1 ತಿಮೊಥೆಯನಿಗೆ 2 - ಕನ್ನಡ ಸತ್ಯವೇದವು C.L. Bible (BSI)ಸಾರ್ವತ್ರಿಕ ಪ್ರಾರ್ಥನೆ 1 ಮೊತ್ತಮೊದಲು ಮಾನವರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆ, ಪ್ರಾರ್ಥನೆ, ಬಿನ್ನಹ ಹಾಗೂ ಕೃತಜ್ಞತಾಸ್ತುತಿಗಳನ್ನು ಸಲ್ಲಿಸಬೇಕೆಂದು ಕೇಳಿಕೊಳ್ಳುತ್ತೇನೆ. 2 ನಾವು ದೈವಭಕ್ತಿಯುಳ್ಳವರಾಗಿ ಮತ್ತು ಗೌರವಯುತರಾಗಿ ಶಾಂತಿಸಮಾಧಾನದಿಂದಲೂ ನೆಮ್ಮದಿಯಿಂದಲೂ ಜೀವಿಸಲು ಅನುಕೂಲವಾಗುವಂತೆ ಅರಸರಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ಪ್ರಾರ್ಥಿಸಬೇಕು. 3 ಹೀಗೆ ಮಾಡುವುದು ಒಳ್ಳೆಯದು, ನಮ್ಮ ಉದ್ಧಾರಕರಾದ ದೇವರಿಗೆ ಮೆಚ್ಚುಗೆಯಾದುದು. 4 ಎಲ್ಲಾ ಮಾನವರೂ ಸತ್ಯವನ್ನರಿತು ಜೀವೋದ್ಧಾರ ಪಡೆಯಬೇಕೆಂಬುದೇ ದೈವೇಚ್ಛೆ. 5 ದೇವರು ಒಬ್ಬರೇ; ದೇವರನ್ನೂ ಮಾನವರನ್ನೂ ಒಂದುಗೂಡಿಸುವ ಮಧ್ಯಸ್ಥರೂ ಒಬ್ಬರೇ; ಅವರೇ ಮಾನವರಾಗಿರುವ ಕ್ರಿಸ್ತಯೇಸು. 6 ಇವರು ಎಲ್ಲರ ಉದ್ಧಾರಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಸರ್ವರೂ ಉದ್ಧಾರವಾಗಬೇಕೆಂಬ ದೈವೇಚ್ಛೆಗೆ ಸೂಕ್ತ ಸಮಯದಲ್ಲಿ ಸಾಕ್ಷಿ ನೀಡಿದರು. 7 ವಿಶ್ವಾಸ ಮತ್ತು ಸತ್ಯದ ಸಂದೇಶವನ್ನು ಸಾರುವುದಕ್ಕಾಗಿಯೇ ದೇವರು ನನ್ನನ್ನು ಪ್ರೇಷಿತನನ್ನಾಗಿಯೂ ಯೆಹೂದ್ಯೇತರರಿಗೆ ಬೋಧಕನನ್ನಾಗಿಯೂ ನೇಮಕಮಾಡಿದರು. ನಾನು ಹೇಳುತ್ತಿರುವುದು ಸುಳ್ಳಲ್ಲ, ಸತ್ಯಸ್ಯ ಸತ್ಯ. 8 ಪ್ರಾರ್ಥನೆ ಮಾಡುವ ಸ್ಥಳಗಳಲ್ಲೆಲ್ಲಾ ಪುರುಷರು ಕೋಪತಾಪವಿಲ್ಲದೆ, ಕೋಲಾಹಲವಿಲ್ಲದೆ ಕರಗಳನ್ನೆತ್ತಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸಬೇಕು ಎಂಬುದೇ ನನ್ನ ಅಪೇಕ್ಷೆ. 9 ಅಂತೆಯೇ, ಮಹಿಳೆಯರು, ಸಭ್ಯತೆಯನ್ನು ಮೀರದೆ ಘನತೆ, ಗೌರವಕ್ಕೆ ಒಪ್ಪುವಂತಹ ಉಡುಪನ್ನು ಧರಿಸಿಕೊಳ್ಳಬೇಕು. 10 ಅವರು ಮಿತಿಮೀರಿದ ಕೇಶಾಲಂಕಾರ, ಆಭರಣಾಲಂಕಾರ, ವಸ್ತ್ರಾಲಂಕಾರಗಳಿಂದ ತಮ್ಮನ್ನೇ ಶೃಂಗರಿಸಿಕೊಳ್ಳುವುದರ ಬದಲು ದೈವಭಕ್ತೆಯರಾದ ಸ್ತ್ರೀಯರಿಗೆ ಲಕ್ಷಣವಾದ ಸತ್ಕಾರ್ಯಗಳಿಂದ ಅಲಂಕರಿಸಿಕೊಳ್ಳಲಿ. 11 ಮಹಿಳೆಯರು ಮೌನದಿಂದಲೂ ನಮ್ರತೆಯಿಂದಲೂ ಧರ್ಮೋಪದೇಶವನ್ನು ಕಲಿಯಲಿ. 12 ಅವರು ಬೋಧನೆಮಾಡುವುದಕ್ಕಾಗಲಿ, ಪುರುಷರ ಮೇಲೆ ಅಧಿಕಾರ ಚಲಾಯಿಸುವುದಕ್ಕಾಗಲಿ ನಾನು ಅನುಮತಿಸೆನು. ಅವರು ಮೌನ ತಾಳಬೇಕು. 13 ಏಕೆಂದರೆ, ದೇವರು ಮೊದಲು ಆದಾಮನನ್ನು, ಅನಂತರ ಹವ್ವಳನ್ನು ಸೃಷ್ಟಿಸಿದರು. 14 ಅಲ್ಲದೆ, ಮೊದಲು ವಂಚನೆಗೊಳಗಾಗಿ ದೇವರಿಗೆ ವಿರುದ್ಧ ಪಾಪಮಾಡಿದವಳು ಹವ್ವಳೇ ಹೊರತು ಆದಾಮನಲ್ಲ. 15 ಮಹಿಳೆ ಸಚ್ಚರಿತಳಾಗಿದ್ದು ವಿಶ್ವಾಸ, ಪ್ರೀತಿ ಮತ್ತು ಪವಿತ್ರತೆಯಲ್ಲಿ ಪ್ರವರ್ಧಿಸಿದರೆ, ತನ್ನ ತಾಯ್ತನದ ಮೂಲಕ ಸಂರಕ್ಷಣೆಯನ್ನು ಪಡೆಯುತ್ತಾಳೆ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India