Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಕೊರಿಂಥದವರಿಗೆ 7 - ಕನ್ನಡ ಸತ್ಯವೇದವು C.L. Bible (BSI)


ದಾಂಪತ್ಯ ಧರ್ಮ

1 ನೀವು ಬರೆದು ಕೇಳಿರುವ ವಿಷಯಗಳ ಬಗ್ಗೆ ನಾನು ಹೇಳುವುದೇನೆಂದರೆ: ಒಬ್ಬ ವ್ಯಕ್ತಿ ಸ್ತ್ರೀಯೊಡನೆ ಲೈಂಗಿಕ ಸಂಪರ್ಕವನ್ನು ಇಟ್ಟುಕೊಳ್ಳದಿರುವುದು ಒಳ್ಳೆಯದು.

2 ಲೈಂಗಿಕ ಪ್ರಲೋಭನೆಗಳು ಪ್ರಬಲವಾಗಿರುವುದರಿಂದ ಪ್ರತಿಯೊಬ್ಬನಿಗೂ ಸ್ವಂತ ಸತಿ ಇರಲಿ, ಪ್ರತಿಯೊಬ್ಬಳಿಗೂ ಸ್ವಂತ ಪತಿ ಇರಲಿ.

3 ಪತಿಯಾದವನು ತನ್ನ ಸತಿಗೆ ಸಲ್ಲತಕ್ಕ ದಾಂಪತ್ಯ ಕರ್ತವ್ಯಗಳನ್ನು ನೆರವೇರಿಸಲಿ. ಅಂತೆಯೇ, ಸತಿಯಾದವಳು ತನ್ನ ಪತಿಗೆ ಸಲ್ಲತಕ್ಕ ದಾಂಪತ್ಯ ಕರ್ತವ್ಯಗಳನ್ನು ನೆರವೇರಿಸಲಿ.

4 ಸತಿಗೆ ತನ್ನ ದೇಹದ ಮೇಲೆ ಅಧಿಕಾರವಿಲ್ಲ. ಆದರೆ ಪತಿಗೆ ಆ ಅಧಿಕಾರವಿದೆ. ಪತಿಗೆ ತನ್ನ ದೇಹದ ಮೇಲೆ ಅಧಿಕಾರವಿಲ್ಲ, ಆದರೆ ಸತಿಗೆ ಆ ಅಧಿಕಾರವಿದೆ.

5 ಆದುದರಿಂದ ಸತಿಪತಿಯರು ಒಬ್ಬರಿಗೊಬ್ಬರು ದಾಂಪತ್ಯಕರ್ತವ್ಯಗಳನ್ನು ನೆರವೇರಿಸಲು ನಿರಾಕರಿಸಬಾರದು. ಧ್ಯಾನ, ಪ್ರಾರ್ಥನೆಗಳಲ್ಲಿ ನಿರತರಾಗಿರಲು, ಸ್ವಲ್ಪಕಾಲ ಒಬ್ಬರನ್ನೊಬ್ಬರು ಅಗಲಿರಬಹುದು. ಆದರೆ ಅದಕ್ಕೆ ಪರಸ್ಪರ ಸಮ್ಮತಿ ಇರಬೇಕು. ಅನಂತರ ಒಂದುಗೂಡಬೇಕು. ಇಲ್ಲದೆ ಹೋದರೆ, ನಿಮ್ಮಲ್ಲಿ ಸಂಯಮ ಇಲ್ಲದಿರುವುದನ್ನು ಕಂಡು ಸೈತಾನನು ಪಾಪಕ್ಕೆ ಪ್ರಚೋದಿಸಬಹುದು.

6 ಇದು ನನ್ನ ಆಜ್ಞೆಯಲ್ಲ, ಅನುಮತಿಯಷ್ಟೆ.

7 ಎಲ್ಲರೂ ನಾನಿರುವಂತೆ ಇರಬೇಕೆಂಬುದು ನನ್ನ ಅಭಿಲಾಷೆ. ಆದರೆ ದೇವರು ಪ್ರತಿಯೊಬ್ಬನಿಗೂ ವಿಶಿಷ್ಟ ವರವನ್ನು ದಯಪಾಲಿಸಿದ್ದಾರೆ. ಒಬ್ಬನಿಗೆ ಒಂದು ವರವಾದರೆ, ಮತ್ತೊಬ್ಬನಿಗೆ ಇನ್ನೊಂದು ವರವುಂಟು.

8 ಅವಿವಾಹಿತರಿಗೂ ವಿಧವೆಯರಿಗೂ ನನ್ನ ಬುದ್ಧಿಮಾತು ಯಾವುದೆಂದರೆ; ನಾನಿರುವಂತೆಯೇ ಇರುವುದು ಅವರಿಗೆ ಒಳ್ಳೆಯದು.

9 ಅವರಿಗೆ ಸಂಯಮ ಇಲ್ಲದಿದ್ದರೆ ಮದುವೆಮಾಡಿಕೊಳ್ಳಲಿ. ಕಾಮತಾಪದಿಂದ ಬೆಂದುಹೋಗುವುದಕ್ಕಿಂತ ಮದುವೆಮಾಡಿಕೊಳ್ಳುವುದೇ ಲೇಸು.

10 ವಿವಾಹಿತರಿಗೆ ನನ್ನದೊಂದು ಆಜ್ಞೆ: ನಿಜಕ್ಕೂ ಇದು ನನ್ನದಲ್ಲ, ಪ್ರಭುವಿನ ಆಜ್ಞೆ. ಸತಿಯು ತನ್ನ ಪತಿಯನ್ನು ಬಿಟ್ಟಗಲದಿರಲಿ.

11 ಒಂದು ವೇಳೆ ಅಗಲಿದರೆ ಮತ್ತೆ ಮದುವೆಯಾಗದಿರಲಿ. ಇಲ್ಲವೆ, ತನ್ನ ಪತಿಯೊಂದಿಗೆ ಸಂಧಾನಮಾಡಿಕೊಳ್ಳಲಿ. ಅಂತೆಯೇ ಪತಿಯಾದವನು ತನ್ನ ಸತಿಯನ್ನು ಬಿಟ್ಟುಬಿಡದಿರಲಿ.

12 ಮಿಕ್ಕವರಿಗೆ ನಾನು ಹೇಳುವುದೇನೆಂದರೆ: ಇದು ನನ್ನ ಮಾತು, ಪ್ರಭುವಿನದಲ್ಲ: ಒಬ್ಬ ಸಹೋದರನಿಗೆ ಕ್ರೈಸ್ತವಿಶ್ವಾಸಿಯಲ್ಲದ ಸತಿ ಇದ್ದರೆ, ಆಕೆ ಅವನೊಡನೆ ದಾಂಪತ್ಯ ಜೀವನ ನಡೆಸಲು ಒಪ್ಪಿದರೆ, ಆಕೆಯನ್ನು ಬಿಟ್ಟುಬಿಡಬಾರದು.

13 ಹಾಗೆಯೇ ಒಬ್ಬ ಕ್ರೈಸ್ತ ಸಹೋದರಿಗೆ ಕ್ರೈಸ್ತವಿಶ್ವಾಸಿಯಲ್ಲದ ಪತಿ ಇದ್ದು ಅವನು ಆಕೆಯೊಂದಿಗೆ ದಾಂಪತ್ಯಜೀವನ ನಡೆಸಲು ಒಪ್ಪಿದರೆ, ಆಕೆ ಅವನನ್ನು ಬಿಟ್ಟುಬಿಡಬಾರದು.

14 ಏಕೆಂದರೆ, ಕ್ರೈಸ್ತವಿಶ್ವಾಸಿಯಾದ ಸತಿಯ ಮುಖಾಂತರ ಪತಿ ದೇವಜನರೊಂದಿಗೆ ಸಂಬಂಧಪಡೆಯುತ್ತಾನೆ. ಅಂತೆಯೇ ಕ್ರೈಸ್ತವಿಶ್ವಾಸಿಯಾದ ಪತಿಯ ಮುಖಾಂತರ ಸತಿ ದೇವಜನರೊಂದಿಗೆ ಸಂಬಂಧಪಡೆಯುತ್ತಾಳೆ. ಇಲ್ಲದಿದ್ದರೆ ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು. ಈಗಲಾದರೋ ಅವರು ದೇವಜನರೊಂದಿಗೆ ಸಂಬಂಧ ಉಳ್ಳವರಾಗಿದ್ದಾರೆ.

15 ಒಂದು ವೇಳೆ, ವಿಶ್ವಾಸವಿಲ್ಲದ ಸತಿಯಾಗಲಿ, ಪತಿಯಾಗಲಿ ಬೇರ್ಪಟ್ಟುಹೋಗಬೇಕೆಂದಿದ್ದರೆ ಹೋಗಲಿ. ಇಂಥ ಸಂದರ್ಭಗಳಲ್ಲಿ ಕ್ರೈಸ್ತ ಸಹೋದರನು, ಇಲ್ಲವೆ ಸಹೋದರಿಯು ವಿವಾಹ ಬಂಧನದಿಂದ ವಿಮುಕ್ತರಾಗುತ್ತಾರೆ. ಏಕೆಂದರೆ, ದೇವರು ನಿಮ್ಮನ್ನು ಶಾಂತಿಸಮಾಧಾನದಿಂದ ಬಾಳಲು ಕರೆದಿದ್ದಾರೆ.

16 ಅದೂ ಅಲ್ಲದೆ ಸ್ತ್ರೀಯೇ, ಕ್ರೈಸ್ತವಿಶ್ವಾಸಿಯಲ್ಲದ ನಿನ್ನ ಪತಿಯನ್ನು ಉದ್ಧಾರಮಾಡುವೆಯೆಂದು ಹೇಗೆ ಹೇಳಬಲ್ಲೆ? ಪುರುಷನೇ, ಕ್ರೈಸ್ತವಿಶ್ವಾಸಿಯಲ್ಲದ ನಿನ್ನ ಸತಿಯನ್ನು ಉದ್ಧಾರಮಾಡುವೆಯೆಂದು ಹೇಗೆ ಹೇಳಬಲ್ಲೆ?

17 ದೇವರ ಕರೆಗೆ ಮತ್ತು ಪ್ರಭು ನೀಡಿರುವ ವರದಾನಗಳಿಗೆ ಅನುಗುಣವಾಗಿ ಪ್ರತಿಯೊಬ್ಬನೂ ಬಾಳುವೆ ನಡೆಸಲಿ. ಎಲ್ಲ ಸಭೆಗಳಿಗೂ ನಾನಿದನ್ನೇ ವಿಧಿಸಿದ್ದೇನೆ.

18 ಸುನ್ನತಿಮಾಡಿಸಿಕೊಂಡವನು ದೇವರ ಕರೆಹೊಂದಿದ್ದರೆ ಅವನು ಸುನ್ನತಿಮಾಡಿಸಿಕೊಂಡದ್ದಕ್ಕಾಗಿ ಚಿಂತಿಸಬೇಕಾಗಿಲ್ಲ. ಸುನ್ನತಿ ಮಾಡಿಸಿಕೊಳ್ಳದವನು ದೇವರ ಕರೆಹೊಂದಿದ್ದರೆ ಅವನು ಸುನ್ನತಿ ಮಾಡಿಸಿಕೊಳ್ಳುವ ಅವಶ್ಯಕತೆಯಿಲ್ಲ.

19 ಸುನ್ನತಿ ಮಾಡಿಸಿಕೊಳ್ಳುವುದೋ ಅಥವಾ ಮಾಡಿಸಿಕೊಳ್ಳದಿರುವುದೋ ಮುಖ್ಯವಲ್ಲ, ದೇವರ ಆಜ್ಞೆಗಳಿಗೆ ವಿಧೇಯನಾಗಿರುವುದೇ ಮುಖ್ಯ.

20 ದೇವರು ಕರೆದಾಗ ಒಬ್ಬನು ಯಾವ ಸ್ಥಿತಿಯಲ್ಲಿದ್ದನೋ ಅದೇ ಸ್ಥಿತಿಯಲ್ಲಿ ಮುಂದುವರಿಯಲಿ.

21 ದೇವರು ಕರೆದಾಗ ನೀನು ದಾಸ್ಯದಲ್ಲಿದ್ದೆಯೋ? ಚಿಂತೆಯಿಲ್ಲ. ಆದರೆ ಸ್ವತಂತ್ರನಾಗುವ ಅವಕಾಶ ದೊರೆತರೆ ಅದನ್ನು ಬಿಡಬೇಡ.

22 ಪ್ರಭುವಿನಿಂದ ಕರೆಹೊಂದಿದವನು ದಾಸನಾಗಿದ್ದರೂ ಪ್ರಭುವಿನಲ್ಲಿ ಅವನು ಸ್ವತಂತ್ರನೆ. ಅದೇ ಮೇರೆಗೆ ಸ್ವತಂತ್ರನಾದವನು ಕ್ರಿಸ್ತಯೇಸುವಿನಿಂದ ಕರೆಹೊಂದಿದ್ದರೆ ಅವನು ಕ್ರಿಸ್ತಯೇಸುವಿನ ದಾಸನೇ ಆಗುತ್ತಾನೆ.

23 ನಿಮ್ಮನ್ನು ಕ್ರಯಕ್ಕೆ ಕೊಳ್ಳಲಾಗಿದೆ. ಆದ್ದರಿಂದ ಮಾನವರಿಗೆ ದಾಸರಾಗಬೇಡಿ.

24 ಪ್ರಿಯ ಸಹೋದರರೇ, ದೇವರು ಕರೆದಾಗ ಒಬ್ಬನು ಯಾವ ಸ್ಥಿತಿಯಲ್ಲಿ ಇದ್ದನೋ ಅದೇ ಸ್ಥಿತಿಯಲ್ಲಿ ದೇವರೊಂದಿಗೆ ಮುನ್ನಡೆಯಲಿ.


ಬ್ರಹ್ಮಚರ್ಯೆಯ ಧರ್ಮ

25 ಅವಿವಾಹಿತರ ಬಗ್ಗೆ ಪ್ರಭುವಿನಿಂದ ಬಂದ ಕಟ್ಟಳೆ ಯಾವುದೂ ನನ್ನಲ್ಲಿಲ್ಲ. ಪ್ರಭುವಿನ ಕೃಪೆಯಿಂದ ನಂಬಿಕೆಗೆ ಅರ್ಹನಾದ ವ್ಯಕ್ತಿಯಂತೆ ನನ್ನ ಅಭಿಪ್ರಾಯಗಳನ್ನು ನಿಮ್ಮ ಮುಂದೆ ಇಡುತ್ತೇನೆ.

26 ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಒಬ್ಬನು ತಾನು ಇದ್ದ ಸ್ಥಿತಿಯಲ್ಲೇ ಇರುವುದು ಉತ್ತಮವೆಂದು ಭಾವಿಸುತ್ತೇನೆ.

27 ನಿನಗೆ ವಿವಾಹವಾಗಿದೆಯೋ? ವಿವಾಹ ವಿಚ್ಛೇದನಕ್ಕೆ ಯತ್ನಿಸಬೇಡ. ನೀನು ಅವಿವಾಹಿತನೋ? ವಿವಾಹವಾಗಲು ಅವಸರಪಡಬೇಡ.

28 ಹಾಗೇನಾದರೂ ನೀನು ವಿವಾಹ ಮಾಡಿಕೊಂಡರೆ ಅದು ಪಾಪವಲ್ಲ. ಅಂತೆಯೇ, ಅವಿವಾಹಿತ ಸ್ತ್ರೀಯೊಬ್ಬಳು ವಿವಾಹ ಮಾಡಿಕೊಂಡರೆ ಅದು ಪಾಪವಲ್ಲ. ಆದರೆ ದಂಪತಿಗಳಿಗೆ ತಾಪತ್ರಯಗಳು ಅನೇಕ. ಇವುಗಳು ನಿಮ್ಮನ್ನು ಬಾಧಿಸದಿರಲೆಂಬುದೇ ನನ್ನ ಹಾರೈಕೆ.

29 ಪ್ರಿಯ ಸಹೋದರರೇ, ನನ್ನ ಅಭಿಪ್ರಾಯ ಇದು: ಉಳಿದಿರುವ ಕಾಲವು ಕೊಂಚ ಮಾತ್ರ. ಆದ್ದರಿಂದ ಮದುವೆಯಾದವರು ಮದುವೆಯಾಗದವರೋ ಎಂಬಂತೆ ನಡೆದುಕೊಳ್ಳಲಿ.

30 ದುಃಖಿತರು ದುಃಖವಿಲ್ಲದವರಂತೆ, ಸಂತೋಷಭರಿತರು ಸಂತೋಷರಹಿತರಂತೆ ಹಾಗು ಕೊಂಡುಕೊಳ್ಳುವವರು ಕೊಂಡದ್ದು ತಮ್ಮದಲ್ಲವೋ ಎಂಬಂತೆ ನಡೆದುಕೊಳ್ಳಲಿ.

31 ಲೋಕದ ವ್ಯವಹಾರದಲ್ಲಿ ಇರುವವರು ಅದರಲ್ಲಿಯೇ ತಲ್ಲೀನರಾಗದಿರಲಿ. ಏಕೆಂದರೆ, ಲೋಕದ ರೂಪರೇಷೆಗಳು ಗತಿಸಿಹೋಗುತ್ತವೆ.

32 ನೀವು ಚಿಂತೆಯಿಲ್ಲದೆ ಇರಬೇಕೆಂಬುದೇ ನನ್ನ ಇಷ್ಟ. ಮದುವೆಯಾಗದವನು ಪ್ರಭುವಿನ ಸೇವೆಯಲ್ಲಿ ತತ್ಪರನಾಗಿರುತ್ತಾನೆ; ಪ್ರಭುವನ್ನು ಮೆಚ್ಚಿಸಲು ಶ್ರಮಿಸುತ್ತಾನೆ.

33 ಮದುವೆ ಆದವನು ಲೋಕವ್ಯವಹಾರಗಳಲ್ಲಿ ಮಗ್ನನಾಗುತ್ತಾನೆ. ತನ್ನ ಸತಿಯನ್ನು ಮೆಚ್ಚಿಸಲು ಪ್ರಯತ್ನಿಸುತ್ತಾನೆ.

34 ಅಂಥವನು ಉಭಯ ಸಂಕಟಕ್ಕೆ ಸಿಕ್ಕಿಕೊಳ್ಳುತ್ತಾನೆ. ಮದುವೆಯಾಗದ ಮಹಿಳೆ ಅಥವಾ ಕನ್ನಿಕೆ ಪ್ರಭುವಿನ ಸೇವೆಯಲ್ಲಿ ನಿರತಳಾಗಿರುತ್ತಾಳೆ. ದೇಹಾತ್ಮಗಳೆರಡನ್ನೂ ಪ್ರಭುವಿಗೆ ಮೀಸಲಾಗಿಡುತ್ತಾಳೆ. ಆದರೆ ವಿವಾಹಿತ ಸ್ತ್ರೀ ಲೋಕವ್ಯವಹಾರಗಳಲ್ಲಿ ಮಗ್ನಳಾಗಿರುತ್ತಾಳೆ. ತನ್ನ ಪತಿಯನ್ನು ಮೆಚ್ಚಿಸಲು ಪ್ರಯತ್ನಿಸುತ್ತಾಳೆ.

35 ನಿಮ್ಮನ್ನು ಬಂಧಿಸಲು ಅಲ್ಲ, ಬೆಂಬಲಿಸಲು ಇದನ್ನು ಹೇಳುತ್ತಿದ್ದೇನೆ. ನೀವು ಸಜ್ಜನರಾಗಿ ನಡೆದುಕೊಂಡು, ಭಿನ್ನಭಾವವಿಲ್ಲದೆ ಪ್ರಭುವಿನ ಪಾದಸೇವೆ ಮಾಡಬೇಕೆಂಬುದೇ ನನ್ನ ಆಶೆ.

36 ಒಬ್ಬನು ತನಗೆ ನಿಶ್ಚಿತವಾದ ಕನ್ಯೆಯೊಡನೆ ಅನುಚಿತ ರೀತಿಯಲ್ಲಿ ವರ್ತಿಸುತ್ತಿರಬಹುದು; ಅವನಿಗೆ ಸಂಯಮ ತಪ್ಪುವಂತಿದ್ದರೆ, ತಾನು ಆಶಿಸುವಂತೆ ಅವನು ಮದುವೆಮಾಡಿಕೊಳ್ಳಲಿ, ಅದು ಪಾಪವಲ್ಲ.

37 ಆದರೆ ಅವನು ಯಾರ ಒತ್ತಾಯಕ್ಕೂ ಮಣಿಯದೆ ದೃಢಚಿತ್ತನಾಗಿದ್ದು, ತನಗೆ ನಿಶ್ಚಿತಳಾದ ಕನ್ಯೆಯೊಡನೆ ಮದುವೆಯಾಗುವುದು ಬೇಡವೆಂದು ತೀರ್ಮಾನಿಸಿಕೊಂಡರೆ ಮತ್ತು ತನ್ನ ಸಂಯಮವನ್ನು ಹತೋಟಿಯಲ್ಲಿಟ್ಟುಕೊಂಡಿದ್ದರೆ ಅವನು ಅಂತೆಯೇ ಮಾಡಲಿ. ಹೀಗೆ, ಮದುವೆ ಆಗದೆ ಇರುವುದು ಒಳ್ಳೆಯದು.

38 ಈ ರೀತಿ ನಿಶ್ಚಯವಾದ ಕನ್ಯೆಯನ್ನು ಮದುವೆಮಾಡಿಕೊಳ್ಳುವುದು ಒಳ್ಳೆಯದೇ, ಮದುವೆ ಮಾಡಿಕೊಳ್ಳದಿರುವುದು ಇನ್ನಷ್ಟು ಒಳ್ಳೆಯದೇ.

39 ಪತಿ ಬದುಕಿರುವವರೆಗೂ ಸತಿ ಅವನಿಗೆ ಬಂಧಿತಳು. ಅವನು ಸತ್ತರೆ ತಾನು ಇಷ್ಟಪಟ್ಟವನನ್ನು ಮತ್ತೆ ಮದುವೆ ಆಗಲು ಸ್ವತಂತ್ರಳು. ಆದರೆ ಅವನು ಕ್ರೈಸ್ತವಿಶ್ವಾಸಿಯಾಗಿರಬೇಕು.

40 ಆಕೆ ವಿವಾಹವಾಗದೆ ಹಾಗೇ ಉಳಿದರೆ ಹೆಚ್ಚು ಭಾಗ್ಯವಂತಳು. ಇದು ನನ್ನ ಅಭಿಪ್ರಾಯ. ಆದರೂ ದೇವರ ಆತ್ಮದ ಪ್ರೇರಣೆಯಿಂದ ಇದನ್ನು ಹೇಳುತ್ತಿದ್ದೇನೆ, ಎಂಬುದೇ ನನ್ನ ನಂಬಿಕೆ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು