1 ಕೊರಿಂಥದವರಿಗೆ 6 - ಕನ್ನಡ ಸತ್ಯವೇದವು C.L. Bible (BSI)ನ್ಯಾಯಾಲಯಕ್ಕೂ ದೇವಾಲಯಕ್ಕೂ ನಂಟು ಸಲ್ಲದು 1 ನಿಮ್ಮಲ್ಲಿ ಒಬ್ಬನಿಗೆ ಮತ್ತೊಬ್ಬನ ಮೇಲೆ ವ್ಯಾಜ್ಯವಿದ್ದರೆ ನ್ಯಾಯವಿಚಾರಣೆಗೆ ದೇವಜನರ ಮುಂದೆ ಹೋಗದೆ, ಅನ್ಯಜನರ ಮುಂದೆ ಹೋಗುವಷ್ಟು ಸೊಕ್ಕು ನಿಮಗೆಲ್ಲಿಂದ ಬಂದಿತು? 2 ದೇವಜನರು ಈ ಲೋಕಕ್ಕೆ ನ್ಯಾಯತೀರ್ಪು ಮಾಡುತ್ತಾರೆಂದು ನಿಮಗೆ ತಿಳಿಯದೋ? ಲೋಕವೇ ನಿಮ್ಮಿಂದ ತೀರ್ಪು ಪಡೆಯಬೇಕಾಗಿರುವಲ್ಲಿ ಸಣ್ಣಪುಟ್ಟ ವಿಷಯಗಳನ್ನು ತೀರ್ಮಾನಿಸಿಕೊಳ್ಳಲು ನೀವು ಅಸಮರ್ಥರೋ? 3 ದೇವದೂತರಿಗೂ ನಾವು ನ್ಯಾಯತೀರ್ಪು ಮಾಡುವೆವೆಂದು ನಿಮಗೆ ತಿಳಿಯದೋ? ಹೀಗಿರುವಲ್ಲಿ, ಈ ಜೀವನದ ಸಮಸ್ಯೆಗಳನ್ನು ಕುರಿತು ನ್ಯಾಯತೀರ್ಪು ಮಾಡುವುದು ಎಷ್ಟೋ ಸುಲಭವಲ್ಲವೇ? 4 ಇಂಥ ವಿಷಯಗಳು ತಲೆದೋರಿದಾಗ ಧರ್ಮಸಭೆಯಿಂದ ಮಾನ್ಯತೆ ಪಡೆಯದವರನ್ನು ಏಕೆ ನ್ಯಾಯತೀರ್ಪುಗಾರರನ್ನಾಗಿ ಮಾಡುತ್ತೀರಿ? 5 ಇದು ನಿಮಗೆ ನಾಚಿಕೆಗೇಡು! ಸಹೋದರರ ವ್ಯಾಜ್ಯವನ್ನು ತೀರ್ಮಾನಿಸಬಲ್ಲ ಜಾಣನು ನಿಮ್ಮಲ್ಲಿ ಒಬ್ಬನೂ ಇಲ್ಲವೇ? 6 ಸಹೋದರನು ಸಹೋದರನ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದು, ಅದೂ ಅವಿಶ್ವಾಸಿಗಳ ಮುಂದೆ ಹೋಗುವುದು ಸರಿಯೇ? 7 ನಿಮ್ಮ ನಿಮ್ಮಲ್ಲಿರುವ ವ್ಯಾಜ್ಯಗಳೇ ನಿಮ್ಮ ಸೋಲಿನ ಸೂಚನೆಗಳು. ಅದಕ್ಕಿಂತ ಅನ್ಯಾಯವನ್ನು ಸಹಿಸಿಕೊಳ್ಳುವುದು ಒಳ್ಳೆಯದಲ್ಲವೇ? ಸುಲಿಗೆಗೆ ತುತ್ತಾದರೂ ಸಾವಧಾನದಿಂದ ಇರುವುದು ಒಳಿತಲ್ಲವೇ? 8 ಅದಕ್ಕೆ ಬದಲು ನೀವೇ ಅನ್ಯಾಯಮಾಡುತ್ತೀರಿ; ನೀವೇ ಸುಲಿಗೆಮಾಡುತ್ತೀರಿ; ಅದೂ ಸಹೋದರರಿಗೆ ಹೀಗೆ ಮಾಡುತ್ತೀರಿ; 9 ಅಧರ್ಮಿಗಳು ದೇವರ ಸಾಮ್ರಾಜ್ಯಕ್ಕೆ ಬಾಧ್ಯರಲ್ಲವೆಂದು ನೀವು ಬಲ್ಲಿರಿ. ನಿಮ್ಮನ್ನು ನೀವೇ ವಂಚಿಸಿಕೊಳ್ಳಬೇಡಿ. ದುರಾಚಾರಿಗಳು, ವಿಗ್ರಹಾರಾಧಕರು, ವ್ಯಭಿಚಾರಿಗಳು, ಸಲಿಂಗಕಾಮಿಗಳು, 10 ಕಳ್ಳರು, ಲೋಭಿಗಳು, ಕುಡುಕರು, ಪರನಿಂದಕರು, ಸುಲಿಗೆಗಾರರು - ಇವರಾರೂ ದೇವರ ಸಾಮ್ರಾಜ್ಯಕ್ಕೆ ಬಾಧ್ಯರಲ್ಲ. 11 ಹಿಂದೆ ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ. ಆದರೆ ಈಗ ಪ್ರಭು ಯೇಸುಕ್ರಿಸ್ತರ ನಾಮದಲ್ಲಿ ಮತ್ತು ದೇವರಾತ್ಮನಲ್ಲಿ ನೀವು ಶುದ್ಧರಾಗಿದ್ದೀರಿ, ಪುನೀತರಾಗಿದ್ದೀರಿ ಹಾಗೂ ದೇವರೊಡನೆ ಸತ್ಸಂಬಂಧ ಹೊಂದಿದ್ದೀರಿ. ‘ದೇಹವೇ ದೇಗುಲವಯ್ಯಾ’ 12 “ಏನನ್ನು ಮಾಡಲೂ ನನಗೆ ಸ್ವಾತಂತ್ರ್ಯ ಇದೆ,” ಎಂದು ಹೇಳುವುದುಂಟು. ಆದರೆ ಎಲ್ಲವೂ ನನಗೆ ಪ್ರಯೋಜನಕರವಲ್ಲ. ಏನನ್ನು ಮಾಡಲೂ ನನಗೆ ಸ್ವಾತಂತ್ರ್ಯವಿದೆ. ಆದರೆ ನಾನು ಯಾವುದಕ್ಕೂ ಗುಲಾಮನಲ್ಲ. 13 “ಊಟ ಹೊಟ್ಟೆಗಾಗಿ, ಹೊಟ್ಟೆ ಊಟಕ್ಕಾಗಿ,” ಎಂದು ಹೇಳುವುದುಂಟು. ದೇವರು ಎರಡನ್ನೂ ನಾಶಗೊಳಿಸುವರು. ಆದರೆ ದೇಹವಿರುವುದು ದುರಾಚಾರಕ್ಕಲ್ಲ; ಪ್ರಭುವಿನ ಸೇವೆಗಾಗಿ. ಪ್ರಭುವೇ ದೇಹದ ಪರಿಪಾಲಕ. 14 ಪ್ರಭುವನ್ನು ಪುನರುತ್ಥಾನಗೊಳಿಸಿದ ದೇವರು ನಮ್ಮನ್ನೂ ತಮ್ಮ ಪರಾಕ್ರಮದಿಂದ ಎಬ್ಬಿಸುವರು. 15 ನಿಮ್ಮ ದೇಹಗಳು ಕ್ರಿಸ್ತಯೇಸುವಿನ ಅಂಗಗಳೆಂದು ನಿಮಗೆ ತಿಳಿಯದೇ? ಹಾಗಾದರೆ ನಾನು ಕ್ರಿಸ್ತಯೇಸುವಿನ ಅಂಗಗಳನ್ನು ತೆಗೆದು ವೇಶ್ಯೆಯ ಅಂಗಗಳನ್ನಾಗಿ ಮಾಡಬಹುದೇ? ಎಂದಿಗೂ ಇಲ್ಲ. 16 “ಇಬ್ಬರೂ ಒಂದೇ ಶರೀರವಾಗುತ್ತಾರೆ,” ಎಂದು ಬರೆಯಲಾಗಿದೆ. ವೇಶ್ಯೆಯ ಸಂಸರ್ಗ ಮಾಡುವವನು ಅವಳೊಂದಿಗೆ ಒಂದೇ ದೇಹವಾಗುತ್ತಾನೆ, ಎಂದು ನಿಮಗೆ ತಿಳಿಯದೇ? 17 ಆದರೆ ಪ್ರಭುವಿನ ಅನ್ಯೋನ್ಯತೆಯಲ್ಲಿ ಇರುವವನು ಅವರೊಂದಿಗೆ ಆಧ್ಯಾತ್ಮಿಕವಾಗಿ ಒಂದಾಗಿರುತ್ತಾನೆ. 18 ವ್ಯಭಿಚಾರದಿಂದ ದೂರ ಸರಿಯಿರಿ. ಮಾನವನು ಮಾಡುವ ಇತರ ಪಾಪಗಳು ದೇಹಕ್ಕೆ ಬಾಹಿರವಾದವುಗಳು. ವ್ಯಭಿಚಾರ ಮಾಡುವಾತನು ತನ್ನ ದೇಹಕ್ಕೇ ದ್ರೋಹ ಬಗೆಯುತ್ತಾನೆ. 19 ದೇವರು ನಿಮಗೆ ಅನುಗ್ರಹಿಸಿರುವ ಪವಿತ್ರಾತ್ಮರಿಗೆ ನಿಮ್ಮ ದೇಹ ಗರ್ಭಗುಡಿಯಾಗಿದೆ; ಆ ಪವಿತ್ರಾತ್ಮ ನಿಮ್ಮಲ್ಲಿ ವಾಸಮಾಡುತ್ತಿದ್ದಾರೆ ಎಂಬುದು ನಿಮಗೆ ಗೊತ್ತಿಲ್ಲವೇ? ನೀವು ನಿಮ್ಮ ಸ್ವಂತ ಸೊತ್ತಲ್ಲ. 20 ಏಕೆಂದರೆ, ನೀವು ಕ್ರಯಕ್ಕೆ ಕೊಳ್ಳಲಾದವರು. ಆದ್ದರಿಂದ ನಿಮ್ಮ ದೇಹದಲ್ಲಿ ಆ ದೇವರ ಮಹಿಮೆ ಬೆಳಗುವಂತೆ ಮಾಡಿರಿ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India