Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ತಿಮೊಥೆಯನಿಗೆ 1 - ಕನ್ನಡ ಸತ್ಯವೇದವು C.L. Bible (BSI)


ಪೀಠಿಕೆ

1 ಕ್ರೈಸ್ತವಿಶ್ವಾಸದಲ್ಲಿ ಸತ್‍ಪುತ್ರನಾದ ತಿಮೊಥೇಯನಿಗೆ-ಪೌಲನು ಬರೆಯುವ ಪತ್ರ.

2 ನಮ್ಮ ಉದ್ಧಾರಕರಾದ ದೇವರ ಮತ್ತು ನಮ್ಮ ನಿರೀಕ್ಷೆಯಾಗಿರುವ ಕ್ರಿಸ್ತಯೇಸುವಿನ ಆಜ್ಞಾನುಸಾರ, ನಾನು ಕ್ರಿಸ್ತಯೇಸುವಿನ ಪ್ರೇಷಿತನಾಗಿದ್ದೇನೆ. ಪಿತನಾದ ದೇವರೂ ನಮ್ಮ ಪ್ರಭುವಾದ ಕ್ರಿಸ್ತಯೇಸುವೂ ನಿನಗೆ ಕೃಪೆಯನ್ನೂ ಕರುಣೆಯನ್ನೂ ಶಾಂತಿಯನ್ನೂ ಅನುಗ್ರಹಿಸಲಿ!


ಸುಳ್ಳುಬೋಧಕರ ಬಗ್ಗೆ ಎಚ್ಚರಿಕೆ

3 ನಾನು ಮಕೆದೋನಿಯಕ್ಕೆ ಹೋಗುವಾಗ ನಿನಗೆ ಹೇಳಿದಂತೆ, ನೀನು ಎಫೆಸದಲ್ಲಿಯೇ ಇರಬೇಕು. ಅಲ್ಲಿ ಕೆಲವರು ತಪ್ಪುಬೋಧನೆಯನ್ನು ಮಾಡುತ್ತಿದ್ದಾರೆ; ಅದನ್ನು ನೀನು ನಿಲ್ಲಿಸಬೇಕು.

4 ಕಟ್ಟುಕತೆಗಳಲ್ಲೂ ಕೊನೆಮೊದಲಿಲ್ಲದ ವಂಶಾವಳಿಗಳ ನಿರೂಪಣೆಗಳಲ್ಲೂ ಕಾಲಹರಣ ಮಾಡಬಾರದೆಂದು ಅವರಿಗೆ ಆಜ್ಞಾಪಿಸಬೇಕು. ಅಂಥ ಕತೆಗಳು, ವಂಶಾವಳಿಗಳು ಅನಗತ್ಯವಾದ ವಾದವಿವಾದಗಳಿಗೆ ಎಡೆಮಾಡುತ್ತವೆಯೇ ಹೊರತು ದೇವರ ಯೋಜನೆ ಕೈಗೂಡಲು ಅವು ಅನುಕೂಲವಾಗಿಲ್ಲ; ವಿಶ್ವಾಸದಿಂದ ಮಾತ್ರ ಅದು ಸಾಧ್ಯ.

5 ನಿರ್ಮಲ ಹೃದಯ, ಶುದ್ಧ ಮನಸ್ಸಾಕ್ಷಿ ಹಾಗೂ ನಿಷ್ಕಪಟ ವಿಶ್ವಾಸದಿಂದ ಹುಟ್ಟುವ ಪ್ರೀತಿಯು ವೃದ್ಧಿಯಾಗಬೇಕೆಂಬುದೇ ವಾಕ್ಯೋಪದೇಶದ ಉದ್ದೇಶ.

6 ಕೆಲವರಾದರೋ ಈ ಮಾರ್ಗವನ್ನು ಬಿಟ್ಟು ವ್ಯರ್ಥವಾದ ವಾದವಿವಾದಗಳಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ;

7 ತಮ್ಮ ಮಾತಿನ ಅರ್ಥವಾಗಲಿ, ತಮ್ಮ ವಾದದ ತಿರುಳಾಗಲಿ ಅವರಿಗೆ ತಿಳಿಯದಿದ್ದರೂ ಅವರು ಧರ್ಮೋಪದೇಶಕರಾಗಲು ಹವಣಿಸುತ್ತಾರೆ.

8 ನಮಗೆಲ್ಲರಿಗೂ ತಿಳಿದಿರುವಂತೆ ಧರ್ಮಶಾಸ್ತ್ರವೇನೋ ಒಳ್ಳೆಯದು. ಆದರೆ ಅದನ್ನು ನಿಷ್ಠೆಯಿಂದ ಕಾರ್ಯಗತ ಮಾಡಬೇಕು.

9 ಧರ್ಮಶಾಸ್ತ್ರದ ನಿರ್ಬಂಧನೆಗಳು ಸಜ್ಜನರಿಗಲ್ಲ; ಬದಲಿಗೆ ಅಕ್ರಮಿಗಳಿಗೆ, ಅವಿಧೇಯರಿಗೆ, ಅಧರ್ಮಿಗಳಿಗೆ, ಭಕ್ತಿಹೀನರಿಗೆ, ಪಾಪಿಗಳಿಗೆ, ಅಶುದ್ಧರಿಗೆ, ಪ್ರಾಪಂಚಿಕರಿಗೆ, ಹೆತ್ತವರನ್ನು ಹತ್ಯೆಮಾಡುವವರಿಗೆ ಮತ್ತು ಕೊಲೆಗಾರರಿಗೆ.

10 ಅಂತೆಯೇ, ಕಾಮುಕರಿಗೆ, ಸಲಿಂಗ ಪ್ರೇಮಿಗಳಿಗೆ, ನರಚೋರರಿಗೆ, ಸುಳ್ಳುಸಾಕ್ಷಿಗಳಿಗೆ ಸುಳ್ಳಾಣೆ ಇಡುವವರಿಗೆ ಮತ್ತು ಸದ್ಧರ್ಮ ವಿರೋಧಿಗಳಿಗೆ ಮುಂತಾದವರಿಗೆ ಈ ನಿರ್ಬಂಧನೆಗಳು ನೇಮಕವಾಗಿವೆ.

11 ಸ್ತುತ್ಯಾರ್ಹರೂ ಮಹಿಮಾಭರಿತರೂ ಆದ ದೇವರು ನನಗೆ ವಹಿಸಿರುವ ಶುಭಸಂದೇಶಕ್ಕೆ ಈ ಬೋಧನೆ ಅನುಗುಣವಾಗಿದೆ.


ಕರುಣಾಳು ದೇವರು

12 ಶುಭಸಂದೇಶದ ಸೇವೆಯನ್ನು ಕೈಗೊಳ್ಳಲು ಯೋಗ್ಯನೆಂದು ಎಣಿಸಿ ನನಗೆ ಬೇಕಾದ ಶಕ್ತಿಸಾಮರ್ಥ್ಯವನ್ನು ದಯಪಾಲಿಸಿದ ನಮ್ಮ ಪ್ರಭು ಯೇಸುಕ್ರಿಸ್ತರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

13 ಹಿಂದೆ ನಾನು ಅವರನ್ನು ದೂಷಿಸಿದೆ, ಹಿಂಸಿಸಿದೆ, ಅವಮಾನಪಡಿಸಿದೆ. ಆದರೆ ದೇವರು ದಯಾಮಯಿ; ಆಗ ನಾನು ತಿಳಿಯದೆ ಅವಿಶ್ವಾಸಿಯಾಗಿ ಹಾಗೆ ಮಾಡಿದ್ದರಿಂದ ದೇವರು ನನಗೆ ಕರುಣೆತೋರಿದರು.

14 ಕ್ರಿಸ್ತಯೇಸುವಿನ ಅನ್ಯೋನ್ಯತೆಯಿಂದ ಲಭಿಸುವ ಪ್ರೀತಿ ವಿಶ್ವಾಸದಲ್ಲಿ ಭಾಗಿಯಾಗುವಂತೆ ಅವರು ನನ್ನ ಮೇಲೆ ತಮ್ಮ ಕೃಪಾವರಗಳನ್ನು ಹೇರಳವಾಗಿ ಸುರಿಸಿದರು.

15 ಕ್ರಿಸ್ತಯೇಸು, ಪಾಪಿಗಳ ಉದ್ಧಾರಕ್ಕಾಗಿ ಈ ಲೋಕಕ್ಕೆ ಬಂದರು ಎನ್ನುವ ಮಾತು ಸತ್ಯವಾದುದು, ನಂಬಲರ್ಹವಾದುದು ಹಾಗೂ ಎಲ್ಲರ ಅಂಗೀಕಾರಕ್ಕೆ ಯೋಗ್ಯವಾದುದು. ಅಂಥ ಪಾಪಿಗಳಲ್ಲಿ ನಾನೇ ಪ್ರಮುಖನು.

16 ಇದರಿಂದಾಗಿ, ಮುಂದೆ ವಿಶ್ವಾಸಿಗಳಾಗಿ ನಿತ್ಯಜೀವ ಪಡೆಯುವವರಿಗೆ ಆದರ್ಶ ದೊರಕುವಂತೆ ಕ್ರಿಸ್ತಯೇಸು ನನಗೆ ಪೂರ್ಣ ಸಹನೆ ತೋರಿದರು. ಇದು ದೇವರ ಕರುಣೆಯೇ ಸರಿ.

17 ಸರ್ವಯುಗಗಳ ಅರಸರೂ ಅಮರರೂ ಅಗೋಚರರೂ ಆಗಿರುವ ಏಕೈಕ ದೇವರಿಗೆ ಯುಗಯುಗಾಂತರಕ್ಕೆ ಗೌರವವೂ ಮಹಿಮೆಯೂ ಸಲ್ಲಲಿ! ಆಮೆನ್.

18 ತಿಮೊಥೇಯನೇ, ನನ್ನ ಕುಮಾರನೇ, ಹಿಂದೆ ನಿನ್ನ ಕುರಿತು ಮಾಡಲಾಗಿರುವ ಪ್ರವಾದನೆಗಳಿಗೆ ಅನುಗುಣವಾಗಿ ನಾನು ನಿನಗೆ ಕೊಡುವ ಆಜ್ಞೆ ಇದು: ಪ್ರವಾದನೆಗಳಿಂದ ಪ್ರೇರಣೆ ಪಡೆದು ದಿಟ್ಟಹೋರಾಟವನ್ನು ಮಾಡು.

19 ವಿಶ್ವಾಸವನ್ನೂ ಒಳ್ಳೆಯ ಮನಸ್ಸಾಕ್ಷಿಯನ್ನೂ ಸುರಕ್ಷಿತವಾಗಿ ಇಟ್ಟುಕೋ. ಕೆಲವರು ತಮ್ಮ ಮನಸ್ಸಾಕ್ಷಿಗೆ ವ್ಯತಿರಿಕ್ತವಾಗಿ ನಡೆದು ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ.

20 ಹುಮೆನಾಯನೂ ಅಲೆಗ್ಸಾಂಡರನೂ ಇದಕ್ಕೆ ನಿದರ್ಶನವಾಗಿದ್ದಾರೆ. ದೇವದೂಷಣೆ ಮಾಡಬಾರದೆಂಬುದನ್ನು ಕಲಿತುಕೊಳ್ಳುವಂತೆ ಇವರನ್ನು ನಾನು ಸೈತಾನನ ವಶಕ್ಕೆ ಒಪ್ಪಿಸಿಬಿಟ್ಟಿದ್ದೇನೆ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು