಿಸಬಾರದು.

14 ಯೇಸು ಸತ್ತು ಪುನರುತ್ಥಾನ ಹೊಂದಿದರೆಂದು ನಾವು ವಿಶ್ವಾಸಿಸುತ್ತೇವೆ ಅಲ್ಲವೇ? ಹಾಗೆಯೇ, ಕ್ರಿಸ್ತಯೇಸುವಿನಲ್ಲಿ ವಿಶ್ವಾಸವಿಟ್ಟು ಮರಣಹೊಂದಿದವರನ್ನು ದೇವರು ಯೇಸುಕ್ರಿಸ್ತರೊಡನೆ ಮರಳಿ ಕರೆದುಕೊಳ್ಳುತ್ತಾರೆ.

15 ಪ್ರಭುವಿನ ವಾಕ್ಯದ ಆಧಾರದ ಮೇಲೆ ನಾವು ನಿಮಗೆ ಹೇಳುತ್ತೇವೆ: ಪ್ರಭು ಪುನರಾಗಮಿಸುವಾಗ, ಇನ್ನೂ ಬದುಕಿರುವ ನಾವು ಮೃತರಾಗಿರುವ ಇತರರಿಗಿಂತಲೂ ಮುಂದಿನವರಾಗುವುದಿಲ್ಲ.

16 ಆಜ್ಞಾಘೋಷವಾದಾಗ, ಪ್ರಧಾನ ದೂತನ ಧ್ವನಿಯು ಕೇಳಿಬಂದಾಗ, ದೇವರ ತುತೂರಿ ನಾದಗೈದಾಗ, ಪ್ರಭುವೇ ಸ್ವರ್ಗದಿಂದ ಇಳಿದುಬರುತ್ತಾರೆ. ಆಗ, ಕ್ರಿಸ್ತಸ್ಥರಾಗಿ ಮೃತರಾದವರು ಮೊದಲು ಎದ್ದುಬರುತ್ತಾರೆ.

17 ಆಮೇಲೆ, ಇನ್ನೂ ಬದುಕಿರುವ ನಾವು ಎದ್ದುಬಂದವರೊಡನೆ ಆಕಾಶಮಂಡಲದಲ್ಲಿ ಪ್ರಭುವನ್ನು ಎದುರುಗೊಳ್ಳಲು ಮೇಘಾರೂಢರಾಗಿ ಮೇಲಕ್ಕೆ ಒಯ್ಯಲ್ಪಡುತ್ತೇವೆ. ಹೀಗೆ ಸರ್ವದಾ ನಾವು ಪ್ರಭುವಿನೊಂದಿಗೆ ಇರುತ್ತೇವೆ.

18 ಆದ್ದರಿಂದ, ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿಕೊಳ್ಳಿ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು