Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಥೆಸಲೋನಿಕದವರಿಗೆ 3 - ಕನ್ನಡ ಸತ್ಯವೇದವು C.L. Bible (BSI)

1 ನಿಮ್ಮ ಅಗಲಿಕೆಯನ್ನು ಸಹಿಸಲಾಗದೆ ನಮ್ಮ ಸಹೋದರ ತಿಮೊಥೇಯನನ್ನು ನಿಮ್ಮ ಬಳಿಗೆ ಕಳುಹಿಸಿದೆವು. ನಾವು ಮಾತ್ರ ಅಥೆನ್ಸಿಯಲ್ಲಿ ಉಳಿಯುವುದೇ ಉಚಿತವೆಂದು ನಿರ್ಧರಿಸಿದೆವು.

2 ತಿಮೊಥೇಯನು ಯೇಸುಕ್ರಿಸ್ತರ ಶುಭಸಂದೇಶದ ಪ್ರಚಾರಕಾರ್ಯದಲ್ಲಿ ನಮ್ಮ ಸಹೋದರ ಹಾಗೂ ದೇವರ ದಾಸ; ನೀವು ವಿಶ್ವಾಸದಲ್ಲಿ ಅಚಲರಾಗಿ ನೆಲೆನಿಲ್ಲುವಂತೆ ಆತನು ನಿಮ್ಮನ್ನು ಉತ್ತೇಜಿಸುವನು.

3 ನಿಮಗೆ ಬಂದೊದಗಿರುವ ವಿಪತ್ತುಗಳಿಂದ ನೀವು ಯಾರೂ ಚಂಚಲರಾಗದಂತೆ ದೃಢಪಡಿಸುವನು. ಇಂಥ ವಿಪತ್ತುಗಳು ನಮ್ಮ ಪಾಲಿಗೆ ಕಟ್ಟಿಟ್ಟಬುತ್ತಿಯೆಂದು ನೀವು ಬಲ್ಲಿರಿ.

4 ನಾವು ನಿಮ್ಮೊಂದಿಗಿದ್ದಾಗ, ಇಂಥ ವಿಪತ್ತುಗಳು ಖಂಡಿತವಾಗಿ ತಲೆದೋರುವುವೆಂದು ನಿಮಗೆ ಮೊದಲೇ ತಿಳಿಸಿದ್ದೆವು. ಈಗ ಹಾಗೆಯೇ ಸಂಭವಿಸಿದೆ; ನಿಮ್ಮ ಅನುಭವಕ್ಕೂ ಬಂದಿದೆ.

5 ಆದುದರಿಂದ ನನಗೆ ಸಹಿಸಲು ಅಸಾಧ್ಯವಾಗಿ, ತಿಮೊಥೇಯನನ್ನು ನಿಮ್ಮ ಬಳಿಗೆ ಕಳುಹಿಸಬೇಕಾಯಿತು. ಏಕೆಂದರೆ, ನಿಮ್ಮ ವಿಶ್ವಾಸದ ಬಗ್ಗೆ ನನಗೆ ತಿಳಿಯಬೇಕಾಗಿತ್ತು; ಪ್ರಲೋಭಕನು ಒಡ್ಡುವ ಬಲೆಗೆ ನೀವು ಸಿಲುಕಿ ನಮ್ಮ ಶ್ರಮವೆಲ್ಲ ನಿಷ್ಪ್ರಯೋಜಕವಾಯಿತೋ ಏನೋ ಎಂಬ ದಿಗಿಲು ನನಗಿತ್ತು.

6 ನಿಮ್ಮನ್ನು ಸಂದರ್ಶಿಸಿದ ನಂತರ ತಿಮೊಥೇಯನು ಹಿಂದಿರುಗಿದ್ದಾನೆ. ನಿಮ್ಮ ವಿಶ್ವಾಸ ಮತ್ತು ಪ್ರೀತಿಯ ಬಗ್ಗೆ ಶುಭವರ್ತಮಾನವನ್ನು ತಂದಿದ್ದಾನೆ. ನಾವು ನಿಮ್ಮನ್ನು ಕಾಣಲು ಬಯಸುವಂತೆ, ನೀವೂ ನಮ್ಮನ್ನು ನೋಡಲು ಹಾತೊರೆಯುತ್ತಿರುವಿರೆಂದು ಮತ್ತು ನಮ್ಮನ್ನು ಪ್ರೀತಿಯಿಂದ ಸ್ಮರಿಸಿಕೊಳ್ಳುತ್ತಿರುವಿರೆಂದು ತಿಳಿಸಿದ್ದಾನೆ.

7 ಸಹೋದರರೇ, ನಾವು ಕಷ್ಟಸಂಕಟಗಳನ್ನು ಅನುಭವಿಸುತ್ತಿದ್ದರೂ ನಿಮ್ಮ ವಿಶ್ವಾಸವನ್ನು ಕುರಿತು ಕೇಳಿ ನಮಗೆ ಸಮಾಧಾನವಾಯಿತು.

8 ನೀವು ಪ್ರಭುವಿನಲ್ಲಿ ಅಚಲರಾಗಿರುವುದನ್ನು ಕೇಳಿ ಪುನಶ್ಚೇತನಗೊಂಡಿದ್ದೇವೆ.

9 ನಿಮ್ಮ ನಿಮಿತ್ತ ನಮಗೆ ಲಭಿಸಿರುವ ಆನಂದಕ್ಕಾಗಿ ದೇವರಿಗೆ ಎಷ್ಟು ಕೃತಜ್ಞತೆಯನ್ನು ಸಲ್ಲಿಸಿದರೂ ಸಾಲದು.

10 ನಿಮ್ಮನ್ನು ಕಣ್ಣಾರೆ ಕಂಡು ನಿಮ್ಮ ವಿಶ್ವಾಸದಲ್ಲಿರುವ ಕುಂದುಕೊರತೆಗಳನ್ನು ನಿವಾರಿಸಬೇಕೆಂದು ನಾವು ದೇವರಲ್ಲಿ ಹಗಲಿರುಳು ಪ್ರಾರ್ಥಿಸುತ್ತಿದ್ದೇವೆ.

11 ಪಿತನಾದ ದೇವರೂ ಪ್ರಭುವಾದ ಯೇಸುವೂ ನಾವು ನಿಮ್ಮಲ್ಲಿಗೆ ಬರುವಂತೆ ನಮ್ಮ ಮಾರ್ಗವನ್ನು ಸುಗಮಗೊಳಿಸಲಿ.

12 ನಿಮ್ಮ ಮೇಲೆ ನಮಗಿರುವ ಪ್ರೀತಿ ವೃದ್ಧಿಯಾಗುತ್ತಿರುವಂತೆಯೇ, ನಿಮ್ಮ ಪರಸ್ಪರ ಪ್ರೀತಿಯೂ ಸರ್ವಜನಪ್ರೇಮವೂ ಬೆಳೆದು ಸಮೃದ್ಧಿಯಾಗಲೆಂದು ಪ್ರಭುವಿನಲ್ಲಿ ಪ್ರಾರ್ಥಿಸುತ್ತೇವೆ.

13 ನಮ್ಮ ಪ್ರಭು ಯೇಸು ನಿಮ್ಮನ್ನು ದೃಢಪಡಿಸಲಿ; ತಮ್ಮ ಪರಿಶುದ್ಧ ಪರಿವಾರದ ಸಮೇತ ಯೇಸು ಪುನರಾಗಮಿಸುವಾಗ, ನಮ್ಮ ಪಿತನಾದ ದೇವರ ಸನ್ನಿಧಾನದಲ್ಲಿ ನೀವೂ ಸಹ ಪರಿಶುದ್ಧರೂ ನಿಷ್ಕಳಂಕರೂ ಆಗಿ ಕಾಣಿಸಿಕೊಳ್ಳುವಂತೆ ಮಾಡಲಿ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು