Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಕೊರಿಂಥದವರಿಗೆ 8 - ಕನ್ನಡ ಸತ್ಯವೇದವು C.L. Bible (BSI)


ನೈವೇದ್ಯ ಪದಾರ್ಥ ತಿನ್ನುವುದು ನಿಷಿದ್ಧವೇ?

1 ವಿಗ್ರಹಗಳಿಗೆ ನೈವೇದ್ಯಮಾಡಿದ ಆಹಾರಪದಾರ್ಥಗಳ ವಿಷಯವಾಗಿ ನಾನು ಹೇಳುವುದೇನೆಂದರೆ: “ನಮಗೆಲ್ಲರಿಗೂ ಜ್ಞಾನೋದಯವಾಗಿದೆ” ಎಂದು ಹೇಳಿಕೊಳ್ಳುತ್ತೀರಿ. ಜ್ಞಾನವು ನಮ್ಮನ್ನು ಅಹಂಕಾರಿಗಳನ್ನಾಗಿ ಮಾಡುತ್ತದೆ. ಪ್ರೀತಿಯಾದರೋ ಭಕ್ತಿಯನ್ನು ವೃದ್ಧಿಗೊಳಿಸುತ್ತದೆ.

2 ಯಾರಾದರೂ ತಾನು ಬಲ್ಲವನೆಂದು ಕೊಚ್ಚಿಕೊಳ್ಳುವುದಾದರೆ ತಾನು ತಿಳಿಯಬೇಕಾದುದನ್ನು ಅವನು ಸರಿಯಾಗಿ ತಿಳಿದಿರುವುದಿಲ್ಲ.

3 ಆದರೆ ದೇವರನ್ನು ಪ್ರೀತಿಸುವವನನ್ನು ದೇವರು ಗುರುತಿಸುತ್ತಾರೆ.

4 ವಿಗ್ರಹಗಳಿಗೆ ನೈವೇದ್ಯಮಾಡಿದ ಪದಾರ್ಥಗಳನ್ನು ತಿನ್ನುವ ಬಗ್ಗೆ ನನ್ನ ಅಭಿಪ್ರಾಯ ಹೀಗಿದೆ: ವಿಗ್ರಹಗಳಿಗೆ ನಿಜವಾದ ಅಸ್ತಿತ್ವವಿಲ್ಲ. ದೇವರು ಒಬ್ಬರೇ ಹೊರತು ಬೇರೆ ದೇವರಿಲ್ಲ. ಇದು ನಮಗೆ ತಿಳಿದ ವಿಷಯ.

5 “ದೇವರುಗಳು” ಎನಿಸಿಕೊಳ್ಳುವವರು ಇಹಪರಗಳಲ್ಲಿ ಇರಬಹುದು; ಅಂಥ ಹಲವಾರು “ದೇವರು"ಗಳನ್ನೂ “ಪ್ರಭು"ಗಳನ್ನೂ ಪೂಜಿಸುವುದುಂಟು.

6 ಆದರೆ ನಮಗೆ ಒಬ್ಬರೇ ದೇವರು. ಅವರು ನಮ್ಮ ಪರಮ ಪಿತ; ಎಲ್ಲ ಸೃಷ್ಟಿಗೂ ಮೂಲಕರ್ತ, ನಾವಿರುವುದು ಅವರಿಗಾಗಿಯೇ. ನಮಗೆ ಒಬ್ಬರೇ ಪ್ರಭು; ಅವರೇ ಯೇಸುಕ್ರಿಸ್ತ. ಅವರ ಮುಖಾಂತರವೇ ಸಮಸ್ತವೂ ಉಂಟಾಯಿತು. ಅವರ ಮುಖಾಂತರವೇ ನಾವು ಜೀವಿಸುತ್ತೇವೆ.

7 ಆದರೆ ಎಲ್ಲರಿಗೂ ಇದರ ಅರಿವಿಲ್ಲ. ಕೆಲವರು ಸಾಂಪ್ರದಾಯಕವಾಗಿ ಬಂದ ವಿಗ್ರಹಾರಾಧನೆಯಲ್ಲಿ ಭಾಗವಹಿಸಿ, ವಿಗ್ರಹಕ್ಕೆ ಅರ್ಪಿತವಾದ ನೈವೇದ್ಯಪದಾರ್ಥವನ್ನು ತಿನ್ನುತ್ತಾರೆ. ಆದರೆ ಅವರ ಮನಸ್ಸಾಕ್ಷಿ ದುರ್ಬಲವಾಗಿರುವುದರಿಂದ ತಾವು ಕಲುಷಿತರಾದೆವೆಂದು ಭಾವಿಸಿಕೊಳ್ಳುತ್ತಾರೆ.

8 ನಾವು ತಿನ್ನುವ ಆಹಾರ ನಮ್ಮನ್ನು ದೇವರ ಸನ್ನಿಧಿಗೆ ಸೇರಿಸಲಾರದು. ಅದನ್ನು ತಿನ್ನದಿರುವುದರಿಂದ ನಮಗೆ ನಷ್ಟವಿಲ್ಲ, ತಿಂದರೆ ಲಾಭವಿಲ್ಲ.

9 ಆದರೆ ನಿಮ್ಮ ಸ್ವಾತಂತ್ರ್ಯವನ್ನು ಉಪಯೋಗಿಸುವಾಗ ದುರ್ಬಲಮನಸ್ಸುಳ್ಳ ಸೋದರನ ವಿಶ್ವಾಸಕ್ಕೆ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಿರಿ.

10 ನೈಜ ಅರಿವುಳ್ಳವನೆಂದು ಹೇಳಿಕೊಳ್ಳುವ ನೀನು ವಿಗ್ರಹದ ಗುಡಿಯಲ್ಲಿ ಊಟಕ್ಕೆ ಕುಳಿತಿರುವುದನ್ನು ದುರ್ಬಲ ಮನಸ್ಸಾಕ್ಷಿಯುಳ್ಳ ಸೋದರನು ಕಂಡರೆ, ಅವನು ಸಹ ನೈವೇದ್ಯಮಾಡಿದ ಪದಾರ್ಥವನ್ನು ತಿನ್ನಲು ಧೈರ್ಯಗೊಳ್ಳಲಾರನೇ?

11 ಈ ನಿನ್ನ ಅರಿವಿನಿಂದ ದುರ್ಬಲ ಸೋದರನು ನಾಶಕ್ಕೆ ಗುರಿಯಾಗುತ್ತಾನೆ. ಯೇಸುಕ್ರಿಸ್ತರು ಅವನಿಗಾಗಿಯೂ ಪ್ರಾಣತ್ಯಾಗ ಮಾಡಲಿಲ್ಲವೇ?

12 ಹೀಗೆ ನೀವು ನಿಮ್ಮ ಸಹೋದರರ ದುರ್ಬಲ ಮನಸ್ಸಾಕ್ಷಿಯನ್ನು ನೋಯಿಸಿ, ಅವರ ವಿರುದ್ಧ ಪಾಪ ಕಟ್ಟಿಕೊಳ್ಳುವುದರಿಂದ ಯೇಸುಕ್ರಿಸ್ತರ ವಿರುದ್ಧವೇ ಪಾಪಮಾಡುತ್ತೀರಿ.

13 ನಾನು ತಿನ್ನುವ ಆಹಾರ ನನ್ನ ಸಹೋದರನ ವಿಶ್ವಾಸಕ್ಕೆ ಅಡ್ಡಿಯಾಗುವುದಾದರೆ ಎಂದಿಗೂ ನಾನದನ್ನು ತಿನ್ನಲಾರೆ, ಅವನ ವಿಶ್ವಾಸಕ್ಕೆ ಅಡ್ಡಿಯನ್ನು ತರಲಾರೆ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು