Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ತಿಮೊಥೆಯನಿಗೆ 4 - ಕನ್ನಡ ಸತ್ಯವೇದವು C.L. Bible (BSI)


ದುರ್ಮನಸ್ಸಿನ ದುರ್ಬೋಧಕರು

1 ಮುಂಬರುವ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳಿಗೆ ಬಲಿಬಿದ್ದು, ದುರಾತ್ಮಗಳ ದುರುಪದೇಶಗಳಿಗೆ ಕಿವಿಗೊಟ್ಟು ವಿಶ್ವಾಸಭ್ರಷ್ಟರಾಗುವರೆಂದು ಪವಿತ್ರಾತ್ಮ ಸ್ಪಷ್ಟವಾಗಿ ತಿಳಿಸಿದ್ದಾರೆ.

2 ಕಪಟಿಗಳು ದುರ್ಬೋಧನೆಗಳನ್ನು ಪ್ರಸರಿಸುತ್ತಾರೆ. ಬರೆಹಾಕಿದ ಚರ್ಮದಂತೆ ಅವರ ಮನಸ್ಸಾಕ್ಷಿಯು ಸುಟ್ಟುಹೋಗಿದೆ.

3 ಮದುವೆಯಾಗಬಾರದು, ಇಂತಿಂಥ ಆಹಾರವನ್ನು ಸೇವಿಸಬಾರದು ಎಂದು ಬೋಧಿಸುತ್ತಾರೆ. ಆದರೆ ಸತ್ಯವನ್ನು ಅರಿತು ಯಾರು ವಿಶ್ವಾಸಿಗಳಾಗಿದ್ದಾರೋ ಅಂಥವರು ಎಲ್ಲ ಆಹಾರಪದಾರ್ಥಗಳನ್ನು ಕೃತಜ್ಞತಾಸ್ತುತಿಯೊಡನೆ ಸೇವಿಸಲೆಂದೇ ದೇವರು ಅವುಗಳನ್ನು ಸೃಷ್ಟಿಸಿದ್ದಾರೆ.

4 ದೇವರು ಸೃಷ್ಟಿಸಿದ್ದೆಲ್ಲವೂ ಒಳ್ಳೆಯದೇ. ಅವರಿಗೆ ಸ್ತುತಿಸಲ್ಲಿಸಿ ಸ್ವೀಕರಿಸಿದ ಯಾವುದನ್ನೂ ತಿರಸ್ಕರಿಸಬೇಕಾಗಿಲ್ಲ.

5 ಏಕೆಂದರೆ, ದೇವರ ವಾಕ್ಯದಿಂದಲೂ ನಮ್ಮ ಪ್ರಾರ್ಥನೆಯಿಂದಲೂ ಅದು ಪಾವನಗೊಳ್ಳುತ್ತದೆ.


ಭಕ್ತಿಸಾಧನೆಯಿಂದ ಮುಕ್ತಿ

6 ಈ ವಿಷಯಗಳನ್ನೆಲ್ಲಾ ಇತರ ಸಹೋದರರಿಗೆ ನೀನು ವಿವರಿಸುವವನಾದರೆ, ನೀನು ಕ್ರಿಸ್ತಯೇಸುವಿನ ಯೋಗ್ಯ ದಾಸನಾಗುವೆ, ನೀನು ಅನುಸರಿಸುತ್ತಾ ಬಂದಿರುವ ಸದ್ಬೋಧನೆಯಿಂದಲೂ ವಿಶ್ವಾಸದಿಂದಲೂ ಆಧ್ಯಾತ್ಮಿಕ ಪೋಷಣೆಯನ್ನು ಪಡೆಯುವೆ.

7 ಪ್ರಾಪಂಚಿಕ ಹಾಗೂ ತಿರುಳಿಲ್ಲದ ಕಟ್ಟುಕತೆಗಳನ್ನು ತಳ್ಳಿಬಿಟ್ಟು, ನಿನ್ನ ಭಕ್ತಿಯನ್ನು ವೃದ್ಧಿಮಾಡಿಕೋ.

8 ಅಂಗಸಾಧನೆಯು ಸ್ವಲ್ಪಮಟ್ಟಿಗೆ ಪ್ರಯೋಜನಕರವಾದುದು; ಭಕ್ತಿಸಾಧನೆಯಾದರೋ ಎಲ್ಲಾ ದೃಷ್ಟಿಯಿಂದಲೂ ಪ್ರಯೋಜನಕರವಾದುದು. ಭಕ್ತಿಸಾಧನೆಯಿಂದ ಇಹಪರಗಳೆರಡರಲ್ಲೂ ನಿತ್ಯಜೀವವನ್ನು ಪಡೆಯುವ ಭರವಸೆ ನಮಗಿದೆ.

9 ಈ ಉಪದೇಶ ಸತ್ಯವಾದುದು ಹಾಗೂ ನಂಬಲರ್ಹವಾದುದು; ಎಲ್ಲರ ಅಂಗೀಕಾರಕ್ಕೂ ಯೋಗ್ಯವಾದುದು.

10 ಸಕಲ ಮಾನವರ, ವಿಶೇಷವಾಗಿ ಕ್ರೈಸ್ತವಿಶ್ವಾಸಿಗಳ, ಉದ್ಧಾರಕರಾದ ಜೀವಸ್ವರೂಪ ದೇವರಲ್ಲಿಯೇ ನಾವು ಭರವಸೆಯಿಟ್ಟಿದ್ದೇವೆ; ಅದಕ್ಕಾಗಿಯೇ ನಾವು ಹೋರಾಡುತ್ತೇವೆ ಹಾಗೂ ಶ್ರಮಿಸುತ್ತೇವೆ.

11 ಈ ಅಂಶಗಳನ್ನು ಆಜ್ಞಾಪಿಸಿ ಬೋಧಿಸು.

12 ನೀನಿನ್ನೂ ಯುವಕನೆಂದು ನಿನ್ನನ್ನು ತಾತ್ಸಾರ ಮಾಡುವುದಕ್ಕೆ ಯಾರಿಗೂ ಅವಕಾಶ ಕೊಡಬೇಡ. ನಿನ್ನ ನಡೆನುಡಿ, ಪ್ರೀತಿವಿಶ್ವಾಸ ಹಾಗೂ ಪರಿಶುದ್ಧತೆಯ ವಿಷಯದಲ್ಲಿ ವಿಶ್ವಾಸಿಗಳಿಗೆಲ್ಲರಿಗೂ ನೀನೇ ಆದರ್ಶಪ್ರಾಯನಾಗಿರು.

13 ನಾನು ಬರುವವರೆಗೂ ಪವಿತ್ರಗ್ರಂಥವನ್ನು ಪಠಿಸುವುದರಲ್ಲೂ ಪ್ರಬೋಧಿಸುವುದರಲ್ಲೂ ಉಪದೇಶಿಸುವುದರಲ್ಲೂ ಆಸಕ್ತನಾಗಿರು.

14 ನಿನ್ನಲ್ಲಿರುವ ವರದಾನವನ್ನು ಅಲಕ್ಷಿಸಬೇಡ. ಸಭೆಯ ಹಿರಿಯರು ನಿನ್ನ ಮೇಲೆ ದೈವವಾಕ್ಯದ ಉಚ್ಚಾರದೊಂದಿಗೆ ಹಸ್ತನಿಕ್ಷೇಪಮಾಡಿದಾಗ ಈ ವರವು ನಿನಗೆ ಲಭಿಸಿತಲ್ಲವೇ?

15 ನಿನ್ನ ಆಧ್ಯಾತ್ಮಿಕ ಪ್ರಗತಿ ಎಲ್ಲರಿಗೂ ಗೋಚರವಾಗುವಂತೆ ಈ ಕಾರ್ಯಸಾಧನೆಗಳಲ್ಲಿ ನಿರತನಾಗಿರು;

16 ಇವುಗಳಲ್ಲೇ ಮಗ್ನನಾಗಿರು. ಇದರಿಂದ ನಿನ್ನ ಮತ್ತು ನಿನ್ನ ಉಪದೇಶವನ್ನು ಕೇಳುವವರ ಜೀವೋದ್ಧಾರವನ್ನು ಸಾಧಿಸುವೆ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು