1 ತಿಮೊಥೆಯನಿಗೆ 3 - ಕನ್ನಡ ಸತ್ಯವೇದವು C.L. Bible (BSI)ಧರ್ಮಾಧ್ಯಕ್ಷನ ಗುಣಲಕ್ಷಣಗಳು 1 ಯಾರಾದರೂ ಧರ್ಮಾಧ್ಯಕ್ಷನಾಗಲು ಅಪೇಕ್ಷಿಸಿದರೆ, ಅಂಥವನು ಉತ್ತಮ ಸೇವೆಯನ್ನೇ ಬಯಸುತ್ತಾನೆಂಬುದು ನಿಜ. 2 ಅಂಥವನು ನಿಂದಾರಹಿತನಾಗಿರಬೇಕು. ಏಕಪತ್ನಿ ಉಳ್ಳವನು, ಸ್ವಸ್ಥಬುದ್ಧಿಯುಳ್ಳವನು, ಜಿತೇಂದ್ರಿಯನು, ಗೌರವಸ್ಥನು ಮತ್ತು ಅತಿಥಿ ಸತ್ಕಾರ ಮಾಡುವವನು ಆಗಿರಬೇಕು. ಬೋಧಿಸುವುದರಲ್ಲಿ ಪ್ರವೀಣನಾಗಿರಬೇಕು. 3 ಅವನು ಕುಡುಕನು, ಕಲಹಪ್ರಿಯನು ಮತ್ತು ಹೊಡೆದಾಡುವವನು ಆಗಿರಬಾರದು. ಶಾಂತನೂ ದಯಾವಂತನೂ ಹಣದ ವ್ಯಾಮೋಹ ಇಲ್ಲದವನೂ ಆಗಿರಬೇಕು. 4 ತನ್ನ ಕುಟುಂಬವನ್ನು ಜವಾಬ್ದಾರಿಯುತವಾಗಿ ನಡೆಸುವವನೂ ಮಕ್ಕಳನ್ನು ಶಿಸ್ತಿನಲ್ಲಿ ಬೆಳೆಸಿ ಅವರಿಂದ ಗೌರವವನ್ನು ಪಡೆದುಕೊಳ್ಳುವವನೂ ಆಗಿರಬೇಕು. 5 ತನ್ನ ಕುಟುಂಬವನ್ನೇ ಜವಾಬ್ದಾರಿಯುತವಾಗಿ ನಡೆಸಲು ತಿಳಿಯದವನು ದೇವರ ಸಭೆಯನ್ನು ಹೇಗೆ ತಾನೇ ಪರಿಶೀಲಿಸಿಯಾನು? 6 ಆತನು ಹೊಸದಾಗಿ ಕ್ರೈಸ್ತಧರ್ಮವನ್ನು ಅಂಗೀಕರಿಸಿದವನಾಗಿರಬಾರದು; ಇಲ್ಲದಿದ್ದರೆ ಅಹಂಕಾರದಿಂದ ಉಬ್ಬಿಕೊಂಡು ಸೈತಾನನಂತೆಯೇ ದಂಡನೆಗೆ ಗುರಿಯಾದಾನು. 7 ಕ್ರೈಸ್ತರಲ್ಲದವರಿಂದಲೂ ಆತನು ಒಳ್ಳೆಯವನೆನಿಸಿಕೊಂಡಿರಬೇಕು. ಹೀಗಿದ್ದರೆ ಮಾತ್ರ ನಿಂದೆಗೊಳಗಾಗದೆ ಸೈತಾನನ ಕುತಂತ್ರಗಳಿಂದ ದೂರವಿರಬಲ್ಲನು. ಸಭಾಸೇವಕರ ಸದ್ಗುಣಗಳು 8 ಸಭಾಸೇವಕರು ಸಜ್ಜನರಾಗಿರಬೇಕು. ಎರಡು ನಾಲಿಗೆಯುಳ್ಳವರೂ ಕುಡುಕರೂ ಲಾಭಕೋರರೂ ಆಗಿರಬಾರದು. 9 ವಿಶ್ವಾಸದ ನಿಗೂಢರಹಸ್ಯಗಳನ್ನು ಶುದ್ಧ ಮನಸ್ಸಾಕ್ಷಿಯಿಂದ ಕಾಪಾಡಿಕೊಂಡು ಬರುವವರಾಗಿರಬೇಕು. 10 ಇವರನ್ನು ಮೊದಲು ಪರೀಕ್ಷೆಗೊಳಪಡಿಸಬೇಕು. ಯಾವುದೇ ಕುಂದುಕೊರತೆ ಕಂಡುಬರದಿದ್ದಲ್ಲಿ, ಇವರನ್ನು ಸಭಾಸೇವಕರನ್ನಾಗಿ ನೇಮಿಸಬಹುದು. 11 ಅಂತೆಯೇ, ಸಭಾಸೇವಕಿಯರು ಸಜ್ಜನೆಯರಾಗಿರಬೇಕು. ಚಾಡಿಮಾತುಗಳನ್ನು ಆಡುವವರೂ ಮದ್ಯಾಸಕ್ತರೂ ಆಗಿರದೆ ಎಲ್ಲ ವಿಷಯಗಳಲ್ಲಿ ನಂಬಿಕಸ್ಥರಾಗಿರಬೇಕು. 12 ಸಭಾಸೇವಕರು ಏಕಪತ್ನಿಯುಳ್ಳವರಾಗಿದ್ದು ತಮ್ಮ ಮಕ್ಕಳನ್ನೂ ಕುಟುಂಬವನ್ನೂ ಜವಾಬ್ದಾರಿಯುತವಾಗಿ ನಡೆಸಿಕೊಂಡು ಹೋಗುವವರಾಗಿರಬೇಕು. 13 ನಿಷ್ಠೆಯಿಂದ ಸೇವೆಸಲ್ಲಿಸುವ ಸಭಾಸೇವಕರು ಒಳ್ಳೆಯ ಸ್ಥಾನಮಾನಗಳನ್ನು ಪಡೆಯುತ್ತಾರೆ: ಕ್ರಿಸ್ತಯೇಸುವಿನಲ್ಲಿ ಅವರಿಗಿರುವ ವಿಶ್ವಾಸವನ್ನು ಸಾರಲು ಧೈರ್ಯಸ್ಥೈರ್ಯವನ್ನು ಪಡೆಯುತ್ತಾರೆ. ಮಹಿಮಾನ್ವಿತ ಯೇಸುಕ್ರಿಸ್ತ 14 ನಾನು ನಿನ್ನ ಬಳಿಗೆ ಬೇಗನೆ ಬರುವೆನೆಂಬ ನಿರೀಕ್ಷೆಯಿಂದಲೇ ಈ ಪತ್ರವನ್ನು ಬರೆಯುತ್ತಿದ್ದೇನೆ. 15 ಒಂದು ವೇಳೆ ನಾನು ಬರುವುದು ತಡವಾದರೆ, ದೇವರ ಮಂದಿರದಲ್ಲಿ ಅಂದರೆ, ಜೀವಸ್ವರೂಪಿಯಾದ ದೇವರ ಸಭೆಯಲ್ಲಿ, ಹೇಗೆ ನಡೆದುಕೊಳ್ಳಬೇಕು ಎಂಬುದು ನಿನಗೆ ತಿಳಿಯಲೆಂದು ಇದನ್ನು ಬರೆದಿದ್ದೇನೆ. ಸಭೆಯು ಸತ್ಯಕ್ಕೆ ಸ್ತಂಭವೂ ಅಸ್ತಿವಾರವೂ ಆಗಿದೆ. 16 ನಿಜವಾಗಿಯೂ ನಮ್ಮ ಧರ್ಮದ ನಿಗೂಢಾರ್ಥ ಶ್ರೇಷ್ಠವಾದದ್ದು ಎಂಬುದು ನಿಸ್ಸಂದೇಹವಾದ ವಿಷಯ. “ನರಮಾನವ ರೂಪದಲಿ ಪ್ರತ್ಯಕ್ಷನಾಗಿ ದೇವರಿಗೆ ಪ್ರಿಯನೆಂದು ಪವಿತ್ರಾತ್ಮನಿಂದ ಪ್ರಕಟಿತನಾಗಿ ದೇವದೂತರಿಗೆ ಪ್ರದರ್ಶಿತವಾಗಿ ಅನ್ಯಜನರಿಗೆ ಪ್ರಬೋಧಿತನಾಗಿ ಜಗದಲ್ಲೆಲ್ಲೂ ವಿಶ್ವಾಸಪಡೆದವನಾಗಿ ಸ್ವರ್ಗಕ್ಕೇರಿದಾತ ಮಹಿಮಾನ್ವಿತ ಯೇಸುಕ್ರಿಸ್ತ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India