1 ಕೊರಿಂಥದವರಿಗೆ 9 - ಕನ್ನಡ ಸತ್ಯವೇದವು C.L. Bible (BSI)ಧರ್ಮಸೇವಕನ ಸಂಭಾವನೆ 1 ನಾನು ಸ್ವತಂತ್ರನಲ್ಲವೇ? ಪ್ರೇಷಿತನಲ್ಲವೇ? ನಮ್ಮ ಪ್ರಭು ಯೇಸುವನ್ನು ಕಂಡವನಲ್ಲವೇ? ಪ್ರಭುವಿನಲ್ಲಿ ನಾನು ಮಾಡಿದ ಸೇವೆಯ ಪ್ರತಿಫಲ ನೀವಲ್ಲವೇ? 2 ಇತರರಿಗೆ ನಾನು ಪ್ರೇಷಿತನಲ್ಲದಿದ್ದರೂ ನಿಮಗಂತೂ ನಾನು ಪ್ರೇಷಿತನೇ. ನಾನು ಪ್ರೇಷಿತನು ಎಂಬುದಕ್ಕೆ ಪ್ರಭುವಿಗೆ ಸೇರಿದವರಾದ ನೀವೇ ಜೀವಂತ ಸಾಕ್ಷಿಗಳು. 3 ನನ್ನನ್ನು ಟೀಕಿಸುವವರಿಗೆ ನನ್ನ ಉತ್ತರ ಇದು: 4 ನಿಮ್ಮಿಂದ ಅನ್ನಪಾನಗಳನ್ನು ಪಡೆಯಲು ನನಗೆ ಹಕ್ಕಿಲ್ಲವೇ? 5 ಮಿಕ್ಕ ಪ್ರೇಷಿತರಂತೆ, ಪ್ರಭುವಿನ ಸಹೋದರರಂತೆ, ಕೇಫನಂತೆ ನಾನು ಸಹ ಕ್ರೈಸ್ತವಿಶ್ವಾಸಿಯೊಬ್ಬಳನ್ನು ಮದುವೆಮಾಡಿಕೊಂಡು ಆಕೆಯೊಡನೆ ಪ್ರಯಾಣ ಕೈಗೊಳ್ಳಲು ನನಗೆ ಹಕ್ಕಿಲ್ಲವೇ? 6 ಜೀವನೋಪಾಯಕ್ಕಾಗಿ ಬಾರ್ನಬ ಮತ್ತು ನಾನು ಮಾತ್ರ ದುಡಿಯಬೇಕೇ? 7 ಯಾವ ಸೈನಿಕ ಸ್ವಂತ ಖರ್ಚಿನಿಂದ ಸಮರಕ್ಕೆ ನಿಲ್ಲುತ್ತಾನೆ? ಯಾವ ತೋಟಗಾರ ತನ್ನ ಸ್ವಂತ ದ್ರಾಕ್ಷಿಯ ತೋಟದಿಂದ ದ್ರಾಕ್ಷಿಯ ಫಲವನ್ನು ತಿನ್ನದಿರುತ್ತಾನೆ? ಯಾವ ಗೌಳಿಗ ತಾನು ಸಾಕಿದ ಹಸುವಿನ ಹಾಲನ್ನು ಕುಡಿಯದಿರುತ್ತಾನೆ? 8 ಇವು ಕೇವಲ ಲೋಕರೂಢಿಯ ಮಾತುಗಳಲ್ಲ. ಧರ್ಮಶಾಸ್ತ್ರವೂ ಇದನ್ನು ಅನುಮೋದಿಸುತ್ತದೆ. 9 “ಕಣ ತುಳಿಯುವ ಎತ್ತಿನ ಬಾಯನ್ನು ಕಟ್ಟಬೇಡ,” ಎಂದು ಮೋಶೆಯ ಧರ್ಮಶಾಸ್ತ್ರದಲ್ಲೇ ಲಿಖಿತವಾಗಿದೆ. ಇಲ್ಲಿ ದೇವರಿಗೆ ಎತ್ತಿನ ಮೇಲೆ ಚಿಂತೆಯೇ? ಇಲ್ಲ. 10 ಇದನ್ನು ನಮ್ಮ ಹಿತಚಿಂತನೆಯಿಂದ ಹೇಳಲಾಗಿದೆ; ಅದೇ ಉದ್ದೇಶದಿಂದ ಬರೆಯಲಾಗಿದೆ. ಹೌದು, ಉಳುವವನೂ ಒಕ್ಕುವವನೂ ಕಾಳುಬೆಳೆಯಲ್ಲಿ ಪಾಲುಪಡೆಯುವ ಉದ್ದೇಶದಿಂದಲೇ ದುಡಿಯುತ್ತಾರೆ. 11 ನಿಮ್ಮಲ್ಲಿ ಆಧ್ಯಾತ್ಮಿಕ ಬೀಜವನ್ನು ಬಿತ್ತನೆಮಾಡಿದ ನಾವು ಪ್ರತಿಫಲವಾಗಿ ದೈನಂದಿನ ಅಗತ್ಯಗಳನ್ನು ಅಪೇಕ್ಷಿಸುವುದು ಅತಿಯಾಯಿತೇ? 12 ಇತರರಿಗೆ ನಿಮ್ಮ ಮೇಲೆ ಇಂಥ ಹಕ್ಕಿದ್ದರೆ ಅದಕ್ಕಿಂತಲೂ ಹೆಚ್ಚು ಹಕ್ಕು ನಮಗಿರಬೇಕಲ್ಲವೇ? ಆದರೂ ನಾವು ಈ ಹಕ್ಕನ್ನು ಚಲಾಯಿಸಲೇ ಇಲ್ಲ. ಬದಲಿಗೆ, ಕ್ರಿಸ್ತಯೇಸುವಿನ ಶುಭಸಂದೇಶಕ್ಕೆ ಯಾವ ಅಡ್ಡಿಯೂ ಬಾರದಿರಲೆಂದು ಎಲ್ಲವನ್ನು ಸಹಿಸಿಕೊಂಡೆವು. 13 ದೇವಾಲಯದ ಸೇವೆಯಲ್ಲಿರುವವರು ದೇವಾಲಯದ ಆದಾಯದಿಂದ ಜೀವಿಸುತ್ತಾರೆ. ಬಲಿಪೀಠದ ಬಳಿ ಸೇವೆಮಾಡುವವರು ಅರ್ಪಿತವಾದ ಬಲಿಯಿಂದ ಪಾಲನ್ನು ಪಡೆಯುತ್ತಾರೆ. ಇದು ನಿಮಗೆ ತಿಳಿದಿದೆ. 14 ಅದೇ ಪ್ರಕಾರ ಶುಭಸಂದೇಶ ಪ್ರಚಾರಕರು ಶುಭಸಂದೇಶ ಪ್ರಚಾರದ ಆದಾಯದಿಂದಲೇ ಜೀವನ ನಡೆಸಬೇಕೆಂದು ಪ್ರಭುವೇ ಆಜ್ಞಾಪಿಸಿದ್ದಾರೆ. 15 ನಾನಂತೂ ಈ ಹಕ್ಕುಗಳಲ್ಲಿ ಒಂದನ್ನೂ ಚಲಾಯಿಸಲಿಲ್ಲ. ಚಲಾಯಿಸಬೇಕೆಂಬ ಉದ್ದೇಶದಿಂದಲೂ ಇದನ್ನು ಬರೆಯುತ್ತಿಲ್ಲ. ಅದಕ್ಕಿಂತಲೂ ಸಾಯುವುದೇ ಲೇಸು. ಈ ನನ್ನ ಹೆಮ್ಮೆಯನ್ನು ಯಾರೂ ಅಪಹರಿಸಲಾರರು. 16 ಶುಭಸಂದೇಶವನ್ನು ನಾನು ಸಾರುತ್ತಿದ್ದೇನೆಂದು ಕೊಚ್ಚಿಕೊಳ್ಳುವುದಕ್ಕೂ ನನಗೆ ಆಸ್ಪದವಿಲ್ಲ. ಏಕೆಂದರೆ, ಸಾರಲೇಬೇಕೆಂಬ ಕರ್ತವ್ಯಕ್ಕೆ ನಾನು ಬದ್ಧನಾಗಿದ್ದೇನೆ. ಸಾರದಿದ್ದರೆ ನನಗೆ ಧಿಕ್ಕಾರವಿರಲಿ! 17 ನಾನು ಸ್ವಂತ ಇಷ್ಟದಿಂದ ಈ ಕಾರ್ಯವನ್ನು ಕೈಗೊಂಡಿದ್ದರೆ ತಕ್ಕ ಸಂಭಾವನೆ ಇರುತ್ತಿತ್ತು. ಆದರೆ ಈ ಕರ್ತವ್ಯವನ್ನು ನನಗೆ ವಹಿಸಲಾಗಿದೆ. ಆದ್ದರಿಂದ ಕರ್ತವ್ಯಬದ್ಧನಾಗಿ ಮಾಡುತ್ತಿದ್ದೇನೆ. 18 ಹಾಗಾದರೆ ನನಗೆ ಸಿಗುವ ಸಂಭಾವನೆಯಾದರೂ ಏನು? ಶುಭಸಂದೇಶವನ್ನು ಸಾರುವಾಗ ಜೀವನೋಪಾಯಕ್ಕಾಗಿ ನನಗಿರುವ ಹಕ್ಕನ್ನು ಬಳಸಿಕೊಳ್ಳದೆ ಉಚಿತವಾಗಿ ಸಾರುವ ಸೌಭಾಗ್ಯವೇ ನನ್ನ ಸಂಭಾವನೆ. 19 ನಾನು ಸ್ವತಂತ್ರನು, ಯಾರಿಗೂ ದಾಸನಲ್ಲ. ಆದರೂ ಆದಷ್ಟು ಜನರನ್ನು ಗಳಿಸಿಕೊಳ್ಳಲೆಂದು ಎಲ್ಲರಿಗೂ ದಾಸನಾದೆ. 20 ಯೆಹೂದ್ಯರನ್ನು ಗಳಿಸಿಕೊಳ್ಳಲು ಯೆಹೂದ್ಯರಿಗೆ ಯೆಹೂದ್ಯನಂತಾದೆ. ಧರ್ಮಶಾಸ್ತ್ರಕ್ಕೆ ಅಧೀನರಾದವರನ್ನು ಗಳಿಸಿಕೊಳ್ಳಲು ನಾನು ಆ ಶಾಸ್ತ್ರಕ್ಕೆ ಅಧೀನನಲ್ಲದಿದ್ದರೂ ಅವರಿಗೋಸ್ಕರ ಅಧೀನನಂತಾದೆ. 21 ಧರ್ಮಶಾಸ್ತ್ರಕ್ಕೆ ಬಾಹಿರರಾದವರನ್ನು ಗಳಿಸಿಕೊಳ್ಳಲು ನಾನು ಧರ್ಮಶಾಸ್ತ್ರಕ್ಕೆ ಬಾಹಿರನಂತೆ ಆದೆ. ಯೇಸುಕ್ರಿಸ್ತರ ನಿಯಮಕ್ಕೆ ನಾನು ವಿಧೇಯನಾದುದರಿಂದ ದೇವರ ನಿಯಮಕ್ಕೆ ನಾನು ಬಾಹಿರನೇನೂ ಅಲ್ಲ. 22 ವಿಶ್ವಾಸದಲ್ಲಿ ದುರ್ಬಲರನ್ನು ಗಳಿಸಿಕೊಳ್ಳಲು ನಾನೂ ದುರ್ಬಲನಂತಾದೆ. ಹೇಗಾದರೂ ಸರಿ, ಕೆಲವರನ್ನಾದರೂ ಉದ್ಧರಿಸಲು ಎಲ್ಲರಿಗೂ ಎಲ್ಲವೂ ಆದೆ. 23 ಶುಭಸಂದೇಶದ ಸೌಭಾಗ್ಯದಲ್ಲಿ ಪಾಲುಗೊಳ್ಳಲೆಂದು ಇದೆಲ್ಲವನ್ನು ಶುಭಸಂದೇಶಕ್ಕಾಗಿಯೇ ಮಾಡುತ್ತೇನೆ, 24 ನಿಮಗೆ ತಿಳಿದಿರುವಂತೆ ಕ್ರೀಡಾಂಗಣದಲ್ಲಿ ಅನೇಕರು ಓಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಆದರೆ ಪ್ರಥಮ ಬಹುಮಾನ ದೊರಕುವುದು ಒಬ್ಬನಿಗೆ ಮಾತ್ರ. ಅಂತೆಯೇ ಬಹುಮಾನವನ್ನು ಪಡೆದುಕೊಳ್ಳಲು ನೀವೂ ಓಡಿ. 25 ಕ್ರೀಡಾಪಟುಗಳೆಲ್ಲರೂ ತಮ್ಮನ್ನು ಹತೋಟಿಯಲ್ಲಿಟ್ಟುಕೊಳ್ಳುತ್ತಾರೆ. ಅಳಿದುಹೋಗುವ ಪದಕದ ಗಳಿಕೆಗಾಗಿ ಪ್ರಯತ್ನಮಾಡುತ್ತಾರೆ. ನಾವಾದರೋ ಅಮರ ಪದಕದ ಗಳಿಕೆಗಾಗಿ ಶ್ರಮಿಸುತ್ತೇವೆ. 26 ನಾನಾದರೋ ಗೊತ್ತು ಗುರಿಯಿಲ್ಲದವನಂತೆ ಓಡುವುದಿಲ್ಲ, ಗಾಳಿಯೊಡನೆ ಗುದ್ದಾಡುವವನಂತೆ ಹೋರಾಡುವುದಿಲ್ಲ. 27 ಇತರರಿಗೆ ಕರೆಕೊಟ್ಟ ಮೇಲೆ ನಾನೇ ಅಯೋಗ್ಯನಾಗದಂತೆ, ನನ್ನ ದೇಹವನ್ನು ದಂಡಿಸಿ, ನನ್ನನ್ನೇ ನಾನು ಹತೋಟಿಯಲ್ಲಿಟ್ಟುಕೊಳ್ಳುತ್ತೇನೆ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India